ಬೆಂಬತ್ತಿದ ದುರ್ವಾಸನೆ

Update: 2017-05-10 18:37 GMT

ಹೀಗೆ ಕೆಲ ದಿನ ಕಳೆದ ಬಳಿಕ ಮನೆಯಲ್ಲೇ ಅಕ್ಕ ಪಕ್ಕ ಕೆಲಸ ಮಾಡುವುದು, ತೆಂಗಿನ ಬುಡವನ್ನು ಬಿಡಿಸುವುದು ಮಾಡತೊಡಗಿದ.

‘‘ಅಯ್ಯೋ ಈ ಕೆಲಸಕ್ಕೆಲ್ಲ ಬೇರೆ ಜನರಿದ್ದಾರೆ ಮಗಾ’’ ಎಂದು ಲಕ್ಷ್ಮಮ್ಮ ಹೇಳಿದರೆ ಪಪ್ಪು ಅದನ್ನು ಕಿವಿಗೆ ಹಾಕುತ್ತಿರಲಿಲ್ಲ.

‘‘ಸೇನೆಯಲ್ಲಿ ನಮ್ಮದು ಇದೇ ಕೆಲಸ ಅಮ್ಮ. ನಾನು ಒಂದಿಷ್ಟು ಮೈ ಬಗ್ಗಿಸದಿದ್ದರೆ, ಮತ್ತೆ ಸೇನೆಯಲ್ಲಿ ಕಷ್ಟವಾಗುತ್ತದೆ...’’

‘‘ತೆಂಗಿನ ಬುಡ ಬಿಡಿಸುವುದಕ್ಕಾಗಿ ಸೇನೆ ಸೇರಬೇಕೇನೋ....ಗಡಿ ಕಾಯುವ ಕೆಲಸಕ್ಕೆ ತಾನೆ ಸೇನೆಗೆ ಸೇರೋದು...’’ ಲಕ್ಷ್ಮಮ್ಮ ಅಚ್ಚರಿಯಿಂದ ಕೇಳಿದರು.

‘‘ಎಲ್ಲರೂ ಹೋಗಿ ಗಡಿಯಲ್ಲಿ ನಿಂತುಕೊಳ್ಳು ವಂತಹದ್ದು ಅಲ್ಲಿ ಏನೂ ಇಲ್ಲ ಅಮ್ಮ. ಅಲ್ಲಿರುವುದು ಬರೇ ಬೋಳು ಗುಡ್ಡ, ಬಟಾ ಬಯಲು. ಎಳನೀರು ಕದ್ದು ಕೊಂಡು ಹೋಗಬಹುದು ಎಂದರೆ ಅಲ್ಲಿ ತೆಂಗಿನ ಮರವೂ ಇಲ್ಲ...ಇಷ್ಟೆಲ್ಲ ಸೈನಿಕರು ಅಲ್ಲಿ ಮತ್ತೆಂತ ಕಾಯುವುದು?’’ ಪಪ್ಪು ಕೇಳಿದ. ‘‘ಮತ್ತೆ ಇಡೀ ದಿನ ಏನು ಮಾಡುತ್ತೀರಿ...?’’ ‘‘ಮಾಡುವುದೇನು...ಅದೇ ತೆಂಗಿನ ಬುಡ ಬಿಡಿಸುವ ಕೆಲಸ’’ ಎಂದು ಪಪ್ಪು ನಕ್ಕು ತಾಯಿಯನ್ನು ನೋಡಿದ.

‘‘ಪಕ್ಕದ ದಟ್ಟಿಗೆಯಲ್ಲಿರುವ ಮೋಂಟನೂ ಅದನ್ನೇ ಮಾಡುವುದು. ಇದನ್ನು ಮಾಡುವುದಕ್ಕೆ ಅಷ್ಟು ದೂರ ಯಾಕೆ ಹೋಗಬೇಕು...?’’

‘‘ಅಮ್ಮ ನಿನಗೆ ಅದೆಲ್ಲ ಅರ್ಥ ಆಗುವುದಿಲ್ಲ...’’ ಎಂದು ಪಪ್ಪು ತಾಯಿಯ ಬಾಯಿ ಮುಚ್ಚಿಸಿದ.

ಹೀಗೆ ಸಣ್ಣ ಪುಟ್ಟ ಕೆಲಸಗಳ ಮೂಲಕವೇ ದಿನಗಳನ್ನು ಕಳೆಯಲು ಪಪ್ಪು ಯತ್ನಿಸುತ್ತಿದ್ದ. ಅದೊಂದು ದಿನ ಏನನಿಸಿತೋ ಎದ್ದವನೇ ಹೊರಹೋಗುವುದಕ್ಕೆ ಅಣಿಯಾಗತೊಡಗಿದ.

‘‘ಎಲ್ಲಿಗೆ ಹೋಗುತ್ತಿದ್ದೀಯೋ?’’ ಲಕ್ಷ್ಮಮ್ಮ ಕೇಳಿದರು.

ಪಪ್ಪು ಉತ್ತರಿಸಲಿಲ್ಲ. ಚಾವಡಿಗೆ ಬಂದು ತಂದೆಯ ಎದುರು ನಿಂತ. ಆರಾಮಕುರ್ಚಿಯಲ್ಲಿ ಒರಗಿದ್ದ ಅನಂತಭಟ್ಟರು ಮಗನನ್ನು ಪ್ರಶ್ನಾರ್ಥಕವಾಗಿ ನೋಡಿದರು.

‘‘ವೆಂಕಟನ ಮನೆ ಎಲ್ಲಿ ಆಗತ್ತಪ್ಪ...?’’ ಪಪ್ಪು ಕೇಳಿದ.

‘‘ಯಾವ ವೆಂಕಟನೋ...?’’

‘‘ಅದೇ ಅಪ್ಪ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮನಾದ ವೆಂಕಟನ ಮನೆ....’’

‘‘ಓ ಆ ವೆಂಕಟನ...ಅದೆಲ್ಲಿ ಎಂದು ಯಾರಿಗೆ ಗೊತ್ತೋ....? ಸುಬ್ಬಣ್ಣ ಮೇಷ್ಟ್ರ ಮನೆ ಕಡೆ ಹೋಗುವ ಓಣಿಯಲ್ಲಿ ಮುಂದೆ ಸಾಗಿದರೆ ಹೋಲೇರ ದಟ್ಟಿಗೆ ಸಿಗತ್ತೆ. ಅಲ್ಲೇ ಇರಬೇಕು...ಸರಿಯಾಗಿ ಗೊತ್ತಿಲ್ಲ ಕಣೋ...’’

‘‘ನೀವು ಈವರೆಗೆ ಅಲ್ಲಿಗೆ ಹೋಗಿಲ್ಲವೇ ಅಪ್ಪಾ?’’

‘‘ನಾನ್ಯಾಕೆ ಅಲ್ಲಿಗೆ ಹೋಗಬೇಕು?’’ ಅನಂತಭಟ್ಟರು ಗೊಂದಲದಿಂದ ಕೇಳಿದರು.

ಪಪ್ಪು ವೌನವಾದ. ಅನಂತಭಟ್ಟರೇ ಹೇಳಿದರು ‘‘ಅದು ಹೊಲೇರ ಕೇರಿ ಕಣೋ....ಅಲ್ಲಿಗೆ ಹೇಗೆ ಹೋಗೋದು...? ತೆಂಗಿನ ಕಾಯಿ ಕೀಳಲು ಇಲ್ಲೇ ಪಕ್ಕದಲ್ಲಿ ಮೋಂಟ ಕರೆದರೆ ಬರುತ್ತಾನೆ. ಏನಾದರೂ ಬೇರೆ ಹೊಲಸು ಕೆಲಸ ಇದ್ದರೆ ಜನ ಕಳುಹಿಸಬಹುದು...’’

ಅಷ್ಟರಲ್ಲಿ ಪಪ್ಪು ಮನೆಯಿಂದ ಇಳಿದು ಅಂಗಳಕ್ಕೆ ಬಂದಿದ್ದ. ಅವನಲ್ಲೂ ಗೊಂದಲ. ವೆಂಕಟ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮನಾದವನು. ಇಡೀ ಬಜತ್ತೂರು ಗ್ರಾಮವೇ ಅವನನ್ನು ಕೊಂಡಾಡಿದೆ. ನಾವೆಲ್ಲ ಸಾಲಾಗಿ ಅವನಿಗೆ ತಮ್ಮ ಗೌರವವನ್ನು ಸಲ್ಲಿಸಿದ್ದೇವೆ. ಸುಬ್ಬಣ್ಣ ಮೇಷ್ಟ್ರು ಅವನ ಬಾಲ್ಯದ ಕತೆಯನ್ನು ರೋಮಾಂಚಕಾರಿಯಾಗಿ ವಿವರಿಸಿದ್ದರು.

 ತಾನು ಸೇನೆಗೆ ಸೇರಲು ರ್ಯಾಲಿಯಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಅಪ್ಪಯ್ಯ ಕೇಳಿದ ಪ್ರಶ್ನೆ ನೆನಪಾಯಿತು

 ‘‘ನಿಮ್ಮ ಊರಲ್ಲಿ ವೆಂಕಟನಿಗಾಗಿ ಸ್ಮಾರಕವೊಂದನ್ನು ನಿರ್ಮಿಸಿಲ್ಲವೇ?’’

ಕಾರ್ಗಿಲ್‌ನಲ್ಲಿ ಧೀರೋದ್ಧಾತನಾಗಿ ಹೋರಾಡಿ ಮಡಿದ ವೆಂಕಟನಿಗೆ ಊರಲ್ಲೇಕೆ ಸ್ಮಾರಕವಿಲ್ಲ? ಅದೂ ಇಡೀ ತಾಲೂಕಿನಲ್ಲೇ ಹುತಾತ್ಮನಾದ ಏಕೈಕ ಯೋಧ ಅವನು. ಸುಬ್ಬಣ್ಣ ಮೇಷ್ಟ್ರ ಮನೆಯ ದಾರಿ ಪಪ್ಪುವಿಗೆ ಗೊತ್ತಿತ್ತು. ಅಲ್ಲಿ ಯಾರನ್ನಾದರೂ ಕೇಳಿದರೆ ವೆಂಕಟನ ಮನೆಗೆ ಹೋಗುವ ದಾರಿಯನ್ನು ಹೇಳಬಹುದು ಎಂದು ಪಪ್ಪು ಮುಂದುವರಿದ.

ದಾರಿಯಲ್ಲಿ ಯಾರೋ ಒಬ್ಬರು ಅವನನ್ನು ತಡೆದರು ‘‘ನೀವು...ಲೆಕ್ಕದ ಮೇಷ್ಟ್ರ ಮಗ ಅಲ್ಲವಾ?’’

‘‘ಹೌದು’’ ಎಂದ.

‘‘ಅಲ್ಲ ಮಾರ್ರೆ...ಇರುವುದು ಒಬ್ಬ ಮಗ. ನೀವು ತಂದೆ ತಾಯಿಯನ್ನು ಒಂಟಿ ಮಾಡಿ ಸೇನೆಗೆ ಸೇರಿದ್ದ? ನಿಮಗೆ ಅದೆಲ್ಲ ಹೇಳಿ ಮಾಡಿಸಿದ್ದ?’’ ಕೇಳಿ ಬಿಟ್ಟ.

ಪಪ್ಪು ಬರೇ ನಕ್ಕು ಅದನ್ನು ತೇಲಿಸಿ ಬಿಟ್ಟ.

‘‘ಈ ಕಡೆ ಎಲ್ಲಿಗೆ?’’ ಅಪರಿಚಿತನೇ ಕೇಳಿದ.

‘‘ವೆಂಕಟನ ಮನೆಗೆ ಹೋಗಬೇಕಾಗಿತ್ತು...ನಿಮಗೆ ಅವನ ಮನೆ ದಾರಿ ಗೊತ್ತುಂಟಾ?’’

‘‘ಯಾವ ವೆಂಕಟ? ತೆಂಗಿನ ಕಾಯಿ ಕೀಳುತ್ತಾನಲ್ಲ ಅವನಾ? ಎಂತ ಮೇಷ್ಟ್ರು ಬರ ಹೇಳಿದ್ದಾರಾ?’’ ‘‘ಅವನಲ್ಲ...ಕಾರ್ಗಿಲ್‌ನಲ್ಲಿ ಹುತಾತ್ಮ ಆದನಲ್ಲ ಆ ವೆಂಕಟ?’’

‘‘ಅದು ಯಾರದು? ನನಗೆ ಗೊತ್ತಿಲ್ಲದ ವೆಂಕಟ....’’

‘‘ಮಿಲಿಟರಿಯಲ್ಲಿ ಇದ್ದರು. ದೇಶಕ್ಕಾಗಿ ಪ್ರಾಣ ಕೊಟ್ಟರು...’’

‘‘ಎಲ್ಲಿ ಆಗ್ತದಂತೆ ಮನೆ?’’

‘‘ಸುಬ್ಬಣ್ಣ ಮೇಷ್ಟ್ರ ಮನೆಯ ಒತ್ತಿನ ಓಣಿಯಲ್ಲಿ ಹೋದರೆ ಸಿಗುತ್ತದೆಯಂತೆ...ಅಲ್ಲಿ ಹೊಲೇರ ದಟ್ಟಿಗೆ ಇದೆಯಂತಲ್ಲ?’’

‘‘ಓ...ನೀವು ಹೇಳುತ್ತಿರುವುದು ಹೊಲೇರ ವೆಂಕಟನ ಮನೆಯ? ಈಗ ನೀವು ಅಲ್ಲಿಗೆ ಯಾಕೆ ಹೋಗೋದು...ಯಾರನ್ನಾದರೂ ಕರೆಯಲಿಕ್ಕೆ ಇದ್ದರೆ ಹೇಳಿ...ನಾನು ಅಲ್ಲಿಗೆ ಜನ ಕಳುಹಿಸುತ್ತೇನೆ... ನಿಮ್ಮಂಥವರೆಲ್ಲ ಹೋಗುವ ಜಾಗ ಅಲ್ಲ ಅದು. ಮೇಷ್ಟ್ರಿಗೆ ಗೊತ್ತಾದರೆ ಬೇಜಾರಾಗಬಹುದು....’’

‘‘ನೀವು ದಾರಿ ಹೇಳಿ. ನಾನೇ ಹೋಗುತ್ತೇನೆ...’’

ಅಪರಿಚಿತ ನಿಟ್ಟುಸಿರಿಟ್ಟ

 ‘‘ನನಗೇನು. ನಾನು ದಾರಿ ಹೇಳುತ್ತೇನೆ. ಅದಕ್ಕೆ ಸುಂಕ ಕೊಡಬೇಕ? ಓ ಅಲ್ಲಿ ಕಾಣುತ್ತದಲ್ಲ ಮಾಡು. ಅದು ಸುಬ್ಬಣ್ಣ ಮೇಷ್ಟ್ರ ಮನೆ. ಅಲ್ಲೇ ಹಿಂಬದಿಯಲ್ಲಿ ಒಂದು ಕಾಲು ದಾರಿ ಇದೆ. ಅರ್ಧ ಕಿಲೋಮೀಟರ್ ನಡೆಯಬೇಕು....ಹೋಗಿ ಹೋಗಿ...’’ ಎಂದವನೇ ಅಪರಿಚಿತ ಗೊಣಗುತ್ತಾ ಅಲ್ಲಿಂದ ಹೊರಟ.

ಪಪ್ಪು ಮುಂದೆ ಸಾಗಿದ. ಸುಬಣ್ಣ ಭಟ್ಟರ ಮನೆಯ ಹಿಂದಿನಿಂದ ತೆರೆದುಕೊಳ್ಳುವ ಕಾಲು ದಾರಿ ತುಂಬಾ ಇಕ್ಕಟ್ಟಾಗಿತ್ತು. ಜೊತೆಗೆ ಹರಡಿಕೊಂಡಿರುವ ನಾಚಿಕೆ ಮುಳ್ಳುಗಳು. ಎಡವುತ್ತಾ ಎಡವುತ್ತಾ ನಿಧಾನ ಹೆಜ್ಜೆಗಳನ್ನಿಡುತ್ತಿದ್ದ. ಅಷ್ಟರಲ್ಲಿ ತಿಳಿಯದೇ ಅದೇನೋ ಹೊಲಸಿಗೆ ಕಾಲಿಟ್ಟ. ಬಗ್ಗಿ ನೋಡಿದರೆ ಹೇಲು. ವಾಂತಿ ಹೊಟ್ಟೆಯಿಂದ ಒತ್ತಿ ಬಂತು. ಕಾಲನ್ನು ಹುಲ್ಲಿನ ಹಾಸಿಗೆ ಉಜ್ಜಿದವನೇ ತಿರುಗಿ ವೇಗವಾಗಿ ತನ್ನ ಮನೆಯ ದಾರಿ ಹಿಡಿದ. ಅವನಿಗೆ ತೀರಾ ಸಂಕಟ. ಹೇಳಿಕೊಳ್ಳಲಾಗದ ನೋವು. ಜೊತೆಗೆ ಅಳು ಕೂಡ ಉಕ್ಕಿ ಬರುತ್ತಿತ್ತು. ಒಮ್ಮೆ ಮನೆ ತಲುಪಿದರೆ ಸಾಕು ಅನ್ನಿಸಿತು. ಅವಸರವಸರವಾಗಿ ಹೆಜ್ಜೆ ಇಡುತ್ತಿದ್ದ. ಮನೆಯ ಅಂಗಳ ತಲುಪಿದವನೇ ‘‘ಅಮ್ಮ ಸ್ನಾನ ಮಾಡಬೇಕು. ಬಚ್ಚಲಲ್ಲಿ ಬಿಸಿ ನೀರಿದೆಯಾ?’’ ಎಂದು ಕೇಳಿದ.

‘‘ಹೊಲೇರ ಕೇರಿಗೆ ಹೋಗಿದ್ದಿಯೇನೋ...ಬಾವಿ ಕಟ್ಟೆಯಲ್ಲಿ ನೀರಿಟ್ಟಿದ್ದೇನೆ. ತಲೆಗೆ ಒಂದು ತಂಬಿಗೆ ಸುರಿದು ಒಳಗೆ ಬಾ’’ ಲಕ್ಷ್ಮಮ್ಮ ಹೇಳಿದರು.

ಬಾವಿಯ ಪಕ್ಕ ಬಕೆಟ್ ತುಂಬಾ ನೀರು ಮತ್ತು ತಂಬಿಗೆ ಇತ್ತು. ಇಡೀ ಬಕೆಟ್ ನೀರನ್ನೇ ಎತ್ತಿ ತಲೆಯ ಮೇಲೆ ಸುರಿದುಕೊಂಡ. ಅಷ್ಟರಲ್ಲಿ ಲಕ್ಷ್ಮಮ್ಮ ತಲೆ ಒರೆಸಲು ಬಟ್ಟೆ ಹಿಡಿದುಕೊಂಡು ಓಡಿ ಬಂದರು ‘‘ಎಲ್ಲಿಗೋ ಹೋಗಿದ್ದೆ?’’

ಪಪ್ಪು ಮಾತನಾಡಲಿಲ್ಲ. ಬಟ್ಟೆಯಿಂದ ತಲೆಒರೆಸಿ ಕೊಂಡವನೇ ನೇರ ಮನೆಯೊಳಗೆ ನಡೆದು ಕೋಣೆ ಸೇರಿಕೊಂಡ. ಬಿದ್ದುಕೊಳ್ಳಬೇಕು ಎನ್ನಿಸಿ ಹಾಸಿಗೆಗೆ ಒರಗಿದ. ಹಾಗೆಯೇ ನಿದ್ದೆ ಆವರಿಸಿಕೊಂಡಿತು.

 ಎಚ್ಚೆತ್ತಾಗ ಅದೇನೋ ದುರ್ವಾಸನೆ. ಎಲ್ಲಿಂದ ಬರುತ್ತಿದೆಯೆಂದು ಅವನಿಗೆ ಗೊತ್ತಿರಲಿಲ್ಲ.

‘‘ಅಮ್ಮ...ಇದೇನು ದುರ್ವಾಸನೆ...’’ ಕೂಗಿ ಕೇಳಿದ.

ಅಮ್ಮನ ಪ್ರತಿಕ್ರಿಯೆ ಇಲ್ಲ. ಬಹುಶಃ ಆಕೆ ಹಿತ್ತಿಲಲ್ಲಿರಬೇಕು.

ತಾನು ತುಳಿದ ಹೊಲಸಿನ ವಾಸನೆ ಇನ್ನೂ ಹೋಗಿರಲಿಕ್ಕಿಲ್ಲವೋ ಎಂಬ ಅನುಮಾನ ಕಾಡಿತು. ಎದ್ದು ಬಚ್ಚಲ ಮನೆಗೆ ತೆರಳಿದ. ಕಾಲನ್ನು ಇನ್ನಷ್ಟು ತಿಕ್ಕಿ ತಿಕ್ಕಿ ತೊಳೆಯ ತೊಡಗಿದ.

ಬಳಿಕ ಚಾವಡಿಗೆ ಬಂದ. ಅಮ್ಮ ಅಂಗಳದಲ್ಲಿ ತೆಂಗಿನ ಗರಿಯನ್ನು ಕತ್ತರಿಸುತ್ತಿದ್ದರು. ‘‘ಎದ್ದೆಯೇನೋ...ಬಾ...ಊಟಕ್ಕಿಡುವೆ...’’ ಎಂದರು. ‘‘ಈಗ ಬೇಡಮ್ಮ ಹಸಿವಿಲ್ಲ...’’ ಎಂದ. ‘‘ಹಾಗಂದರೇನೋ? ನನ್ನ ಕೈಯ ಅಡುಗೆ ಎಂದರೆ ಜೀವ ಬಿಡುತ್ತಿದ್ದೆ ನೀನು. ಬಂದ ದಿನದ ಉತ್ಸಾಹವೇ ನಿನ್ನಲ್ಲಿ ಇಲ್ಲ’’ ಲಕ್ಷ್ಮಮ್ಮ ಆತಂಕದಿಂದ ಕೇಳಿದರು.

‘‘ಹಾಗೇನಿಲ್ಲಮ್ಮ....ಸ್ವಲ್ಪ ಹೊತ್ತು ಹೋಗಲಿ...’’ ಎಂದ.

‘‘ನಿನ್ನ ಮಿಲಿಟರಿಯ ಕಥೆ ನನಗೆ ಹೇಳಲೇ ಇಲ್ಲ..’’ ಲಕ್ಷ್ಮಮ್ಮ ಆಸಕ್ತಿ ವಹಿಸಿದರು.

‘‘ಏನಿದೆಯಮ್ಮ ಅಲ್ಲಿ. ದಿನ ಲೆಫ್ಟ್ ರೈಟ್...ಲೆಫ್ಟ್ ರೈಟ್....’’ ಎಂದು ಹೇಳಿ ನಕ್ಕ.

‘‘ಅಲ್ವೋ ಶತ್ರುಗಳನ್ನು ಕೊಲ್ಲುವ ಬಗ್ಗೆ ಮಾತನಾಡಿದ್ದೆ. ಯಾರಾದರೂ ಶತ್ರುಗಳು ಈವರೆಗೆ ಸಿಕ್ಕಿಲ್ಲವೇ?’’

‘‘ಅವರೆಲ್ಲ ದೇಶದ ಹೊರಗಡೆ ಇದ್ದಾರಮ್ಮ...’’

‘‘ಎಂತದಪ್ಪ ಒಂದೂ ಅರ್ಥವಾಗುವುದಿಲ್ಲ...ದೇಶಭಕ್ತಿ ಎಂದರೆ ನನಗೆ ನನ್ನ ಅಜ್ಜ ಅಷ್ಟೇ ನೆನಪಾಗುವುದು. ಅಂತಹ ಬ್ರಿಟಿಷರನ್ನೇ ಓಡಿಸಿದವರು ಅವರು. ಆದರೆ ಕೈಯಲ್ಲಿ ಕೋವಿ ಹಿಡಿದಿರಲಿಲ್ಲ...’’

‘‘ಹೋಗ್ಲಿ ಬಿಡಮ್ಮ. ನನಗೇ ಇನ್ನೂ ಸರಿಯಾಗಿ ಅರ್ಥ ಆಗಿಲ್ಲ. ಇನ್ನು ನಿನಗೆ ಅರ್ಥ ಆಗೋದು ಹೇಗೆ?’’ ಪಪ್ಪುವೂ ನಕ್ಕ. ‘‘ನಿನಗೊಂದು ಮದುವೆ ಮಾಡಿದರೆ ಎಲ್ಲ ಸರಿಯಾಗುತ್ತೆ. ಆ ಕೆಲಸವನ್ನು ಬಿಟ್ಟು ಇಲ್ಲೇ ತೆಂಗಿನ ಬುಡ ಬಿಡಿಸುತ್ತಾ ಇದ್ದು ಬಿಡು. ಮರ ನಾಲ್ಕು ಕಾಯಿಯನ್ನಾದರೂ ಜಾಸ್ತಿ ಬಿಡಬಹುದು’’ ಪಪ್ಪು ವೌನವಾದ. ‘‘ಯಾಕೋ ವೌನವಾಗಿದ್ದೀಯ? ತಂದೆಗೆ ಹೇಳಿದ್ದೀನಿ. ಒಳ್ಳೆಯ ಚಂದದ ಹುಡುಗಿಯೊಂದನ್ನು ಹುಡುಕಿ ಬೇಗ ಅವನ ಕುತ್ತಿಗೆಗೆ ಕಟ್ಟಿ ಅಂತ’’

‘‘ಸೇನೆಯಲ್ಲಿರುವ ಹುಡುಗನಿಗೆ ಯಾರೂ ಹುಡುಗಿ ಕೊಡಲ್ಲಮ್ಮ’’ ನಸು ನಕ್ಕು ಹೇಳಿದ.

‘‘ಓಹೋ...ನಿನಗೆ ಆ ಚಿಂತೆಯೋ...ಬಿಡು. ಈಗಾಗಲೇ ಎಷ್ಟು ಜನ ನಿನ್ನ ಬಗ್ಗೆ ತಂದೆಯಲ್ಲಿ ವಿಚಾರಿಸಿ ದ್ದಾರೆ ಗೊತ್ತಾ? ಈಗ ಇಲ್ಲ, ಮುಂದಿನ ಸಾರಿ ರಜೆಯಲ್ಲಿ ಬಂದಾಗ ಮದುವೆ ಮಾಡುವ ಆಲೋಚನೆ ಇದೆ ಎಂದು ಅವರನ್ನು ಸಮಾಧಾನ ಪಡಿಸಿದ್ದಾರೆ. ಮನೆ ಮುಂದೆ ಸಾಲು ಸಾಲಾಗಿ ಹುಡುಗಿಯರು ನಿಲ್ಲೋದು ನೋಡು...ಇನ್ನೊಮ್ಮೆ ರಜೆಯಲ್ಲಿ ಬಂದಾಗ ಮದುವೆ ಮಾಡಿಯೇ ಮುಗಿಸೋದು ಎಂದು ನಿನ್ನ ಅಪ್ಪ ಹೇಳಿದ್ದಾರೆ’’

ಪಪ್ಪು ಮತ್ತೆ ವೌನವಾದ. ವಾಸನೆ ಅವನನ್ನು ಮತ್ತೆ ಕಾಡತೊಡಗಿತು. ಬಚ್ಚಲ ಮನೆಗೆ ಹೋಗಿ ಕಾಲಿಗೆ ನೀರು ಹಾಕಿ ಮತ್ತೆ ಉಜ್ಜಿಕೊಂಡ.

(ರವಿವಾರ ಸಂಚಿಕೆಗೆ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News