ʼ#BoycottSaiPallaviʼ ಟ್ರೆಂಡಿಂಗ್‌:‌ ನಟಿ ಸಾಯಿ ಪಲ್ಲವಿ ಚಿತ್ರಗಳ ಬಹಿಷ್ಕಾರಕ್ಕೆ ಬಲಪಂಥೀಯರಿಂದ ಕೂಗು

Update: 2024-10-28 08:45 GMT

ನಟಿ ಸಾಯಿ ಪಲ್ಲವಿ (Photo: Instagram)

ಚೆನ್ನೈ: ಬಹುಭಾಷಾ ನಟಿ ಸಾಯಿ ಪಲ್ಲವಿ ಅವರ ಚಿತ್ರಗಳನ್ನು ಬಹಿಷ್ಕರಿಸಬೇಕೆಂದು ಬಲಪಂಥೀಯ ‌ʼಎಕ್ಸ್ʼ ಬಳಕೆದಾರರು ಮತ್ತೊಮ್ಮೆ ಆನ್‌ಲೈನ್‌ ಅಭಿಯಾನವನ್ನು ಆರಂಭಿಸಿದ್ದಾರೆ. ವಿವಾದಿತ ಚಲನಚಿತ್ರ ʼದಿ ಕಾಶ್ಮೀರ್‌ ಫೈಲ್ಸ್‌ʼ ಕುರಿತಾದ ಹಳೆಯ ಸಂದರ್ಶನವೊಂದರ ವಿಡಿಯೋ ತುಣುಕನ್ನು ಮತ್ತೆ ಮುನ್ನಲೆಗೆ ತಂದಿರುವ ಬಲಪಂಥೀಯ ಬಳಕೆದಾರರು, ಸಾಯಿ ಪಲ್ಲವಿ ಅವರು ಹಿಂದೂ ವಿರೋಧಿ ಹಾಗೂ ಭಾರತೀಯ ಸೇನೆಗೆ ಅವಮಾನ ಮಾಡಿದ್ದಾರೆಂದು ಆರೋಪಿಸಿದ್ದಾರೆ.

ದಂಗಲ್‌ ಖ್ಯಾತಿಯ ನಿತೀಶ್‌ ತಿವಾರಿ ನಿರ್ದೇಶನದಲ್ಲಿ ನಿರ್ಮಾಣವಾಗುತ್ತಿರುವ ʼರಾಮಾಯಣʼ ಚಿತ್ರದಲ್ಲಿ ಸಾಯಿ ಪಲ್ಲವಿ ಅವರು ಸೀತಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದ್ದು, ನಟಿಯನ್ನು ಈ ಚಿತ್ರದಿಂದಲೂ ಕೈ ಬಿಡಬೇಕೆಂದು ಹಲವರು ಆಗ್ರಹಿಸಿದ್ದಾರೆ. ಕಾಶ್ಮೀರಿ ಪಂಡಿತರ ಹತ್ಯಾಕಾಂಡ ಹಾಗೂ ಭಾರತೀಯ ಸೇನೆ ಬಗ್ಗೆ ಹಗುರವಾಗಿ ಮಾತನಾಡಿರುವ ನಟಿ ಸೀತಾಮಾತೆಯ ಪಾತ್ರದಲ್ಲಿ ನಟಿಸಬಾರದೆಂದು ಬಲಪಂಥೀಯರು ಆಗ್ರಹಿಸಿದ್ದಾರೆ.

ಅಕ್ಟೋಬರ್‌ 31 ಕ್ಕೆ ಬಿಡುಗಡೆಯಾಗಲಿರುವ ಶಿವಕಾರ್ತಿಕೇಯನ್‌ ಅಭಿನಯದ ʼಅಮರನ್‌ʼ ಚಿತ್ರದಲ್ಲಿ ನಟಿ ಪ್ರಮುಖ ಪಾತ್ರ ನಿರ್ವಹಿಸಿದ್ದು, ಈ ಚಿತ್ರವನ್ನು ಬಹಿಷ್ಕರಿಸಬೇಕೆಂದೂ ಜನರು ಕರೆ ನೀಡಿದ್ದಾರೆ. ಭಾರತೀಯ ಸೈನಿಕರ ಕುರಿತಾದ ಈ ಚಿತ್ರದ ಪ್ರಮೋಷನ್‌ ಭಾಗವಾಗಿ ನಟಿ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೂ ಭೇಟಿ ನೀಡಿದ್ದಾರೆ.

ಏನಿದು ವಿವಾದ?

2022 ರಲ್ಲಿ ಖಾಸಗಿ ವಾಹಿನಿಯೊಂದಕ್ಕೆ ನಟಿ ನೀಡಿದ್ದ ಸಂದರ್ಶನವೊಂದರಲ್ಲಿ, ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರ ವಲಸೆಗೆ ಕಾರಣವಾದ ಉಗ್ರವಾದ ಹಾಗೂ ಗೋಕಳ್ಳಸಾಗಾಟಗಾರರು ಎಂಬ ಶಂಕೆಯಲ್ಲಿ ನಡೆಯುವ ಹಲ್ಲೆಗಳೂ ತಪ್ಪು ಎಂದು ಅವರು ಹೇಳಿದ್ದರು. ಗೋಸಾಗಣಿಕೆದಾರನೊಬ್ಬ ಮುಸ್ಲಿಂ ಎಂಬ ಕಾರಣಕ್ಕೆ ಆತನ ಹತ್ಯೆ ನಡೆದ ಘಟನೆಯನ್ನು ಉಲ್ಲೇಖಿಸಿದ್ದ ನಟಿ ಕಾಶ್ಮೀರದಲ್ಲಿ ನಡೆದಿರುವುದಕ್ಕೂ ಈ ಘಟನೆಗೂ ಏನು ವ್ಯತ್ಯಾಸವಿದೆ? ಎಂದು ಪ್ರಶ್ನಿಸಿದ್ದರು.

ಅಲ್ಲದೆ, ಭಾರತೀಯ ಸೇನೆಯನ್ನು ಪಾಕಿಸ್ತಾನಿಗಳು ಉಗ್ರರು ಎಂದು ಭಾವಿಸುತ್ತಾರೆ, ಪಾಕಿಸ್ತಾನ ಸೇನೆಯನ್ನು ಭಾರತೀಯರು ಭಯೋತ್ಪಾದಕರು ಎಂದು ಭಾವಿಸುತ್ತೇವೆ. ದೃಷ್ಟಿಕೋನದ ಬದಲಾವಣೆ ಇದು, ಯಾವುದೇ ರೀತಿಯ ಹಿಂಸೆ ತಪ್ಪು ಎಂದು ನಟಿ ಹೇಳಿಕೆ ನೀಡಿದ್ದರು. ಈ ಹೇಳಿಕೆ ಬಗ್ಗೆ ಬಜರಂಗದಳ ಮುಖಂಡರೊಬ್ಬರು ಸಾಯಿ ಪಲ್ಲವಿ ವಿರುದ್ಧ ದೂರನ್ನೂ ದಾಖಲಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News