ಬುಡಕಟ್ಟು ಜನರ ಭೂಹಕ್ಕುಗಳ ಹೋರಾಟಗಾರ ಪ್ರಫುಲ್ಲಾಗೆ ‘ಗೋಲ್ಡ್‌ಮ್ಯಾನ್’ ಪ್ರಶಸ್ತಿಯ ಗರಿ
ಸ್ಯಾನ್‌ಫ್ರಾನ್ಸಿಸ್ಕೊ,ಎ.24: ಭಾರತದ ಖ್ಯಾತ ಪರಿಸರ ಹೋರಾಟಗಾರ ಪ್ರಫುಲ್ಲ ಸಮಂತರಾ ಪ್ರತಿಷ್ಠಿತ ‘ಗೋಲ್ಡ್‌ಮ್ಯಾನ್’ ಪರಿಸರ ಪ್ರಶಸ್ತಿಗೆ ಏಶ್ಯದ ಪುರಸ್ಕೃತರಾಗಿ ಆಯ್ಕೆಯಾಗಿದ್ದಾರೆ. ಓಡಿಶಾದ ಡೊಂಗ್ರಿಯಾ ಕೊಂಡ್ ಬುಡಕಟ್ಟು ಜನರ ಹಕ್ಕುಗಳಿಗಾಗಿ ಹಾಗೂ ಅವರ ನೆಲ ಹಾಗೂ ಸಂಸ್ಕೃತಿಯ ರಕ್ಷಣೆಗಾಗಿ ಅವಿರತ ಹೋರಾಟ ನಡೆಸಿದ್ದಕ್ಕಾಗಿ ಅವರಿಗೆ ಈ ಪ್ರತಿಷ್ಠಿತ ಪ್ರಶಸ್ತಿ ದೊರೆತಿದೆ.
ಹಸಿರು ನೊಬೆಲ್ ಎಂದೇ ಹೆಸರಾದ ಈ ಪ್ರಶಸ್ತಿಯನ್ನು ಪಡೆದಿರುವ ಭಾರತೀಯರಲ್ಲಿ ಸಮಂತಾರ ಆರನೆಯವರಾಗಿದ್ದಾರೆ. ಡೊಂಗ್ರಿಯಾ ಕೊಂಡ ಆದಿವಾಸಿಗಳ ಭೂಹಕ್ಕುಗಳನ್ನು ಕಾಪಾಡಲು ನಡೆದ 12 ವರ್ಷಗಳ ಐತಿಹಾಸಿಕ ಕಾನೂನು ಹೋರಾಟದ ನೇತೃತ್ವವನ್ನು ಅವರು ವಹಿಸಿದ್ದರು. ಬಹುರಾಷ್ಟ್ರೀಯ ವೇದಾಂತ ಕಂಪೆನಿಯು ಸ್ಥಾಪಿಸಲುದ್ದೇಶಿಸಿದ್ದ ತೆರೆದ ಆಲ್ಯುಮಿನಿಯಂ ಆದಿರಿನ ಗಣಿ ಯೋಜನೆಯ ವಿರುದ್ಧ ಸಮಂತರಾ ಬೃಹತ್ ಜನಾಂದೋಲನವನ್ನು ನಡೆಸಿದ್ದರು.
ಸಮಂತಾ ನಡೆಸಿದ ಕಾನೂನು ಹೋರಾಟವು, ದೇಶಾದ್ಯಂತ ತಮ್ಮ ಪ್ರದೇಶಗಳಲ್ಲಿ ನಡೆಯುವ ಗಣಿಗಾರಿಕೆ ಚಟುವಟಿಕೆಗಳನ್ನು ನಿರ್ಧರಿಸುವ ಅಧಿಕಾರವನ್ನು ಸ್ಥಳೀಯಾಡಳಿತ ಸಂಸ್ಥೆಗಳಿಗೆ ನೀಡುವುದಕ್ಕೆ ಮೇಲ್ಪಂಕ್ತಿಯಾಯಿತು.
ಮೇಧಾ ಪಾಟ್ಕರ್, ಎಂ.ಸಿ. ಮೆಹ್ತಾ, ರಶೀದಾ ಬಿ ಹಾಗೂ ಚಂಪಾದೇವಿ ಶುಕ್ಲಾ ಹಾಗೂ ರಮೇಶ್ ಅಗರ್‌ವಾಲ್ ಈವರೆಗೆ ಗೋಲ್ಡ್ ಮ್ಯಾನ್ ಪ್ರಶಸ್ತಿಗೆ ಭಾಜನರಾದ ಇತರ ಭಾರತೀಯರಾಗಿದ್ದಾರೆ. ಪ್ರತಿ ವರ್ಷವೂ ಆಫ್ರಿಕ, ಏಶ್ಯ, ಯುರೋಪ್, ಉತ್ತರ ಅಮೆರಿಕ, ದಕ್ಷಿಣ ಹಾಗೂ ಮಧ್ಯ ಅಮೆರಿಕ ಸೇರಿದಂತೆ ಆರು ಪ್ರದೇಶಗಳಲ್ಲಿ ತಳಮಟ್ಟದಲ್ಲಿ ಪರಿಸರಪರ ಹೋರಾಟ ನಡೆಸಿದ ಮಹಾನ್ ಸಾಧಕರಿಗೆ ಗೋಲ್ಡ್‌ಮ್ಯಾನ್ ಪುರಸ್ಕಾರವನ್ನು ನೀಡಲಾಗುತ್ತಿದೆ.
ಸ್ಲೋವೆನಿಯದ ಉರೊಸ್ ಮಾರ್ಸೆಲ್, ಅಮೆರಿಕದ ಮಾರ್ಕ್ ಲೊಪೆಝ್, ಗ್ವಾಟೆಮಾಲಾದ ರೊಡ್ರಿಗೊ ಟೊಟ್, ಕಾಂಗೊ ಪ್ರಜಾತಾಂತ್ರಿಕ ಗಣರಾಜ್ಯದ ರೊಡ್ರಿಗ್ ಮುಗಾರುಕಾ ಕಟೆಂಬೊ ಹಾಗೂ ಆಸ್ಟ್ರೇಲಿಯದ ವೆಂಡಿ ಬೊಮ್ಯಾನ್ ಈ ವರ್ಷ ಗೋಲ್ಡ್‌ಮ್ಯಾನ್ ಪ್ರಶಸ್ತಿಗೆ ಪುರಸ್ಕೃತರಾದ ಇತರ ಸಾಧಕರು.