ಮಹಾತ್ಮ ಹೋದ, ಮನುಷ್ಯ ಉಳಿದ
ಭಾಗ -2
ಯಾವ ಗಾಂಧಿ ಪ್ರತೀಕಾರವನ್ನು ಮಾಡದಿರುವುದು, ಪರ ಪೀಡೆಯನ್ನು ಸಹಿಸುವುದು ತನ್ನ ತತ್ವ ಎಂದು ಹೇಳುತ್ತಾ ಕುಳಿತ್ತಿದ್ದರೋ, ಅದೇ ಗಾಂಧಿ ಪ್ರತೀಕಾರವನ್ನು ಮಾಡುವುದು ಆವಶ್ಯಕ, ಇಷ್ಟೇ ಅಲ್ಲದೆ ಅಹಿಂಸೆಯ ಮಾರ್ಗದಿಂದ ಪ್ರತೀಕಾರವನ್ನು ಮಾಡಲು ಬಾರದಿದ್ದರೆ ಹಿಂಸಾತ್ಮಕ ಮಾರ್ಗದಿಂದ ಅದನ್ನು ಮಾಡುವುದು ಆವಶ್ಯಕ ಎಂದು ಹೇಳುತ್ತಾರೆ. ಅಂದ ಬಳಿಕ ಅವರ ಬುದ್ಧಿ ಕೆಟ್ಟಿದೆ ಎಂದು ಯಾರಾದರೂ ಸಂದೇಹಪಟ್ಟರೆ ಅದು ಅರ್ಥವಿಲ್ಲದ್ದು, ವಿಕಾರದಿಂದ ಕೂಡಿದ್ದು ಎಂದೆನ್ನಲಾದೀತೆ? ಯಾವ ಗಾಂಧಿ ಎಲ್ಲರೂ ಅಹಿಂಸೆಯನ್ನು ಪಾಲಿಸಬೇಕೆಂದು ಆಗ್ರಹಿಸುತ್ತಾ ಕುಳಿತಿದ್ದರೂ ಅದೇ ಗಾಂಧಿ ಕಾಂಗ್ರೆಸ್ಸಿಗರು ಮಾತ್ರ ಅಹಿಂಸೆಯನ್ನು ಪಾಲಿಸಬೇಕೆಂದು ಅನ್ನುತ್ತಾರೆ!.
ಒಮ್ಮೆ ಯಾವ ಗಾಂಧಿ, ಕಾಂಗ್ರೆಸ್ ಜನ ಅಹಿಂಸೆಯನ್ನು ಪಾಲಿಸಲೇಬೇಕೆಂದು ಅನ್ನುತ್ತಿದ್ದರೋ, ಈಗ ಅದೇ ಗಾಂಧಿ, ಹಿಂಸೆಯ ಮಾರ್ಗವನ್ನು ಹಿಡಿಯದೆ ಗೂಂಡಾಗಿರಿಯನ್ನು ಎದುರಿಸುವುದು ಸಾಧ್ಯವಿಲ್ಲವೆಂದು ಕಾಂಗ್ರೆಸ್ ಜನರು ಬಹುಮತದಿಂದ ತೀರ್ಮಾನಿಸಿದರೆ ಅವರು ಜನರಿಗೆ ಹಿಂಸೆಯ ಮಾರ್ಗವನ್ನು ಅವಲಂಬಿಸುವಂತೆ ಹೇಳಲು ಅಭ್ಯಂತರವಿಲ್ಲವೆಂದು ಅನ್ನುತ್ತಾರೆ! ಇದರಿಂದ, ಗಾಂಧಿಯವರಿಗೆ ಅಹಿಂಸೆಯ ತತ್ವದ ಬಗೆಗೆ ವಿಶ್ವಾಸವೇ ಇರಲಿಲ್ಲ ಎಂದು ಆಪಾದನೆಯನ್ನು ಮಾಡಿದರೆ ತಪ್ಪಾದೀತೆ?
ಅಹಿಂಸೆಯ ಕುರಿತು ಗಾಂಧಿಯವರ ಪರಸ್ಪರ ವಿರೋಧಿ ವಿಚಾರಗಳನ್ನು ಕೇಳಿದ ಬಳಿಕ ಯಾವ ಮನುಷ್ಯನಾದರೂ ಗೊಂದಲಕ್ಕೆ ಈಡಾಗದೇ ಇರಲಾರ. ಈ ಮಾತುಗಳನ್ನು ಒಬ್ಬ ಜವಾಬ್ದಾರ ಮನುಷ್ಯನ ಘೋಷಣೆ ಎಂದು ಮನ್ನಿಸಬೇಕೋ, ಒಬ್ಬ ತಲೆಕೆಟ್ಟವನ ಬಡಬಡಿಕೆ ಎಂದು ತಿಳಿಯಬೇಕೋ, ಮಹಾತ್ಮನ ಲಹರಿ ಎನ್ನಬೇಕೋ, ಒಬ್ಬ ವ್ಯಾಪಾರಿಯ ಲೆಕ್ಕಾಚಾರದ ಮನೋಧರ್ಮವು ರಚಿಸಿದ ಪುರಾಣ ಎನ್ನಬೇಕೋ ಎನ್ನುವುದು ಎಳ್ಳಷ್ಟೂ ಅರ್ಥವಾಗದಂತಿದೆ.
ಅದೇನಿದ್ದರೂ ಗಾಂಧಿಯವರ ಅಹಿಂಸೆಯನ್ನು ಕುರಿತಾದ ಇತ್ತೀಚೆಗಿನ ಮನೋಧರ್ಮವು ಅವರ ದುರ್ದೆಸೆಯಾಗಿದೆ ಎಂದೆನ್ನಲು ಯಾವುದೇ ಅಭ್ಯಂತರವಿಲ್ಲ. ಏಕೆಂದರೆ, ಒಮ್ಮೆ ಒಂದು ಅಭಿಪ್ರಾಯ ಹಾಗೂ ಇನ್ನೊಮ್ಮೆ ಅದಕ್ಕೆ ತಿರುಗುಮುರುಗಾದ ಇನ್ನೊಂದು ಅಭಿಪ್ರಾಯವನ್ನು ನೀಡುವ ಹೊತ್ತು ಬರುವಂತಹ ಇನ್ನಾವ ದುರ್ದೆಸೆ ಸಾಧ್ಯ?ಒಂದೊಂದು ಸಲ ಮನುಷ್ಯ ತನ್ನ ಅಭಿಪ್ರಾಯವನ್ನು ಬದಲಾಯಿಸಬೇಕಾಗುತ್ತದೆ. ಏಕೆಂದರೆ ಅಭಿಪ್ರಾಯವು ಪರಿಸ್ಥಿತಿಯನ್ನು ಅವಲಂಬಿಸಿದೆ. ಪರಿಸ್ಥಿತಿಯನ್ನು ಬದಲಾಯಿಸಿದರೆ ಅಭಿಪ್ರಾಯವನ್ನೂ ಬದಲಾಯಿಸಬೇಕಾಗುತ್ತದೆ. ಆದರೆ, ಅಭಿಪ್ರಾಯ ಬದಲಾದರೂ ಮನುಷ್ಯ ತನ್ನ ತತ್ವಗಳನ್ನು ಬದಲಾಯಿಸಲಾರ.
ಅಭಿಪ್ರಾಯವನ್ನು ಬದಲಾಯಿಸುವ ಮನುಷ್ಯನನ್ನು ಯಾರೂ ವಂಚಕನೆಂದು ಅನ್ನದಿದ್ದರೂ ತತ್ವಗಳನ್ನು ಬದಲಾಯಿಸುವ ಮನುಷ್ಯನನ್ನು ವಂಚಕನೆಂದು ಅನ್ನದೆ ಇರಲಾರರು. ಅಹಿಂಸೆಯನ್ನು ಕುರಿತು ಗಾಂಧಿಯವರ ನಿಲುವಿನಲ್ಲಾದ ವ್ಯತ್ಯಾಸವು ಅಭಿಪ್ರಾಯದ ಬದಲಾವಣೆಯಾಗಿರದೆ ಅದು ತತ್ವದ ಸ್ವರೂಪವನ್ನು ಕುರಿತಾಗಿದೆ ಎಂಬಲ್ಲಿ ಸಂದೇಹವಿಲ್ಲ. ಒಮ್ಮೆ ಹೇಳಿದ ತತ್ವವನ್ನು ಹಿಂದೆೆಗೆದುಕೊಳ್ಳಬೇಕಾಗುವ ಸನ್ನಿವೇಶ ಬರುವಂತಹ ದುರ್ದೆಸೆ ಇನ್ನಾವುದು? ಈ ದುರ್ದೆಸೆಯ ಕಾರಣವನ್ನು ಅರಿತು ಕೊಳ್ಳುವುದು ಆವಶ್ಯಕ. ಗಾಂಧಿಯವರ ಅಹಿಂಸೆಯು ಮೂಲದಲ್ಲಿ ಅಹಿಂಸೆಯ ಅಪಹಾಸ್ಯವೇ ಆಗಿತ್ತು. ಹಿಂದುಸ್ಥಾನದಲ್ಲಿ ಮೊದಲಿನಿಂದಲೂ ಪ್ರತಿಪಾದಿತವಾಗುತ್ತಾ ಬಂದಿರುವ ಅಹಿಂಸೆಯ ವ್ಯಾಖ್ಯೆ, ಅದರ ಮಿತಿ ಹಾಗೂ ಅದರ ವ್ಯಾಪ್ತಿಗಳನ್ನು ತುಕರಾಮನು ತನ್ನ ಒಂದು ಅಭಂಗದಲ್ಲಿ ಹಿಂದೆಯೇ ಹೇಳಿಬಿಟ್ಟಿದ್ದಾನೆ.
ದಯಾ ತೇಚಿ ನಾಂವ ಭೂತಾಂ ಚೇ ಪಾಲನ
ಅಣಿಕ ನಿರ್ದಳಣ ಕಂಟಕಾಂ ಚೇ ॥
(ಜೀವಿಗಳ ಪಾಲನೆ ಮತ್ತು ಕಂಟಕರ ನಿರ್ದಳನೆಗೆ ದಯೆ ಎಂಬ ಹೆಸರು)
ತುಕರಾಮನು ಮಾಡಿದ ಈ ವ್ಯಾಖ್ಯೆಯೇ ಅಹಿಂಸೆಯ ನಿಜವಾದ ವ್ಯಾಖ್ಯೆ. ತುಕರಾಮನ ವ್ಯಾಖ್ಯೆಯ ‘ಮತ್ತು ಕಂಟಕರ ನಿರ್ದಳನೆ’ ಎನ್ನುವ ಭಾಗವು ತುಂಬ ಮಹತ್ವದ್ದು. ಗಾಂಧಿಯವರು ಈ ಭಾಗವನ್ನು ಕಿತ್ತೆಸೆದು ಅಹಿಂಸೆ ಎಂದರೆ ‘ಜೀವಿಗಳ ಪಾಲನೆ’ ಎಂಬ ಭಾಗವನ್ನಷ್ಟೇ ತೆಗೆದುಕೊಂಡು, ಮತ್ತು ‘ಕಂಟಕರ ನಿರ್ದಳನೆ’ಯ ಭಾಗವನ್ನು ಕೈಬಿಟ್ಟು ಅಹಿಂಸೆಯನ್ನು ಅತಿವ್ಯಾಪ್ತಿಗೆ ಒಳಪಡಿಸಿದರು. ಅಹಿಂಸೆಯನ್ನು ಹೀಗೆ ಅತಿವ್ಯಾಪ್ತಿಗೆ ಒಳಪಡಿಸುವಲ್ಲಿ ಗಾಂಧಿಯವರ ಸ್ವಾರ್ಥವಿತ್ತು.
ಜಗದ್ವಂದ್ಯರಾಗುವ, ಜಗನ್ಮಾನ್ಯರಾಗುವ ಅತ್ಯಾಸೆಯು ಗಾಂಧಿಯವರಷ್ಟು ಇನ್ನಾರಲ್ಲೂ ಇರಲಿಕ್ಕಿಲ್ಲ. ಜಗತ್ಪ್ರಸಿದ್ಧರಾಗುವ ಸುಲಭ ಮಾರ್ಗವೆಂದು ಗಾಂಧಿಯವರು ತುದಿಮುಟ್ಟಿದ ಅಹಿಂಸೆಯನ್ನು ಘೋಷಿಸಿದರು. ನಮಗಂತೂ ಇದರ ಹೊರತಾಗಿ ಬೇರಾವ ಕಾರಣವೂ ಕಾಣುತ್ತಿಲ್ಲ. ತುದಿ ಮುಟ್ಟಿದ ಅಹಿಂಸೆ, ಶತ್ರುವನ್ನು ಎದುರಿಸದೆ ಅವನಿಗೆ ಪ್ರಾಣನಾಶ, ದ್ರವ್ಯನಾಶ, ಲೂಟಿ, ಕೊಳ್ಳೆ ಇಕ್ಕುವಿಕೆಗಳನ್ನು ಮಾಡಗೊಡುವುದು ವಿಘಾತಕವಾದುದು. ಇದು ಗಾಂಧಿಯವರಿಗೆ ತಿಳಿಯುವುದಿಲ್ಲ ಎಂದೆನ್ನಲಾಗದು.
ಕಳೆದ ಇಪ್ಪತ್ತು ವರ್ಷಗಳ ಕಾಲ ಹಿಂದೂಸ್ಥಾನದಲ್ಲಿ ಹಿಂದೂ-ಮುಸಲ್ಮಾನರ ಸಾವಿರಾರು ದಂಗೆಗಳಾಗಿವೆ. ಅವುಗಳಲ್ಲಿ, ಮುಂಬೈ ಇಲಾಖೆ ಮತ್ತು ಮುಂಬೈ ನಗರಗಳಲ್ಲಿ ಹಿಂದೂ-ಮುಸಲ್ಮಾನರ ದಂಗೆಗಳ ಸಂಖ್ಯೆ ಎಲ್ಲಕ್ಕೂ ಹೆಚ್ಚು ಎಂದೆನ್ನಲು ಯಾವ ಅಭ್ಯಂತರವೂ ಇಲ್ಲ. ಆ ಹಿಂದೂ ಮುಸಲ್ಮಾನರ ದಂಗೆಗಳಲ್ಲಿ ಮುಂಬೈ ನಗರದ ಹಿಂದೂಗಳ ಪ್ರಾಣನಷ್ಟ ಮತ್ತು ದ್ರವ್ಯ ನಷ್ಟವಾಯಿತು. ಅದು ಗಾಂಧಿಯವರಿಗೆ ಪೂರ್ತಿ ತಿಳಿದಿತ್ತು. ಆದರೆ ಆಗ ತಮ್ಮ ಅಹಿಂಸೆಗೆ ಕಡಿವಾಣ ಹಾಕಿ, ಪ್ರತೀಕಾರ ಮಾಡಿ ಎಂದು ಉಪದೇಶಿಸಲು ಗಾಂಧಿಯವರಿಗೆ ಹೊಳೆಯಲಿಲ್ಲ.
ಇದಕ್ಕೆ ಕಾರಣವೆಂದರೆ, ಅಹಿಂಸೆಯ ಘೋರ ಪರಿಣಾಮಗಳತ್ತ ನೋಡುವುದರಿಂದ ಗಾಂಧಿಯವರಿಗೆ ಯಾವ ಪ್ರಯೋಜನವಿರಲಿಲ್ಲ. ಆದರೆ ಅಹಮದಾಬಾದಿನ ಹಿಂದೂಗಳು ಗಾಂಧಿಯವರಿಗೆ ಹೊರಗಿನವರಾಗಿರಲಿಲ್ಲ. ಅಲ್ಲದೆ ಅಹಮದಾಬಾದಿನ ಮುಸಲ್ಮಾನರು ಹಿಂದೂಗಳ ಮೇಲೆ ಮಾಡಿದ ದುರಾಚಾರವೇನೂ ಪರಕೀಯರ ಮೇಲೆ ನಡೆದ ದುರಾಚಾರವಲ್ಲ. ಅಹಮದಾಬಾದಿನ ಹಿಂದೂಗಳೇನೂ ಪರಕೀಯರಲ್ಲ. ಗಾಂಧಿಯವರು ಸಂನ್ಯಾಸಿಯಾಗಿದ್ದರೂ ಗುಜರಾತ್ ನಮ್ಮ ನೆಲ, ಅಹಮದಾಬಾದಿನ ಹಿಂದೂಗಳೆಂದರೆ ನಮ್ಮ ಹೊಟ್ಟೆಯ ಮಕ್ಕಳು ಎಂಬ ಭಾವನೆ ಅವರನ್ನು ಬಿಟ್ಟಿರಲಿಲ್ಲ. ಅಹಿಂಸೆಯಿಂದ ಹೊಟ್ಟೆಯ ಮಕ್ಕಳಿಗೆ ಮೋಸವಾಯಿತು!! ಜಗತ್ತಿಗೆ ಮಾರ್ಗದರ್ಶನವನ್ನು ಮಾಡಿದ ಅಹಿಂಸೆಯ ದೀವಟಿಗೆಯಿಂದಲೇ ತಮ್ಮ ಮನೆಗೆ ಬೆಂಕಿ ಬಿದ್ದುದನ್ನು ಕಂಡು ಗಾಂಧಿಯವರು ಎಚ್ಚೆತ್ತುಕೊಂಡು ಅಹಿಂಸೆಯ ಮೇಲೆ ಎಳ್ಳು ನೀರು ಬಿಡಲು ಸಿದ್ಧರಾದರು.!!
ಹಿಂದೂಸ್ಥಾನದಲ್ಲಿ ಶಂಕರಾಚಾರ್ಯ, ಮಧ್ವಾಚಾರ್ಯ, ರಾಮಾನುಜಾಚಾರ್ಯರಂಥ ಆಚಾರ್ಯರಾದರು. ಹಿಂದೂಸ್ಥಾನದಲ್ಲಿ ತುಕರಾಮ, ಗೋರಾ ಕುಂಭಾರ, ಚೋಖಾಮೇಳಾ, ಮೊದಲಾದ ಸಾಧು ಸಂತರಾದರು. ಆದರೆ ಗಾಂಧಿಯವರಿಗಿಂತ ಮೊದಲು ಯಾರೂ ಮಹಾತ್ಮರಾಗಿರಲಿಲ್ಲ ಎಂದು ಸಾಕಷ್ಟು ಜನ ಗೌರವದಿಂದ ಹೇಳುತ್ತಾರೆ. ಆಚಾರ್ಯರು, ಸಾಧು-ಸಂತರು ಸುಮ್ಮನೆ ಜನ್ಮ ತಳೆದರೆಂದು ಈಗಿನ ಸಾಕಷ್ಟು ಜನರಿಗೆ ಅನ್ನಿಸುತ್ತದೆ. ಅವರು ದೇಶದ ಉನ್ನತಿಗಾಗಿ ಏನನ್ನೂ ಮಾಡಲಿಲ್ಲವೆಂಬ ಅಪಾದನೆ ಅವರ ಮೇಲಿದೆ. ಈ ಸಂಗತಿ ನಿಜವಾದರೂ ಆಚಾರ್ಯರು, ಸಾಧು-ಸಂತರು ಈ ದೇಶದಲ್ಲಿ ಸುಮ್ಮನೆ ಜನ್ಮ ತಳೆದುದನ್ನು ಒಂದು ಆಪತ್ತು ಎನ್ನಲಾಗದು. ಆದರೆ ದೇಶದಲ್ಲಿ ಒಬ್ಬ ಮಹಾತ್ಮನು ಜನ್ಮ ತಳೆದುದನ್ನು ಒಂದು ದೊಡ್ಡದಾದ ಆಪತ್ತು ಎಂದು ನಾವು ತಿಳಿಯುತ್ತೇವೆ. ಯಾವ ದಿನ ಗಾಂಧಿಗೆ ಮಹಾತ್ಮನೆಂಬ ಪದವಿಯನ್ನು ನೀಡಲಾಯಿತೊ, ಆ ದಿನವನ್ನು ದೇಶದ ದುರ್ಭಾಗ್ಯದ ದಿನವೆಂದು ಹಾಗೂ ಗಾಂಧಿಗೆ ಮಹಾತ್ಮನೆಂಬ ಪದವಿಯನ್ನು ನೀಡಬೇಕೆನ್ನುವ ದುರ್ಬುದ್ಧಿಯು ಯಾವ ಮನುಷ್ಯನಲ್ಲಿ ಹುಟ್ಟಿತೋ ಅಂಥವನನ್ನು ಕಾಲ ಪುರುಷನೆಂದು ತಿಳಿಯಲು ಅಡ್ಡಿಯಿಲ್ಲ ಎಂಬುದು ಸ್ಪಷ್ಟವಾದ ಅಭಿಪ್ರಾಯ.
ಮಹಾತ್ಮನೆಂದರೆ ಜನರ ಮೇಲೆ ಎಲ್ಲಾ ಬಗೆಯಲ್ಲೂ ಒಂದು ಆಪತ್ತು. ಜನತೆಗೆ ಯಮ ಬೇಕು, ನಿಯಮ ಬೇಕು, ಜನತೆಯು ಯಾವುದೇ ಸಂಗತಿಯನ್ನು ಕೈಗೊಳ್ಳುವ ಮೊದಲು ಅದನ್ನು ಪರೀಕ್ಷಿಸಿ ನೋಡದೆ ಬೇರೆ ವಿಧಿಯಿಲ್ಲ. ಸತ್ಯ ಎಂದ ಕೂಡಲೇ ಅದಕ್ಕೆ ಸಾಕ್ಷವನ್ನು ಕೇಳತಕ್ಕದ್ದು. ಆಜ್ಞೆ ಎಂದರೂ ಅದರ ಪರಿಣಾಮವನ್ನು ಪರೀಕ್ಷಿಸಿ ನೋಡಬೇಕು. ಆದರೆ ಮಹಾತ್ಮನಿಗೆ ಯಮವಿಲ್ಲ, ನಿಯಮವಿಲ್ಲ. ಮಹಾತ್ಮನು ಹೇಳುವುದೇ ಸತ್ಯ, ಅವನು ಅನ್ನುವುದೇ ಆಜ್ಞೆ. ಆಚಾರ್ಯರು ಹಾಗೂ ಸಾಧು-ಸಂತರ ಮಾತು ಹಾಗಲ್ಲ. ಆಚಾರ್ಯರು ಹಾಗೂ ಸಾಧು-ಸಂತರೊಡನೆ ನಿಜ-ಸುಳ್ಳು, ಒಳ್ಳೆಯದು-ಕೆಟ್ಟದ್ದು ಎಂಬುದನ್ನು ಕುರಿತು ವಾದ ಹೂಡಲು ಸಾಧ್ಯ. ಅವರು ಯಮ-ನಿಯಮ, ತರ್ಕಶಾಸ್ತ್ರಗಳ ಬಂಧನಗಳಾಚೆ ಇಲ್ಲ. ಒಮ್ಮೆ ಮಹಾತ್ಮನೆಂದು ಒಪ್ಪಿಕೊಂಡ ಬಳಿಕ ‘ಇದು ಹೀಗೇಕೆ?’ ಎಂದು ಅವರನ್ನು ವಿಚಾರಿಸುವ ಸಾಮರ್ಥ್ಯವೇ ಉಳಿಯದು.
ಏಕೆಂದರೆ, ಮಹಾತ್ಮ ಹಾಗೂ ಪರಮೇಶ್ವರನಲ್ಲಿ ವ್ಯತ್ಯಾಸವೇ ಉಳಿಯದು. ಮಹಾತ್ಮನೆಂದರೆ ಪರಮ ಆತ್ಮ, ಅಂದರೆ ಪರಮೇಶ್ವರನೆಂದು ಪ್ರಪಂಚ ನಂಬುತ್ತದೆ. ಆಚಾರ್ಯ ಹಾಗೂ ಸಾಧು-ಸಂತರು ಹಾಗಲ್ಲ. ಅವರು ಮಾರ್ಗದರ್ಶಕರು. ಮೋಕ್ಷದಾತರಲ್ಲ. ಮಹಾತ್ಮನು ಬರೀ ಮಾರ್ಗದರ್ಶಕನಾಗಿರದೆ ಅವನು ಮೋಕ್ಷ ದಾತನೂ ಅಹುದು ಎಂದು ಸಾಮಾನ್ಯ ಜನರು ನಂಬುತ್ತಾರೆ. ಜನ, ಆಚಾರ್ಯ ಹಾಗೂ ಸಾಧು-ಸಂತರನ್ನು ವಂದಿಸುತ್ತಾರೆ. ಜನ ಅನನ್ಯ ಭಾವದಿಂದ ಮಹಾತ್ಮರಿಗೆ ಶರಣು ಹೋಗುತ್ತಾರೆ. ಶರಣಾಗತಿ ಎಂದರೆ ಒಂದು ಸಂಕಟವೇ ಅಹುದು. ಅದರಷ್ಟು ದೊಡ್ಡ ಸಂಕಟ ಬೇರೊಂದು ಇರಲಾರದು. ಏಕೆಂದರೆ, ಅದು ಮಾನಸಿಕ ದಾಸ್ಯವಾಗಿರುತ್ತದೆ. ಮಾನಸಿಕ ದಾಸ್ಯಕ್ಕೆ ಸಿಕ್ಕಿಕೊಂಡವರ ಪ್ರಗತಿಯು ನಿಂತು ಬಿಡುತ್ತದೆ ಎಂಬುದಕ್ಕೆ ಇಡಿಯ ಪ್ರಪಂಚದ ಇತಿಹಾಸವು ಸಾಕ್ಷಿಯಾಗಿದೆ. ಜನರು ಹುಚ್ಚರಾಗಿರದ ಹೊರತು ಮಹಾತ್ಮಾಗಿರಿ ನಡೆಯದು.
ಅಲ್ಲದೆ ಜನರ ಮೇಲೆ ಮಹಾತ್ಮಗಿರಿಯ ಹಿಡಿತ ಕುಳಿತಿತೆಂದರೆ ಅವರು ಹುಚ್ಚರಾಗುತ್ತಾರೆ, ದಾಸರಾಗುತ್ತ್ತಾರೆ. ಸಂಕಟದಿಂದ ಬಿಡುಗಡೆ ಹೊಂದಬೇಕಿದ್ದರೆ ಮಹಾತ್ಮಗಿರಿಯು ನಾಶ ಹೊಂದುವುದೊಂದೇ ಉಪಾಯ. ಗಾಂಧಿಯ ಮಹಾತ್ಮ ಗಿರಿಯು ಅಹಿಂಸೆಯನ್ನು ಆಧರಿಸಿತ್ತು. ಅಹಿಂಸೆಯ ಘೋಷಣೆಯಿಂದ ಅದು ಉಳಿದುಕೊಂಡಿತ್ತು. ಅಹಮದಾಬಾದಿನ ದಂಗೆ ನಡೆಯದೆ ಇದ್ದರೆ, ಸಾಯುವ ವರೆಗೂ ಗಾಂಧಿ ಅಹಿಂಸೆಯ ಘೋಷಣೆಯನ್ನು ಕೈ ಬಿಡುತ್ತಿರಲಿಲ್ಲ. ಅಲ್ಲದೆ ಅಹಿಂಸೆಯ ಘೋರ ಪರಿಣಾಮಗಳು ತಿಳಿದಿದ್ದರೂ ಅವರು ಪ್ರಪಂಚವನ್ನು ಕಾಪಾಡುವ-ಅಹಿಂಸೆಯ-ಹೊಸ ಮಾರ್ಗವನ್ನು ಹೇಳುವ ಮಹಾತ್ಮನೆಂದು ಸಾಯಬೇಕೆನ್ನುವ ತಮ್ಮ ಹವ್ಯಾಸವನ್ನು ಪೂರೈಸಿಕೊಳ್ಳುತ್ತಿದ್ದರು ಎಂಬ ಖಾತ್ರಿ ನಮಗಿದೆ.
ಆದರೆ ಗಾಂಧಿ ಶುದ್ಧ ದುರ್ದೈವಿ ಎನ್ನಿಸಿದರು. ಎಷ್ಟೆಂದರೆ ಗಾಂಧಿಯವರ ಬಾಗಿಲಲ್ಲಿ ಕುಳಿತ ಪರಮೇಶ್ವರನೂ ಅವರಿಗೆ ನೆರವಾಗಲಿಲ್ಲ. ಅಹಮದಾ ಬಾದಿನ ದಂಗೆಯ ಪ್ರಸಂಗವೆಂದರೆ ಗಾಂಧಿಯವರ ಬಲು ದೊಡ್ಡ ದುರ್ದೈವ ಎನ್ನಬೇಕು. ಎಷ್ಟು ಪರಿಯಿಂದ ಗಾಂಧಿಯವರ ದುರ್ದೈವವೋ, ಅಷ್ಟೇ ಪರಿಯಿಂದ ಅದು ದೇಶದ ದುರ್ದೈವವೂ, ಎಂದೆನ್ನ ಬೇಕಾಗುತ್ತದೆ. ಅಹಮದಾಬಾದಿನ ಪ್ರಸಂಗದ ನಿಮಿತ್ತವಾಗಿ ಒಂದು ಸಂಗತಿ ಖಚಿತವಾಯಿತು.ಅದೆಂದರೆ, ಅಹಿಂಸೆಯೆಂದರೆ, ಮಹಾತ್ಮಗಿರಿಯನ್ನು ನಡೆಸಿಕೊಂಡು ಹೋಗಲು ಗಾಂಧಿ ತಮ್ಮ ಮೈಗೆ ಪೂಸಿಕೊಂಡ ಬೂದಿ ಎಂದು ಸಿದ್ಧವಾಯಿತು. ಸ್ವಂತದ ದೊಡ್ಡಸ್ತಿಕೆಯನ್ನು ಮೆರೆಯ ಲೆಂದು ಅಹಿಂಸೆಯ ಚಿತೆಯನ್ನು ಹೊತ್ತಿಸಿ, ತನ್ನವರನ್ನು ಕಾಪಾಡಲೆಂದು ಅವರು ಅದನ್ನೀಗ ನಂದಿಸಿದರು! ಒಟ್ಟಿನಲ್ಲಿ ಗಾಂಧಿಯವರ ಅಹಿಂಸೆ ಎಂದರೆ ಒಂದು ದೊಡ್ಡ ದಂಭವಾಗಿತ್ತು ಎಂಬುದನ್ನು ಅಹಮದಾಬಾದ್ ಸಿದ್ಧ ಮಾಡಿತು. ದೇಶದ ಸುದೈವವು ಉದಯಕ್ಕೆ ಬಂದಿತೆಂದು ನಾವು ತಿಳಿಯುತ್ತೇವೆ.
ಅಹಿಂಸೆಯ ಸಂದರ್ಭದಲ್ಲಿ ಯಾವ ದಿನ ಗಾಂಧಿ ಅಂಜಿ ಹಿಂಜರಿಯುವರೋ ಆ ದಿನದಿಂದ ಅವರ ಮಹಾತ್ಮಗಿರಿ ಮುಗಿಯಲು ಶುರುವಾಗಲಿದೆ ಎಂಬುದು ಬಹಳ ದಿನಗಳ ಕೆಳಗೆಯೇ ನಾವು ಹೇಳಿದ ಭವಿಷ್ಯವಾಣಿಯಾಗಿದೆ. ಈ ದೃಷ್ಟಿಯಿಂದ ನೋಡಿದರೆ ಅಹಮದಾಬಾದಿನ ದಂಗೆ ಒಂದು ಇಷ್ಟವಾದ ಆಪತ್ತೆಂದು ನಾವು ಭಾವಿಸುತ್ತೇವೆ. ಏಕೆಂದರೆ, ಅಹಮದಾಬಾದಿನಲ್ಲಿ ಹಿಂದೂ-ಮುಸಲ್ಮಾನ ದಂಗೆ ನಡೆಯದೆ ಹೋಗಿದ್ದರೆ, ಅಹಿಂಸೆಯಿಂದಾಗಿ ಅಲ್ಲಿಯ ಹಿಂದೂಗಳ ಧೂಳಿಪಟವಾಗದೆ ಹೋಗಿದ್ದರೆ, ಗಾಂಧಿ ತಮ್ಮ ದೊಡ್ಡಸ್ಥಿಕೆಯನ್ನು ಮೆರೆಯಲಿಕ್ಕಾಗಿ ಅಹಿಂಸೆಯ ದಂಭವನ್ನು ಹಾಗೆಯೇ ಎದೆಯಲ್ಲಿ ಕಾಪಿಟ್ಟುಕೊಂಡು ಕುಳಿತಿರುತ್ತಿದ್ದರು.\
ಅಹಮದಾಬಾದಿನ ದಂಗೆಯಿಂದ ಬೂದಿ ಹಾರಿ ಹೋಗಿ, ಇದ್ದಿಲು ಉಳಿದುಕೊಂಡುದು ಒಳ್ಳೆಯದೇ ಆಯಿತು, ಮಹಾತ್ಮ ಹೋದ, ಮನುಷ್ಯ ಉಳಿದ, ಎಂದು ಉದ್ಗರಿಸಲು ಅನುಕೂಲ ಒದಗಿತು. ಆದುದ ರಿಂದ, ನಾವು ಅಹಮದಾಬಾದಿನ ಹಿಂದೂಗಳು ಹಾಗೂ ಮುಸಲ್ಮಾನರನ್ನು ಅಭಿನಂದಿಸ ಬಯಸುತ್ತೇವೆ.
(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ- ಬರಹಗಳ ಸಂಪುಟ)