ಚಿಕ್ಕಮಗಳೂರು ಜಿಲ್ಲೆಯಲ್ಲಿ ಬೇಸಿಗೆಯ ಧಗೆ: ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಇಳಿಕೆ

Update: 2017-04-29 16:33 GMT

ಚಿಕ್ಕಮಗಳೂರು, ಎ.29:ಪ್ರವಾಸಿಗರ ಸ್ವರ್ಗ ಎಂದು ಪ್ರಖ್ಯಾತಿ ಪಡೆದಿರುವ ಚಿಕ್ಕಮಗಳೂರು ಜಿಲ್ಲೆಯಲ್ಲಿ ಇದೀಗ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದ ಇಳಿಕೆ ಕಂಡು ಬಂದಿದೆ. ಬಿರು ಬೇಸಿಗೆಯ ಧಗೆ ಇಲ್ಲಿನ ಅರಣ್ಯ ಭೂಮಿ ಹಚ್ಚ ಹಸಿರನ್ನು ಒಣಭೂಮಿಯನ್ನಾಗಿ ಮಾಡಿಬಿಟ್ಟಿದೆ. ಈ ಕಾರಣದಿಂದ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿದೆ.

  ಪ್ರಸಕ್ತ ವರ್ಷಬೇಸಿಗೆಯ ಜೊತೆ ಬರದ ಛಾಯೆಯೂ ಜಿಲ್ಲೆಯನ್ನು ಆವರಿಸಿದ್ದು ಪ್ರವಾಸಿಗರ ಸಂಖ್ಯೆ ಬಾರೀ ಪ್ರಮಾಣದಲ್ಲಿ ಕುಸಿಯಲು ಕಾರಣವಾಗಿದೆ. ಆದಾಯದ ಮೂಲಕ್ಕಾಗಿ ಪ್ರವಾಸೋದ್ಯಮವನ್ನು ನೆಚ್ಚಿಕೊಂಡವರು ಈಗ ಪರಿತಪಿಸುತ್ತಿದ್ದಾರೆ.

ದಶಕದ ಹಿಂದೆ ಎಪ್ರಿಲ್ ಬಂತೆಂದರೆ ಕಾಫಿನಾಡು ಚಿಕ್ಕಮಗಳೂರು ಭೂಲೋಕದ ಸ್ವರ್ಗವಾಗಿತ್ತು. ಅಂದು ಕೋಟ್ಯಾಂತರ ಪ್ರವಾಸಿಗರ ಆಗಮನವಾಗುತ್ತಿತ್ತು. ಆದರೆ ಕಳೆದೆರಡು ವರ್ಷಗಳಲ್ಲಿ ಪ್ರವಾಸಿಗರ ಸರಾಸರಿ ನೋಡಿದರೆ ಈ ಬಾರಿ ಕಾಫಿನಾಡಿಗೆ ಅನಾಥ ಪ್ರಜ್ಞೆ ಕಾಡುತ್ತಿದೆ.

 2015 ರಲ್ಲಿ 89,44,970 ರಷ್ಟಿದ್ದ ಪ್ರವಾಸಿಗರ ಸಂಖ್ಯೆ 2016 ರಲ್ಲಿ 83,19,207 ರಷ್ಟಿದ್ದು 6 ಲಕ್ಷಕ್ಕೂ ಅಧಿಕ ಪ್ರಮಾಣದಲ್ಲಿ ಪ್ರವಾಸಿಗರ ಸಂಖ್ಯೆ ಕುಸಿದಿದೆ. ಇಲ್ಲಿನ ಸೌಂದರ್ಯ ದಿನದಿಂದ ದಿನಕ್ಕೆ ಇಮ್ಮಡಿಗೊಳ್ಳುತ್ತಿರುವುದರಿಂದ ಚಿಕ್ಕಮಗಳೂರಿನ, ಬಾಬಾಬುಡಾನ್‌ಗಿರಿ,ಕೆಮ್ಮಣ್ಣುಗುಂಡಿ, ಮುಳ್ಳಯ್ಯನಗಿರಿ, ಹೊರನಾಡು, ಶೃಂಗೇರಿ, ರಂಭಾಪುರಿ ಪೀಠ, ಕಳಸ ಸೇರಿದಂತೆ ಹತ್ತಾರು ಪ್ರವಾಸಿ ತಾಣಗಳಿಗೆ ಕೋಟ್ಯಾಂತರ ಪ್ರವಾಸಿಗರು ಬರುತಿದ್ದರು.

 ಈ ಸಲ ಇಲ್ಲಿ ಬೀಸುವ ಗಾಳಿಯೂ ಬಿಸಿಗಾಳಿಯಾಗಿರುವ ಹಿನ್ನೆಲೆಯಲ್ಲಿ ಕಾಫಿನಾಡಿಗೆ ಬರುವ ಪ್ರವಾಸಿಗರಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ.ಇನ್ನು ಜಿಲ್ಲೆಯಲ್ಲಿರೋ 200 ಕ್ಕೂ ಅಧಿಕ ಹೋಂಸ್ಟೇ ಹಾಗೂ ರೆಸಾರ್ಟ್ ಗಳು,400ಕ್ಕೂ ಅಧಿಕ ಹೋಟೆಲ್‌ಗಳು ನಿಂತಿರುವುದು ಪ್ರವಾಸೋಧ್ಯಮದ ಮೇಲೆ. ಈ ಬಾರಿಯ ಭೀಕರ ಬರ ಕಾಫಿನಾಡಿನ ವ್ಯವಹಾರದ ಮೇಲೆ ಗಂಭೀರ ಪರಿಣಾಮ ಬೀರಿದೆ.

 ಜಿಲ್ಲೆಯ ಪ್ರವಾಸೋಧ್ಯಮವನ್ನು ನೆಚ್ಚಿಕೊಂಡು ಟೂರ್ಸ್ ಅಂಡ್ ಟ್ರಾವೆಲ್ಸ್ ಸೇರಿದಂತೆ ಇನ್ನೀತರ ಉದ್ಯೋಗ ಮಾಡಿಕೊಂಡು ಪ್ರವಾಸೋದ್ಯಮವನ್ನು ನಂಬಿಕೊಂಡವರು ಕೈಕಟ್ಟಿ ಕೂರುವಂತಾಗಿದೆ.ಕಾಫಿನಾಡಿನ ಬರ ಬರೀ ರೈತ ಸಮುದಾಯ ಕುಡಿಯುವ ನೀರಿನ ಮೇಲಷ್ಟೆ ಆಗಿಲ್ಲ, ಜಿಲ್ಲೆಯ ಮೂಲ ವ್ಯವಹಾರದ ಮೇಲೂ ಬೀರಿದೆ. ದಿನದಿಂದ ದಿನಕ್ಕೆ ಬರ ಹೆಚ್ಚುತ್ತಿರುವುದರಿಂದ ಕುಡಿಯುವ ನೀರು ಹಾಗೂ ರೈತರ ಸಮಸ್ಯೆ ಜೊತೆ ಬಾಗಿಲು ಹಾಕುತ್ತಿರುವ ಹೋಟೆಲ್‌ಗಳ ಸಂಖ್ಯೆಯೂ ಹೆಚ್ಚಿದೆ.

Writer - ಅಝೀರ್ ಕಿರುಗುಂದ

contributor

Editor - ಅಝೀರ್ ಕಿರುಗುಂದ

contributor

Similar News