ತಾರೆಗಳ ತೋಟದಿಂದ ಚಂದಿರ ಬಂದ

Update: 2017-06-04 06:14 GMT

ವಿಶ್ವ ಸಿನೆಮಾಗೆ ಈಸ್ಟ್‌ಮನ್ ಕಲರ್ ಪರಿಚಯವಾಗಿ ಇಲ್ಲಿಗೆ ಎಪ್ಪತ್ತೇಳು ವರ್ಷಗಳಾಗುತ್ತಿದೆ. ಮೂಕಿ ಸಿನೆಮಾದಿಂದ ಶುರುವಾದ ಚಲನ ಚಿತ್ರ ತಯಾರಿಕೆಯು ನಂತರ ಟಾಕಿಯಾಗಿ ಆಮೇಲೆ ಕಲರ್ ಸಿನೆಮಾ ಹಂತಕ್ಕೆ ಬಂದಾಗ ಎಲ್ಲರ ಬಾಯಲ್ಲೂ ಇದ್ದ ಹೆಸರು ಈಸ್ಟ್‌ಮನ್ ಕಲರ್‌ದ್ದು.

ಜಗಮಗಿಸುವ, ಬಣ್ಣದ ಲೋಕ ಎಂದು ಕರೆಯಲ್ಪಡುವ ಸಿನೆಮಾ ಎರಡರಿಂದ ಮೂರು ತಾಸುಗಳ ಅವಧಿಯಲ್ಲಿ ಪ್ರೇಕ್ಷಕನಲ್ಲಿ ಭ್ರಮೆಗಳನ್ನು ಅರಳಿಸುತ್ತ ಅದೇ ಸಂದರ್ಭದಲ್ಲಿ ವಾಸ್ತವ-ಅವಾಸ್ತವದ ನಡುವೆ ಚಿಮ್ಮುತ್ತಾ, ಮರಳುತ್ತಾ ರೋಮಾಂಚನವನ್ನೂ ಹುಟ್ಟಿಸುತ್ತಿರುತ್ತದೆ. ಪ್ರೇಕ್ಷಕನ ಮನಸ್ಸಿಗೆ ಲಗ್ಗೆ ಹಾಕುತ್ತಾ ತನ್ನೊಳಗೆ ಸೆಳೆದುಕೊಳ್ಳುತ್ತದೆ, ಕೆಡವಿಕೊಳ್ಳುತ್ತದೆ. ಲಂಕೇಶ್ ಒಂದು ಕಡೆ ‘‘ಕೆಟ್ಟ ನಾಟಕಕಾರ ಒಂದು ನಗರವನ್ನೇ ಸುಟ್ಟು ದುರಂತವನ್ನು ತೋರಿದರೆ, ಶೇಕ್ಸ್‌ಪಿಯರ್ ರಂಗದ ಮೇಲೆ ಒಂದು ಕರ್ಚೀಫ್ ಬೀಳಿಸಿ ಅದರಿಂದಾದ ತಪ್ಪು ಕಲ್ಪನೆಯಿಂದ ಭೀಕರ ದುರಂತ ಮಂಡಿಸುತ್ತಾನೆ... ಕಾಗದ ಹೂವಿನ ಸುಗಂಧ ಬೀರುವುದಿಲ್ಲ ಎಂಬುದು ನಿಜವಾದರೂ ನಿಜವಾದ ಚಿತ್ರದ ಹೂವು ಘಮಘಮಿಸುತ್ತಿರುತ್ತದೆ’’ ಎಂದು ಬರೆಯುತ್ತಾರೆ. 19ನೆ ಶತಮಾನದ ಕಡೆಯ ವರ್ಷಗಳಲ್ಲಿ ಮತ್ತು 20ನೆ ಶತಮಾನದ ಆರಂಭದಲ್ಲಿ ಚಲಿಸುವ ಸಿನೆಮಾ ಎನ್ನುವ ಹೆಸರಿನಲ್ಲಿ ಹೊಸ ಕಲ್ಪನೆಗಳನ್ನು ತುಂಬಿಕೊಂಡು ಜನರ ಮುಂದೆ ನಡೆದಾಡುವ, ಆಳುವ, ನಗುವ ಕಲಾವಿದರ ನಟನೆ ಬಿಳಿ ಪರದೆಯ ಮೇಲೆ ಸುರುಳಿ ಸುರುಳಿಯಾಗಿ ಬಿಚ್ಚಿಕೊಳ್ಳತೊಡಗಿದಾಗ ಆಗ 120 ವರ್ಷಗಳ ಹಿಂದೆ ಜನ ಹೇಗೆ ಪ್ರತಿಕ್ರಿಯಿಸಿದ್ದರು? ಇಂದಿಗೂ ಕುತೂಹಲವಾಗುತ್ತದೆ. ಯಾವುದೇ ಬಗೆಯ ಹೊಸ ಆವಿಷ್ಕಾರವು ತನ್ನ ಆರಂಭದ ದಶಕಗಳಲ್ಲಿ ಹೇಗೆ ಬಳಸಲ್ಪಡುತ್ತದೆ, ಪ್ರತಿಕ್ರಿಯಿಸಲ್ಪಡುತ್ತದೆ ಎನ್ನುವುದನ್ನು ಇಂದಿಗೂ ಕರಾರುವಾಕ್ಕಾಗಿ ಹೇಳಲು ಸಾಧ್ಯವಿಲ್ಲ. ಸಿನೆಮಾದ ವಿಷಯದಲ್ಲೂ ಇದು ನಿಜ. ಸಣ್ಣ ಸಣ್ಣ ತುಣುಕುಗಳನ್ನು ಜೋಡಿಸಿದಂತಿದ್ದ ಆರಂಭದ ಕಪ್ಪು ಬಿಳುಪು ಮೂಕಿ ಸಿನೆಮಾಗಳು ನಾಟಕದ ನಾಟಕೀಯತೆಯನ್ನು ಉಳಿಸಿಕೊಂಡೇ, ಮೆಲೋಡ್ರಾಮವನ್ನು ಧಾರಾಳವಾಗಿ ಬಳಸಿಕೊಂಡೇ ಜನಸಾಮಾನ್ಯರನ್ನು ಅದುವರೆಗೂ ರೂಢಿಯಾಗಿದ್ದ ನಾಟಕದ ವಾಸ್ತವದ ಪರಿಸರದಿಂದ ಹೊರಕ್ಕೆಳೆದು ಸಿನೆಮಾ ಎನ್ನುವ ಭ್ರಮಾಲೋಕಕ್ಕೆ ಕರೆದೊಯ್ದು ಅವರನ್ನು ರೋಮಾಂಚನಗೊಳಿಸಿದ್ದು, ಥ್ರಿಲ್‌ಗೊಳಿಸಿದ್ದು, ಬೆರಗುಗೊಳಿಸಿದ್ದನ್ನು ಕಂಡಾಗ ಇದು ಸಾಧ್ಯವಾಯಿತಾದರೂ ಹೇಗೆ ಎನ್ನುವಷ್ಟು ಪ್ರಶ್ನೆಗಳು ಈಗಲೂ ನಮಗೆ ಕಾಡುತ್ತಲೇ ಇವೆ. ಯಾವುದು ಆ ರಂಜನೆಯ, ಪ್ರಚೋದನೆಯ ಗುಣ ಜನರನ್ನು ಸಿನೆಮಾ ಎನ್ನುವ ಮಾಂತ್ರಿಕದೆಡೆಗೆ ಸೆಳೆದಿತ್ತು? ತಮ್ಮ ದಿನನಿತ್ಯದ ಬದುಕಿನ ಆತಂಕ, ಬಿಕ್ಕಟ್ಟು, ತಲ್ಲಣ, ಬೇಸರಗಳನ್ನು ಕಳಚಿಟ್ಟು ಮೂರು ತಾಸು ತದೇಕಚಿತ್ತದಿಂದ ಪರದೆಯೆಡೆಗೆ ಮುಖ ಮಾಡಿ ಅಲ್ಲಿನ ಪಾತ್ರಗಳು ಮೌನವಾಗಿ ನಕ್ಕರೆ ತಾವೂ ನಕ್ಕು, ಅಲ್ಲಿನ ಪಾತ್ರಗಳು ಅತ್ತರೆ ತಾವೂ ಮೌನವಾಗಿ ದುಃಖಿಸಿದ ಈ ಪ್ರೇಕ್ಷಕ ವರ್ಗವು ನಿಜ-ಭ್ರಮೆಗಳ ನಡುವೆ ಜಿಗಿದಾಡುತ್ತಾ ಖುಷಿ ಪಟ್ಟಿದ್ದು ಮಾತ್ರ ಅಂದಿಗೂ ನಿಜ ಇಂದಿಗೂ ನಿಜ. ನಾಟಕದ ಸಂದರ್ಭದಲ್ಲಿ ತನ್ನ ಮೆಚ್ಚಿನ ಕಲಾವಿದರನ್ನು ಆ ಕ್ಷಣದಲ್ಲಿ ಭೇಟಿ ಮಾಡಿ ಮುಟ್ಟಿ, ಮೈದಡವುತ್ತಿದ್ದ ಪ್ರೇಕ್ಷಕ ಈ ಸಿನೆಮಾ ಸೆಲ್ಯುಲಾಯ್ಡಿನಲ್ಲಿ ಮಿಂಚಿ ಮರೆಯಾಗುವ, ನಕ್ಷತ್ರದಂತೆ ಕಣ್ಣಿಗೆ ಕಂಡೂ ಕೈಗೆ ಸಿಗದಂತೆ ಕಾಡುತ್ತಿದ್ದ ನಟ/ನಟಿಯರನ್ನು ಹೇಗೆ ಸ್ವೀಕರಿಸುತ್ತಿದ್ದ? ಕಪ್ಪು-ಬಿಳುಪು ಕಾಲದ ಮೂಕಿಯುಗದ ನಾಯಕ, ನಾಯಕಿಯರನ್ನು ಆಗಲೂ ಜನರು ಆರಾಧಿಸುತ್ತಿದ್ದರೇ? ಪ್ರೀತಿಸುತ್ತಿದ್ದರೇ? 1913ರಲ್ಲಿ ತೆರೆಕಂಡ ಮೊದಲ ಭಾರತೀಯ ಮೂಕಿ ಸಿನೆಮಾ ‘ರಾಜಾ ಹರಿ ಶ್ಚಂದ್ರ’ದಿಂದ ಮೊದಲುಗೊಂಡು ಆಗಿನ ಕಪ್ಪು-ಬಿಳುಪು ಮೂಕಿ ಸಿನೆಮಾಗಳಲ್ಲಿ ಪರದೆಯ ಮೇಲೆ ಪಾತ್ರಗಳು ಜೀವ ಪಡೆದುಕೊಂಡು ಮುಗ್ಧತೆಯಿಂದ, ಸರಳತೆಯಿಂದ, ಭಾವುಕತೆಯಿಂದ ಮಾತುಗಳ ಬೆಂಬಲ ವಿಲ್ಲದೆ ಕೇವಲ ತಮ್ಮ ಆಂಗಿಕ ಅಭಿನಯದ ಮೂಲಕ ಜನರ ಮನಸ್ಸಿನಲ್ಲಿ ಪುಲಕದ ಅಲೆಗಳನ್ನೇ ಸೃಷ್ಟಿಸುತ್ತಾ, ರಂಜಿಸುತ್ತಾ ಸುಮಾರು 1930ರ ದಶಕದವರೆಗೂ ಪೊರೆದಿದ್ದು 100 ವರ್ಷಗಳ ನಂತರವೂ ನಮ್ಮಲ್ಲಿ ಅಚ್ಚರಿಯನ್ನು ಹುಟ್ಟಿಸುತ್ತದೆ. ಅದೇ ಕಾಲ ದಲ್ಲಿ ಜನಪ್ರಿಯವಾಗಿದ್ದ ನಾಟಕದ ನಾಟಕೀಯ ಸಂಭಾಷಣೆಗಳ, ಹತ್ತಾರು ಹಾಡು, ಕುಣಿತಗಳ ಜೊತೆ ಜೊತೆಗೆ ಬೆಳೆದಂತಹ ಈ ಮೂಕಿ ಸಿನೆಮಾವನ್ನು ಹಲವು ತಿರುವುಗಳ ಪ್ರವಾಹವೆಂದೇ ಕರೆಯಬಹುದು. ಅದೂ ಮೊದಲನೆ ಮಹಾಯುದ್ಧವನ್ನು ದಾಟಿಕೊಂಡು, ಆ ಜಾಗತಿಕ ಯುದ್ಧದ ಸಾವುನೋವುಗಳು ಉಂಟು ಮಾಡಿದ ಗಾಯಗಳನ್ನು, ಅದರ ಕಲೆಗಳನ್ನು ಆಗಿನ ಮೂಕಿ ಯುಗದ ಕಪ್ಪುಬಿಳುಪು ಸಿನೆಮಾಗಳಲ್ಲಿ ನಾವು ಕಾಣುತ್ತೇವೆ. ಅಂದರೆ ತನ್ನನ್ನು ಸ್ವತಃ ಪ್ರಸ್ತುತಗೊಳಿಸಿಕೊಂಡಿದ್ದ ಆ ಕಾಲದ ಕಪ್ಪುಬಿಳಿಪು ಸಿನೆಮಾ ಪ್ರೇಕ್ಷಕನಲ್ಲಿ ಅಪಾರ ಆಸೆಗಳನ್ನು, ತುಮುಲಗಳನ್ನು ಹುಟ್ಟ್ಟುಹಾಕಿದ್ದು ಮಾತ್ರ ಸತ್ಯ.

ನಂತರ 1931ರಲ್ಲಿ ತೆರೆಕಂಡ ‘ಅಲಂ ಅರಾ’ ಮೊದಲ ಟಾಕಿ ಸಿನೆಮಾ. ಆ ಮೂಲಕ ಆರಂಭವಾದ ಟಾಕಿ ಯುಗದ ಕಾಲದಲ್ಲಿಯೂ ಸಿನೆಮಾ ನಿರ್ಮಾ ಣದಲ್ಲಿ ಯಾವುದೇ ಗುರುತರ ಬದಲಾವಣೆ ಇಲ್ಲದೆ ಅದು ಕುಣಿತ ಮತ್ತು ಹಾಡುಗಳ ಮುಂದುವರಿದ ಭಾಗದಂತಿತ್ತು. ಆದರೆ ಕ್ರಮೇಣ ಮೂಕಿ ಯುಗದ ಪೌರಾಣಿಕ ಕಥಾ ವಸ್ತುವಿನಿಂದ ಕಳಚಿಕೊಂಡು ಜನಪದ, ಸಾಮಾಜಿಕ ವಿಷಯಗಳತ್ತ ಹೊರಳಿಕೊಂಡಿದ್ದು ಟಾಕಿ ಸಿನೆಮಾದ ಹೆಗ್ಗಳಿಕೆ. ಆದರೆ ಅಚಾನಕ್ ಆಗಿ ನಟ/ನಟಿಯರು ಮಾತನಾ ಡತೊಡಗಿದಾಗ ಮತ್ತೊಂದು ಬಗೆಯ ಶಾಕ್‌ಗೆ ಒಳಗಾಗಿದ್ದ ಪ್ರೇಕ್ಷಕ ತನ್ನ ಕನಸುಗಳನ್ನು ಮತ್ತಷ್ಟು ವಿಸ್ತರಿಸಿಕೊಳ್ಳತೊಡಗಿದ. ನಟ/ನಟಿಯರು ಸಂಭಾಷಣೆ ಒಪ್ಪಿಸತೊಡ ಗಿದಾಗ, ಹಾಡತೊಡ ಗಿದಾಗ ಪ್ರೇಕ್ಷಕನ ಮನಸ್ಸಿನಲ್ಲಿ ಹೊಚ್ಚ ಹೊಸದಾದ, ವಿಭಿನ್ನವಾದ ಬಯಕೆಯ, ಕಾತುರದ ಗರಿಗಳು ಎಳೆ ಎಳೆಯಾಗಿ ಹರಡಿಕೊಳ್ಳತೊಡಗಿದವು. ನಿಜ- ಭ್ರಮೆಗಳ ಹೊಸ ಜಗತ್ತನ್ನು ಪರಿಚಯಿಸಿದ ಮೂಕಿ ಸಿನೆಮಾ ನಂತರ ಮಾತು ಎನ್ನುವ ಹೊಸ ಆವಿಷ್ಕಾರ, ಬದಲಾ ಗುತ್ತಿದ್ದ ಪ್ರೇಕ್ಷಕನ ಆಶಯಗಳ, ಆಕಾಂಕ್ಷೆಗಳ ಎದುರು ಹಠಾತ್ತನೆನಿರ್ಜೀವಗೊಂಡಿತೇ? ಬಲು ಬೇಗನೆ ಬದಲಾವಣೆಗಳಿಗೆ ಹೊಂದಿಕೊಳ್ಳಲು ಅನುವಾಗುವಂತೆ ತನ್ನನ್ನು ರೂಪಿಕೊಳ್ಳತೊ ಡಗಿದ ಪ್ರೇಕ್ಷಕ ಈ ಟಾಕಿ ಯುಗದ ಕಪ್ಪುಬಿಳುಪು ಸಿನೆಮಾಗಳನ್ನು ಅದೇ ಸಂವೇದನೆಯೊಂದಿಗೆ ಆನಂದಿಸತೊಡಗಿದ. ಸಿನೆಮಾ ಸಹ ಮಾತನಾಡುತ್ತದೆ ಎನ್ನುವ ಹೊಸ ಆವಿಷ್ಕಾರವನ್ನು ಬಲು ಬೇಗನೆ ತನ್ನ ಜಗತ್ತಿನೊಳಗೆ ಅಳವಡಿಸಿಕೊಳ್ಳತೊಡಗಿದ.

ಮೂಕಿ ಸಿನೆಮಾ ಪರದೆಯ ಮೇಲೆ ಚಲಿಸುತ್ತಿದ್ದಾಗ, ನಟ/ನಟಿಯರು ಮೂಕವಾಗಿ ಅಭಿನಯಿಸುತ್ತಿ ದ್ದಾಗ ನೋಡುತ್ತಿದ್ದ ಪ್ರೇಕ್ಷಕರು ಪರಸ್ಪರ ಮಾತನಾಡಿ ಕೊಳ್ಳುತ್ತಿದ್ದರು. ವೀಕ್ಷಿಸುತ್ತಲೇ ಸಿನೆಮಾವನ್ನು ವಿಮರ್ಶಿಸುತ್ತಿದ್ದರು. ಆದರೆ ನಟ/ನಟಿಯರು ಮಾತನಾಡ ತೊಡಗಿದಾಗ ಪ್ರೇಕ್ಷಕ ಮೌನ ವಾಗತೊಡಗಿದ. ಕುತೂಹ ಲದಿಂದ ಆಲಿಸತೊಡಗಿದ. ಕೇಳುವ ಆನಂದ ಮತ್ತು ಮೌನ ದ ಮಹತ್ವವನ್ನು ಅರಿತು ಕೊಂಡ. ಮೂಕಿ ಸಿನೆಮಾದ ಪಾರುಪತ್ಯವನ್ನು ಮುರಿದು ಟಾಕಿ ಯುಗದ ಆರಂಭದ ವರ್ಷಗಳಲ್ಲಿಯೇ ಮಾತಿನ, ಧ್ವನಿಯ ಈ ಮಾಂತ್ರಿಕ ಶಕ್ತಿ ಯನ್ನು ಪ್ರೇಕ್ಷಕ ಬಲುಬೇಗ ಗ್ರಹಿಸಿದ್ದು ಮತ್ತು ಮನಃಪೂ ರ್ವಕವಾಗಿ ಅನುಭವಿಸಿದ್ದು ಮುಂದೆ ಜಾಗತಿಕ ಸಿನೆಮಾ ರಂಗವು ಹೊಸ ಹುಟ್ಟುಗಳಿಗೆ ತನ್ನನ್ನು ಒಡ್ಡಿಕೊಳ್ಳಲು ಸಾಧ್ಯ ವಾಯಿತು.

ಈ ಹೊಸ ಹುಟ್ಟುಗಳ ಈ ಪಯಣ ಮುಂದುವರಿಯುತ್ತ ಕಪ್ಪು ಬಿಳುಪು ಸಿನೆಮಾದ ಕಾಲದಿಂದ ಕ್ರಮೇಣ ಕಲರ್ ಸಿನೆಮಾಗಳಿಗೆ ಹೊರಳಿ ಕೊಂಡಿದ್ದು ಮಾತ್ರ ಕುತೂಹಲಕರ. ಕಲರ್ ಸಿನೆಮಾಗಳ ಟ್ರೆಂಡ್ ಪ್ರಾರಂಭ ವಾಗುವುದಕ್ಕಿಂತ ಮೊದಲು 20ನೆ ಶತಮಾನದ ಆರಂಭದಲ್ಲಿ ಕಪ್ಪು-ಬಿಳುಪು ಸಿನೆಮಾಗಳ ಕೆಲವು ಪ್ರೇಮ್‌ಗಳಿಗೆ ಕೈಯಿಂದ ಬಣ್ಣವನ್ನು ಅದ್ದಿ ಅದರ ಛಾಯೆ ಮೂಡಿಸುತ್ತಿದ್ದರು. 1914ರಲ್ಲಿ ತೆರೆಕಂಡ ‘ದ ವಲ್ಡ್, ದ ಫ್ಲೆಶ್ ಆ್ಯಂಡ್ ದ ಡೆವಿಲ್’ ಮೊದಲ ಕಲರ್ ಸಿನೆಮಾ ಎಂದು ಹೇಳಲಾಗುತ್ತದೆ. ಆದರೆ ಆರಂಭ ದಲ್ಲಿ ನಿರ್ಮಾಪಕರು ಕಳಪೆ ಗುಣಮಟ್ಟ, ಬಳಕೆಯ ಅನನುಭವ ಮತ್ತು ತುಟ್ಟಿಯಾದ ನಿರ್ವಹಣಾ ವೆಚ್ಚ ಈ ಕಾರಣಗಳಿಗಾಗಿ ಕಲರ್ ಸಿನೆಮಾ ನಿರ್ಮಿಸಲು ಹಿಂದೇಟು ಹಾಕುತ್ತಿದ್ದರು ಮತ್ತು ಚಿತ್ರೀಕರಣಕ್ಕೆ ಧಾರಾಳವಾಗಿ ಬೇಕಾದ ಬೆಳಕಿನ ಕೊರತೆಯೂ ಒಂದು ಕಾರಣ. ಆಗ ಕಲರ್‌ನ ತಾಂತ್ರಿಕತೆ ಸಿನೆಮಾ ಮಾಧ್ಯಮವನ್ನೇ ಹಾಳು ಮಾಡಿಬಿಡುತ್ತದೆ ಎಂದು ನಂಬಿದ್ದರು.

ಈ 1926ರಲ್ಲಿ ನಿರ್ದೇಶಕ ಅಲ್ಬರ್ಟ್ ಪಾರ್ಕರ್ ‘‘ಕಪ್ಪು ಬಿಳುಪು ಸಿನೆಮಾಗೆ ಬಣ್ಣವನ್ನು ತುಂಬುವುದು ಎಂದರೆ ‘ವೀನಸ್ ಡಿ ಮೆಲೋ’ (ಪ್ರಾಚೀನ ಗ್ರೀಕ್ ವಿಗ್ರಹ) ಗೆ ಕೆನೆಬಣ್ಣ ಬಳಿದಂತೆ’’ ಎಂದು ಕಲರ್ ಸಿನೆಮಾವನ್ನು ಹಂಗಿಸಿದ್ದ. ಮುಂದುವರಿದು ‘‘ಬಣ್ಣವು ನಿರೂಪಣೆಯ ಮೇಲೆ ಅಧಿಪತ್ಯ ಸಾಧಿಸಬಾರದು, ಬಣ್ಣ ಒಂದು ಹಿಂಸೆ. ಅದನ್ನು ಪ್ರತಿಬಂಧಿಸಿದ್ದೇವೆ’’ ಎಂದು ಹೇಳಿದ. ಆದರೆ ಕೆಲವೇ ವರ್ಷಗಳಲ್ಲಿ ಪಾರ್ಕರ್‌ನ ಮಾತುಗಳು ಬಣ್ಣಗಳ ಅಲೆಗಳಲ್ಲಿ ಕೊಚ್ಚಿ ಹೋಗಿದ್ದು ಮಾತ್ರ ನಿಜ. ಏಕೆಂದರೆ ಬಣ್ಣದ ಸಿನೆಮಾಗಳು ಕ್ರಮೇಣ ತಳವೂರುತ್ತಿದ್ದಂತೆ ಕಪ್ಪು-ಬಿಳುಪು ಸಿನೆಮಾಗಳು ಒಂದು ಸ್ಥಗಿತತೆಯನ್ನು, ನಿಷ್ಕ್ರಿಯತೆಯನ್ನು ಪ್ರದರ್ಶಿಸುತ್ತವೆ. ಆದರೆ ಕಲರ್ ಸಿನೆಮಾಗಳು ಜೀವಂತಿಕೆಯನ್ನು, ಚಲನಶೀಲತೆಯನ್ನು ತಂದುಕೊಟ್ಟವು ಎನ್ನುವ ಭಾವನೆ ಸಾರ್ವತ್ರಿಕವಾಗಿ ಮೂಡತೊಡಗಿತು. ಇದನ್ನು ಒಪ್ಪುವ, ಬಿಡುವ ಪ್ರಶ್ನೆ ಬೇರೆ. ಏಕೆಂದರೆ ಕಲರ್ ಸಿನೆಮಾಗಳ ಪ್ರದರ್ಶನದ ಸಂದರ್ಭದಲ್ಲಿ ಅನೇಕ ಭಾವತೀವ್ರತೆಯ, ಸಾಹಸದ ದೃಶ್ಯಗಳ ಸಂದರ್ಭದಲ್ಲಿ ಪ್ರೇಕ್ಷಕ ಸೀಟಿ ಊದುವುದು, ಹಣವನ್ನು ತೂರುವ ಟ್ರೆಂಡ್ ಸೃಷ್ಟಿಯಾಗಿದ್ದನ್ನು ಮರೆಯಲು ಸಾಧ್ಯವೇ ಇಲ್ಲ. ಕಲರ್ ಸಿನೆಮಾಗಳ ಮೂಲಕ ಪ್ರೇಕ್ಷಕನ್ನು ಸಿನೆಮಾದ ಕತೆಯೊಂದಿಗೆ, ಭ್ರಾಮಕ ಲೋಕದೊಂದಿಗೆ ಬೆಸೆಯಲು ಸಾಧ್ಯವಾಯಿತು ಎನ್ನುವ ಸತ್ಯವನ್ನು ಸಹ ಅಲ್ಲಗಳೆಯಲು ಸಾಧ್ಯವಿಲ್ಲ. ಆದರೆ ಹಳೆಯ ಕಪ್ಪು-ಬಿಳುಪು ಸಿನೆಮಾಗಳ ಶಕ್ತಿಯನ್ನು, ಅದು ತಂದುಕೊಟ್ಟ ಆಪ್ತತೆಯನ್ನು ಗೌಣಗೊಳಿಸಿ ಕಲರ್ ಸಿನೆಮಾಗಳನ್ನು ಪ್ರಶಂಸಿಸುವುದೂ ತಪ್ಪಾಗುತ್ತದೆ.

ಇದೇ ಕಾರಣಕ್ಕೆ ಅನೇಕ ಹಳೆಯ ಹಿಂದಿ, ಕನ್ನಡ ಕಪ್ಪು-ಬಿಳುಪು ಸಿನೆಮಾಗಳನ್ನು (‘ನಯಾ ದೌರ್’, ‘ಸತ್ಯ ಹರಿಶ್ಚಂದ್ರ’, ‘ಕಸ್ತೂರಿ ನಿವಾಸ’ ಇತ್ಯಾದಿ) ಇಂದು ಆಧುನಿಕಗೊಳಿಸುವ ಭರದಲ್ಲಿ ಕಲರ್ ಸಿನೆಮಾಗಳಾಗಿ ಪರಿವರ್ತಿಸಿ ಹೊಸದಾಗಿ ಬಿಡುಗಡೆ ಮಾಡಿದಾಗ ಅದು ಆಗಿನ ಕಪ್ಪು-ಬಿಳುಪು ಸಿನೆಮಾ ತಂದುಕೊಟ್ಟ ತೀವ್ರತೆ, ತನ್ಮಯತೆ ಮತ್ತು ನಮ್ಮದು ಎನ್ನುವ ಭಾವ ಕಲರ್ ಸಿನೆಮಾ ತಾಂತ್ರಿಕತೆಯ ಪರಿವರ್ತನೆಯಲ್ಲಿ ಕಳೆದು ಹೋಗಿತ್ತು. ಗ್ರೇಟಾ ಗಾರ್ಬೊ, ಹೆನ್ರಿ ಫಂಡ, ಅಂಡ್ರೆ ಹರ್ಬನ್, ಹಂಫ್ರಿ ಬೋಗಾರ್ಟ, ಇಂಗ್ರಿಡ್ ಬರ್ಗಮನ್, ದೇವಿಕಾ ರಾಣಿ, ಶಾಂತಾ ಹುಬ್ಳೀಕರ್, ಶಾಂತಾ ಅಪ್ಟೆರಂತಹ ಕಪ್ಪು-ಬಿಳುಪು ಸಿನೆಮಾದ ನಟ/ನಟಿಯರನ್ನು ಯಾವುದೇ ಬಣ್ಣಗಳ ಲೋಕವೂ ಕಳೆಗುಂದಿಸಲಾಗದು. ಹಾಲಿವುಡ್‌ನಲ್ಲಿ ಕಲರ್ ಸಿನೆಮಾ ಶಾಶ್ವತವಾಗಿ ನೆಲೆಯೂರಿದಂತಹ 1960ರ ದಶಕದಲ್ಲಿ ಹಿಚ್‌ಕಾಕ್‌ನ ಕಪ್ಪು-ಬಿಳುಪು ‘ಸೈಕೋ’ ಸಿನೆಮಾದ ಥ್ರಿಲ್‌ಗೆ, ಅದು ಮಾಡಿದ ಮೋಡಿಗೆ ಯಾವುದೇ ಬಣ್ಣದ ಸಿನೆಮಾ ಸಾಟಿಯಾಗಲಾರದು.

ಆರಂಭದ 60ರ ದಶಕದಲ್ಲಿ ಈ ಕಲರ್ ಸಿನೆಮಾಗಳಲ್ಲಿ ವಿವಿಧ ಬಣ್ಣಗಳ ಸಂಯೋ ಜನೆಯೂ ಸಹ ಉದ್ದೇಶಪೂರ್ವಕವಾಗಿರುತ್ತಿತ್ತು. ತೀವ್ರವಾದ ಮೆಲೋಡ್ರಾಮ ಅಥವಾ ಕ್ರೋಧವನ್ನು ಪ್ರದರ್ಶಿಸಲು ಕೆಂಪು ಬಣ್ಣವನ್ನು ಢಾಳಾಗಿ ಬಳಸುತ್ತಿದ್ದರೆ, ಬೂದು, ನೀಲಿ, ನೇರಳೆ ಬಣ್ಣದ ಸಂಯೋಜನೆಯನ್ನು ದುರಂತ ದೃಶ್ಯಗಳಿಗೆ ಬಳಸುತ್ತಿದ್ದರು. ಕಾಮಿಡಿ ದೃಶ್ಯಗಳಿಗೆ ಹಳದಿ, ಕಿತ್ತಳೆ, ಕೆಂಪು ಬಣ್ಣಗಳ ಸಂಯೋಜನೆಯನ್ನು ಬಳಸುತ್ತಿದ್ದರು.

ಕೊಡಾಕ್ ಈಸ್ಟ್‌ಮನ್

ಕಪ್ಪು ಬಿಳುಪು ಸಿನೆಮಾದಿಂದ ಕಲರ್‌ಗೆ ಬದಲಾಗುವ ಪ್ರಕ್ರಿಯೆ 1930ರಲ್ಲೇ ಭಾರತದಲ್ಲಿ ಶುರುವಾಯಿತು. ಆದರೆ ಕೆಲ ತಾಂತ್ರಿಕ ಮಿತಿ ಹಾಗೂ ದುಬಾರಿ ವೆಚ್ಚದ ಕಾರಣ ಈ ಸ್ಥಿತ್ಯಂತರ ಕೊಂಚ ನಿಧಾನವಾಯಿತಷ್ಟೆ. 1910-20ರ ದಶಕದಲ್ಲಿ ಅಮೆರಿಕದಲ್ಲಿ ಸಿನೆಮಾಗಳನ್ನು ವರ್ಣಮಯಗೊಳಿಸಲು ಶೂಟ್ ಮಾಡಿದ ಪ್ರತೀ ಫ್ರೇಮ್‌ಗೂ ಬಣ್ಣ ಹಚ್ಚುವ ತ್ರಾಸದ ಕೆಲಸ ಮಾಡಲಾಗುತ್ತಿತ್ತು. ಕಚ್ಚಾ ಫಿಲಂ ಅನ್ನು ಬ್ಲೀಚ್ ಮಾಡಿ ಕಲರ್ ಡೈ ಮಾಡಬೇಕಾಗುತ್ತಿತ್ತು. ಕೊಡಾಕ್‌ನ ಈಸ್ಟ್‌ಮನ್ ಕಲರ್ ಬಂದ ಮೇಲೆ ಇದು ಬದಲಾಯಿತು. ಸಿಯಾನ್, ಹಳದಿ ಹಾಗೂ ಮೆಜೆಂಟಾ ಮೂಲ ಬಣ್ಣಗಳೊಂದಿಗೆ ಇದು ಶುರುವಾಗಿ ಸಿನೆಮಾ ಜಗತ್ತನ್ನು ಕಲರ್‌ಫುಲ್ ಆಗಿಸಿತು.

1937ರಲ್ಲಿ ತೆರೆಕಂಡ ‘ಕಿಸಾನ್ ಕನ್ಯ’(ರೈತ ಹುಡುಗಿ) ಇಂಡಿಯಾದ ಮೊದಲ ಕಲರ್ ಸಿನೆಮಾ. ಅರ್ದೇಶ್ ಇರಾನಿ ನಿರ್ಮಿಸಿದ ಕಿಸಾನ್ ಕನ್ಯ ಸಿನೆಮಾವನ್ನು ಮೋತಿ ಗಿದ್ವಾನಿ ನಿರ್ದೇಶಿಸಿದ್ದರು ಮತ್ತು ಸಾದತ್ ಹಸನ್ ಮಂಟೋ ಕತೆ, ಸಂಭಾಷಣೆ ರಚಿಸಿದ್ದರು. ಆದರೆ ಗ್ರಾಮೀಣ ಬಡತನದ ಕುರಿತು, ರೈತರ ಬವಣೆಯ ಕುರಿತು ಹೇಳುವ, ಸಾಮಾಜಿಕ ಸಮಸ್ಯೆಯನ್ನು ಒಳಗೊಂಡ ಸಿನೆಮಾವನ್ನು ಕಲರ್‌ಫುಲ್ ಆಗಿ ನೋಡಲು ಪ್ರೇಕ್ಷಕ ಬಯಸಲಿಲ್ಲ. ತನ್ನ ದಿನನಿತ್ಯದ ಜೀವನದ ಎಲ್ಲಾ ಬಿಕ್ಕಟ್ಟು, ದುಃಖ ದುಮ್ಮಾನಗಳನ್ನು ಕಪ್ಪುಬಿಳುಪಿನಲ್ಲಿ ನೋಡಲು ಯಾವುದೇ ತಕರಾರು ತನಗಿಲ್ಲ ಆದರೆ ಕಲರ್‌ಫುಲ್ ಸಿನೆಮಾ ಎಂದರೆ ಅದು ಕೇವಲ ರಂಜನೆ, ಮನರಂಜನೆಯಾಗಿರಬೇಕು ಹೊರತಾಗಿ ಗೋಳಿನ ಚಿತ್ರಕತೆ ನಾನೊಲ್ಲೆ ಎಂದು ಪ್ರೇಕ್ಷಕ ಬಯಸಿದಂತಿತ್ತು. ಆ ಕಾರಣಕ್ಕೆ ಮೊದಲ ಕಲರ್ ಸಿನೆಮಾ ‘ಕಿಸಾನ್ ಕನ್ಯ’ ಗೆಲ್ಲಲಿಲ್ಲ, ಯಾವುದೇ ಪುಲಕ ಹುಟ್ಟಿಸಲಿಲ್ಲ.

ಕಲರ್ ಸಿನೆಮಾ ಆರಂಭದಲ್ಲಿ ಸಾರ್ವಜನಿಕವಾಗಿ ಯಾವುದೇ ಹವಾ ಮೂಡಿಸದ ಕಾರಣಕ್ಕಾಗಿ ನಂತರ ಸುಮಾರು 15 ವರ್ಷಗಳ ಕಾಲ ಕಪ್ಪುಬಿಳುಪು ಸಿನೆಮಾಗಳೇ ತಯಾರಾದವು. ಆದರೆ ಮೆಹಬೂಬ್ ಖಾನ್ ನಿರ್ದೇಶನದ, ದಿಲೀಪ್ ಕುಮಾರ್-ನಿಮ್ಮಿ ಅಭಿನಯದ 1952ರಲ್ಲಿ ಬಿಡುಗಡೆಗೊಂಡ ‘ಆನ್’ ಸಿನೆಮಾ ಪ್ರಥಮ ಪ್ರಯತ್ನದಲ್ಲಿಯೇ ಯಶಸ್ವಿಯಾದ ಮೊದಲ ಟೆಕ್ನಿಕಲರ್ ಸಿನೆಮಾ. (ಒಂದು ವೇಳೆ ಇದು ವಿಫಲಗೊಂಡರೆ ಇರಲಿ ಎಂದು ಪ್ರತ್ಯೇಕವಾಗಿ ಕಪ್ಪು ಬಿಳಿಪುನಲ್ಲಿಯೂ ಚಿತ್ರೀಕರಿಸಿದ್ದರು) ಪ್ರೇಕ್ಷಕ ಬಯಸಿದಂತೆ ಇದರಲ್ಲಿ ಭರಪೂರ ರಂಜನೀಯ ಗುಣಗಳಿದ್ದವು. ವಿಲನ್‌ಗಳೊಂದಿಗೆ ಹೊಡೆದಾಡುವ ಹೀರೋ, ಧಿಮಾಕಿನ, ಸೊಕ್ಕಿನ ನಾಯಕಿಗೆ ಪಾಠ ಕಲಿಸುವ ಹೀರೋ ಎಲ್ಲವೂ ಕಲರ್‌ಫುಲ್ ಆಗಿ ಪರದೆಯ ಮೇಲೆ ಚಕಚಕನೆ ಓಡತೊಡಗಿದಾಗ ಪ್ರೇಕ್ಷಕ ಖುಷಿ ಪಟ್ಟಿದ್ದ. ಸಂತಸದಿಂದ ಮೊದಲ ಬಾರಿಗೆ ಸೀಟಿ ಊದಿದ್ದ. ಈ ಮೂಲಕ ನಂತರದ ವರ್ಷಗಳಲ್ಲಿ ಮನರಂಜನೆ ಅಂದರೆ ಅದು ಕಲರ್‌ಫುಲ್ ಆಗಿರಬೇಕು ಎನ್ನುವ ಹೊಸ ವ್ಯಾಕರಣ ಸೃಷ್ಟಿಯಾಯಿತು. ಅದು ಸಿನೆಮಾವನ್ನು ಬಣ್ಣದ ಲೋಕ ಎಂದು ಕರೆಯುವ ವಾಡಿಕೆಗೆ ನಾಂದಿ ಹಾಡಿತು. ಎಲ್ಲರ ಕುತೂಹಲದ ಕೇಂದ್ರವಾಗಿದ್ದ ‘ಆನ್’ ಸಿನೆಮಾದ ಸಿನೆಮಾಟೋಗ್ರಾಫರ್ ಫರ್ದೂನ್ ಇರಾನಿ ಇದಕ್ಕಾಗಿಯೇ ಆರು ತಿಂಗಳುಗಳ ಕಾಲ ಹಾಲಿವುಡ್‌ನಲ್ಲಿ ತರಬೇತಿ ಪಡೆದುಕೊಂಡಿದ್ದ. ‘ಆನ್’ ಸಿನೆಮಾದ ಯಶಸ್ಸು ಸಹ ಆ ಕ್ಷಣಕ್ಕೆ ಕಲರ್ ಸಿನೆಮಾದ ಟ್ರೆಂಡ್ ಅನ್ನು ಹುಟ್ಟು ಹಾಕಲಿಲ್ಲ. ಬಹುಶಃ ನಿರ್ಮಾಣ ವೆಚ್ಚದ ಕಾರಣಕ್ಕಾಗಿ ಇರಬಹುದೇನೊ. ಆದರೂ ನಂತರದ ವರ್ಷಗಳಲ್ಲಿ 1955ರಲ್ಲಿ ವಿ.ಶಾಂತಾರಾಂ ನಿರ್ದೇಶನದ ‘ಝನಕ್ ಝನಕ್ ಪಾಯಲ್ ಬಾಜೆ’, 1957ರಲ್ಲಿ ಮೆಹಬೂಬ್ ಖಾನ್ ನಿರ್ದೇಶನದ ‘ಮದರ್ ಇಂಡಿಯಾ’, 1959ರಲ್ಲಿ ವಿ.ಶಾಂತಾರಾಂ ನಿರ್ದೇಶನದ ‘ನವರಂಗ್’, ರಾಜ್ ಕಪೂರ್ ಅವರ ‘ಸಂಗಮ್’, ದಿಲೀಪ್ ಕುಮಾರ್ ಅವರ ‘ಗಂಗಾ ಜಮುನಾ’ ಆ ಕಾಲದ ಕೆಲವು ಪ್ರಮುಖ ಟೆಕ್ನಿಕಲರ್ ಮತ್ತು ಗೇವಾ ಕಲರ್ ಸಿನೆಮಾಗಳು. ನಂತರ ‘ಹಮ್ ಹಿಂದೂಸ್ಥಾನಿ’ ಸಿನೆಮಾದ ಮೂಲಕ ಈಸ್ಟ್‌ಮನ್ ಕಲರ್‌ನ ಯುಗ ಪ್ರಾರಂಭವಾಯಿತು. ಕನ್ನಡದಲ್ಲಿ 1964ರಲ್ಲಿ ಬಿಡುಗಡೆಯಾದ ಬಿ.ಎಸ್.ರಂಗಾ ಅವರ ‘ಅಮರ ಶಿಲ್ಪಿ ಜಕಣಾಚಾರಿ’ ಮೊತ್ತಮೊದಲ ಈಸ್ಟ್‌ಮನ್ ಕಲರ್ ಸಿನೆಮಾ. ನಂತರದ ವರ್ಷಗಳಲ್ಲಿ ನಿರ್ಮಾಣ ವೆಚ್ಚವನ್ನು ಭರಿಸಲು ಸಾಧ್ಯವಾಗದ ಕಾರಣಕ್ಕೆ ಮತ್ತು ತಾಂತ್ರಿಕ ಪರಿಣತಿಯ ಕೊರತೆಯ ಕಾರಣಕ್ಕೆ ಕನ್ನಡದಲ್ಲಿ ಕಪ್ಪು ಬಿಳುಪು ಸಿನೆಮಾಗಳೇ ನಿರ್ಮಾಣಗೊಂಡವು. ಆದರೆ 70ರ ದಶಕದಲ್ಲಿ ಬಿಡುಗಡೆಗೊಂಡ ರಾಜ್‌ಕುಮಾರ್ ಅವರ ‘ಬಂಗಾರದ ಮನುಷ್ಯ’, ‘ಎರಡು ಕನಸು’, ‘ಶ್ರೀ ಕೃಷ್ಣದೇವರಾಯ’ ಸಿನೆಮಾಗಳು ಕನ್ನಡದಲ್ಲಿ ಈಸ್ಟ್ಟ್‌ಮನ್ ಕಲರ್ ಟ್ರೆಂಡ್ ಅನ್ನು ಹುಟ್ಟು ಹಾಕಿದವು. ಇಂದು ಇಪ್ಪತ್ತೊಂದನೆ ಶತಮಾನದ ಎರಡನೆ ದಶಕದಲ್ಲಿ ನಿಂತು ಹಿಂದಿರುಗಿ ನೋಡಿದಾಗ ಈ ಬಣ್ಣದ ಲೋಕ ಕ್ರಮಿಸಿದ ಹಾದಿ ನಿಜಕ್ಕೂ ಬೆರಗು ಮೂಡಿಸುತ್ತದೆ. ಇಂದಿನ ಮಾಲ್‌ಗಳ ಭರಾಟೆಯ ಅಬ್ಬರದಲ್ಲಿ ಪ್ರೇಕ್ಷಕ ಸಿನೆಮಾ ನೋಡುವ ಮಗುವಿನ ಮುಗ್ಧತೆ, ಚಕಿತಗೊಳ್ಳುವ ಗುಣವನ್ನು ಕಳೆದುಕೊಂಡಿದ್ದಾನೆ ಹೌದಾ ಎಂದು ಕೇಳಿದರೆ ಹೌದು ಎನ್ನುತ್ತೇನೆ. ಆದರೆ ಸಿನೆಮಾ ತನ್ನ ಜೀವಂತಿಕೆ ಕಳೆದುಕೊಂಡಿಲ್ಲ. ಅದು ತಾಂತ್ರಿಕವಾಗಿ, ತಾತ್ವಿಕವಾಗಿ ಹೊಸ ಹೊಸ ಆವಿಷ್ಕಾರಗಳನ್ನು ಹುಡುಕಾಡುತ್ತಲೇ ಇದೆ. ಸದಾ ಚಲನಶೀಲವಾಗಿ ಹರಿಯುತ್ತಲೇ ಇದೆ. ಆದರೆ ಮನುಷ್ಯ ಲವಲವಿಕೆ, ತಮಾಷೆ, ಪ್ರೀತಿ, ವ್ಯಂಗ್ಯ ಎಲ್ಲವನ್ನೂ ಕಳೆದುಕೊಂಡು ಅಲೆಯುತ್ತಿದ್ದಾನೆ. ದೈಹಿಕವಾಗಿ ಓಡುತ್ತಿದ್ದಾನೆ. ಮಾನಸಿಕವಾಗಿ ತಟಸ್ಥಗೊಂಡಿದ್ದಾನೆ.

Writer - ಬಿ.ಶ್ರೀಪಾದ ಭಟ್

contributor

Editor - ಬಿ.ಶ್ರೀಪಾದ ಭಟ್

contributor

Similar News