ಬಾಗಿಲು ತಟ್ಟಿದ ಸದ್ದು!
ಹೀಗೇ ಅದು ಇದು ಮಾತನಾಡುತ್ತಾ ಅವರು ಮತ್ತೆ ನಿದ್ದೆಗೆ ಶರಣಾಗಿದ್ದರು. ಹೊರಗಡೆ ಜಿಟಿಪಿಟಿ ಮಳೆ ಸುರಿಯುತ್ತಲೇ ಇತ್ತು. ಅನಂತ ಭಟ್ಟರು ನಿದ್ದೆ ಹೋಗಿ ಒಂದು ತಾಸು ಕಳೆದಿರಬಹುದು. ಇದಕ್ಕಿದ್ದಂತೆ ಅದೇನೋ ಸದ್ದು ಅವರನ್ನು ಎಚ್ಚರಿಸಿತು. ಎದ್ದು ಕುಳಿತು ಕಣ್ಣುಜ್ಜಿಕೊಂಡರು. ಯಾರೋ ಬಾಗಿಲು ತಟ್ಟಿದಂತೆ. ಹೊರಗೆ ಮಳೆ ಸುರಿಯುತ್ತಿರಬೇಕು....
‘ತನ್ನ ಭ್ರಮೆ ಇರಬಹುದೋ?’ ಎಂದು ಯೋಚಿಸುವಷ್ಟರಲ್ಲಿ ಮತ್ತೆ ಬಾಗಿಲು ತಟ್ಟಿದ ಸದ್ದು. ಅನಂತಭಟ್ಟರು ಎದ್ದು ಕಿಟಕಿಯ ಪಕ್ಕ ಬಂದರು. ಯಾರೂ ಗೋಚರಿಸಲಿಲ್ಲ. ತಣ್ಣಗಿನ ಗಾಳಿ ಮುಖಕ್ಕೆ ಹೊಡೆಯಿತು. ಕಿಟಕಿಗೆ ಮುಖ ಮಾಡಿ ‘‘ಯಾರೂ?’’ ಎಂದರು.
‘‘ಅಪ್ಪಾ...ನಾನಪ್ಪ...’’ ಪಪ್ಪುವಿನ ಸಣ್ಣ ಧ್ವನಿ. ಆ ಸ್ವರ ಕೇಳಿ ಅನಂತಭಟ್ಟರು ನಿಂತಲ್ಲೇ ಕಂಪಿಸಿದರು. ನಮ್ಮ ಪಪ್ಪುವಿನ ಧ್ವನಿ.
ಧಾವಿಸಿ ಬಾಗಿಲು ತೆರೆದರೆ, ತನ್ನೆಲ್ಲ ನಿರೀಕ್ಷೆಗಳು ಮೈತಳೆದು ನಿಂತಂತೆ ಬಾಗಿಲ ಚೌಕಟ್ಟಿಗೆ ಅಂಟಿಕೊಂಡು ಸಂಪೂರ್ಣ ಮಳೆಯಲ್ಲಿ ಒದ್ದೆಯಾಗಿ ಪಪ್ಪು ನಿಂತಿದ್ದ. ‘‘ಲೇ ಇವಳೇ...ನೋಡಿಲ್ಲಿ. ಯಾರು ಬಂದಿದ್ದಾರೆ ನೋಡಿಲ್ಲಿ....ನಮ್ಮ ಪಪ್ಪು ಬಂದಿದ್ದಾನೆ ಕಣೇ...’’ ಅನಂತಭಟ್ಟರು ಪತ್ನಿಯನ್ನು ಕೂಗಿ ಕರೆದರು.
ಆ ಸಂಭ್ರಮದ ತರಂಗಗಳು ನಿದ್ದೆಯಲ್ಲಿದ್ದ ಲಕ್ಷ್ಮಮ್ಮನನ್ನು ಬಡಿದೆಬ್ಬಿಸಿತು. ಎದ್ದು ನೋಡಿದರೆ, ಬಾಗಿಲ ಬಳಿ ಮಗ ನಿಂತಿದ್ದಾನೆ. ಹೆಜ್ಜೆ ಮುಂದಿಡು ವುದಕ್ಕೂ ತ್ರಾಣವಿಲ್ಲದೆ ಲಕ್ಷ್ಮಮ್ಮ ಮಗುವಿನಂತೆ ಅಳತೊಡಗಿದರು. ‘‘ಬಂದು ಬಿಟ್ಟಿಯೇನೋ ಕಂದಾ...ಬಂದೇ ಬಿಟ್ಟಿಯೇನೋ...’’ ಪಪ್ಪು ತಾಯಿಯೆಡೆಗೆ ಧಾವಿಸಿದ ‘‘ನಿನ್ನ ಕನಸು ಬಿತ್ತಮ್ಮ. ನಿನ್ನನ್ನು ನೋಡಬೇಕು ಅಂತ ಆಸೆಯಾಯಿತು. ರಜೆ ಕೇಳಿದೆ. ಸಿಕ್ಕಿ ಬಿಟ್ಟಿತು. ಸೀದಾ ಎದ್ದು ಬಂದೇ ಬಿಟ್ಟೆ....’’
ಅನಂತಯ್ಯ ಮನೆಯ ಎಲ್ಲ ದೀಪ ಹಚ್ಚಿದರು. ‘‘ಮಳೆಯಲ್ಲಿ ಗದ್ದೆ ಪುಣಿಯೆಲ್ಲ ಮುಳುಗಿ ಬಿಟ್ಟಿದೆ. ಅದು ಹೇಗೆ ಬಂದೆಯೋ?’’ ಕೇಳಿದರು.
ಹೇಗೆ ಬಂದ ಎನ್ನುವುದನ್ನು ಅವನ ಸ್ಥಿತಿಯೇ ಹೇಳುತ್ತಿತ್ತು. ಅವನು ಧರಿಸಿರುವ ಬಟ್ಟೆಗಳೆಲ್ಲ ಕೆಸರು ನೀರಿನಿಂದ ಒದ್ದೆಯಾಗಿತ್ತು. ಪ್ರಯಾಣದಿಂದ ಮಗ ಚದುರಿ ಹೋಗಿರುವುದು ಎದ್ದು ಕಾಣುತ್ತಿತ್ತು. ಕತ್ತಲಲ್ಲಿ ದಾರಿಯಲ್ಲೆಲ್ಲಾದರೂ ಜಾರಿ ಬಿದ್ದನೋ? ಮನಸ್ಸು ವಿಲವಿಲ ಎಂದು ಒದ್ದಾಡಿತು.
ನೋಡಿದರೆ ಮಗನ ಹೆಗಲ ಮೇಲೊಂದು ಕೋವಿ ತೂಗುತ್ತಿದೆ ‘‘ಈಗ ನೋಡೇ...ನಿನ್ನ ಮಗ ನಿಜವಾದ ಯೋಧ. ಹೆಗಲಲ್ಲಿ ಕೋವಿಯೂ ಇದೆ’’ ಅನಂತಭಟ್ಟರು ಬಲವಂತದಿಂದ ನಗು ತರಿಸಿಕೊಂಡರು.
‘‘ಮೊದಲು ಒದ್ದೆ ಬಟ್ಟೆ ಕಳಚಿ ತಲೆ, ಮೈಯನ್ನೆಲ್ಲ ಸರಿಯಾಗಿ ಒರೆಸಿಕೋ’’ ಎಂದರು ತಾಯಿ. ‘‘ಈ ಕೋವಿಯನ್ನು ಒಳಗಿಟ್ಟು ಬರುತ್ತೇನಮ್ಮ...’’ ಎಂದವನು ತನ್ನ ಕೋಣೆಯೊಳಗೆ ನಡೆದ. ತುಸು ಹೊತ್ತಲ್ಲಿ ಕೋಣೆಯೊಳಗಿಂದಲೇ ಕೂಗಿ ಹೇಳಿದ ‘‘ಅಮ್ಮಾ...ನಿದ್ದೆ ಬರ್ತಾ ಇದೆ...ಬೆಳಗ್ಗೆ ಮಾತಾಡೋಣ...’’
‘‘ಆಯಿತಪ್ಪ’’ ದಂಪತಿ ಜೊತೆಯಾಗಿ ಅನುಮೋದಿಸಿದರು. ಅವರ ನಿದ್ದೆ ಹಾರಿ ಹೋಗಿತ್ತು. ಅವರು ಮಗ ಮರಳಿ ಬಂದ ಎಂಬ ಸಂಭ್ರಮದಲ್ಲಿ ಮನೆ ತುಂಬಾ ಓಡಾಡಿದರು. ಸಂತೋಷವನ್ನು ಪರಸ್ಪರ ಹಂಚಿಕೊಳ್ಳುತ್ತಾ ಬೆಳಗಾಗುವುದನ್ನೇ ಕಾಯುತ್ತಿದ್ದರು.
ಮರುದಿನ ಮಧ್ಯಾಹ್ನದವರೆಗೂ ಪಪ್ಪುವಿನ ಕೋಣೆಯ ಬಾಗಿಲು ಮುಚ್ಚಿಯೇ ಇತ್ತು. ಪ್ರಯಾಣದ ಸುಸ್ತು ಪರಿಹಾರವಾಗಲಿ ಎಂದು ದಂಪತಿ ತೊಂದರೆ ಕೊಡಲಿಲ್ಲ. ಊಟದ ಸಿದ್ಧತೆಯೆಲ್ಲ ಮುಗಿದ ಬಳಿಕ ತಾಯಿ ಪಪ್ಪುವಿನ ಕೋಣೆಯ ಬಾಗಿಲು ತಟ್ಟಿದರು.
‘‘ಏಳು ಮಗಾ...ಬಿಸಿ ನೀರಿದೆ. ಸ್ನಾನ ಮಾಡು...’’ ತುಸು ಹೊತ್ತಲ್ಲಿ ಕೋಣೆಯ ಬಾಗಿಲು ತೆರೆಯಿತು. ಮಗ ತುಂಬಾ ಸವೆದಿದ್ದಾನೆ ಅನ್ನಿಸಿತು ತಾಯಿಗೆ. ಜೊತೆಗೆ ಕುರುಚಲು ಗಡ್ಡ, ಕೆದರಿದ ಕೂದಲು. ಇದು ನನ್ನ ಮಗ ಅಲ್ಲವೇ ಅಲ್ಲ ಎನ್ನುವಷ್ಟು ಬದಲಾವಣೆ ಕಂಡಿತು. ಪಪ್ಪು ಸ್ನಾನದ ಮನೆಗೆ ನಡೆದ.
ಸ್ನಾನ ಮುಗಿಸಿ, ಉಂಡಂತೆ ಮಾಡಿದ ಪಪ್ಪು ಮತ್ತೆ ಕೋಣೆ ಸೇರಿದ. ಮಗು ಬಾಡಿದ್ದಾನೆ ಎಂದು ಅನಂತಭಟ್ಟರಿಗೂ ಅನ್ನಿಸಿತು. ಅವನಲ್ಲಿ ಮತ್ತೆ ಉಲ್ಲಾಸ ಮೂಡಿಸಬೇಕು. ಪದ್ಮನಾಭರನ್ನು ಬರಹೇಳಿದರೆ ಹೇಗೆ? ಆದರೆ ಹಿಂದಿನ ಅನುಭವ ಮರುಕಳಿಸಿದರೆ ಆತ ಇನ್ನಷ್ಟು ಕುಗ್ಗಬಹುದು. ಒಂದೆರಡು ದಿನ ವಿಶ್ರಾಂತಿ ತೆಗೆದುಕೊಳ್ಳಲಿ. ಬಳಿಕ ಅವನ ಮನಸ್ಸಿನಲ್ಲಿ ಏನಿದೆ ಎನ್ನುವುದನ್ನು ತಿಳಿದುಕೊಂಡು ಮುಂದುವರಿಯೋಣ ಎಂಬ ನಿರ್ಧಾರಕ್ಕೆ ಬಂದರು.
ಅಂದು ಇಡೀ ದಿನ ಪಪ್ಪು ಕೋಣೆಯೊಳಗೇ ಇದ್ದ. ಊಟಕ್ಕೆಂದು ಹೊರ ಬಂದು, ತಾಯಿಯ ಒಂದೆರಡು ಪ್ರಶ್ನೆಗಳಿಗೆ ಅಷ್ಟೇ ಚುಟುಕಾಗಿ ಉತ್ತರ ಕೊಟ್ಟು ಮತ್ತೆ ಕೋಣೆ ಸೇರಿದ.
ಮರುದಿನ ಬೆಳಗ್ಗೆ ಅನಂತಭಟ್ಟರು ಕೋಣೆಯ ಬಾಗಿಲು ತಟ್ಟಿ ಕೇಳಿದರು ‘‘ಪಪ್ಪು ಇಲ್ಲೊಬ್ಬರು ಪರಿಚಿತರು ಒಂದು ಹುಡುಗಿ ಫೋಟೊ ತೋರಿಸಿದ್ದಾರೆ. ಬ್ರಾಹ್ಮಣ ಹುಡುಗಿ. ನೋಡೋದಕ್ಕೆ ಲಕ್ಷಣವಾಗಿದ್ದಾಳೆ. ಸಾಧ್ಯವಾದರೆ ಇವತ್ತು ಸಂಜೆ ಅಥವಾ ನಾಳೆ ಅವರ ಮನೆಗೆ ಹೋಗಿ ಬರೋಣ. ನಿನಗೆ ಇಷ್ಟವಾದರೆ ಈ ರಜೆಯಲ್ಲಿ ಮದುವೆ ಮುಗಿಸಿ ಬಿಡೋಣ....’’ ಕೋಣೆಯೊಳಗಿಂದ ಯಾವ ಪ್ರತಿಕ್ರಿಯೆಯೂ ಇಲ್ಲ.
‘‘ಏನಂತೀಯ ಕಂದಾ?’’ ಮತ್ತೊಮ್ಮೆ ಕೇಳಿದರು.
‘‘ಹೋಗಲೇ ಬೇಕೇನಪ್ಪಾ...’’ ಎನ್ನುವ ಆರ್ತ ಸ್ವರವೊಂದು ಕೋಣೆಯೊಳಗಿಂದ ತೂರಿ ಬಂತು. ಭಟ್ಟರ ಹೃದಯ ದ್ರವವಾಯಿತು. ಪಪ್ಪುವಿಗೆ ಹುಡುಗಿ ನೋಡುವುದು ಇಷ್ಟವಿಲ್ಲ ಎನ್ನುವುದು ಅವರಿಗೆ ಗೊತ್ತಾಗಿ ಬಿಟ್ಟಿತು. ಅವರು ಒತ್ತಾಯಿಸಲಿಲ್ಲ. ಸಂಜೆಯ ಹೊತ್ತಿಗೆ ಪಪ್ಪು ಜಗಲಿಯಲ್ಲಿ ಕೂತು, ಪಾಚಿಗಟ್ಟಿದ ಅಂಗಳವನ್ನೇ ದಿಟ್ಟಿಸುತ್ತಾ ಅದೇನೋ ಯೋಚಿಸತೊಡಗುತ್ತಿದ್ದ. ತನಗೆ ತಾನೇ ಏನೋ ಮಾತನಾಡಿ ಕೊಳ್ಳುವಂತೆಯೂ ಇತ್ತು. ಲಕ್ಷ್ಮಮ್ಮನೇ ಅವನನ್ನು ಎಬ್ಬಿಸುವುದಕ್ಕೆ ಪ್ರಯತ್ನಿಸುತ್ತಿದ್ದರು ‘‘ಹೋಗೋ ಪಪ್ಪು, ಗುರೂಜಿಯ ಮನೆಗೊಮ್ಮೆ ಭೇಟಿ ಕೊಟ್ಟು ಬಾ. ಅವರು ಆಗಾಗ ನಿನ್ನನ್ನು ವಿಚಾರಿಸುತ್ತಿರು ತ್ತಾರಂತೆ....’’
ಪಪ್ಪುವಿನಿಂದ ಮರುತ್ತರವೇ ಇರಲಿಲ್ಲ. ಅಂದು ಪಪ್ಪುವಿನ ಜೊತೆಗೆ ಅದು ಇದು ಮಾತನಾಡುತ್ತಾ ಭಟ್ಟರು ಹೇಳಿದರು ‘‘ಈ ಬಾರಿಯಂತೂ ನೀನು ಮದುವೆ ಮುಗಿಸಿಯೇ ಹೋಗಬೇಕು. ಒಂದೆರಡು ಸಂಬಂಧ ಬಂದಿದೆ. ಇದ್ದುದರಲ್ಲಿ ಚೆನ್ನಾಗಿದ್ದುದನ್ನು ಆಯ್ಕೆ ಮಾಡುವ’’
ಪಪ್ಪು ಪ್ರತಿಕ್ರಿಯಿಸಲಿಲ್ಲ. ‘‘ಯಾಕೆ ಪಪ್ಪು...ಮದುವೆ ಇಷ್ಟವಿಲ್ಲವೇ?’’
ಆಗಲೂ ಪಪ್ಪು ವೌನವಾಗಿದ್ದ. ಭಟ್ಟರೂ ಸುಮ್ಮಗಾಗಿ ಬಿಟ್ಟರು.
ತುಸು ಹೊತ್ತು ಕಳೆದ ಬಳಿಕ ಪಪ್ಪು ತಟ್ಟನೆ ತಂದೆಯ ಕಡೆಗೆ ತಿರುಗಿ ಜೋರಾಗಿ ಕೇಳಿದ ‘‘ಅಪ್ಪಾ....ಹುತಾತ್ಮ ವೆಂಕಟನ ಮಗಳು ಮದುವೆಗೆ ಸಿದ್ಧಳಾಗಿದ್ದಾಳೆ. ಅವಳನ್ನು ಶುದ್ಧೀಕರಿಸಿ ಮನೆ ತುಂಬಿಸಿಕೊಳ್ಳೋಣವೇ?’’
ಅಡುಗೆ ಕೋಣೆಯಲ್ಲಿದ್ದ ಲಕ್ಷ್ಮಮ್ಮ ಅವರ ಕೈಯಲ್ಲಿದ್ದ ತಟ್ಟೆ ಜಾರಿ ನೆಲಕ್ಕಪ್ಪಳಿಸಿತು.
‘‘ಆದರೆ...ಅದು ಹೊಲೇರ ಹುಡುಗಿ ಕಣೋ...’’ ಅನಂತ ಭಟ್ಟರು ಅಸಹನೆಯಿಂದ ಉತ್ತರಿಸಿದರು. ಪಪ್ಪು ತಂದೆಯನ್ನೇ ದಿಟ್ಟಿಸಿ ನೋಡಿದವನು ಎದ್ದು ಅಂಗಳಕ್ಕಿಳಿದು ಮನೆಯ ದಡಮೆ ದಾಟಿ ಹೊರಟ.
‘‘ಎಲ್ಲಿಗೆ ಹೊರಟದ್ದು? ಮಳೆ ಬರಬಹುದೋ...’’ ಅನಂತಭಟ್ಟರು ಕೂಗಿದರು. ಪಪ್ಪುವಿನಿಂದ ಉತ್ತರವಿರಲಿಲ್ಲ.
‘‘ಕೊಡೆಯಾದರೂ ಹಿಡಿದುಕೊಂಡು ಹೋಗೋ...’’ ಮತ್ತೆ ಕೂಗಿದರು.
ಪಪ್ಪು ದಡದಡನೇ ಒಂದೇ ಸಮನೆ ನಡೆಯುತ್ತಲೇ ಇದ್ದ.
ಬಜತ್ತೂರಿನ ಮಸೀದಿಯಲ್ಲಿ ಸಂಜೆ ನಮಾಜು ಮುಗಿಸಿ ಜಗಲಿಯ ಕಟ್ಟೆಯಲ್ಲಿ ಕುಳಿತು ಮುಸ್ಲಿಯಾರರು ಜಪಮಣಿ ಎಣಿಸುತ್ತಿರುವಾಗ ಯಾರೋ ಕಾಂಪೌಂಡ್ ದಾಟಿ ಬಂದಂತಾಯಿತು. ಯಾರಿದು ಈ ಪಿರಿಪಿರಿ ಮಳೆಯಲ್ಲಿ? ಕೊಡೆಯೂ ಇಲ್ಲದೆ? ಹೊಸ ಮುಖ?
ನೋಡಿದರೆ ಮುಸ್ಲಿಮನಂತಿರಲಿಲ್ಲ. ನಮಾಜು ಮಾಡುವುದಕ್ಕ್ಕೆ ಬಂದಂತಿರಲಿಲ್ಲ. ನದಿಯ ಕಡೆಗೆ ಹೋಗುವವರಿರಬೇಕು, ಆದರೆ ನದಿ ತುಂಬಿ ಹರಿಯುತ್ತಿದೆ. ‘‘ಯಾರು ಗೊತ್ತಾಗಲಿಲ್ಲ....?’’ ಮುಸ್ಲಿಯಾರರು ಕೇಳಿದರು.
‘‘ನಾನು ಪ್ರತಾಪ ಸಿಂಹ....’’
‘‘ಓಹೋ ಊರಿಗೆ ಹೊಸಬರೋ...?’’
‘‘ನಾನು ಕಬೀರನ ಸ್ನೇಹಿತ...ಪಪ್ಪು, ಪ್ರತಾಪ ಸಿಂಹ. ಸೇನೆಯಲ್ಲಿ ಸುಬೇದಾರ್ ಆಗಿದ್ದೇನೆ....’’
‘‘ಓಹೋ ನಮ್ಮ ಲೆಕ್ಕದ ಮಾಷ್ಟ್ರ ಮಗನೋ...ರಜೆಯಲ್ಲಿ ಊರಿಗೆ ಬಂದದ್ದೋ....ನೋಡಿ ಸಂತೋಷವಾಯಿತು...ನೆರೆ ನೀರು ನೋಡ್ಲಿಕ್ಕೆ ಹೋಗುವುದಾ?’’ ಮುಸ್ಲಿಯಾರರು ಕೇಳಿದರು.
‘‘ಕಂಚಿಕಲ್ಲು ಮುಳುಗಿದೆಯಾ?’’ ಪಪ್ಪು ಒಮ್ಮೆಲೆ ಕೇಳಿದ.
‘‘ಅಯ್ಯೋ, ಕಂಚಿಕಲ್ಲು ಮುಳುಗಿದರೆ ಉಪ್ಪಿನಂಗಡಿಯಲ್ಲಿ ಸಂಗಮ ಆಗಿ ಈಗಾಗಲೇ ಊರಿಡೀ ಸುದ್ದಿಯಾಗುವುದು. ಆದರೆ ಹೀಗೆ ಮಳೆ ಇನ್ನೊಂದೆರಡು ರಾತ್ರಿ ಸುರಿದರೆ ಕಂಚಿಕಲ್ಲು ಮುಳುಗುವುದು ಖಂಡಿತಾ...’’ ಎಂದರು.
ಅವರ ಮಾತು ಮುಗಿದಿರಲಿಲ್ಲ, ಪಪ್ಪು ನದಿಯ ಕಡೆಗೆ ಸಾಗಿದ.
‘‘ಜಾಗೃತೆ...ಕಾಲು ಜಾರೀತು...ನೀರಿಗಿಳಿಯ ಬೇಡಿ...’’ ಮುಸ್ಲಿಯಾರರ ಕಾಳಜಿ ಅವನನ್ನು ಹಿಂಬಾಲಿಸಿತು. ಮಸೀದಿಯ ಹಿಂಬದಿಯ ಕಾಂಪೌಂಡ್ ಹತ್ತಿ ಭೋರ್ಗರೆದು ಹರಿಯುತ್ತಿರುವ ಕೆಂಬಣ್ಣದ ನೇತ್ರಾವತಿಯನ್ನು ಪಪ್ಪು ನೋಡುತ್ತಿದ್ದ. ದೂರದಲ್ಲಿ ಅವನನ್ನೇ ದಿಟ್ಟಿಸುತ್ತಿರುವ ಘನಗಂಭೀರ ಕಂಚಿಕಲ್ಲು. ಮುಳುಗುವುದಕ್ಕೆ ಒಂದೆರಡು ಅಡಿಯಷ್ಟೇ ಬಾಕಿ ಉಳಿದಿದೆ. ಸುಮ್ಮನೆ ಅದನ್ನೇ ನೋಡುತ್ತಾ ನಿಂತಿದ್ದ. ‘‘ಭಟ್ರೇ...ಮಳೆ ಬರ್ತಾ ಇದೆ...ಬನ್ನಿ ಬನ್ನಿ...’’ ಮುಸ್ಲಿಯಾರರು ಕರೆಯುತ್ತಿರುವ ಸದ್ದು.
ಸೂಜಿಯಂತೆ ಕೆನ್ನೆಯನ್ನು ಚುಚ್ಚುತ್ತಿರುವ ಪಿರಿ ಪಿರಿ ಮಳೆಯಲ್ಲಿ ಪಪ್ಪು ಒದ್ದೆಯಾಗುತ್ತಿದ್ದ. ಮುಸ್ಲಿಯಾರರು ಮತ್ತೊಮ್ಮೆ ಜೋರಾಗಿ ಕರೆದಾಗ ಎಚ್ಚರಗೊಂಡ. ಕಂಚಿಕಲ್ಲನ್ನು ಮತ್ತೊಮ್ಮೆ ದಿಟ್ಟಿಸಿ ಹಿಂದಕ್ಕೆ ಹೊರಟ. ‘‘ಮಸೀದಿಯೊಳಗೆ ಬನ್ನಿ....ಮಳೆ ನಿಂತ ಮೇಲೆ ಹೋಗುವಿರಂತೆ....’’ಮುಸ್ಲಿಯಾರರು ಜೋರಾಗಿ ಕರೆಯುತ್ತಿದ್ದರು.
ಪಪ್ಪು ಕೇಳಿಸಿಕೊಳ್ಳದವನಂತೆ, ಗೇಟು, ರಸ್ತೆ ದಾಟಿ ಮನೆಯ ಕಡೆಗೆ ಹೊರಟ.
(ಗುರುವಾರ ಸಂಚಿಕೆಗೆ)