ಭವಿಷ್ಯದ ರಾಷ್ಟ್ರಪತಿ ಒತ್ತಡಗಳಿಗೆ ಮಣಿಯುವವರೇ?
ಬಿಜೆಪಿ ನೇತೃತ್ವದ ಎನ್‌ಡಿಎ ರಾಷ್ಟ್ರಪತಿ ಪದವಿಗೆ ರಾಮ್‌ನಾಥ್‌ಕೋವಿಂದ್‌ನ್ನು ಅಭ್ಯರ್ಥಿಯಾಗಿ ಘೋಷಿಸಿರುವುದರಿಂದ ಬಿಜೆಪಿಗೆ ಎರಡು ಲಾಭಗಳಿವೆ. ಒಂದೆಡೆ ಅದು ದಲಿತ ಹಿತಾಸಕ್ತಿಗಳ ಬಗ್ಗೆ ಬಾಯುಪಚಾರದ ಮಾತುಗಳನ್ನಾಡುತ್ತಲೇ ಮತ್ತೊಂದೆಡೆ ಹೆಚ್ಚೆಚ್ಚು ಅಧಿಕಾರವನ್ನು ಕೇಂದ್ರೀಕರಿಸಿಕೊಳ್ಳುವ ಅವಕಾಶವನ್ನು ದಕ್ಕಿಸಿಕೊಂಡಿದೆ. ಜುಲೈ 17ರಂದು ನಡೆಯುವ ರಾಷ್ಟ್ರಪತಿ ಚುನಾವಣೆಯ ಫಲಿತಾಂಶವೇನಾಗಬಹುದೆಂಬುದು ಹೆಚ್ಚೂ ಕಡಿಮೆ ಸ್ಪಷ್ಟ್ಟವಾಗಿಬಿಟ್ಟಿದೆ. ಬಿಜು ಜನತಾ ದಳ, ಜನತಾ ದಳ (ಯುನೈಟೆಡ್) ಮತ್ತು ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್)ನಂಥ ಪಕ್ಷಗಳನ್ನೂ ಒಳಗೊಂಡಂತೆ ಎನ್‌ಡಿಎಗೆ ಸೇರಿಲ್ಲದ ಇತರ ಹಲವಾರು ಪಕ್ಷಗಳು ಈಗಾಗಲೇ ರಾಮ್‌ನಾಥ್ ಕೋವಿಂದ್ ಅವರಿಗೆ ತಮ್ಮ ಬೆಂಬಲವನ್ನು ಘೋಷಿಸಿವೆ. ಹೀಗಾಗಿ ರಾಷ್ಟ್ರಪತಿಯನ್ನು ಚುನಾಯಿಸುವ ಮತಕ್ಷೇತ್ರದ ಶೇ.55ರಷ್ಟು ಮತಗಳನ್ನೂ ಕೋವಿಂದ್ ಅವರು ಪಡೆದುಕೊಳ್ಳುವ ನಿರೀಕ್ಷೆ ಇದೆ. ಆದ್ದರಿಂದ ಅವರೇ ಪ್ರಣವ್ ಮುಖರ್ಜಿ ಅವರ ಉತ್ತರಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ರಾಮ್‌ನಾಥ್ ಕೋವಿಂದ್‌ರನ್ನು ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಘೋಷಿಸುವ ಸಂದರ್ಭದಲ್ಲಿ ಎನ್‌ಡಿಎ ಮತ್ತು ಬಿಜೆಪಿಯ ಅಧ್ಯಕ್ಷರಾಗಿರುವ ಅಮಿತ್ ಶಾರವರು ಕೋವಿಂದ್‌ರ ಹಿನ್ನೆಲೆಗೆ ಒತ್ತು ಕೊಡುತ್ತಾ ‘‘ಬಡ ದಲಿತ ಕುಟುಂಬದಲ್ಲಿ ಹುಟ್ಟಿ ಕಷ್ಟಪಟ್ಟು ಮೇಲೆ ಬಂದವರು’’ ಎಂದು ಬಣ್ಣಿಸಿದರು. ನಿರೀಕ್ಷೆಯಂತೆ ಕೋವಿಂದ್‌ರ ದಲಿತ ಹಿನ್ನೆಲೆಯು ಸಾಕಷ್ಟು ಆಕರ್ಷಣೆ ಮತ್ತು ಚರ್ಚೆಯನ್ನು ಹುಟ್ಟುಹಾಕಿತು. ಆವರೆಗೆ ಗೋಪಾಲ ಕೃಷ್ಣ ಗಾಂಧಿಯವರನ್ನು ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿಸಲು ಒಪ್ಪಿಸುವ ಕುರಿತು ಅಳೆದು ಸುರಿದೂ ಲೆಕ್ಕ ಹಾಕುತ್ತಿದ್ದ ಬಹುಪಾಲು ಪ್ರತಿಪಕ್ಷಗಳು ಲೋಕಸಭೆಯ ಮಾಜಿ ಸಭಾಪತಿ ಮೀರಾ ಕುಮಾರ್ ಅವರನ್ನು ತಮ್ಮ ಅಭ್ಯರ್ಥಿಯನ್ನಾಗಿ ಘೋಷಿಸಿವೆ. ಆ ಮೂಲಕ ಈ ದೇಶದ ಸೇನಾಪಡೆಗಳ ಮತ್ತು ಪ್ರಭುತ್ವದ ಮುಖ್ಯಸ್ಥರ ಹುದ್ದೆಗೆ ಒಬ್ಬ ದಲಿತ ಪುರುಷ ಮತ್ತು ಒಬ್ಬ ದಲಿತ ಮಹಿಳೆಯ ನಡುವೆ ಸ್ಪರ್ಧೆ ನಡೆಯಲು ಕಾಂಗ್ರೆಸ್ ದಾರಿ ಮಾಡಿಕೊಟ್ಟಿದೆ.
ಬೆಳವಣಿಗೆಯಲ್ಲ್ಲಿ ಹಲವಾರು ಅಂಶಗಳು ಪಾತ್ರ ವಹಿಸಿವೆ. ಹೈದರಾಬಾದ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯಾಗಿದ್ದ ರೋಹಿತ್ ವೇಮುಲಾ ಅವರ ಅಸಹಜ ಸಾವು, ಗುಜರಾತಿನ ಉನಾದಲ್ಲಿ ನಾಲ್ವರು ದಲಿತರ ಮೇಲೆ ಗೋ-ರಕ್ಷಕರು ನಡೆಸಿದ ಹಲ್ಲೆ, ಉತ್ತರ ಪ್ರದೇಶದ ಸಹರಾನ್‌ಪುರ್‌ನಲ್ಲಿ ದಲಿತರ ಮೇಲೆ ನಡೆದ ಸರಣಿ ಹಲ್ಲೆಗಳನ್ನೂ ಒಳಗೊಂಡಂತೆ ಇತ್ತೀಚಿನ ದಿನಗಳಲ್ಲಿ ದಲಿತರ ಮೇಲೆ ನಡೆಯುತ್ತಿರುವ ದಾಳಿಗಳನ್ನು ನಿಲ್ಲಿಸಲು ಯಾವುದೇ ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳದಿರುವುದರಿಂದ ನರೇಂದ್ರ ಮೋದಿ ಸರಕಾರವು ಸಾಕಷ್ಟು ಟೀಕೆಗಳನ್ನು ಎದುರಿಸಿತ್ತು. ಕೋವಿಂದ್ ಅವರನ್ನು ರಾಷ್ಟ್ರಾಧ್ಯಕ್ಷ ಪದವಿಯ ಉಮೇದುವಾರರನ್ನಾಗಿ ಮಾಡಿರುವುದು ಮೇಲಿನ ಎಲ್ಲಾ ಘಟನೆಗಳಲ್ಲಿ ಬಿಜೆಪಿ ನಡೆದುಕೊಂಡ ರೀತಿಯನ್ನು ಮುಚ್ಚಿಹಾಕುವ ಒಂದು ಸಿನಿಕ ಪ್ರಯತ್ನವಾಗಿದೆ. ಕೋವಿಂದ್‌ರ ಉಮೇದುವಾರಿಕೆಯು ಬಿಜೆಪಿ ಮತ್ತು ಸಂಘಪರಿವಾರದ ಇನ್ನೂ ಹಲವಾರು ದೂರಗಾಮಿ ಯೋಜನೆಗಳನ್ನು ಜಾರಿಗೆ ತರಲು ಪೂರಕವಾಗಿದೆ. ಅವುಗಳಲ್ಲಿ ಪ್ರಮುಖವಾದದ್ದು ದಲಿತರ ಎಚ್ಚೆತ್ತ ರಾಜಕೀಯ ಪ್ರಜ್ಞೆಯನ್ನು ಭ್ರಷ್ಟಗೊಳಿಸುವುದು ಮತ್ತು ಅಂತರಾಳದಲ್ಲಿ ಬ್ರಾಹ್ಮಣವಾದವನ್ನು ಮತ್ತು ಜಾತಿ ವ್ಯವಸ್ಥೆಯನ್ನು ಎತ್ತಿಹಿಡಿಯುವ ಹಾಗೂ ಅಲ್ಪಸಂಖ್ಯಾತರ ಅತ್ಯಂತ ಕಡು ದ್ವೇಷಿಯಾದ ಸಂಘಪರಿವಾರ ಪ್ರಣೀತ ಏಕರೂಪಿ ಹಿಂದೂವಾದದೊಳಗೆ ದಲಿತರನ್ನು ಒಳಗೊಳ್ಳುವುದು; ಅಂಬೇಡ್ಕರ್ ಅವರ ಪರಂಪರೆಯನ್ನು ವಶಪಡಿಸಿಕೊಳ್ಳುವುದು; ಉತ್ತರ ಭಾರತದಲ್ಲಿ ದಲಿತರನ್ನು ಮತ್ತು ಇತರ ಹಿಂದುಳಿದ ವರ್ಗಗಳಲ್ಲಿ ವಿಭಜನೆ ತಂದು ಅವರನ್ನು ಇತರ ಪಕ್ಷಗಳ ಹಿಡಿತದಿಂದ ತಮ್ಮ ತೆಕ್ಕೆಗೆ ತಂದುಕೊಳ್ಳುವುದು. ಕೋವಿಂದ್‌ರ ಉಮೇದುವಾರಿಕೆಯು ವಿರೋಧ ಪಕ್ಷಗಳಲ್ಲಿರುವ ಒಡಕನ್ನೂ ಮತ್ತು ಅವರ ಪರಿಣಾಮ ಶೂನ್ಯ ರಾಜಕೀಯ ತಂತ್ರಗಾರಿಕೆಯ ನಿರರ್ಥಕತೆಯನ್ನೂ ಎತ್ತಿತೋರಿಸಿದೆ. ರಾಮ್‌ನಾಥ್ ಕೋವಿಂದ್‌ರ ಉಮೇದುವಾರಿಕೆಯ ಹಿಂದಿನ ಅಸ್ಮಿತೆಯ ರಾಜಕೀಯದ ಬಗ್ಗೆ ಮತ್ತು ಬಿಜೆಪಿಯ ಕುತಂತ್ರೀ ರಾಜಕಾರಣದ ಬಗ್ಗೆ ಸಾಕಷ್ಟು ವಿಶ್ಲೇಷಣೆ ಮಾಡಲಾಗಿದ್ದರೂ, ಕೋವಿಂದ್‌ರ ನಿರೀಕ್ಷಿತ ವಿಜಯದ ದೂರಗಾಮಿ ಪರಿಣಾಮಗಳ ಬಗ್ಗೆಯೂ ಸರಿಯಾದ ಅಂದಾಜು ಹೊಂದಿರಬೇಕಾದದ್ದು ಸಹ ಅಷ್ಟೇ ಮುಖ್ಯವಾಗಿದೆ.
1977ರಲ್ಲಿ ಜನತಾ ಪಕ್ಷವು ಚುನಾವಣೆಯಲ್ಲಿ ಗೆದ್ದ ನಂತರ ಪ್ರಧಾನಿಯಾದ ಮೊರಾರ್ಜಿ ದೇಸಾಯಿ ಅವರಿಗೆ ಕೋವಿಂದ್ ಅವರು ಆಪ್ತ ಕಾರ್ಯದರ್ಶಿಯಾಗಿದ್ದರು. 1980ರ ಚುನಾವಣೆಯಲ್ಲಿ ಇಂದಿರಾ ಗಾಂಧಿಯವರು ಗೆದ್ದು ಮತ್ತೆ ಅಧಿಕಾರಕ್ಕೆ ಮರಳಿದಾಗಲೂ ಕೋವಿಂದ್ ಅವರನ್ನು ಸುಪ್ರೀಂ ಕೋರ್ಟಿನಲ್ಲ್ಲಿ ಕೇಂದ್ರದ ವಕೀಲರನ್ನಾಗಿ ಉಳಿಸಿಕೊಳ್ಳಲಾಗಿತ್ತು. ಬಿಜೆಪಿಯ ಮೊದಮೊದಲ ದಲಿತ ಸದಸ್ಯರಲ್ಲಿ ಒಬ್ಬರಾಗಿದ್ದ ಕೋವಿಂದ್ ಅವರು (ಅವರು ಬಿಜೆಪಿಯನ್ನು ಸೇರಿಕೊಂಡಿದ್ದು 1991ರಲ್ಲಿ) ಪಕ್ಷದ ಹಲವಾರು ಪ್ರಮುಖ ಹುದ್ದೆಗಳನ್ನು ನಿರ್ವಹಿಸಿದ್ದಾರೆ-ಉತ್ತರ ಪ್ರದೇಶ ಘಟಕದ ಜಂಟಿ ಕಾರ್ಯದರ್ಶಿ, ಅದರ ಪರಿಶಿಷ್ಟ ಜಾತಿ ಮೋರ್ಚಾದ ಅಧ್ಯಕ್ಷ ಮತ್ತು ಪಕ್ಷದ ರಾಷ್ಟ್ರೀಯ ವಕ್ತಾರ...ಇತ್ಯಾದಿ. 1991ರಲ್ಲಿ ಅವರು ಉತ್ತರ ಪ್ರದೇಶದಿಂದ ಲೋಕಸಭೆಗೆ ಸ್ಪರ್ಧಿಸಿ ಸೋತಿದ್ದರು. ಉತ್ತರ ಪ್ರದೇಶದ ಠಾಕೂರ್ ಲಾಬಿಯೊಂದಿಗೆ ಅವರಿಗೆ ಅಂತಹ ಸಸ್ನೇಹ ಸಂಬಂಧವೇನೂ ಇರಲಿಲ್ಲವೆಂದೂ ಹೇಳಲಾಗುತ್ತದೆ. 1994 ಮತ್ತು 2006ರ ನಡುವೆ ಬಿಜೆಪಿಯು ಅವರನ್ನು ಎರಡು ಬಾರಿ ರಾಜ್ಯಸಭೆಗೆ ಆಯ್ಕೆ ಮಾಡಿ ಕಳಿಸಿತ್ತು. ಆ ಅವಧಿಯಲ್ಲಿ ಅವರು ಹಲವಾರು ಸಂಸದೀಯ ಸಮಿತಿಗಳ ಸದಸ್ಯರಾಗಿಯೂ ಕೆಲಸ ನಿರ್ವಹಿಸಿದ್ದರು. ಅಟಲ ಬಿಹಾರಿ ವಾಜಪೇಯಿ ಸರಕಾರದ ಅವಧಿಯಲ್ಲಿ ಅವರು ವಿಶ್ವಸಂಸ್ಥೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. 2015ರಲ್ಲಿ ಅವರನ್ನು ಬಿಹಾರದ ರಾಜ್ಯಪಾಲರನ್ನಾಗಿ ನೇಮಿಸಲಾಯಿತು.
ಭಾರತವು ಹಲವು ಬಗೆಯ ರಾಷ್ಟ್ರಪತಿಗಳನ್ನು ಕಂಡಿದೆ. ಫಕ್ರುದ್ದೀನ್ ಅಲಿ ಅಹಮದ್ ಅವರು ಇಂದಿರಾ ಗಾಂಧಿಯವರ ತೀರ್ಮಾನಕ್ಕೆ ಮಣಿದು ದೇಶದ ಮೇಲೆ ತುರ್ತುಸ್ಥಿತಿಯನ್ನು ಹೇರಿ ಸಂವಿಧಾನವನ್ನು ತಾತ್ಕಾಲಿಕವಾಗಿ ಅಮಾನತ್ತಿನಲ್ಲಿಟ್ಟ ಕುಖ್ಯಾತಿಯನ್ನು ಪಡೆದಿದ್ದರು. ಪ್ರಾರಂಭದಲ್ಲಿ ಒತ್ತಡಕ್ಕೆ ಮಣಿಯುವ ರಾಷ್ಟ್ರಪತಿ ಎಂದೇ ಪರಿಗಣಿಸಲಾಗಿದ್ದ ಗ್ಯಾನಿ ಜೈಲ್‌ಸಿಂಗ್ ಅವರು ಹಲವಾರು ಸಂದರ್ಭಗಳಲ್ಲಿ ಅಂದಿನ ಪ್ರಧಾನಿ ರಾಜೀವ್ ಗಾಂಧಿಯವರ ನಿರ್ಣಯಗಳಿಗೆ ವಿರೋಧ ಒಡ್ಡಿದ್ದರು. ಅಷ್ಟು ಮಾತ್ರವಲ್ಲ. ರಾಷ್ಟ್ರಪತಿ ಕಚೇರಿಯ ಮೇಲೆ ಸರಕಾರವು ಗೂಢಚರ್ಯೆ ನಡೆಸುತ್ತಿದೆ ಎಂಬ ವಿವಾದವು ಹತ್ತಿಕೊಂಡ ಸಂದರ್ಭದಲ್ಲಿ ರಾಜೀವ್ ಗಾಂಧಿಯವರನ್ನು ಹುದ್ದೆಯಿಂದ ವಜಾಮಾಡುವ ಬೆದರಿಕೆಯನ್ನೂ ಹಾಕುವಂಥ ನಾಟಕೀಯ ಬೆಳವಣಿಗೆಗಳು ನಡೆದಿದ್ದವು. ತೀರಾ ಇತ್ತೀಚೆಗೆ ಕೆ.ಆರ್. ನಾರಾಯಣನ್ ಅವರು ಸ್ವತಂತ್ರ ಭಾರತದ ವೈಫಲ್ಯದ ಬಗ್ಗೆ ವಿಶ್ಲೇಷಣೆ ನಡೆಸಿ ಭಾರತದ ಸಂವಿಧಾನಕ್ಕೆ ಅಂಬೇಡ್ಕರ್ ಕೊಡುಗೆಯ ಮಹತ್ವವನ್ನು ಎತ್ತಿ ಹಿಡಿದ ಪ್ರಖ್ಯಾತಿಯನ್ನು ಪಡೆದಿದ್ದರು. ಇದು ಅಂದಿನ ವಾಜಪೇಯಿ ಸರಕಾರವು ಹೊಂದಿದ್ದ ಹಲವಾರು ನಿಲುವುಗಳಿಗೆ ವ್ಯತಿರಿಕ್ತವಾಗಿತ್ತು. ಇತ್ತೀಚಿನ ಇಬ್ಬರು ರಾಷ್ಟ್ರಪತಿಗಳಾದ ಪ್ರತಿಭಾ ದೇವಿಸಿಂಗ್ ಪಾಟೀಲ್ ಮತ್ತು ಪ್ರಣವ್ ಮುಖರ್ಜಿಯವರ ಹಿನ್ನೆಲೆ, ಹುದ್ದೆಯನ್ನು ನಿರ್ವಹಿಸುವ ಶೈಲಿಗಳು ಭಿನ್ನಭಿನ್ನವಾಗಿದ್ದರೂ ಅವರಿಬ್ಬರು ಎಂದಿಗೂ ಆಳುವ ಸರಕಾರಗಳನ್ನು ಎದಿರು ಹಾಕಿಕೊಳ್ಳಲೇ ಇಲ್ಲ; ಮುಖರ್ಜಿಯವರು ಧರ್ಮ ನಿರಪೇಕ್ಷತೆ ಮತ್ತು ಸ್ವಾತಂತ್ರ್ಯಗಳ ಬಗ್ಗೆ ಆಗಾಗ ಟಿಪ್ಪಣಿಗಳನ್ನು ಮಾಡುತ್ತಿದ್ದರೂ ಸರಕಾರದ ಎಲ್ಲಾ ತೀರ್ಮಾನಗಳಿಗೂ ಸಮ್ಮತಿಯನ್ನು ನೀಡುತ್ತಿದ್ದರು. ಮಾತ್ರವಲ್ಲ. ಭೂ ಸ್ವಾಧೀನ ಕಾಯ್ದೆಯಂಥ ಸರಕಾರದ ಹಲವಾರು ವಿವಾದಾಸ್ಪದ ಸುಗ್ರೀವಾಜ್ಞೆಗಳಿಗೂ ಸರಕಾರಿ ಆದೇಶಗಳಿಗೂ ಒಪ್ಪಿಗೆ ನೀಡಿದ್ದರು.
ಕೋವಿಂದ್ ಅವರು ಆಳುವ ಸರಕಾರಗಳ ಆಸಕ್ತಿಗಳನ್ನು ಯಾವುದೇ ಪರಿಶೀಲನೆಗೆ ಒಳಪಡಿಸದೆ ಕುರುಡಾಗಿ ಒಪ್ಪಿಕೊಳ್ಳುವಷ್ಟು ಮಣಿಯು ತ್ತಾರೆಯೇ? ಈ ಪ್ರಶ್ನೆಗೆ ಕಾಲವೇ ಉತ್ತರ ಕೊಡಬೇಕೆನ್ನುವುದು ನಿಜವಾ ದರೂ ಅವರ ರಾಜಕೀಯವು ಆಳುವ ಸರಕಾರದ ರಾಜಕೀಯಕ್ಕಿಂತ ಭಿನ್ನವಾಗಿರುತ್ತದೆಂದು ನಂಬಲು ಯಾವುದೇ ಕಾರಣಗಳಿಲ್ಲ. 320 ಎಕರೆ ವಿಸ್ತೀರ್ಣದಲ್ಲಿ 340 ಕೊಠಡಿಗಳನ್ನು ಹೊಂದಿದ್ದು, ವಿಶ್ವದ ಅತೀ ದೊಡ್ಡ ನಿವಾಸವೆಂದು ಕರೆಸಿಕೊಳ್ಳುವ ರಾಷ್ಟ್ರಪತಿ ಭವನದಲ್ಲಿ ವಾಸಿಸಲಿರುವ ಕೋವಿಂದ್‌ರ ಅವಧಿಯನ್ನು ಈ ಹಿನ್ನೆಲೆಯಲ್ಲೇ ವಿಶ್ಲೇಷಿಸಬೇಕು. ಈವರೆಗೆ ಅವರೊಬ್ಬ ಆಕ್ರಮಣಶೀಲ ಹೋರಾಟಗಾರರೆಂದೇನೂ ಗುರುತಿಸಿಕೊಂಡಿಲ್ಲ. ಮೋದಿ ಸರಕಾರಕ್ಕೆ ಪ್ರಜಾತಂತ್ರದ ಸಂಸ್ಥೆಗಳ ಬಗ್ಗೆ ಅಂಥಾ ಕಕ್ಕುಲಾತಿಯೇನೂ ಇಲ್ಲ. ಹೀಗಾಗಿ ನಿಷ್ಠೆ ಮತ್ತು ಅಧೀನತೆ ಇರುವವರನ್ನೇ ಮೋದಿಯವರು ಆಯ್ಕೆ ಮಾಡಿರುವುದು ಯಾರಿಗೂ ಆಶ್ಚರ್ಯ ತರಬೇಕಿಲ್ಲ. ಇತ್ತೀಚೆಗೆ ಸರಕಾರವು ಮಾಡಿರುವ ಹಲವು ನೇಮಕಾತಿಗಳು ಇದನ್ನು ಸ್ಪಷ್ಟವಾಗಿ ಸಾಬೀತುಪಡಿಸುತ್ತವೆ. ಕೋವಿಂದ್ ಅವರು ಎಂತಹ ರಾಷ್ಟ್ರಪತಿಗಳಾಗಬಹುದು? ತಮ್ಮ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಅವರು ಮಾಡಿರುವ ಕೆಲವು ಹೇಳಿಕೆಗಳು ಸಂವಿಧಾನದ ಬಗ್ಗೆ ಅವರ ನಿಲುವೇನೆಂದು ತಿಳಿಸುತ್ತದೆ. ಒಬ್ಬ ರಾಷ್ಟ್ರಪತಿಗೆ ಸಂವಿಧಾನವೇ ಪರಮೋಚ್ಚವಾದದ್ದು. ಅದೇ ಅವರಿಗೆ ಗೀತೆ, ರಾಮಾಯಣ, ಬೈಬಲ್ ಮತ್ತು ಕುರ್‌ಆನ್ ಎಂದು ಅವರು ಹೇಳಿದ್ದಾರೆಂದು ವರದಿಯಾಗಿದೆ. ತಮ್ಮ ಪ್ರತಿಪಾದನೆಗೆ ಧರ್ಮಗ್ರಂಥಗಳನ್ನು ಉಲ್ಲೇಖಿಸಿರುವುದು ಕಳವಳ ಹುಟ್ಟಿಸುವ ಸಂಗತಿಯಾಗಿದೆ. ಸಂವಿಧಾನವು ದೈವದತ್ತವಾದುದಲ್ಲ. ಅದು ನೈತಿಕತೆ, ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಮಾನವಹಕ್ಕುಗಳ ತತ್ವದ ನೆಲೆಯಲ್ಲಿ ರೂಪುಗೊಂಡಿರುವ ಒಂದು ಜೀವಂತ ದಸ್ತಾವೇಜಾಗಿದೆ. ಒಂದು ಗಣತಂತ್ರಾತ್ಮಕ ಪ್ರಜಾಸತ್ತೆಯಲ್ಲಿ ಈ ಎಲ್ಲಾ ಮೌಲ್ಯಗಳು ನಿರಂತರ ಅನುಸಂಧಾನ ನಡೆಸುತ್ತಾ ಪ್ರತಿಪಾದನೆಗೊಳ್ಳುತ್ತಿರುತ್ತವೆ. ಒಂದು ಪ್ರಜಾತಂತ್ರದಲ್ಲಿ ಸಂವಿಧಾನದ ಪಾತ್ರದ ಬಗ್ಗೆ ಕೋವಿಂದ್ ಅವರ ನಿಲುವುಗಳು ಬಹುಸಂಖ್ಯಾತರ ಮೇಲಾಳ್ವಿಕೆಯನ್ನು ಅನುವು ಮಾಡಿಕೊಡುವಂಥ ರಾಷ್ಟ್ರಪ್ರಭುತ್ವಕ್ಕೆ ಸಮರ್ಥನೆ ಒದಗಿಸುತ್ತದೆಯೇ? ಕೋವಿಂದ್ ಅವರ ಇತಿಹಾಸವು ಅವರಿಗೆ ದೇಶದ ರಾಜಕೀಯದಲ್ಲಿ ಹೆಚ್ಚುತ್ತಿರುವ ಕೇಂದ್ರೀಕರಣದ ಮತ್ತು ಪ್ರಜಾಪ್ರಭುತ್ವ ವಿರೋಧಿ ಧೋರಣೆಗಳನ್ನು ಪ್ರತಿರೋಧಿಸುವ ಉದ್ದೇಶವಾಗಲೀ, ಸಾಮರ್ಥ್ಯವಾಗಲೀ ಇದೆಯೆಂದು ಭಾವಿಸುವ ಯಾವ ಪುರಾವೆಯನ್ನೂ ಒದಗಿಸುವುದಿಲ್ಲ.
ಒಂದು ಪ್ರಜಾತಂತ್ರದಲ್ಲಿ ಸಂವಿಧಾನದ ಪಾತ್ರದ ಬಗ್ಗೆ ಕೋವಿಂದ್ ಅವರ ನಿಲುವುಗಳು ಬಹುಸಂಖ್ಯಾತರ ಮೇಲಾಳ್ವಿಕೆಯನ್ನು ಅನುವು ಮಾಡಿಕೊಡುವಂಥ ರಾಷ್ಟ್ರಪ್ರಭುತ್ವಕ್ಕೆ ಸಮರ್ಥನೆ ಒದಗಿಸುತ್ತದೆಯೇ? ಕೋವಿಂದ್ ಅವರ ಇತಿಹಾಸವು ಅವರಿಗೆ ದೇಶದ ರಾಜಕೀಯದಲ್ಲಿ ಹೆಚ್ಚುತ್ತಿರುವ ಕೇಂದ್ರೀಕರಣದ ಮತ್ತು ಪ್ರಜಾಪ್ರಭುತ್ವ ವಿರೋಧಿ ಧೋರಣೆಗಳನ್ನು ಪ್ರತಿರೋಧಿಸುವ ಉದ್ದೇಶವಾಗಲೀ, ಸಾಮರ್ಥ್ಯವಾಗಲೀ ಇದೆಯೆಂದು ಭಾವಿಸುವ ಯಾವ ಪುರಾವೆಯನ್ನೂ ಒದಗಿಸುವುದಿಲ್ಲ.
ಕೃಪೆ Economic and Political Weekly