ಮಾಡದ ತಪ್ಪಿಗೆ "ಭಯೋತ್ಪಾದಕ" ಹಣೆಪಟ್ಟಿ ಹೊತ್ತು 9 ವರ್ಷ ಜೈಲಿನಲ್ಲಿ ಕೊಳೆದ ಶಬೀರ್
ಭಟ್ಕಳ, ಎ.10: ಪೊಲೀಸರ ದುಡುಕಿನ ನಿರ್ಧಾರದಿಂದಾಗಿ ಅಮಾಯಕನೋರ್ವ ತನ್ನ ಜೀವನವನ್ನೇ ಕಳೆದುಕೊಂಡು ಜೈಲಿನಲ್ಲೇ ಕೊಳೆಯುವ ಪ್ರಕರಣಗಳಿಗೆ ಭಟ್ಕಳದ ಮಗ್ದೂಮ್ ಕಾಲನಿಯ ಮೌಲಾನ ಶಬೀರ್ ಗಂಗೋಳಿ ತಾಜಾ ಉದಾಹರಣೆಯಾಗಿದ್ದಾರೆ.
ಚಿನ್ನಸ್ವಾಮಿ ಕ್ರೀಡಾಂಗಣ ಸಮೀಪ ನಡೆದ ಸ್ಫೋಟ ಹಾಗೂ ಭಯೋತ್ಪಾದಕರೊಂದಿಗೆ ನಂಟು ಹೊಂದಿದ್ದಾರೆ ಎನ್ನುವ ಆರೋಪದಡಿ ಪೊಲೀಸರಿಂದ ಬಂಧಿತರಾಗಿದ್ದ ಶಬೀರ್ ತಾನು ಮಾಡದ ತಪ್ಪಿಗಾಗಿ ಒಂಬತ್ತು ವರ್ಷಗಳ ಕಾಲ ಜೈಲಿನಲ್ಲೇ ಜೀವನ ಕಳೆದಿದ್ದು, ಸೋಮವಾರ ಮಂಗಳೂರಿನ 3ನೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಪುಷ್ಟಾಂಜಲಿಯವರು ಶಬೀರ್ ಅವರನ್ನು ದೋಷಮುಕ್ತಗೊಳಿಸಿ ಬಿಡುಗಡೆಗೊಳಿಸಿದ್ದಾರೆ.
2008ರಲ್ಲಿ ಉಳ್ಳಾಲ ಪ್ರದೇಶದಲ್ಲಿ ಶಂಕಿತ ಭಯೋತ್ಪಾದಕ ರಿಯಾಝ್ ಹಾಗೂ ಇಕ್ಬಾಲ್ ರ ಸಂಪರ್ಕದಲ್ಲಿದ್ದು ಜಿಹಾದಿ ಸಾಹಿತ್ಯ ವಿತರಣೆ ಮಾಡಿದ್ದಾರೆ ಎನ್ನುವ ಆರೋಪದಡಿ ಪೊಲೀಸರಿಗೆ ಬೇಕಾಗಿದ್ದ ಮೌಲಾನ ಶಬೀರ್ ಪೊಲೀಸರ ಸಹವಾಸವೇ ಬೇಡವೆಂದು ಮಹಾರಾಷ್ಟ್ರದ ಪೂನಾದಲ್ಲಿರುವ ತನ್ನ ಸಹೋದರಿಯ ಮನೆಯಲ್ಲಿ ವಾಸಿಸಲಾರಂಭಿಸಿದರು. ಅಲ್ಲಿಯೇ ಮಸೀದಿಯೊಂದರಲ್ಲಿ ಇಮಾಮ್ ಆಗಿ ಕೆಲಸ ಮಾಡುತ್ತಾ ಬದುಕು ಸಾಗುತ್ತಿದ್ದ ಶಬೀರ್ ಅವರನ್ನು 2009ರ ನವೆಂಬರ್ 29ರಂದು ನಕಲಿ ನೋಟು ಪ್ರಕರಣವೊಂದರಲ್ಲಿ ಅಲ್ಲಿನ ಪೊಲೀಸರು ಬಂಧಿಸುತ್ತಾರೆ. ಬಂಧನದ ಎರಡು ತಿಂಗಳ ನಂತರ ಶಬೀರ್ ರನ್ನು ಕೋರ್ಟ್ ಗೆ ಹಾಜರುಪಡಿಸಲಾಗುತ್ತದೆ. ಈ ಎರಡು ತಿಂಗಳ ಅವಧಿಯಲ್ಲಿ ಅಕ್ರಮವಾಗಿ ಪೊಲೀಸರ ಕಸ್ಟಡಿಯಲ್ಲಿದ್ದ ಶಬೀರ್ ಸಾಕಷ್ಟು ದೌರ್ಜನ್ಯಕ್ಕೊಳಗಾಗುತ್ತಾರೆ.
ಇದೇ ಸಂದರ್ಭ ಪ್ರಕರಣಕ್ಕೆ ಸಂಬಂಧಿಸಿ ಅಲ್ಲಿನ ಕೋರ್ಟ್ ಶಬೀರ್ ಗೆ 5 ವರ್ಷಗಳ ಜೈಲುಶಿಕ್ಷೆಯನ್ನೂ ನೀಡುತ್ತದೆ. ಆದರೆ ಶಬೀರ್ ರ ಉತ್ತಮ ಚಾರಿತ್ಯ್ರ ಹಾಗೂ ನಡವಳಿಕೆಯನ್ನು ಕಂಡ ಪೊಲೀಸರು 4 ತಿಂಗಳ ಮೊದಲೇ ಅವರನ್ನು ಬಿಡುಗಡೆಗೊಳಿಸುತ್ತಾರೆ. ಈ ಮಧ್ಯೆ ಮುಂಬೈಯಲ್ಲಿ 26/11 ದಾಳಿ ಸಂಭವಿಸುತ್ತದೆ. ಇದಕ್ಕಾಗಿ ಬಲಿಯ ಕುರಿಗಳ ಹುಡುಕಾಟದಲ್ಲಿದ್ದ ಪೊಲೀಸರಿಂದ ಶಬೀರ್ ರನ್ನು ಬಲಿಗೆ ಅರ್ಪಿಸುವ ಸಿದ್ಧತೆಗಳು ನಡೆಯುತ್ತದೆ. 2010 ರ ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣ ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ ಸಿಲುಕಿಸುವ ಪ್ರಯತ್ನಗಳು ನಡೆಯುತ್ತದೆ. ಈ ಮಧ್ಯೆ ಎ.ಪಿ.ಸಿ.ಆರ್. ನಾಗರಿಕ ಹಕ್ಕು ಸಂರಕ್ಷಣ ಸಂಸ್ಥೆಯೊಂದು ದಾವೆ ಹೂಡಿ "ಜೈಲಿನಲ್ಲಿರುವ ವ್ಯಕ್ತಿಯೊಬ್ಬ ಬಾಂಬ್ ಬ್ಲಾಸ್ಟ್ ಮಾಡಲು ಹೇಗೆ ಸಾಧ್ಯ?" ಎಂದು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸುತ್ತಾರೆ. ಇದರಿಂದಾಗಿ ಆ ಪ್ರಕರಣ ಕೈಬಿಟ್ಟ ಪೊಲೀಸರು ಶಬೀರ್ ಗೆ ನ್ಯಾಯಾಲಯದಿಂದ ಜಾಮೀನು ಸಿಗದ ಹಾಗೆ ನೋಡಿಕೊಳ್ಳುತ್ತಾರೆ.
ಎ.ಪಿ.ಸಿ.ಆರ್. ಸಂಸ್ಥೆಯು ಮತ್ತೊಮ್ಮೆ ಸುಪ್ರೀಂ ಕೋರ್ಟ್ ಮೊರೆ ಹೋಗಿ ಪ್ರಕರಣವನ್ನು ತ್ವರಿತವಾಗಿ ಬಗೆಹರಿಸುವಂತೆ ಮನವಿ ಮಾಡುತ್ತದೆ. ಈ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ತೀವ್ರಗತಿಯಲ್ಲಿ ಶಬೀರ್ ಪ್ರಕರಣವನ್ನು ಮುಕ್ತಾಯಗೊಳಿಸುವಂತೆ ಮಂಗಳೂರು ನ್ಯಾಯಾಲಯಕ್ಕೆ ಆದೇಶಿಸುತ್ತದೆ. ಕಳೆದ ಒಂದು ವರ್ಷದಿಂದ ಪ್ರಕರಣ ತ್ವರಿತಗತಿಯಲ್ಲಿ ಸಾಗಿದ್ದು ಸೋಮವಾರ ಮೌಲಾನ ಶಬೀರ್ ನಿರಾಪರಾಧಿ ಎಂದು ನ್ಯಾಯಾಧೀಶರು ಘೋಷಿಸಿದ್ದಾರೆ.
ಆದರೆ ಕಾನೂನು ಹೋರಾಟದಲ್ಲಿ ಕೊನೆಗೂ ಗೆದ್ದರೂ ಇಷ್ಟೆಲ್ಲ ಆಗಬೇಕಾದರೆ ಬರೋಬ್ಬರಿ 9 ವರ್ಷಗಳೇ ಕಳೆದುಹೋಗಿದೆ. ಶಬೀರ್ ಹುಟ್ಟಿ ಬೆಳೆದ ಭಟ್ಕಳ ಸಂಪೂರ್ಣ ಬದಲಾಗಿದೆ. ಮಗನ ನಿರೀಕ್ಷೆಯಲ್ಲಿದ್ದ ಬಡತಾಯಿಯ ದೇಹದ ಚರ್ಮ ಸುಕ್ಕುಗಟ್ಟಿದೆ. ಮನೆ ಮಂದಿಗೆ ಆಸರೆಯಾಗಬೇಕಾಗಿದ್ದ ಮಗ ತನ್ನ 27ನೆ ವಯಸ್ಸಿನಲ್ಲಿಯೆ ಜೈಲು ಪಾಲಾಗಿದ್ದು, ಈಗ ಶಬೀರ್ ಅವರ ವಯಸ್ಸು 37.
ಪೊಲೀಸ್ ಇಲಾಖೆಯ ಪ್ರಮಾದವೊಂದು ಯುವಕನೋರ್ವನ ಬದುಕಿನಲ್ಲಿ ಬಿರುಗಾಳಿ ಎಬ್ಬಿಸಿ, ಬರೋಬ್ಬರಿ 9 ವರ್ಷಗಳ ಕಾಲ ಜೈಲಿನಲ್ಲೇ ಕೊಳೆಯುವಂತೆ ಮಾಡಿದ್ದು, ಇದೀಗ ಆತ ನಿರಪರಾಧಿ ಎಂದು ಕೋರ್ಟ್ ತೀರ್ಪಿತ್ತಿದೆ. ಆದರೆ ತಾನು ಕಳೆದುಕೊಂಡ ದಿನಗಳನ್ನು, ಅನುಭವಿಸಿದ ಮಾನಸಿಕ, ದೈಹಿಕ ಹಿಂಸೆಗಳನ್ನು, ಹೆಸರಿಗೆ ಮೆತ್ತಿಕೊಂಡ ಕಳಂಕವನ್ನು ಸರಿಪಡಿಸುವವರಾರು ಎನ್ನುವ ಶಬೀರ್ ರ ಪ್ರಶ್ನೆಗೆ ವ್ಯವಸ್ಥೆಯಲ್ಲಿ ಉತ್ತರವಿಲ್ಲ.