ಹಿಂದೂ ಸ್ತ್ರೀಯರ ಉನ್ನತಿ ಮತ್ತು ಅವನತಿ: ಯಾರು ಹೊಣೆಗಾರರು?

Update: 2017-08-03 18:33 GMT

‘ಮಹಾಬೋಧಿ’ ನಿಯತಕಾಲಿಕೆಯ ಮೇ -ಜೂನ್ 1951ರ ಸಂಚಿಕೆಯಲ್ಲಿ ಪ್ರಕಟಗೊಂಡ ಡಾ. ಬಾಬಾಸಾಹೇಬ ಅಂಬೇಡ್ಕರ್‌ರ ‘‘the rise and fall of the hindu women: who was responsible for it?’’ ಎಂಬ ಶೀರ್ಷಿಕೆಯ ಇಂಗ್ಲಿಷ್ ಲೇಖನದ ಅನುವಾದವಿದು


ಭಾಗ-7

ಬ್ರಾಹ್ಮಣರ ತತ್ವಜ್ಞಾನದ ಪ್ರಕಾರ ಯಜ್ಞವನ್ನು ಮಾಡುವುದು ಧರ್ಮದ ಮೂಲವೆನ್ನಿಸಿದೆ. ಮನು ಸ್ತ್ರೀಯರನ್ನು ಯಜ್ಞಮಾಡದಂತೆ ತಡೆಯುತ್ತಾನೆ. ಅವನು ಹೀಗೆಂದು ಕಾನೂನನ್ನು ಮಾಡಿರುವನು:

9.26-37 ಸ್ತ್ರೀಯು, ವೇದಗಳು ನಿರ್ಧರಿಸಿದ ಯಜ್ಞ ಯಾಗಾದಿಗಳನ್ನು ಮಾಡಬಾರದು. ಹಾಗೆ ಮಾಡಿದರೆ ಅವಳು ಪಾಪಯೋನಿಗೆ ಹೋಗುತ್ತಾಳೆ.

ಸ್ತ್ರೀಗೆ ಈ ಬಗೆಯ ಯಜ್ಞಯಾಗಾದಿಗಳನ್ನು ಮಾಡಲು ಸಾಧ್ಯವಾಗ ಬಾರದೆಂದು ಮನುವು ಅವಳನ್ನು ಬ್ರಾಹ್ಮಣರ ನೆರವು ಹಾಗೂ ಉಪಯೋಗವನ್ನು ಪಡೆದುಕೊಳ್ಳದಂತೆ ತಡೆಹಿದಿರುವನು.

 4.205-206. ಬ್ರಾಹ್ಮಣರು, ಸ್ತ್ರೀಯು ಯಜ್ಞವನ್ನು ಮಾಡಿದ ಬಳಿಕ ಆಕೆ ನೀಡಿದ ಅನ್ನವನ್ನು ಸ್ವೀಕರಿಸಕೂಡದು. ಸ್ತ್ರೀಯರು ಮಾಡಿದ ಯಜ್ಞವು ಅಮಂಗಲವಾಗಿದ್ದು ಅದು ದೇವರಿಗೆ ಒಪ್ಪಿಗೆಯಾಗದು. ಹೀಗಾಗಿ ಅದನ್ನು ತಪ್ಪಿಸಬೇಕು. ಕೊನೆಯಲ್ಲಿ ಮನುವು ಸ್ತ್ರೀಯೆದುರು ಇರಿಸಿದ ಜೀವನದ ಗುರಿಯನ್ನು ಅವನ ಮಾತುಗಳಲ್ಲಿಯೇ ಹೇಳುವುದು ಸೂಕ್ತ:

5.151. ಪಿತನು ಅಥವಾ ಪಿತನ ಒಪ್ಪಿಗೆಯಿಂದ ಅವನ ಸೋದರನು ಅವಳನ್ನು ಯಾವ ಪುರುಷನಿಗೆ ದಾನವಾಗಿ ಕೊಟ್ಟಿರುವನೋ ಆ ಪುರುಷನು ಜೀವಿಸುವವರೆಗೆ ಅವಳು ಅವನ ಅಪ್ಪಣೆಯನ್ನು ಪಾಲಿಸತಕ್ಕದ್ದು, ಅವನ ಮರಣದ ತರುವಾಯ ಅವಳು ಅವನ ಸ್ಮತಿಗೆ ಕೂಡ ಅವಮಾನವನ್ನು ಮಾಡಕೂಡದು.

5.154. ತನ್ನ ಪತಿ ಅದೆಷ್ಟೇ ದುರ್ಗುಣಿ, ವ್ಯಭಿಚಾರಿ ಅಥವಾ ಸದ್ಗುಣವಿರತನಾಗಿದ್ದರೂ ಪ್ರಾಮಾಣಿಕಳಾದ ಪತ್ನಿಯು ಅವನನ್ನು ಈಶ್ವರ ಸಮಾನನೆಂದು ಬಗೆದು ಅವನನ್ನು ಸತತವಾಗಿ ಪೂಜಿಸಬೇಕು.

5.155. ಸ್ತ್ರೀಯು ತನ್ನ ಪತಿಯ ಹೊರತು ಯಜ್ಞ, ಹರಕೆ, ಉಪವಾಸಗಳನ್ನು ಕೈಗೊಳ್ಳಕೂಡದು. ಅವಳು ಪತಿಯ ಆಜ್ಞೆಯನ್ನು ಪಾಲಿಸುತ್ತಿದ್ದರೆ, ಕೇವಲ ಇದೊಂದು ಕಾರಣದಿಂದಲೇ ಅವಳು ಸ್ವರ್ಗಲೋಕದಲ್ಲಿ ಗೌರವಕ್ಕೆ ಪಾತ್ರಳೆನ್ನಿಸುತ್ತಾಳೆ. ತದನಂತರ ಮನುವು ಸ್ತ್ರೀಯರಿಗಾಗಿ ಮಾಡಿದ ಮೂಲಭೂತವಾದ ವಿಶಿಷ್ಟ ಕಾನೂನುಗಳಿವೆ:

5.153. ಯಾವ ಪುರುಷನು ಪವಿತ್ರ ಮಂತ್ರೋಚ್ಚಾರದೊಂದಿಗೆ ಅವಳೊಡನೆ ವಿವಾಹಬದ್ಧನಾಗುವನೋ ಅವನು ಅನುಕೂಲ ಹಾಗೂ ಪ್ರತಿಕೂಲ ಪರಿಸ್ಥಿತಿಗಳಲ್ಲದೆ ಈ ಜನ್ಮ ಹಾಗೂ ಮುಂದಿನ ಜನ್ಮದಲ್ಲಿ ಸತತವಾಗಿ ಅವಳಿಗೆ ಸುಖದ ಜನಕನೆನ್ನಿಸುತ್ತಾನೆ.

5.150. ಅವಳು ಯಾವಾಗಲು ಸಂತೋಷದಿಂದ ಇರಬೇಕು, ಮನೆಯ ಕೆಲಸಗಳು ಹಾಗೂ ಆಡಳಿತದಲ್ಲಿ ಕುಶಲಳಾಗಿರತಕ್ಕದ್ದು, ಎಚ್ಚರದಿಂದ ಪಾತ್ರೆಗಳನ್ನು ತೊಳೆಯಬೇಕು, ಮಿತವ್ಯಯಿಯಾಗಿರಬೇಕು. ಹಿಂದೂಗಳು ಇದನ್ನು ಸ್ತ್ರೀಯರಿಗಾಗಿ ಇರುವ ಒಂದು ಉದಾತ್ತವಾದ ಆದರ್ಶವೆಂದು ಬಗೆಯುತ್ತಾರೆ !!!

‘ಸ್ತ್ರೀ ಹತ್ಯೆ’ಯು ಕೇವಲ ಒಂದು ಉಪಪಾತಕ, ಅಂದರೆ ಚಿಲ್ಲರೆ ಅಪರಾಧವಾಗಿದೆಯೆಂದು ಮನುವು ಒಂದು ಹೊಸ ನಿಯಮವನ್ನು ಮಾಡಿ, ಸ್ತ್ರೀಯರ ನಿರ್ಬಲೀಕರಣದ ಕಟ್ಟಡದ ಮೇಲೆ ಕಳಸವನ್ನು ಏರಿಸುವನು.

11.67. ಸ್ತ್ರೀ, ಶೂದ್ರ, ವೈಶ್ಯ, ಕ್ಷತ್ರಿಯ ಹಾಗೂ ನಿರೀಶ್ವರವಾದಿಗಳ ತಲೆದಂಡ ಹಾಗೂ ಮದ್ಯಪಾನಗಳೆಲ್ಲ ಚಿಲ್ಲರೆ ಅಪಾರಾಧಗಳು.

ಮನುವು ಶೂದ್ರ, ವೈಶ್ಯ ಹಾಗೂ ಕ್ಷತ್ರಿಯ ಹತ್ಯೆಗಳು ಕೇವಲ ಉಪಪಾತಕಗಳೆಂದು ಏಕೆ ಹೇಳಿದನೆಂಬುವುದು ಯಾರಿಗಾದರೂ ಸಹಜವಾಗಿ ಅರ್ಥವಾದೀತು. ಬ್ರಾಹ್ಮನನು ಇವರೆಲ್ಲರಿಗಿಂತಲೂ ಶ್ರೇಷ್ಠನು. ಅವನ ಹತ್ಯೆ ಮಾತ್ರ ಮಹಾಪಾತಕ ಎನ್ನಿಸುತ್ತದೆ ಎಂಬುವುದನ್ನು ಸ್ಥಾಪಿಸುವ ಯತ್ನ ಇದಾಗಿತ್ತು. ಆದರೆ ಅವನು ಸ್ತ್ರೀಯರಿಗಾಗಿ ಅಂಥ ನಿಯಮಗಳನ್ನೇ ಏಕೆ ಬಳಸಿದನು? ಅದಕ್ಕಿರುವ ಒಂದೇ ಒಂದು ಕಾರಣವೆಂದರೆ, ಮನುವಿನ ದೃಷ್ಟಿಯಿಂದ, ‘ಸ್ತ್ರೀ’ಯು ಯಾವುದೇ ಬೆಲೆ ಇಲ್ಲದ ವಸ್ತುವಾಗಿದ್ದಳು.

ಮೇಲಿನ ಉದಾಹರಣೆಗಳ ವೈಶಿಷ್ಟಗಳಿಂದ, ಮನುವು ಭಾರತೀಯ ಸ್ತ್ರೀಯರ ಅವನತಿಗೆ ಕಾರಣನಾಗಿದ್ದನೆಂಬ ಬಗೆಗೆ ಯಾರಾದರೂ ಸಂದೇಹಪಡದಿರಲು ಸಾಧ್ಯವೇ? ಬಹಳಷ್ಟು ಜನರಿಗೆ ಈ ಸಂಗತಿಗಳ ಅರಿವು ಇದೆ. ಆದರೆ ಎರಡು ಸಂಗತಿಗಳು ಅವರಿಗೆ ಗೊತ್ತಿಲ್ಲದಿರುವುದು ಕಂಡು ಬರುತ್ತದೆ. ಇದರಲ್ಲಿ ಅಂಥ ವಿಶೇಷವೇನಿದೆ ಎನ್ನುವುದು ಅವರಿಗೆ ತಿಳಿದಿಲ್ಲ. ಮನುವಿನ ಕಾನೂನಿನಲ್ಲಿ ಸ್ತ್ರೀಯರನ್ನು ಕುರಿತಾಗಿ ಹೊಸದು ಅಥವಾ ಆಶ್ಚರ್ಯಕರವಾದುದೇನೂ ಇಲ್ಲ. ಭಾರತದಲ್ಲಿ ಬ್ರಾಹ್ಮಣೀ ತತ್ವಜ್ಞಾನದ ಉದಯವಾದಂದಿನಿಂದ ಅವರ ದೃಷ್ಟಿಕೋನವು ಇದೇ ಬಗೆಯಾಗಿದೆ.

ಮನುವಿನ ಮೊದಲು ಅದು ಬರೀ ಸಾಮಾಜಿಕ ಸಿದ್ಧಾಂತವಾಗಿತ್ತು. ಮನುವು ಈ ಸಾಮಾಜಿಕ ಸಿದ್ಧಾಂತವನ್ನು ರಾಜ್ಯದ ಕಾನೂನಾಗಿ ಪರಿವರ್ತಿಸುವ ಕೆಲಸವನ್ನು ಮಾಡಿದನು. ಎರಡನೆಯ ಸಂಗತಿಯೆಂದರೆ, ಮನುವು ಸ್ತ್ರೀಯರ ಮೇಲೆ ನಿರ್ಬಲೀಕರಣದ ಕಾನೂನನ್ನು ಏಕೆ ಹೇರಿದನೆಂಬುವುದು ಅವರಿಗೆ ತಿಳಿಯದಿರುವುದು. ಆರ್ಯ ಸಮಾಜದಲ್ಲಿ ಶ್ರೂದರು ಹಾಗೂ ಸ್ತ್ರೀಯರು ಎರಡು ಮಹತ್ವದ ಘಟಕಗಳಾಗಿದ್ದರು. ಅವರು ಬ್ರಾಹ್ಮಣೀ ಧರ್ಮದ ಮೂಲಭೂತ ತತ್ವ್ವಗಳಿಗೆ ಸಿಡಿಮದ್ದನ್ನು ಇಕ್ಕಿ ತಂಡತಂಡಗಳಲ್ಲಿ ಬೌದ್ಧ ಧರ್ಮವನ್ನು ಪ್ರವೇಶಿಸಲು ಹೋಗುತ್ತಿದ್ದರು. ಮನುವು, ಸ್ತ್ರೀಯರ ಈ ಅಲೆಗಳು ಬೌದ್ಧ ಧರ್ಮದತ್ತ ಹೋಗುವುದನ್ನು ತಡೆಯ ಬಯಸಿದ್ದನು.

ಇದಕ್ಕಾಗಿ ಮನುವು ಸ್ತ್ರೀಯರ ಮೇಲೆ ನಿರ್ಬಲೀಕರಣದ ಕಾನೂನುಗಳನ್ನು ಹೇರಿ ಖಾಯಮ್ಮಾಗಿ ಅವರನ್ನು ಹೆಳವರನ್ನಾಗಿ ಮಾಡಿದನು. ಈ ಬಗೆಗೆ ಸಂದೇಹವುಳ್ಳವರು ಮನುಸ್ಮತಿಯ ಈ ಕೆಳಗಿನ ಅಪ್ಪಣೆಗಳನ್ನು ಕುರಿತು ಯೋಚಿಸಬೇಕು:

5.88. ಮಿಶ್ರ ವಿವಾಹ, ಸಂನ್ಯಾಸಿ ಹಾಗೂ ಆತ್ಮಹತ್ಯೆಯನ್ನು ಮಾಡಿಕೊಂಡ ವ್ಯಕ್ತಿಯಿಂದ ಹುಟ್ಟಿ ಬಂದವರನ್ನು, ಮೃತ್ಯು ಮತ್ತು ತದನಂತರದ ಸಂಸ್ಕಾರಗಳನ್ನು ಸಾಮಾನ್ಯ ವ್ಯಕ್ತಿಗಳ ಮೃತ್ಯು ಹಾಗೂ ಅಂತ್ಯ ಸಂಸ್ಕಾರಗಳ ಬಗೆಯಲ್ಲಿ ಮಾಡುವುದನ್ನು ನಿಷೇಧಿಸಲಾಗಿದೆ.

5.89. ನಿರೀಶ್ವರವಾದಿ (Heretic Sect) ಸಂಪ್ರದಾಯವನ್ನು ಪ್ರವೇಶಿಸಿದ, ಸ್ವಚ್ಛಂದರಾಗಿ ನಡೆದುಕೊಳ್ಳುವ, ಗರ್ಭದಲ್ಲಿರುವ ಮಗು ಹಾಗೂ ತನ್ನ ಪತಿಗೆ ನೋವನ್ನು ಉಂಟುಮಾಡುವ, ಅಲ್ಲದೆ ಮದ್ಯಪಾನವನ್ನು ಮಾಡುವ ಸ್ತ್ರೀಯರಿಗೂ ಮೇಲಿನ ಸಂಸ್ಕಾರಗಳನ್ನು ನಿರಾಕರಿಸಬೇಕು.

(1) ಸಂನ್ಯಾಸ ಪ್ರವೃತ್ತಿಯವರು ಮತ್ತು (2) ನಿರೀಶ್ವರವಾದಿ ಸಂಪ್ರದಾಯದಲ್ಲಿ ಪ್ರವೇಶವನ್ನು ಪಡೆದ ಸ್ತ್ರೀಯರನ್ನು ಗಮನದಲ್ಲಿ ಇರಿಸಿಕೊಂಡು ಉಳಿದ ಅಪ್ಪಣೆಗಳಲ್ಲದೆ ಈ ಅಪ್ಪಣೆಗಳನ್ನು ಬೇಕೆಂದೇ ಮಾಡಲಾಗಿದೆ. ಈ ಅಪ್ಪಣೆಯಲ್ಲಿ ಸಂನ್ಯಾಸಿ ಪದವು ಪರಿವ್ರಾಜಕರು, ಅಂದರೇನೆ ತಮ್ಮ ಮನೆಯನ್ನು ತೊರೆದು ಸಂನ್ಯಾಸವನ್ನು ಸ್ವೀಕರಿಸಿದವರನ್ನು ಕುರಿತಾಗಿದೆ. ಮನುವು ನಿರೀಶ್ವರವಾದಿ ಸಂಪ್ರದಾಯವನ್ನು ಉಲ್ಲೇಖಿಸುವಾಗ ಬೌದ್ಧ ಧರ್ಮವೇ ಅವನ ಮನದಲ್ಲಿತ್ತು ಎನ್ನ್ನುವಲ್ಲಿ ಯಾವುದೇ ಬಗೆಯ ಸಂದೇಹವಿಲ್ಲ.

ಇದರಿಂದ ಸ್ಪಷ್ಟವಾಗುವ ಸಂಗತಿಯೆಂದರೆ, ಯಾವ ಸ್ತ್ರೀಯಾಗಲಿ ಇಲ್ಲವೇ ಸಂನ್ಯಾಸಿಯಾಗಲಿ ನಿರೀಶ್ವರವಾದ ಸಂಪ್ರದಾಯವನ್ನು ಪ್ರವೇಶಿಸಿದ್ದರೆ ಅವನ ಮೇಲೆ ಅಂತ್ಯ ಇಲ್ಲವೇ ಬೇರೆ ಯಾವುದೇ ಬಗೆಯ ಉತ್ತರ ಸಂಸ್ಕಾರಗಳನ್ನು ಮಾಡಲಾಗುವುದಿಲ್ಲ. ಇಷ್ಟೇ ಅಲ್ಲದೆ ಬೌದ್ಧ ಧರ್ಮವನ್ನು ಪ್ರವೇಶಿಸಿದ ಪುರುಷ ಇಲ್ಲವೇ ಸ್ತ್ರೀಯ ಕುಟುಂಬದ ಇತರ ಸದಸ್ಯರ ಅಂತ್ಯ ಮತ್ತು ಉತ್ತರ ಸಂಸ್ಕಾರಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ. ಬೇರೆ ಮಾತಿನಲ್ಲಿ ಹೇಳುವುದಾದರೆ, ಅಂಥವರು ತಮ್ಮ ಕುಟುಂಬದೊಡನೆ ನಂಟನ್ನು ಹೊಂದಿದವರಲ್ಲ ಹಾಗೂ ಅವರು ಆ ಕುಟುಂಬದ ಘಟಕರೇ ಅಲ್ಲವೆಂಬ ನಡವಳಿಕೆಯು ಅವರಿಗೆ ದೊರೆಯಬೇಕೆಂದು ಮನು ಬಯಸಿದ್ದನು. ಮನುವು ಬೌದ್ಧ ಧರ್ಮದ ತೀವ್ರ ವಿರೋಧಕನಾಗಿದ್ದನು. ಸ್ತ್ರೀಯರ ಮೇಲೆ ಹೇರಲಾದ ಹಲವು ಅನ್ಯಾಯಗಳ ಮರ್ಮವಿದು. ತನ್ನ ಮನೆಯನ್ನು ಬೌದ್ಧ ತತ್ವ್ವಜ್ಞಾನದ ಆಕ್ರಮಣದಿಂದ ಸುರಕ್ಷಿತವಾಗಿ ಇರಿಸುವುದಿದ್ದರೆ ಸ್ತ್ರೀಯನ್ನು ಬಂಧನದಲ್ಲಿ ಇರಿಸುವುದು ಅವಶ್ಯವೆಂದು ಅವನಿಗೆ ತಿಳಿದಿತ್ತು. ಹೀಗಾಗಿ ಅವನು ಹಾಗೆ ಮಾಡಿದನು. ಭಾರತೀಯ ಸ್ತ್ರೀಯ ಅವನತಿ ಹಾಗೂ ನಶಿಸುವಿಕೆಗೆ ಕಾರಣವಾದ ದೋಷವು ಬುದ್ಧನದಾಗಿರದೆ ಸಂಪೂರ್ಣವಾಗಿ ಮನುವಿನದಾಗಿದೆ.

ಈ ಕೆಲವು ಪುಟಗಳಲ್ಲಿ ಹಿಂದೂ ಸ್ತ್ರೀಯರ ಉತ್ಥಾನ ಹಾಗೂ ಪತನಗಳನ್ನು ಕುರಿತು ವಿವರಿಸಲು. ಅವರ ಅನುಮತಿಯ ಜನಕನು ಯಾರು ಹಾಗೂ ಅವನು ಇದೆಲ್ಲವನ್ನು ಏಕೆ ಮಾಡಿದನೆಂಬುವುದನ್ನು ಕುರಿತು ವಿಶದೀಕರಿಸಲು ಯತ್ನಿಸಿರುವೆನು. ಪೂರ್ವಾಗ್ರಹವಿಲ್ಲದ ಹಾಗೂ ನಿಃಪಕ್ಷಪಾತಿಗಳಾದ ಜನರು ಇದೆಲ್ಲ ದುರಂತಕ್ಕೆ ಬುದ್ಧನನ್ನು ಹೊಣೆಗಾರನನ್ನಾಗಿ ಮಾಡಲು ಬಾರದೆನ್ನುವುದನ್ನು ಅರಿತುಕೊಳ್ಳುವರೆಂದು ನಿರೀಕ್ಷಿಸುತ್ತೇನೆ. ಬುದ್ಧನು ಸ್ತ್ರೀಯರಿಗೆ ಪ್ರತಿಷ್ಠೆ ಹಾಗೂ ಅವರಿಗೆ ಪುರುಷರಿಗೆ ಸರಿಸಮನಾದ ಮಟ್ಟವನ್ನು ದೊರಕಿಸಿ ಕೊಡಲು ಹೆಣಗಿದನು!!

(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News