ಮೊದಲ ವಾರಾಂತ್ಯದಲ್ಲೇ 150 ಕೋಟಿ ಸಮೀಪಿಸಿದ 'ಸಿಂಗಮ್ ಅಗೈನ್' ಸಂಗ್ರಹ
ಮುಂಬೈ: ಬಹುನಿರೀಕ್ಷಿತ 'ಸಿಂಗಮ್ ಅಗೈನ್' ಚಿತ್ರ ಬಿಡುಗಡೆಯಾಗಿ ಮೊದಲ ಮೂರು ದಿನದಲ್ಲಿ ಬಾಕ್ಸ್ ಆಫೀಸ್ ನಲ್ಲಿ 121 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಭೂಲ್ ಭುಲೈಯಾ-3 ಚಿತ್ರದಿಂದ ಭಾರೀ ಪೈಪೋಟಿ ಎದುರಿಸುತ್ತಿದ್ದರೂ, ನಿರೀಕ್ಷೆಗೆ ತಕ್ಕಂತೆ ತನ್ನ ಓಟ ಮುಂದುವರಿಸಿದೆ. ಭೂಲ್ ಭುಲೈಯಾ-3 ಒಂದು ವಾರದಲ್ಲಿ 106 ಕೋಟಿ ರೂಪಾಯಿ ಗಳಿಕೆ ಮಾಡಿದ್ದು, ಎರಡು ಚಿತ್ರಗಳು ಸೇರಿ ಒಂದು ವಾರದಲ್ಲಿ ದಾಖಲೆ ಆದಾಯ ಪಡೆದಿವೆ. ಈ ಎರಡೂ ಚಿತ್ರಗಳು ಸೆರಿ ಈ ಹಿಂದೆ 190 ಕೋಟಿ ರೂಪಾಯಿ ದಾಖಲೆ ಸೃಷ್ಟಿಸಿದ್ದ 'ಅನಿಮಲ್' ಮತ್ತು 'ಸ್ಯಾಮ್ ಬಹದ್ದೂರ್' ಚಿತ್ರಗಳ ದಾಖಲೆಯನ್ನು ಮುರಿದಿವೆ.
ಆದರೆ ಸೋಮವಾರ ಎರಡೂ ಚಿತ್ರಗಳಿಗೆ ನಿಜವಾದ ಪರೀಕ್ಷೆಯಾಗಿತ್ತು. ದೀಪಾವಳಿ ಬಳಿಕ ಸಹಜವಾಗಿಯೇ ಪ್ರೇಕ್ಷಕರ ಸಂಖ್ಯೆ ಇಳಿಕೆಯಾಗುವ ನಿರೀಕ್ಷೆಯ ನಡುವೆಯೂ, ''ಸಿಂಗಮ್ ಅಗೈನ್' ಪರೀಕ್ಷೆಯಲ್ಲಿ ಉತ್ತೀರ್ಣವಾಗಿದೆ. ಸೋಮವಾರ ಪ್ರೇಕ್ಷಕರ ಸಂಖ್ಯೆಯಲ್ಲಿ ಶೇಕಡ 50ರಷ್ಟು ಇಳಿಕೆಯಾಗಿದ್ದರೂ, ದೀಪಾವಳಿಯಂಥ ರಜೆ ಸರಣಿಯ ಬಳಿಕ ಇದು ಸಹಜ ಎಂದು ಚಿತ್ರೋದ್ಯಮಿಗಳು ಹೇಳುತ್ತಾರೆ.
ರವಿವಾರ ಸಿಂಗಂ ಅಗೈನ್ 35.75 ಕೋಟಿ ರೂಪಾಯಿ ಆದಾಯ ಗಳಿಸಿತ್ತು. ಆದರೆ ಸೋಮವಾರದ ಆದಾಯ 17.50 ಕೊಟಿಯಷ್ಟಿತ್ತು. ನಾಲ್ಕು ದಿನದಲ್ಲಿ ಒಟ್ಟು ಸಂಗ್ರಹ 139.25 ಕೋಟಿ ರೂಪಾಯಿ ಆಗಲಿದೆ ಎಂದು ಸ್ಯಾಕ್ನಿಲ್ಕ್ ವರದಿ ಮಾಡಿದೆ.
ಈ ಮಧ್ಯೆ ಬಿಬಿ-3 ಚಿತ್ರ ಕೂಡಾ 17.5 ಕೋಟಿ ರೂಪಾಯಿ ಆದಾಯ ಗಳಿಸಿದೆ. ಇದರೊಂದಿಗೆ ಚಿತ್ರದ ನಾಲ್ಕು ದಿನಗಳ ಆದಾಯ ಗಳಿಕೆ 123 ಕೋಟಿ ರೂಪಾಯಿ ತಲುಪಿದೆ. ದೀಪಾವಳಿ ವಾರಾಂತ್ಯ ಮುಗಿದ ಬಳಿಕವೂ ಸೋಮವಾರ, ಪರಸ್ಪರ ತೀವ್ರ ಪೈಪೋಟಿಯ ನಡುವೆಯೂ ಎರಡೂ ಚಿತ್ರಗಳೂ ಎರಡಂಕಿಯ ಗಳಿಕೆ ದಾಖಲಿಸಿರುವುದು ಉತ್ತೇಜನಕಾರಿ ಬೆಳವಣಿಗೆ ಎಂದು ಚಿತ್ರ ವಿಮರ್ಶಕರು ವಿಶ್ಲೇಷಿಸಿದ್ದಾರೆ.