ಪಾಕ್ ಗೆ ಮಾನವೀಯತೆಗಿಂತ ಭಯೋತ್ಪಾದನೆಯೇ ಮುಖ್ಯ: ಮೋದಿ ವಾಗ್ದಾಳಿ
ಹೊಸದಿಲ್ಲಿ, ಎ.9: ಪಾಕಿಸ್ತಾನ ಭಯೋತ್ಪಾದನೆಯನ್ನು ಬಿತ್ತುವ, ಭಯೋತ್ಪಾದಕರಿಗೆ ಸ್ಫೂರ್ತಿ ನೀಡಿ ಉತ್ತೇಜಿಸುವ ರಾಷ್ಟ್ರ. ಆ ದೇಶಕ್ಕೆ ಮಾನವೀಯತೆಗಿಂತ ಭಯೋತ್ಪಾದನೆಯೇ ಮುಖ್ಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ನೆರೆರಾಷ್ಟ್ರದ ಮೇಲೆ ವಾಗ್ದಾಳಿ ನಡೆಸಿದ್ದಾರೆ.
ಬಾಂಗ್ಲಾದೇಶದ ಪ್ರಧಾನಿ ಶೇಕ್ ಹಸೀನಾ ಜತೆಗಿನ ಭೇಟಿ ಬಳಿಕ ಬಿಡುಗಡೆ ಮಾಡಿದ ಜಂಟಿ ಹೇಳಿಕೆಯಲ್ಲಿ, "ಭಯೋತ್ಪಾದೆನೆ ವಿರುದ್ಧದ ಸಮರದಲ್ಲಿ ಭಯೋತ್ಪಾದನೆಗೆ ಪ್ರೋತ್ಸಾಹ ನೀಡುವ, ಅವರಿಗೆ ಹಣಕಾಸು ನೆರವು ನೀಡುವ ದೇಶಗಳ ವಿರುದ್ಧ ಕ್ರಮ ಕೈಗೊಳ್ಳುವುದೂ ಸೇರುತ್ತದೆ" ಎಂದು ಪ್ರತಿಪಾದಿಸಿದ್ದಾರೆ.
"ದಕ್ಷಿಣ ಏಷ್ಯಾದಲ್ಲಿ ಭಯೋತ್ಪಾದನೆ ಹುಟ್ಟುಹಾಕುವ, ಕುಮ್ಮಕ್ಕು ಹಾಗೂ ಉತ್ತೇಜನ ನೀಡುವ ಒಂದು ದೇಶವಿದೆ. ಮಾನವೀಯತೆಗಿಂತ ಭಯೋತ್ಪಾದನೆಯೇ ಆ ದೇಶದ ಆದ್ಯತೆ" ಎಂದು ಕುಟುಕಿದ್ದಾರೆ.
1971ರ ಬಾಂಗ್ಲಾದೇಶ ವಿಮೋಚನಾ ಹೋರಾಟದಲ್ಲಿ ಹುತಾತ್ಮರಾದವರ ಕುಟುಂಬಗಳ ಸನ್ಮಾನ ಸಮಾರಂಭದಲ್ಲೂ ಮೋದಿ ಈ ಅಭಿಪ್ರಾಯ ವ್ಯಕ್ತಪಡಿಸಿದರು. ನಾಲ್ಕು ದಿನಗಳ ಭಾರತ ಭೇಟಿಗೆ ಆಗಮಿಸಿದ ಶೇಕ್ ಹಸೀನಾರವರು ಬಾಂಗ್ಲಾ ವಿಮೋಚನಾ ಯುದ್ಧದಲ್ಲಿ ಮೃತಪಟ್ಟ ಭಾರತೀಯ ಯೋಧರಿಗೆ ನಮನ ಸಲ್ಲಿಸಿದರು.