ಜಿ.ಪಂ. ಕಚೇರಿ ಆವರಣದಲ್ಲಿ 144 ಕಲಂ ಅನ್ವಯ ನಿಷೇಧಾಜ್ಞೆ ವಿಧಿಸಲು ಪೊಲೀಸ್ ಇಲಾಖೆ ಶಿಫಾರಸ್ಸು

Update: 2017-06-07 11:09 GMT

ಶಿವಮೊಗ್ಗ, ಜೂ.7 : ಶಿವಮೊಗ್ಗ ನಗರದ ಜಿಲ್ಲಾ ಪಂಚಾಯತ್ ಕಚೇರಿ ಆವರಣದಲ್ಲಿ ಕ್ರಿಮಿನಲ್ ದಂಡ ಪ್ರಕ್ರಿಯಾ ಸಂಹಿತೆ 144 ನೇ ಕಲಂ ಅನ್ವಯ ನಿರಂತರ ನಿಷೇಧಾಜ್ಞೆ ವಿಧಿಸುವ ಪ್ರಸ್ತಾಪಕ್ಕೆ ಪೊಲೀಸ್ ಇಲಾಖೆ ಕೂಡ ಸಹಮತ ವ್ಯಕ್ತಪಡಿಸಲು ನಿರ್ಧರಿಸಿದೆ!

ಇದರಿಂದ ಇಡೀ ರಾಜ್ಯದ ಗಮನ ಸೆಳೆದಿರುವ ಈ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದಂತಾಗಿದೆ. ನಿಷೇಧಾಜ್ಞೆಗೆ ಸಹಮತ ವ್ಯಕ್ತಪಡಿಸುವ ನಿರ್ಧಾರದ ಬಗ್ಗೆ ಜಿಲ್ಲಾ ಪೊಲೀಸ್ ಇಲಾಖೆಯ ಅಧಿಕೃತ ಪತ್ರ ಇನ್ನೂ ಜಿಲ್ಲಾಡಳಿತದ ಕೈಸೇರಿಲ್ಲವಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯ ಅಧಿಕೃತ ಪತ್ರ ಕೈ ಸೇರಿದ ನಂತರವಷ್ಟೆ ಜಿಲ್ಲಾಡಳಿತದ ನಿರ್ಧಾರ ಏನೆಂಬುವುದು ಪ್ರಕಟಿಸುವುದಾಗಿ ಜಿಲ್ಲಾಡಳಿತದ ಉನ್ನತ ಮೂಲಗಳು ಮಾಹಿತಿ ನೀಡಿವೆ.

ಅಭಿಪ್ರಾಯ ಕೇಳಲಾಗಿತ್ತು: ಇತ್ತೀಚೆಗೆ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ. ರಾಕೇಶ್‌ಕುಮಾರ್‌ ಜಿ.ಪಂ. ಕಚೇರಿ ಆವರಣದಲ್ಲಿ 144 ನೇ ಕಲಂ ಅನ್ವಯ ನಿರಂತರ ನಿಷೇಧಾಜ್ಞೆ ವಿಧಿಸುವಂತೆ ಕೋರಿ ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಕಳುಹಿಸಿದ್ದರು. ಈ ಕೋರಿಕೆಯ ಪರೀಶಿಲನೆ ನಡೆಸಿದ ಡಿ.ಸಿ. ಡಾ. ಎಂ. ಲೋಕೇಶ್‌ ಪೊಲೀಸ್ ಇಲಾಖೆಯ ಅಭಿಪ್ರಾಯ ಕೋರಿದ್ದರು. ಜಿ.ಪಂ. ಕಚೇರಿ ಆವರಣದಲ್ಲಿ ನಿರಂತರ ನಿಷೇಧಾಜ್ಞೆ ವಿಧಿಸುವಂತಹ ಪರಿಸ್ಥಿತಿಯಿದೆಯೇ? ಎಂಬುವುದನ್ನು ಪರಿಶೀಲಿಸಿ ವರದಿ ಸಲ್ಲಿಸುವಂತೆ ಸೂಚಿಸಿದ್ದರು.

ಈ ನಡುವೆ ಪೊಲೀಸ್ ಇಲಾಖೆಯು, ಜಿ.ಪಂ. ಕಚೇರಿ ಆವರಣದಲ್ಲಿ 144 ನೇ ಕಲಂ ಅನ್ವಯ ನಿಷೇಧಾಜ್ಞೆ ಹೇರಲು ಸಹಮತ ವ್ಯಕ್ತಪಡಿಸಿದೆ. ಇದನ್ನು ಜಿಲ್ಲಾ ರಕ್ಷಣಾಧಿಕಾರಿ ಅಭಿನವ್ ಖರೆ ಖಚಿತ ಪಡಿಸಿದ್ದಾರೆ. ಪೊಲೀಸ್ ಇಲಾಖೆಯ ಈ ಪ್ರಸ್ತಾವನೆಯನ್ನು ಜಿಲ್ಲಾಧಿಕಾರಿ ಅಂಗೀಕರಿಸಿ ನಿಷೇಧಾಜ್ಞೆ ಜಾರಿಗೊಳಿಸಲಿದ್ದಾರಾ? ಅಥವಾ ನಿಷೇಧಾಜ್ಞೆ ವಿಧಿಸದಿರುವ ತೀರ್ಮಾನ ಕೈಗೊಳ್ಳಲಿದ್ದಾರಾ? ಎಂಬುವುದು ಇನ್ನಷ್ಟೆ ಗೊತ್ತಾಗಬೇಕಾಗಿದೆ.

ಕಾರಣವೇನು?: ಕಳೆದ ತಿಂಗಳು ಹಕ್ಕಿಪಿಕ್ಕಿ ಸಮುದಾಯದ ಒಂದು ಗುಂಪು ಜಿ.ಪಂ. ಕಚೇರಿ ಆವರಣದಲ್ಲಿ ದಿಢೀರ್ ಆಗಿ ಅಹೋರಾತ್ರಿ ಪ್ರತಿಭಟನೆ ನಡೆಸಿತ್ತು. ಪ್ರತಿಭಟನೆ ಕೈಬಿಡುವಂತೆ ಅಧಿಕಾರಿಗಳು ಮಾಡಿದ್ದ ಮನವಿಗೆ ಪ್ರತಿಭಟನಾಕಾರರು ಯಾವುದೇ ಸೊಪ್ಪು ಹಾಕಿರಲಿಲ್ಲ. ಈ ಪ್ರತಿಭಟನೆಯಲ್ಲಿ ಮಹಿಳೆಯರು, ಮಕ್ಕಳು, ವಯೋವೃದ್ಧರು ಕೂಡ ಭಾಗಿಯಾಗಿದ್ದರು.

ಈ ಘಟನೆಯ ನಂತರ ಸಿಇಓರವರು ಕಚೇರಿ ಆವರಣದಲ್ಲಿ ನಡೆಯುವ ದಿಢೀರ್ ಪ್ರತಿಭಟನೆಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಸಿಆರ್‌ಪಿಸಿ ಕಲಂ 144 ರ ಅನ್ವಯ ನಿರಂತರ ನಿಷೇಧಾಜ್ಞೆ ವಿಧಿಸುವಂತೆ ಕೋರಿ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದರು. ’ಜಿ.ಪಂ. ಆವರಣದಲ್ಲಿ ಯಾವುದೇ ಮಾಹಿತಿಯಿಲ್ಲದೆ ಪ್ರತಿಭಟನೆಗಳು ನಡೆಯುತ್ತವೆ. ಈ ಸಂದರ್ಭದಲ್ಲಿ ಏನಾದರೂ ಅನಾಹುತ, ಗೊಂದಲ ಉಂಟಾದರೆ ಸರಕಾರಿ ವ್ಯವಸ್ಥೆಗೆ ಕೆಟ್ಟ ಹೆಸರು ಬರುತ್ತದೆ.ಹಾಗಾಗಿ ಕಚೇರಿ ಆವರಣದಲ್ಲಿ ನಿಷೇಧಾಜ್ಞೆ ವಿಧಿಸುವಂತೆ’ ಕೋರಿದ್ದರು

ಇತ್ತೀಚೆಗೆ ಹಕ್ಕಿಪಿಕ್ಕಿ ಸಮುದಾಯದ ಒಂದು ಗುಂಪು ದಿಢೀರ್ ಆಗಿ ಕಚೇರಿ ಆವರಣದಲ್ಲಿ ನಡೆಸಿದ್ದ ಅಹೋರಾತ್ರಿ ಧರಣಿಯ ವಿಷಯವನ್ನು ಪತ್ರದಲ್ಲಿ ಪ್ರಸ್ತಾಪಿಸಿದ್ದರು. ವ್ಯಾಪಕ ಆಕ್ಷೇಪ: ಜಿ.ಪಂ. ಕಚೇರಿ ಆವರಣದಲ್ಲಿ 144 ನೇ ಕಲಂ ಅನ್ವಯ ನಿರಂತರ ನಿಷೇಧಾಜ್ಞೆ ವಿಧಿಸುವ ಪ್ರಸ್ತಾಪಕ್ಕೆ ಸಾರ್ವಜನಿಕ ಹಾಗೂ ಜನಪ್ರತಿನಿಧಿಗಳ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಯಾವುದೇ ಕಾರಣಕ್ಕೂ ಜಿ.ಪಂ. ಕಚೇರಿ ಆವರಣದಲ್ಲಿ ನಿಷೇಧಾಜ್ಞೆ ವಿಧಿಸಬಾರದು. ಸಾರ್ವಜನಿಕರ ಪ್ರತಿಭಟನೆಯ ಹಕ್ಕನ್ನು ಮೊಟಕುಗೊಳಿಸಬಾರದು. ಸಿಇಓ ಪ್ರಸ್ತಾಪವನ್ನು ಅಂಗೀಕರಿಸಬಾರದು ಎಂದು ಜಿಲ್ಲಾಡಳಿತಕ್ಕೆ ಆಗ್ರಹಿಸಿದ್ದರು.

Writer - ವರದಿ : ಬಿ. ರೇಣುಕೇಶ್

contributor

Editor - ವರದಿ : ಬಿ. ರೇಣುಕೇಶ್

contributor

Similar News