ಇ.ವಿ.ಎಂ.ನ ಲ್ಯಾಬ್ ಟೆಸ್ಟ್!, ಕಳಪೆ ಗರ್ಭನಿರೋಧಕ ಮಾತ್ರೆಗಳು!

Update: 2017-05-15 18:37 GMT

ಮುಂಬೈ ಹೈಕೋರ್ಟ್ ತನ್ನ ಒಂದು ಆದೇಶದಲ್ಲಿ ಮಹಾರಾಷ್ಟ್ರ ವಿಧಾನ ಸಭಾ ಚುನಾವಣೆಯ ಸಮಯ ಒಂದು ಪೋಲಿಂಗ್ ಬೂತ್‌ನಲ್ಲಿ ಬಳಸಲಾದ ಇಲೆಕ್ಟ್ರಾನಿಕ್ ಓಟಿಂಗ್ ಮೆಷಿನ್‌ನ ಲ್ಯಾಬ್ ಟೆಸ್ಟ್ ನಡೆಸುವಂತೆ ಆದೇಶಿಸಿದೆ. ಇವಿಎಂನಲ್ಲಿ ಯಾವುದಾದರೂ ನ್ಯೂನತೆಗಳು ಇವೆಯೋ ಎಂದು ತನಿಖೆ ನಡೆಸುವಂತೆ ಹೈಕೋರ್ಟ್ ಅದನ್ನು ಲ್ಯಾಬ್‌ಗೆ ಕಳುಹಿಸಲು ಆದೇಶಿಸಿದೆ. ಈ ಆದೇಶ ಮೇ ಮೊದಲ ವಾರದಲ್ಲಿ ಜಾರಿಗೊಳಿಸಿದೆ. ಪುಣೆಯ ಪರ್‌ವತ್ತೀ ವಿಧಾನಸಭಾ ಕ್ಷೇತ್ರದ ಬೂತ್ ನಂಬರ್ 185ರಲ್ಲಿನ ಇವಿಎಂ ಬಗ್ಗೆ ಕಾಂಗ್ರೆಸ್ ಅಭ್ಯರ್ಥಿ ಅಭಯ್ ಛಾಜಡ್ ಅವರು ಬಿಜೆಪಿ ಅಭ್ಯರ್ಥಿ ಎದುರು ಸೋತ ನಂತರ 2014 ರಲ್ಲಿ ಹೈಕೋರ್ಟ್‌ಗೆ ಹೋಗಿದ್ದರು.

ಯಾಕೆಂದರೆ ಬೂತ್ ನಂಬರ್ 185ರಲ್ಲಿ ತನಗೆ ಹೆಚ್ಚು ಮತಗಳು ಸಿಗಬಹುದೆಂದು ಅವರು ನಂಬಿದ್ದರು. ಆದರೆ ಸಿಗಲಿಲ್ಲ. ಇದಕ್ಕೆ ಇವಿಎಂ ನಲ್ಲಿರುವ ಲೋಪವೇ ಕಾರಣವೆಂದು ಆರೋಪಿಸಿದ್ದರು. ಅವರ ಈ ಅರ್ಜಿಯನ್ನು ಇದೀಗ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಮೃದುಲಾ ಭಾಟ್‌ಕರ್ ಅವರು ತಕ್ಷಣ ಆ ಇವಿಎಂನ್ನು ಲ್ಯಾಬ್ ಟೆಸ್ಟ್‌ಗೆ ಕಳುಹಿಸಲು ಆದೇಶ ನೀಡಿದರು. ಆದೇಶದಂತೆ ಹೈದರಾಬಾದ್‌ನ ಸೆಂಟ್ರಲ್ ಫಾರೆನ್ಸಿಕ್ ಲ್ಯಾಬ್‌ಗೆ ಕಳಿಸಿ 9 ಪ್ರಶ್ನೆಗಳನ್ನು ಕೇಳಿ ಉತ್ತರ ಅಪೇಕ್ಷಿಸಲಾಗಿದೆ. ಆದಷ್ಟು ಬೇಗ ತನಿಖಾ ರಿಪೋರ್ಟ್ ಕಳಿಸುವಂತೆ ಕೋರ್ಟ್ ಲ್ಯಾಬ್‌ಗೆ ಸೂಚಿಸಿದೆ.
* * *

ದೇವಳಗಳಿಗೆ ಬರುವ ದಾನದ ರಾಶಿ ದ್ವಿಗುಣ
ಕಳೆದ ಏಳು ವರ್ಷಗಳಲ್ಲಿ ಮಹಾರಾಷ್ಟ್ರದ ಮಂದಿರಗಳಿಗೆ ಭಕ್ತರಿಂದ ಬರುವ ಹಣ ದ್ವಿಗುಣಗೊಂಡಿದೆ. ಮಹಾರಾಷ್ಟ್ರದ ಕಾನೂನು ಮತ್ತು ನ್ಯಾಯಪಾಲನೆ ಇಲಾಖೆಯು ಮಂದಿರಗಳಿಗೆ ಬರುತ್ತಿರುವ ಚಂದಾ ಹಣ ಮತ್ತು ದಾನದ ಹಣ ಹಾಗೂ ಖರ್ಚುಗಳ ಒಂದು ರಿಪೋರ್ಟ್ ಬಿಡುಗಡೆಗೊಳಿಸಿದೆ. ರಿಪೋರ್ಟ್‌ನಲ್ಲಿ ಮುಂಬೈಯ ಪ್ರಭಾದೇವಿಯ ಸಿದ್ಧಿವಿನಾಯಕ ಮಂದಿರಕ್ಕೆ ಪ್ರತೀದಿನ ರೂ. 25 ಲಕ್ಷ ರೂಪಾಯಿಗೂ ಹೆಚ್ಚು ಮತ್ತು ಶಿರ್ಡಿ ಸಾಯಿಬಾಬಾ ಮಂದಿರಕ್ಕೆ ಒಂದೂವರೆ ಕೋಟಿ ರೂಪಾಯಿಗೂ ಹೆಚ್ಚಿನ ಮೊತ್ತ ದಾನದ ರೂಪದಲ್ಲಿ ಬರುತ್ತಿದೆ.

ಮುಂಬೈಯ ಪ್ರಭಾದೇವಿಯಲ್ಲಿನ ಸಿದ್ಧಿವಿನಾಯಕ ಮಂದಿರಕ್ಕೆ 2009-2010ರಲ್ಲಿ ಸುಮಾರು 12 ಲಕ್ಷ 21 ಸಾವಿರ ರೂಪಾಯಿ ಪ್ರತೀದಿನ ದಾನದ ರೂಪದಲ್ಲಿ ಬರುತ್ತಿತ್ತು. ಆದರೆ 7 ವರ್ಷಗಳ ನಂತರ ದ್ವಿಗುಣಗೊಂಡಿದೆ. ಕಳೆದ 9 ತಿಂಗಳಲ್ಲಿ ಸಿದ್ಧಿವಿನಾಯಕ ಮಂದಿರದ ಟ್ರಸ್ಟ್ ಗೆ ದಾನದ ರೂಪದಲ್ಲಿ ಸುಮಾರು 70 ಕೋಟಿ 70 ಲಕ್ಷ ರೂಪಾಯಿ ದೊರೆತಿದೆ. ಅರ್ಥಾತ್ ಪ್ರತೀದಿನ 25 ಲಕ್ಷ 70 ಸಾವಿರ ರೂಪಾಯಿ ಬರುತ್ತಿದೆ.
ಇದೇ ರೀತಿ ಶಿರ್ಡಿ ಸಾಯಿಬಾಬಾ ಸಂಸ್ಥಾನಕ್ಕೆ ದಾನದ ರೂಪದಲ್ಲಿ ಪ್ರತೀದಿನ 1 ಕೋಟಿ 53 ಲಕ್ಷ ರೂ. ಸಿಗುತ್ತದೆ. ಏಳು ವರ್ಷದ ಮೊದಲು ಈ ಮೊತ್ತ ಪ್ರತೀದಿನ ಸುಮಾರು 53 ಲಕ್ಷ ರೂ. ಇರುತ್ತಿತ್ತು.
ಈ ಮಂದಿರ ಸಂಸ್ಥಾನಗಳು ಸಾಮಾಜಿಕ ಕಾರ್ಯಗಳಿಗೆ ಈ ಫಂಡ್‌ನ ಹೆಚ್ಚುಭಾಗ ಖರ್ಚು ಮಾಡುತ್ತವೆ.

* * *

ಮಂಜುಗಡ್ಡೆ ವ್ಯಾಪಾರಿಗಳ ವಿರುದ್ಧ ಕಾರ್ಯಾಚರಣೆ
 ಮುಂಬೈ ಮಹಾನಗರ ಪಾಲಿಕೆ ಈ ದಿನಗಳಲ್ಲಿ ಮಂಜುಗಡ್ಡೆ ವ್ಯಾಪಾರಿಗಳ ವಿರುದ್ಧ ಕ್ರಮ ಕೈಗೊಂಡಿದೆ. ಬೇಸಿಗೆಯ ಈ ದಿನಗಳಲ್ಲಿ ಜನರು ತಂಪಿಗಾಗಿ ಪಾನೀಯಗಳಲ್ಲಿ ಮಂಜುಗಡ್ಡೆ ಬಳಸುತ್ತಾರೆ. ಆದರೆ ಈ ಮಂಜುಗಡ್ಡೆ ಗುಣಮಟ್ಟವಿಲ್ಲದ ನೀರಿನಿಂದ ತಯಾರಿಸುತ್ತಿರುವುದರಿಂದ ಗ್ಯಾಸ್ಟ್ರೋ, ಹೆಪಟೈಟಿಸ್‌ನಂತಹ ರೋಗಗಳು ಹೆಚ್ಚು ಕಂಡು ಬರುತ್ತಿವೆ. ಹೀಗಾಗಿಯೇ ಮನಪಾ ಮತ್ತು ಎಫ್.ಡಿ.ಎ. ಈಗ ‘ಐಸ್ ನಿರೋಧಕ ಅಭಿಯಾನ’ಕ್ಕೆ ಇಳಿದಿದೆ. ಈ ಅಭಿಯಾನದಂತೆ ಹೊಟೇಲ್, ಜ್ಯೂಸ್ ಸ್ಟಾಲ್, ಐಸ್‌ಕ್ಯಾಂಡಿ ಮಾರುವವರ ಸಹಿತ ಮಂಜುಗಡ್ಡೆ ನಿರ್ಮಾಣ ಫ್ಯಾಕ್ಟರಿಗಳ ವಿರುದ್ಧ, ಹೋಲ್‌ಸೆಲ್ ವ್ಯಾಪಾರಿಗಳ ವಿರುದ್ಧ ತನಿಖೆ ಆರಂಭಿಸಿದೆ. ಈಗಾಗಲೇ ಎಫ್.ಡಿ.ಎ. ಹತ್ತು ಸಾವಿರ ಕಿಲೋಗೂ ಅಧಿಕ ಮಂಜುಗಡ್ಡೆ ನಾಶಗೊಳಿಸಿದೆ. ಮನಪಾ 14 ಸಾವಿರ ಕಿಲೋಗೂ ಅಧಿಕ ಐಸ್ ನಾಶಗೊಳಿಸಿದೆ.

ಎಪ್ರಿಲ್ ತಿಂಗಳಲ್ಲಿ ಗ್ಯಾಸ್ಟ್ರೋದ 900ಕ್ಕೂ ಅಧಿಕ ರೋಗಿಗಳು ಆಸ್ಪತ್ರೆಗೆ ಬಂದಿದ್ದಾರೆ. ಬಿಸಿಲು ಅಧಿಕವಿರುವ ಕಾರಣ ಜನರು ಹೊರಗಡೆ ಮಂಜುಗಡ್ಡೆ ಮಿಶ್ರಣದ ಪಾನೀಯಗಳನ್ನೇ ಸೇವಿಸಲು ಇಷ್ಟ ಪಡುತ್ತಿದ್ದಾರೆ. ಆದರೆ ಅನೇಕ ಕಡೆ ಈ ಐಸ್ ಸ್ವಚ್ಛ ನೀರಿನಿಂದ ತಯಾರಿಸುತ್ತಿಲ್ಲ. ಹೀಗಾಗಿ ಮನಪಾ ಅನೇಕ ಹೊಟೇಲು, ಜ್ಯೂಸ್ ಸೆಂಟರ್‌ಗಳಿಂದ ಮಂಜುಗಡ್ಡೆ ಸ್ಯಾಂಪಲ್ ಪಡೆದು ತನಿಖೆ ಆರಂಭಿಸಿದೆ. ಈಗಾಗಲೇ 70 ಪ್ರತಿಶತ ಸ್ಯಾಂಪಲ್‌ಗಳಲ್ಲಿ ಇ-ಕೋಲಿ ಬ್ಯಾಕ್ಟೀರಿಯಾಗಳು ಕಂಡು ಬಂದಿವೆ. ಇದು ಆರೋಗ್ಯಕ್ಕೆ ಹಾನಿಕಾರಕ. ಇದರಂತೆ ಎಫ್.ಡಿ.ಎ. ಮುಂಬೈ, ಥಾಣೆ, ನವಿ ಮುಂಬೈ, ಪನ್ವೇಲ್‌ಗಳಲ್ಲಿ ಕಾರ್ಯಾಚರಣೆ ನಡೆಸಿ ಈ ತನಕ ಹತ್ತು ಸಾವಿರ ಕಿಲೋ ಐಸ್ ವಶಪಡಿಸಿ ನಾಶಮಾಡಿದೆ. ಅದೇ ರೀತಿ ಮನಪಾ ಹದಿನಾಲ್ಕು ಸಾವಿರಕ್ಕೂ ಹೆಚ್ಚು ಕಿಲೋ ಐಸ್ ನಾಶಪಡಿಸಿದೆ.

* * *

ಹೊರಗಿನ ವ್ಯಾಪಾರಿಗಳಿಂದ ಸ್ಥಳೀಯ ವ್ಯಾಪಾರಿಗಳಿಗೆ ಕಿರಿಕಿರಿ
ರಮಝಾನ್ ತಿಂಗಳು ಶುರುವಾಗಲು ಇನ್ನು ಕೆಲವೇ ದಿನಗಳು ಉಳಿದಿವೆ. ಮುಂಬೈ ಸಮೀಪದ ಮುಂಬ್ರಾದಲ್ಲಿ ರಮಝಾನ್ ದಿನಗಳ ಸಂಭ್ರಮವೇ ವಿಶಿಷ್ಟವಾದುದು. ಎಷ್ಟು ಸಂಭ್ರಮ ಅಂದರೆ ರಮಝಾನ್ ದಿನಗಳಲ್ಲಿ ಸ್ಥಳೀಯ ಬೀದಿ ವ್ಯಾಪಾರಿಗಳಿಗಿಂತ ಹೆಚ್ಚು ಪಕ್ಕದ ಮುಂಬೈ, ನವಿಮುಂಬೈಗಳಿಂದಲೂ ಬರುತ್ತಾರೆ. ಇದು ಸ್ಥಳೀಯ ವ್ಯಾಪಾರಿಗಳಿಗೆ ಕಿರಿಕಿರಿ ಆಗುವುದಿದೆ.

ಸುಮಾರು ಎಂಟು ಲಕ್ಷದಷ್ಟು ಜನಸಂಖ್ಯೆ ಇರುವ ಮುಂಬ್ರಾ ಕ್ಷೇತ್ರದಲ್ಲಿ ಬೀದಿವ್ಯಾಪಾರಿಗಳ ಪುನರ್ವಸತಿಗಾಗಿ 2013ರಲ್ಲಿ ಕೌಸಾ ಎಂಬಲ್ಲಿನ ಎಂ.ಎಂ. ವೆಲಿಯಲ್ಲಿ ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ಹಾಕರ್ಸ್ ಝೋನ್ ನಿರ್ಮಿಸಲಾಗಿತ್ತು. ಇದನ್ನು ಶರದ್ ಪವಾರ್‌ರೇ ಉದ್ಘಾಟಿಸಿದ್ದರು! ಆದರೆ ಇಲ್ಲಿಗೆ ಬಂದಿರುವ ಬೀದಿವ್ಯಾಪಾರಿಗಳಿಗೆ ವ್ಯಾಪಾರ ಚೆನ್ನಾಗಿ ಆಗುವ ಲಕ್ಷಣಗಳು ಕಾಣಲಿಲ್ಲ. ಜನರು ಇತ್ತ ಬರು ವುದು ಕಡಿಮೆಯಾಗಿತ್ತು. ಹಾಗಾಗಿ ಹಾಕರ್ಸ್ ಝೋನ್‌ಗೆ ಬಂದ ಫೇರಿವಾಲಾರೆಲ್ಲ ವಾಪಾಸು ತಮ್ಮ ಹಳೆ ಜಾಗಕ್ಕೆ ಹೋಗಿಬಿಟ್ಟರು. ನಂತರ 2016ರಲ್ಲಿ ಈ ಬೀದಿ ವ್ಯಾಪಾರಿಗಳನ್ನು ಮಿತ್ತಲ್ ಕಾಂಪೌಂಡ್‌ಗೆ ಸ್ಥಳಾಂತರಿಸಲಾಯಿತು. ಇಲ್ಲೂ ಕೂಡಾ ಗ್ರಾಹಕರು ಕಡಿಮೆಯಾದ ಕಾರಣ ಇವರು ಮತ್ತೆ ವಾಪಸು ಹಳೇ ಜಾಗಕ್ಕೆ ಬಂದು ವ್ಯಾಪಾರ ಆರಂಭಿಸಿ ದರು. ಇದೀಗ ಬಾಬಾಜಿ ಪಾಟೀಲ್‌ವಾಡಿ ಎಂಬಲ್ಲಿಗೆ ಹಾಕರ್ಸ್‌ಗಳನ್ನು ಸ್ಥಳಾಂತ ರಿಸುವ ಕಾರ್ಯ ನಡೆಯುತ್ತಿದೆ. ಆದರೆ ಸ್ಥಳೀಯ ವ್ಯಾಪಾರಿಗಳು ಕೇಳುತ್ತಿಲ್ಲ.

ರಮಝಾನ್ ಸಮಯ ಸುಮಾರು ಮೂರು ಸಾವಿರ ಫೇರಿವಾಲಾರು ಸುಮಾರು ಏಳು ಕೋಟಿ ರೂಪಾಯಿಯ ವ್ಯವಹಾರ ನಡೆಸುತ್ತಾರೆ. ಆದರೆ ಸ್ಥಳೀಯ ವ್ಯಾಪಾರಿಗಳು ಆರೋಪಿಸುವುದು ‘‘ಹೊರಗಿನಿಂದ ಬಂದವರು ಮನಪಾದವರಿಗೆ ಹಣ ನೀಡಿ ತಮಗೆ ಇಚ್ಛಿತ ಜಾಗದಲ್ಲಿ ವ್ಯಾಪಾರ ನಡೆಸುತ್ತಾರೆ’’ ಎಂದು.

* * *
ಲೋಕಾಯುಕ್ತ ಬಳಿ ಪ್ರತೀದಿನ ದೂರುಗಳು ದಾಖಲು
ದೇಶದಲ್ಲಿ ಲೋಕಾಯುಕ್ತ ಕಾನೂನು ಅಸ್ತಿತ್ವಕ್ಕೆ ತಂದ ಪ್ರಥಮ ರಾಜ್ಯ ಮಹಾರಾಷ್ಟ್ರ. 1972 ರಲ್ಲಿ ಲೋಕಾಯುಕ್ತ ಕಾನೂನು ಅಸ್ತಿತ್ವಕ್ಕೆ ಬಂದಿತ್ತು. ಇಂದು ರಾಜ್ಯದ ಲೋಕಾಯುಕ್ತದ ಬಳಿ ಪ್ರತೀದಿನ 15 ದೂರುಗಳು ಬರುತ್ತಿವೆ. ಕಳೆದ ಎರಡೂವರೆ ವರ್ಷಗಳಲ್ಲಿ ಲೋಕಾಯುಕ್ತದಲ್ಲಿ 12,828 ದೂರುಗಳು ದಾಖಲಾಗಿವೆ. ಇದರಲ್ಲಿ 12,237 ದೂರುಗಳನ್ನು ಬಗೆಹರಿಸಲಾಗಿದೆ. ಅತೀ ಹೆಚ್ಚು ದೂರುಗಳು ಕಂದಾಯ ಇಲಾಖೆಯ ವಿರುದ್ಧ ಬಂದಿವೆೆ. ಅರ್ಥಾತ್ 3,030 ದೂರುಗಳು ದಾಖಲಾಗಿವೆ.

ಆರ್.ಟಿ.ಐ. ಕಾರ್ಯಕರ್ತ ಅನಿಲ್ ಗಲಗಲಿ ಅವರು ಲೋಕಾಯುಕ್ತ ಮತ್ತು ಉಪಲೋಕಾಯುಕ್ತ ಕಾರ್ಯಾಲಯದಿಂದ 1 ನವಂಬರ್ 2014 ರಿಂದ 28 ಫೆಬ್ರವರಿ 2017 ರ ಅವಧಿಯಲ್ಲಿ ಪ್ರಾಪ್ತಿಯಾದ ದೂರುಗಳು ಮತ್ತು ಬಗೆಹರಿಸಲಾದ ದೂರುಗಳ ಸಂಖ್ಯೆಯ ಮಾಹಿತಿ ಕೇಳಿದ್ದರು.
ಕಳೆದ 850 ದಿನಗಳಲ್ಲಿ 12,828 ದೂರುಗಳು ಪ್ರಾಪ್ತಿಯಾಗಿದ್ದು ಅದರಲ್ಲಿ 12,237 ದೂರುಗಳು ಬಗೆಹರಿದಿವೆ ಎಂಬ ಉತ್ತರ ಅವರಿಗೆ ಸಿಕ್ಕಿದೆ.

* * *

ಗರ್ಭನಿರೋಧಕ ಮಾತ್ರೆಗಳ ಬಗ್ಗೆ ಪ್ರಶ್ನಾರ್ಥಕ ಚಿಹ್ನೆ
 ಕೇಂದ್ರ ಮತ್ತು ರಾಜ್ಯ ಸರಕಾರದ ಕುಟುಂಬ ಯೋಜನೆ ಕಾರ್ಯಕ್ರಮ ತಮಾಷೆ ಆಗುತ್ತಿದೆಯೇ? ಬೇಡವಾದ ಗರ್ಭವನ್ನು ತಡೆಯಲು ಯಾವ ಮಾತ್ರೆಗಳನ್ನು ಸೇವಿಸುತ್ತಾರೋ ಅವುಗಳು ಕೆಲಸ ಮಾಡುತ್ತಿಲ್ಲ ಎಂದು 89 ಪ್ರತಿಶತ ಮಹಿಳೆಯರು ಹೇಳಿದ್ದಾರೆ. ಗರ್ಭ ನಿರೋಧಕ ಉಪಕರಣಗಳು ಕಳಪೆ ಮಟ್ಟದ್ದಾಗಿದ್ದು ಅವೂ ಕೆಲಸ ಮಾಡಿಲ್ಲ ಎಂದು ಇನ್ನು ಕೆಲವರ ಹೇಳಿಕೆ. ಆರ್.ಟಿ.ಐ.ಯಿಂದ ದೊರಕಿದ ಉತ್ತರವಿದು.

ಮುಂಬೈಯಲ್ಲಿ ಕಳೆದ ಆರ್ಥಿಕ ವರ್ಷದ ಸಂದರ್ಭದಲ್ಲಿ 33,526 ಕಿಶೋರಿಯರು, ಯುವತಿಯರು, ಮಹಿಳೆಯರು ಗರ್ಭಪಾತ ಮಾಡಿಸಿದ್ದರು. ಇವರಲ್ಲಿ 29,700 ಮಹಿಳೆಯರು (ಅರ್ಥಾತ್ 89 ಪ್ರತಿಶತ) ವೈದ್ಯರ ಬಳಿ ಕಾರಣ ಹೇಳಿದ್ದೆಂದರೆ ವಿಭಿನ್ನ ಗರ್ಭ ನಿರೋಧಕ ಔಷಧಿಗಳು, ಉಪಕರಣಗಳು ವಿಫಲವಾಗಿತ್ತು ಎಂದು.

ಮಹಿಳೆಯರ ಈ ಮಾತು ಒಂದು ವೇಳೆ ನಿಜ ಆಗಿದ್ದರೆ ಸರಕಾರ ಈ ಔಷಧಿಗಳ ವಿಷಯದಲ್ಲಿ ತಕ್ಷಣ ಆ ಕಂಪೆನಿಗಳ ಮೇಲೆ ಕ್ರಮ ಕೈಗೊಳ್ಳಬಾರದೇಕೆ? ಎಂದು ವೈದ್ಯರು ಕೇಳಿದ್ದಾರೆ.

ಮುಂಬೈ ಮನಪಾ ಆರೋಗ್ಯ ವಿಭಾಗದ ಅಂಕಿ ಅಂಶ ಗಮನಿಸಿದರೆ ಮುಂಬೈಯಲ್ಲಿ ಪ್ರತೀವರ್ಷ ಗರ್ಭಪಾತ ಮಾಡಿಸುವವರ ಸಂಖ್ಯೆ ಏರುತ್ತಿದೆ. 2009-2010ರಲ್ಲಿ ಈ ಸಂಖ್ಯೆ 19,853 ಇತ್ತು. 2016-2017 ರಲ್ಲಿ ಇದು 33,526ಕ್ಕೆ ತಲುಪಿದೆ.

ಈ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಕಾರಣ ಯುವಕ- ಯುವತಿಯರು ಅತೀ ಶೀಘ್ರ ಪರಸ್ಪರ ಆಕರ್ಷಣೆಗೊಳಗಾಗಿ ದೈಹಿಕ ಸಂಬಂಧದ ತನಕ ಮುಂದುವರಿಯುತ್ತಾರೆ ಎನ್ನುತ್ತಾರೆ ಆರೋಗ್ಯಾಧಿಕಾರಿಗಳು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News