ಸೈಬರ್ ದಾಳಿಗೊಳಗಾದ ಜೆಎನ್‌ಪಿಟಿ, ‘ಕ್ಲೀನ್‌ಅಪ್ ಮಾರ್ಶಲ್’ ಮುಂದುವರಿಕೆ!

Update: 2017-07-03 18:31 GMT

ಮುಂಬೈಯಲ್ಲಿ ಟೆಕ್ಸ್‌ಟೈಲ್ ಮ್ಯೂಸಿಯಂ
ಮುಂಬೈಯಲ್ಲಿ ಟೆಕ್ಸ್‌ಟೈಲ್ ಮ್ಯೂಸಿಯಂ ನಿರ್ಮಿಸಲು ಮುಂಬೈ ಮನಪಾ ಉತ್ಸುಕವಾಗಿದೆ. ಕಾಲಾಚೌಕಿಯ ಯುನೈಟೆಡ್ ಮಿಲ್ ಕ್ರಮಾಂಕ ಎರಡು ಮತ್ತು ಮೂರರ ಜಮೀನನ್ನು ಎಂ.ಟಿ.ಸಿ. ಮೂಲಕ ಮನಪಾಗೆ ಹಸ್ತಾಂತರಿಸಲಾಗುತ್ತದೆ. ಈ ಜಮೀನನ್ನು ಟೆಕ್ಸ್‌ಟೈಲ್ ಮ್ಯೂಸಿಯಂ ನಿರ್ಮಾಣಕ್ಕಾಗಿ ಮನಪಾ ಪಡೆದುಕೊಂಡಿದೆ. ಈ ಮ್ಯೂಸಿಯಂ ನಿರ್ಮಾಣದ ಸಲಹಾಕಾರರಾಗಿ ಜೆ.ಜೆ. ಕಾಲೇಜ್ ಆಫ್ ಆರ್ಕಿಟೆಕ್ಚರ್‌ನ್ನು ಆಯ್ಕೆ ಮಾಡಲಾಗಿದೆ. ಟೆಕ್ಸ್‌ಟೈಲ್ ಮ್ಯೂಸಿಯಂನ ರೂಪುರೇಷೆಗಳನ್ನು ಜೆ.ಜೆ. ಕಾಲೇಜ್ ತಯಾರಿಸುತ್ತದೆ. ಇದಕ್ಕಾಗಿ ಮುಂಬೈಯ ಮನಪಾ ಜೆ.ಜೆ. ಕಾಲೇಜ್‌ಗಾಗಿ 17 ಕೋಟಿ ರೂ. ನೀಡಲಿದೆ. ಈ ಟೆಕ್ಸ್‌ಟೈಲ್ ಮ್ಯೂಸಿಯಂನ ಮಾಧ್ಯಮದ ಮೂಲಕ ಬಟ್ಟೆ ಮಿಲ್‌ಗಳ ಮತ್ತು ಬಟ್ಟೆ ಕಾರ್ಮಿಕರ ಕೆಲಸಗಳ ಇತಿಹಾಸವನ್ನು ಪ್ರದರ್ಶಿಸಲಾಗುವುದು.

* * *

ಜೆಎನ್‌ಪಿಟಿಗೆ ಸೈಬರ್ ದಾಳಿ
ನವಿಮುಂಬೈ ಜೆಎನ್‌ಪಿಟಿ ಬಂದರು ಕ್ಷೇತ್ರದ ಕಂಪ್ಯೂಟರ್ ವ್ಯವಸ್ಥೆಯ ಮೇಲೆ ಸೈಬರ್ ದಾಳಿಯಾಗಿ ಇಲ್ಲಿನ ಕೆಲಸ ಕಾರ್ಯಗಳು ಅಸ್ತವ್ಯಸ್ತಗೊಂಡಿವೆ. ಸೈಬರ್ ದಾಳಿಯಿಂದಾಗಿ ಸುಮಾರು ನಾಲ್ಕೂವರೆ ಸಾವಿರ ಕಂಟೈನರ್‌ಗಳ ಲೋಡಿಂಗ್ ಅನ್‌ಲೋಡಿಂಗ್ ತಟಸ್ಥಗೊಂಡ ಘಟನೆ ನಡೆದಿದೆ. ಈ ಬಂದರು ಕ್ಷೇತ್ರಕ್ಕೆ ಬರುವ ಹಡಗುಗಳನ್ನು ಬೇರೆ ಬಂದರುಗಳತ್ತ ಕಳುಹಿಸಿಕೊಡಲಾಗಿದೆ.

ಅಧಿಕಾರಿಗಳು ತಿಳಿಸಿದಂತೆ ಜೆಎನ್‌ಪಿಟಿಯ 75 ಟರ್ಮಿನಲ್‌ಗಳು ಸೈಬರ್ ಹಲ್ಲೆಗೆ ಒಳಗಾಗಿವೆ. ಆದರೆ ಮುಂಬೈ ಪೋರ್ಟ್ ಟ್ರಸ್ಟ್ ಸೈಬರ್ ದಾಳಿಯಿಂದ ಸುರಕ್ಷಿತವಾಗಿದೆ.ಜೆಎನ್‌ಪಿಟಿಯ ಬಂದರು ಕ್ಷೇತ್ರದಲ್ಲಿ ವಿಶ್ವದಾದ್ಯಂತದ 75 ಟರ್ಮಿನಲ್‌ಗಳು ಕಾರ್ಯಾಚರಿಸುತ್ತಿವೆ. ಈ ಎಲ್ಲಾ ಟರ್ಮಿನಲ್‌ಗಳು ಸೈಬರ್ ದಾಳಿಯಿಂದಾಗಿ ನಲುಗಿವೆ. ತಜ್ಞರ ತಂಡ ಇದೀಗ ಸೈಬರ್ ದಾಳಿಯನ್ನು ಎದುರಿಸಲು ಶ್ರಮಿಸುತ್ತಿದೆ.

* * *

ಕ್ರಿಕೆಟ್ ಮ್ಯಾಚ್ ಸುರಕ್ಷೆಗಾಗಿ ಪೊಲೀಸರಿಗೆ ದೊಡ್ಡ ಮೊತ್ತ
ಕ್ರಿಕೆಟ್ ಪಂದ್ಯಾಟಗಳ ಸುರಕ್ಷಾ ಶುಲ್ಕವನ್ನು ಮುಂದಿಟ್ಟು ಗೃಹ ವಿಭಾಗ ಮತ್ತು ಮ್ಯಾಚ್ ಆಯೋಜಕರ ನಡುವೆ ನಡೆಯುತ್ತಿರುವ ವಿವಾದಕ್ಕೆ ಈಗ ಪರಿಹಾರ ದೊರೆತಿದೆ. ಗೃಹ ವಿಭಾಗವು ಕ್ರಿಕೆಟ್ ಪಂದ್ಯಾಟಗಳಲ್ಲಿ ನೀಡುವ ಪೊಲೀಸ್ ಸುರಕ್ಷೆಯ ಶುಲ್ಕ ದರವನ್ನು ನಿಗದಿಗೊಳಿಸಿದೆ. ಈಗ ಪಂದ್ಯಾಟದ ಆಯೋಜಕರು ಪೊಲೀಸ್ ಸುರಕ್ಷೆಗಾಗಿ 38.50 ಲಕ್ಷ ರೂಪಾಯಿಯಿಂದ 66 ಲಕ್ಷ ರೂಪಾಯಿ ತನಕ ಸಲ್ಲಿಸ ಬೇಕಾಗುತ್ತದೆ. ಅಲ್ಲದೆ ಬೆದರಿಕೆ ಕರೆಗಳು ಬಂದರೆ ಅಥವಾ ಇನ್ನಿತರ ಆತಂಕದ ಪರಿಸ್ಥಿತಿಯಲ್ಲಿ ಹೆಚ್ಚಿನ ಸುರಕ್ಷೆ ಬೇಕಿದ್ದರೆ ಹೆಚ್ಚುವರಿ ಶೇ. 25 ಹೆಚ್ಚಿನ ಮೊತ್ತವನ್ನು ಸಲ್ಲಿಸಬೇಕಾಗುವುದು.

ಮುಂಬೈಯಲ್ಲಿ ಟಿ-20, ಮತ್ತು ವನ್-ಡೇ ಕ್ರಿಕೆಟ್ ಮ್ಯಾಚ್‌ಗಾಗಿ 66 ಲಕ್ಷ ರೂಪಾಯಿ, ಟೆಸ್ಟ್ ಪಂದ್ಯಕ್ಕಾಗಿ 55 ಲಕ್ಷ ರೂಪಾಯಿ ಗೃಹವಿಭಾಗಕ್ಕೆ ಕಟ್ಟಬೇಕಾಗುವುದು.

ಹಾಗೆಯೇ ನವಿಮುಂಬೈ, ಪುಣೆ, ನಾಗ್‌ಪುರಗಳಲ್ಲಿ ಟಿ-20 ಮ್ಯಾಚ್, ವನ್-ಡೇ ಮ್ಯಾಚ್‌ಗಾಗಿ 44 ಲಕ್ಷ ರೂಪಾಯಿ, ಟೆಸ್ಟ್ ಮ್ಯಾಚ್‌ಗಾಗಿ 38 ಲಕ್ಷದ 50 ಸಾವಿರ ರೂ. ಮ್ಯಾಚ್ ಆಯೋಜಕರು ಪೊಲೀಸ್ ಸುರಕ್ಷೆಗಾಗಿ ಕಟ್ಟಬೇಕಾಗುತ್ತದೆ.

* * *

ಹಂದಿಜ್ವರ ನಿಯಂತ್ರಣಕ್ಕೆ ರಣನೀತಿ
ರಾಜ್ಯದಲ್ಲಿ ತೀವ್ರಗತಿಯಲ್ಲಿ ಹರಡುತ್ತಿರುವ ಹಂದಿಜ್ವರ ಹಾಗೂ ಮಳೆಗಾಲದ ಸಾಂಕ್ರಾಮಿಕ ರೋಗಗಳನ್ನು ಎದುರಿಸಲು ಸಶಕ್ತ ಯೋಜನೆಗಳನ್ನು ಜಾರಿಗೆ ತರಲು ಸರಕಾರ ನಿಶ್ಚಯಿಸಿದೆ. ಆರೋಗ್ಯ ಮಂತ್ರಿ ಡಾ. ದೀಪಕ್ ಸಾವಂತ್ ಸಾಂಕ್ರಾಮಿಕ ರೋಗ ನಿಯಂತ್ರಣ ಸಮಿತಿಯ ಉನ್ನತಾಧಿಕಾರಿಗಳ ಒಂದು ಬೈಠಕ್ ಕರೆದಿದ್ದಾರೆ. ಹಂದಿಜ್ವರ, ಡೆಂಗ್, ಲೆಪ್ಟೋಸ್ಪೈರೋಸಿಸ್‌ನಂತಹ ಸಾಂಕ್ರಾಮಿಕ ರೋಗಗಳನ್ನು ಎದುರಿಸಲು ರಾಜ್ಯಾದ್ಯಂತ ವಿಶೇಷ ಅಭಿಯಾನ ಶುರುಮಾಡಲಾಗಿದೆ. ಜುಲೈ ತಿಂಗಳಲ್ಲಿ ರೋಗ ನಿರೋಧಕ ಲಸಿಕೆಯ ಅಭಿಯಾನ ಇನ್ನಷ್ಟು ತೀವ್ರಗೊಳಿಸಲಾಗುತ್ತಿದೆ.

ರಾಜ್ಯದಲ್ಲಿ ಹಂದಿಜ್ವರದ ಸ್ಯಾಂಪಲ್‌ನ ತಪಾಸಣೆಗಾಗಿ ನಾಲ್ಕು ಸರಕಾರಿ ಪ್ರಯೋಗಶಾಲೆಗಳು ಕಾರ್ಯನಿರತವಾಗಿದೆ. ಇಲ್ಲಿ ಉಚಿತವಾಗಿ ರಕ್ತ ಸ್ಯಾಂಪಲ್ ತಪಾಸಣೆ ನಡೆಸಲಾಗುತ್ತದೆ. ಇದಲ್ಲದೆ ಸರಕಾರವು 17 ಖಾಸಗಿ ಪ್ರಯೋಗ ಶಾಲೆಗಳಿಗೆ ಮಾನ್ಯತೆ ನೀಡಿದೆ. ಅಗತ್ಯ ಬಿದ್ದರೆ ಇನ್ನಷ್ಟು ಖಾಸಗಿ ಪ್ರಯೋಗ ಶಾಲೆಗಳಿಗೆ ಹಂದಿಜ್ವರದ ಸ್ಯಾಂಪಲ್ ತಪಾಸಣೆಗಾಗಿ ಮಾನ್ಯತೆ ನೀಡಲು ತಜ್ಞರ ಸಮಿತಿ ರಚಿಸಲಾಗಿದೆ. ರಾಜ್ಯದಲ್ಲಿ ಹಂದಿಜ್ವರದಿಂದ ಈ ತನಕ 261 ರೋಗಿಗಳು ಸಾವನ್ನಪ್ಪಿದ್ದಾರೆ. ಸರಕಾರಿ ಅಂಕಿ ಅಂಶದ ಪ್ರಕಾರ ಜನವರಿ 1ರಿಂದ 27 ಜೂನ್ ತನಕ 7,581 ಮಂದಿ ಹಂದಿಜ್ವರದ ಲಕ್ಷಣಗಳಿಗಾಗಿ ತಪಾಸಣೆ ಮಾಡಿಸಿಕೊಂಡಿದ್ದು, ಇವರಲ್ಲಿ 1,720 ವ್ಯಕ್ತಿಗಳು ಹಂದಿಜ್ವರಕ್ಕೆ ಒಳಗಾಗಿದ್ದರು.
* * *

ಜೈಲುಗಳ ಸ್ಥಿತಿಗೆ ಹೈಕೋರ್ಟ್‌ನಿಂದ ಸರಕಾರಕ್ಕೆ ಛೀಮಾರಿ

ಕಳೆದ ಮಾರ್ಚ್ 2 ರಂದು ಬಾಂಬೆ ಹೈಕೋರ್ಟ್ ಮುಂಬೈ ಸಹಿತ ಮಹಾರಾಷ್ಟ್ರದ ಜೈಲುಗಳ ಸ್ಥಿತಿಯನ್ನು ಸುಧಾರಣೆ ಮಾಡಲು ಸರಕಾರಕ್ಕೆ ಆದೇಶಿಸಿತ್ತು. ಆದರೆ ನಾಲ್ಕು ತಿಂಗಳು ಕಳೆದರೂ ಈ ಬಗ್ಗೆ ಸರಕಾರ ಸಮರ್ಪಕ ಹೆಜ್ಜೆ ಇರಿಸಿಲ್ಲವೆಂದು ಹೈಕೋರ್ಟ್ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಅಂದು ಸರಕಾರಕ್ಕೆ ಆರು ತಿಂಗಳ ಗಡುವನ್ನು ಹೈಕೋರ್ಟ್ ನೀಡಿತ್ತು. ಆದರೆ ಸರಕಾರ ಇನ್ನುಳಿದ ಎರಡು ತಿಂಗಳಲ್ಲೂ ಆಶಾದಾಯಕ ಹೆಜ್ಜೆ ಇರಿಸುವ ಲಕ್ಷಣಗಳು ಕಾಣಿಸುತ್ತಿಲ್ಲ ಎಂದು ಸರಕಾರಕ್ಕೆ ಹೈಕೋರ್ಟ್ ಎಚ್ಚರಿಕೆ ನೀಡಿದೆ. ನ್ಯಾಯಾಧೀಶ ಎ.ಎಸ್. ಓಕ್ ಮತ್ತು ನ್ಯಾಯಾಧೀಶ ಕಂಕನ್‌ವಾಡಿ ಅವರ ಪೀಠವು ಸಿವಿಲ್ ಸೊಸೈಟಿ ಜನ್ ಅದಾಲತ್ ದಾಖಲಿಸಿದ ಜನಹಿತ ಅರ್ಜಿಯನ್ನು ವಿಚಾರಣೆ ನಡೆಸಿ ಮಾರ್ಚ್ 2ರಂದು ಸರಕಾರಕ್ಕೆ ಜೈಲುಗಳ ಈಗಿನ ಸ್ಥಿತಿ ಸುಧಾರಿಸುವಂತೆ ಹೇಳಿದ್ದು ಆರು ತಿಂಗಳ ಗಡು ವಿಧಿಸಿದ್ದರು. ಇದೀಗ ಮುಂದಿನ ವಿಚಾರಣೆ ಜುಲೈ 13ರಂದು ನಡೆಯಲಿದೆ.

ಅರ್ಥರ್ ರೋಡ್ ಜೈಲ್ ಮತ್ತು ಪುಣೆಯ ಯೆರವಾಡ ಜೈಲ್‌ನಲ್ಲಿ ಹೆಚ್ಚಿದ ಕೈದಿಗಳ ಸಂಖ್ಯೆಯನ್ನು ಮುಂದಿಟ್ಟು ಮುಂಬೈ ಮತ್ತು ಪುಣೆಯಲ್ಲಿ ಹೆಚ್ಚುವರಿ ಜೈಲ್ ನಿರ್ಮಾಣಕ್ಕೆ ಹೈಕೋರ್ಟ್ ಹೇಳಿತ್ತು ಹಾಗೂ ಇದಕ್ಕಾಗಿ ಒಂದು ಸಮಿತಿಯನ್ನು ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರ ನೇತೃತ್ವ ಹಾಗೂ ಸೂಕ್ತ ತಜ್ಞರನ್ನು ನಿಯುಕ್ತಿಗೊಳಿಸಲು ಸೂಚಿಸಿತ್ತು.
* * *

ವಿವಾದಿತ ‘ಕ್ಲೀನ್‌ಅಪ್ ಮಾರ್ಶಲ್’ ಯೋಜನೆ ಮತ್ತೆ ಜಾರಿ!
ಕಳೆದ ಒಂದು ವರ್ಷದಿಂದ ಅನೇಕ ಬಾರಿ ವಿವಾದಗಳನ್ನು ಸೃಷ್ಟಿಸಿದ ಕ್ಲೀನ್ ಅಪ್ ಮಾರ್ಶಲ್‌ಗೆ ಮುಂಬೈಯನ್ನು ಸ್ವಚ್ಛವಾಗಿರಿಸುವ ಜವಾಬ್ದಾರಿಯನ್ನು ಮುಂದೆಯೂ ನೀಡುವ ತಯಾರಿ ಮನಪಾ ನಡೆಸಿದೆ ಹಾಗೂ ಈ ವಿಷಯವಾಗಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲು ತಯಾರಿ ನಡೆಸಿದೆ. ಜುಲೈ ಮೊದಲ ವಾರದಲ್ಲಿ ಹಿಂದಿನ ಒಪ್ಪಂದ ಸಮಾಪ್ತಿಯಾಗಲಿದೆ. ಮುಂದಿನ ಟೆಂಡರ್ ಪ್ರಕ್ರಿಯೆಗೆ 20 ದಿನಗಳು ಬೇಕಾಗುವುದು.

ಕಳೆದ ಒಂದು ವರ್ಷದಿಂದ ಈ ಕ್ಲೀನ್‌ಅಪ್ ಮಾರ್ಶಲ್‌ಗಳು ರಸ್ತೆಯಲ್ಲಿ ಉಗುಳಿದವರನ್ನು ಮುಂದಿಟ್ಟು ಅಕ್ರಮ ವಸೂಲಿ ಮಾಡಿದ, ನಿಯಮಗಳನ್ನು ಉಲ್ಲಂಘಿಸಿದ ಆರೋಪಗಳನ್ನು ಎದುರಿಸಿದ್ದರು. ಇವರ ಕೆಲಸವೇ ವಿವಾದದ್ದು. ಹಾಗಾಗಿ ಕ್ಲೀನ್ ಅಪ್ ಮಾರ್ಶಲ್‌ಗಳ ಕೆಲಸ ಮುಂದೆಯೂ ಇರುತ್ತದೆ ಎನ್ನುತ್ತಾರೆ ತ್ಯಾಜ್ಯ ವಿಭಾಗದ ಅಧಿಕಾರಿಗಳು.

ಹಿಂದಿನ ಬಾರಿ ಈ ಯೋಜನೆಯಲ್ಲಿ 753 ಕ್ಲೀನ್ ಅಪ್ ಮಾರ್ಶಲ್‌ಗಳನ್ನು 24 ವಾರ್ಡ್‌ಗಳಲ್ಲಿ ನಿಯುಕ್ತಿಗೊಳಿಸಲಾಗಿತ್ತು. ಆದರೆ ಡೊಂಗ್ರಿ ಮಸೀದಿ ಇರುವ ಬಿ ವಾರ್ಡ್‌ನಲ್ಲಿ ಇಂದಿನ ತನಕವೂ ಮಾರ್ಶಲ್‌ಗಳು ಡ್ಯೂಟಿಗೆ ಬರಲೇ ಇಲ್ಲ!

ಅಧಿಕಾರಿಗಳ ಪ್ರಕಾರ ಈ ಯೋಜನೆಯಲ್ಲಿ ಸುಮಾರು 9 ಕೋಟಿ ರೂಪಾಯಿ ಸಂಗ್ರಹಿಸಲಾಗಿದೆಯಂತೆ. ‘‘ಹಣ ಸಂಗ್ರಹಿಸುವ ಉದ್ದೇಶಕ್ಕಾಗಿ ಅಲ್ಲ. ಮುಂಬೈ ಸ್ವಚ್ಛ ಇರಲಿ ಎಂದು ಇವರನ್ನು ನಿಯುಕ್ತಿಗೊಳಿಸಲಾಗಿದೆ’’ ಎನ್ನುತ್ತಾರೆ ಮನಪಾ ಅಧಿಕಾರಿಗಳು. ರಸ್ತೆಗಳಲ್ಲಿ ಕೊಳಕು ಮಾಡುವವರಿಂದ 200 ರೂಪಾಯಿ ವಸೂಲಿ ಮಾಡಿದರೆ ಇದರಲ್ಲಿ 50 ಪ್ರತಿಶತ ಹಣ ಮನಪಾಕ್ಕೆ ಹೋಗುತ್ತದೆ. 50 ಪ್ರತಿಶತ ಏಜನ್ಸಿಗಳಿಗೆ ಸಿಗುತ್ತದೆ.

ಆದರೆ ಈ ಸ್ಕೀಮ್ ಸಂಪೂರ್ಣ ವಿಫಲವಾಗಿದೆ. ಇದರಲ್ಲಿ ನಿವೃತ್ತ ಸೈನಿಕರನ್ನು ನೇಮಿಸಿಕೊಳ್ಳುವ ಗುರಿ ಇತ್ತು. ಆದರೆ ಏಜನ್ಸಿಗಳು ಯಾರ್ಯಾರನ್ನೋ ನೇಮಿಸಿಕೊಂಡಿವೆ. ತಾವೇ ಶಿಸ್ತು ಇಲ್ಲದವರು ಇನ್ನೊಬ್ಬರಿಗೆ ಏನನ್ನು ಕಲಿಸಿಯಾರು? ಇದು ನಾಗರಿಕರ ಪ್ರಶ್ನೆ.
* * *

ಫಿಸಿಯೋಥೆರಪಿ ವಿಭಾಗ ನಿಷ್ಕ್ರಿಯ
ಮುಂಬೈ ಮಹಾನಗರ ಪಾಲಿಕೆ ಆಸ್ಪತ್ರೆಯ ಫಿಸಿಯೋಥೆರಪಿ ರೂಮ್ ಇದೀಗ ವಿವಾದ ಸೃಷ್ಟಿಸಿದೆ.

ಮುಲುಂಡ್‌ನ ವೀರ ಸಾವರ್ಕರ್ ಆಸ್ಪತ್ರೆಯಲ್ಲಿ ರೋಗಿಗಳ ಶುಶ್ರೂಷೆಗೆ ಫಿಸಿಯೋಥೆರಪಿ ವಿಭಾಗ ಇದೆ. ಆದರೆ ಡಾಕ್ಟರ್‌ಗಳು ಇಲ್ಲದ ಕಾರಣ ಇದು ಸಿಬ್ಬಂದಿಯ ಬಟ್ಟೆ ಬದಲಾವಣೆಯ ರೂಮ್ ಆಗಿದೆ. ಫಿಸಿಯೋಥೆರಪಿಗಾಗಿ ಈ ಆಸ್ಪತ್ರೆಗೆ ಬರುವ ರೋಗಿಗಳನ್ನು ಮನಪಾದ ಬೇರೆ ಆಸ್ಪತ್ರೆಗಳಿಗೆ ಕಳುಹಿಸಲಾಗುತ್ತದೆ.

ಈ ಆಸ್ಪತ್ರೆ ಮನಪಾ ಸ್ವಾಸ್ಥ ಸಮಿತಿಯ ಸದಸ್ಯ ನೀಲ್ ಸೋಮೈಯಾ ಇವರ ಮನೆಯ ಎದುರೇ ಇದೆ. ಆದರೂ ಇದು ಉಪಯೋಗಕ್ಕೆ ಬರುತ್ತಿಲ್ಲ. ಮೂಳೆ ರೋಗಿಗಳ ಹೊರತಾಗಿ ಇನ್ನಿತರ ಆರೋಗ್ಯ ತೊಂದರೆಗಳಿಗೂ ಫಿಸಿಯೋಥೆರಪಿಸ್ಟ್‌ನ ಅಗತ್ಯ ಇರುತ್ತದೆ. ಖಾಸಗಿ ಆಸ್ಪತ್ರೆಗಳಲ್ಲಿ ಇದಕ್ಕಾಗಿ ದೊಡ್ಡ ಮೊತ್ತ ನೀಡಬೇಕಾಗುತ್ತದೆ. ಆದರೆ ಸರಕಾರಿ ಆಸ್ಪತ್ರೆಗಳಲ್ಲಿ ಈ ಸೌಲಭ್ಯವಿಲ್ಲದೆ ರೋಗಿಗಳು ಪರದಾಟ ನಡೆಸುವಂತಾಗಿದೆ.
ಮುಲುಂಡ್ ವೀರಸಾವರ್ಕರ್ ಆಸ್ಪತ್ರೆಯ ಅಧಿಕಾರಿಗಳ ಪ್ರಕಾರ ಕಳೆದ ಒಂದು ವರ್ಷದಿಂದ ಫಿಸಿಯೋಥೆರಪಿಸ್ಟ್ ಇಲ್ಲದ ಕಾರಣ ಫಿಸಿಯೋಥೆರಪಿ ವಿಭಾಗ ಕಾರ್ಯಾಚರಿಸುತ್ತಿಲ್ಲ.
* * *

ಮೆಟ್ರೋ ಡಿಪೋ: 3,130 ವೃಕ್ಷಗಳ ಸಂಹಾರಕ್ಕೆ ರೆಡಿ
ಮುಂಬೈಯ ಆರೆಯಲ್ಲಿ ಮೆಟ್ರೋ ಡಿಪೋ ನಿರ್ಮಾಣಕ್ಕೆ ತೀವ್ರ ವಿರೋಧವಿದ್ದರೂ ಸರಕಾರ ಇಲ್ಲಿ ಮೆಟ್ರೋ ಡಿಪೋಗೆ ಹಠ ಹಿಡಿದಿದೆ. ಮುಂಬೈ ಮೆಟ್ರೋ ರೈಲ್ ಕಾರ್ಪೊರೇಶನ್ ಅಧಿಕಾರಿಗಳು ಮೊನ್ನೆ ಪತ್ರಿಕಾಗೋಷ್ಠಿ ಆಯೋಜಿಸಿದ್ದು ಮೆಟ್ರೋ ಕಾರ್‌ಶೆಡ್ ನಿರ್ಮಾಣಕ್ಕೆ ಕಂಪೆನಿಯನ್ನು ನಿಯುಕ್ತಿಗೊಳಿಸಲಾಗಿದೆ. ಕಾರ್‌ಶೆಡ್‌ಗಾಗಿ 3,130 ವೃಕ್ಷಗಳನ್ನು ಕಡಿಯಲು ಅನುಮತಿ ದೊರೆತಿದೆ ಎಂದು ಇಲ್ಲಿ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಸೆಪ್ಟಂಬರ್‌ನಿಂದ ಆರೆಯಲ್ಲಿ ಮೆಟ್ರೋ ಡಿಪೋ ನಿರ್ಮಾಣ ಕಾರ್ಯ ಆರಂಭಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಸ್ಯಾಮ್ ಬಿಲ್ಡ್‌ವೆಲ್ ಪ್ರೈ.ಲಿ. ಕಂಪೆನಿಗೆ ಮೆಟ್ರೋ ನಿರ್ಮಾಣದ ಕೆಲಸವನ್ನು ಒಪ್ಪಿಸಲಾಗಿದೆ. 

Writer - ಶ್ರೀನಿವಾಸ್ ಜೋಕಟ್ಟೆ

contributor

Editor - ಶ್ರೀನಿವಾಸ್ ಜೋಕಟ್ಟೆ

contributor

Similar News

ನಾಸ್ತಿಕ ಮದ