ವಿಶ್ವರೂಪಂ 2 ಸಂಪೂರ್ಣ

Update: 2017-05-19 12:54 GMT

2013ರಲ್ಲಿ ಬಿಡುಗಡೆಯಾದ ವಿಶ್ವರೂಪಂ ಬಾಕ್ಸ್ ಆಫೀಸ್‌ನಲ್ಲಿ ಅದ್ಭುತ ಯಶಸ್ಸು ಕಂಡಿತ್ತು. ರಾ ಏಜೆಂಟ್ ಪಾತ್ರದಲ್ಲಿ ವಿಭಿನ್ನ ಗೆಟ್‌ಅಪ್‌ಗಳಲ್ಲಿ ಕಾಣಿಸಿಕೊಂಡಿದ್ದ ಕಮಲ್‌ಹಾಸನ್ ಅವರ ಅಭಿನಯ ಚಿತ್ರಪ್ರೇಮಿಗಳಿಂದ ಭಾರೀ ಪ್ರಶಂಸೆಯನ್ನು ಗಿಟ್ಟಿಸಿಕೊಂಡಿತ್ತು. ವಿಶ್ವರೂಪಂ ರಿಲೀಸ್ ಸಂದರ್ಭದಲ್ಲೇ, ಚಿತ್ರದ ಮುಂದುವರಿದ ಭಾಗವನ್ನು ಆ ವರ್ಷವೇ ಬಿಡುಗಡೆಗೊಳಿಸುವ ಘೋಷಣೆ ಮಾಡಿದ್ದರು. ಆದಾಗ್ಯೂ, ವಿಶ್ವರೂಪಂ ಭಾಗ-2ರ ಚಿತ್ರೀಕರಣ, ಕಾರಣಾಂತರಗಳಿಂದಾಗಿ ಅಮೆನಡಿಗೆಯಲ್ಲಿ ಕುಂಟುತ್ತಾ ಸಾಗಿತು. ಕೊನೆಗೂ ಚಿತ್ರದ ಶೂಟಿಂಗ್ ಮುಕ್ತಾಯ ಹಂತಕ್ಕೆ ಬಂದಿದೆ.

ಸ್ವತಃ ಕಮಲಹಾಸನ್ ವಿಶ್ವರೂಪಂ2 ಈ ವರ್ಷ ಬಿಡುಗಡೆಯಾಗುವುದು ಖಚಿತವೆಂದು ಟ್ವೀಟ್ ಮಾಡಿದ್ದಾರೆ. ವಿಶ್ವರೂಪಂನ ಮೊದಲ ಭಾಗದ ಕಥೆಯು ಬಹುತೇಕ ಅಮೆರಿಕದ ಹಿನ್ನೆಲೆಯಲ್ಲಿ ನಡೆದರೆ, ಎರಡನೆ ಭಾಗದ ಹೆಚ್ಚಿನ ದೃಶ್ಯಗಳು ಮುಂಬೈಯಲ್ಲಿ ಚಿತ್ರೀಕರಣಗೊಂಡಿವೆ. ತಮಿಳಿನ ಹಲವು ಹಿಟ್ ಚಿತ್ರಗಳ ನಿರ್ಮಾಪಕ ರವಿಚಂದ್ರನ್, ಆಸ್ಕರ್ ಫಿಲ್ಮ್ಸ್ ಬ್ಯಾನರ್‌ನಲ್ಲಿ ನಿರ್ಮಿಸಿರುವ ಈ ಚಿತ್ರವು ದೀಪಾವಳಿಗೆ ಬಿಡುಗಡೆಯಾಗುವ ಸಾಧ್ಯತೆಯಿದೆ. ಆದಾಗ್ಯೂ, ಅಟ್ಲಿ ನಿರ್ದೇಶನದಲ್ಲಿ ವಿಜಯ್ ಅಭಿನಯದ ಚಿತ್ರ ಕೂಡಾ ದೀಪಾವಳಿಗೆ ತೆರೆಕಾಣಲು ಸನ್ನದ್ಧವಾಗಿದ್ದು, ಎರಡೂ ಚಿತ್ರಗಳ ನಡುವೆ ಬಾಕ್ಸ್ ಆಫೀಸ್ ಕದನ ನಡೆಯುವ ಸಾಧ್ಯತೆಯಿದೆ.

ವಿಶ್ವರೂಪಂನ ಮೊದಲ ಭಾಗದಲ್ಲಿ ನಟಿಸಿದ್ದ ರಾಹುಲ್ ಭೋಸ್, ನಾಯಕಿ ಪೂಜಾ ಕುಮಾರ್ ಹಾಗೂ ಆ್ಯಂಡ್ರಿಯಾ ಜೆಮಿಯಾ, ವಿಶ್ವರೂಪಂ2ನಲ್ಲಿಯೂ ಕಾಣಿಸಿ ಕೊಂಡಿದ್ದಾರೆ. ಬರೋಬ್ಬರಿ 75 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ವಿಶ್ವರೂಪಂ2, ಮೊದಲ ಭಾಗದಂತೆ ಪ್ರೇಕ್ಷಕರನ್ನು ಮೋಡಿ ಮಾಡುವುದೇ ಎಂಬುದನ್ನು ಕಾದು ನೋಡಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News