ಆತಂಕದ ಹಾದಿಯಲ್ಲಿ ಪ್ರಾದೇಶಿಕ ಭಾಷೆಗಳು: ಡಾ.ಪುರುಷೋತ್ತಮ ಬಿಳಿಮಲೆ ಅಭಿಪ್ರಾಯ
ಮಡಿಕೇರಿ, ಆ.13: ಖಾಸಗೀಕರಣ ಮತ್ತು ಜಾಗತೀಕರಣದ ದಾಳಿಗೆ ದೇಶದ ಎಲ್ಲಾ ಪ್ರಾದೇಶಿಕ ಭಾಷೆಗಳು ನಲುಗುತ್ತಿದ್ದು, ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿ ಸರ್ಕಾರದ ಪ್ರಧಾನ ಆದ್ಯತೆಯಾಗಬೇಕೆಂದು ದೆಹಲಿಯ ಜವಹರಲಾಲ್ ನೆಹರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದ ಮುಖ್ಯಸ್ಥರಾದ ಡಾ.ಪುರುಷೋತ್ತಮ ಬಿಳಿಮಲೆ ತಿಳಿಸಿದ್ದಾರೆ.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ವತಿಯಿಂದ ಜಿಲ್ಲಾ ಪತ್ರಕರ್ತರ ಸಂಘ ಮತ್ತು ಕೊಡಗು ಪ್ರೆಸ್‌ಕ್ಲಬ್‌ನ ಸಹಯೋಗದಲ್ಲಿ ನಗರದ ಕೊಡಗು ಗೌಡ ಸಮಾಜದ ಸಭಾಂಗಣದಲ್ಲಿ ನಡೆದ ಭಾಷಾ ಮಾಧ್ಯಮ ಚಿಂತನ ಮಂಥನ, ವಿಚಾರಗೋಷ್ಠಿ ಮತ್ತು ಬಹುಭಾಷಾ ಕವಿಗೋಷ್ಠಿ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಾದೇಶಿಕ ಭಾಷೆಗಳು ಆತಂಕಕ್ಕೆ ಸಿಲುಕಿಕೊಂಡಿವೆ, ಹಿಂದಿ, ಉರ್ದು ಮತ್ತು ಬಂಗಾಳಿ ಭಾಷೆಗಳಿಗೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಆಯಾಮಗಳಿವೆ. ಅದೇ ರೀತಿ ಇಂಗ್ಲಿಷ್, ಫ್ರೆಂಚ್ ಮೊದಲಾದ ಭಾಷೆಗಳು ಜಾಗತಿಕ ಭಾಷೆಗಳಾಗಿವೆ. ಇವುಗಳೊಂದಿಗೆ ತುಲನೆ ಮಾಡಿದಲ್ಲಿ ಭಾರತದ ಪ್ರಾದೇಶಿಕ ಭಾಷೆಗಳು ಮತ್ತು ಸಣ್ಣ ಸಣ್ಣ ಭಾಷೆಗಳಿಗೆ ಇಂತಹ ರಾಷ್ಟ್ರೀಯ ಮತ್ತು ಜಾಗತಿಕ ಮಟ್ಟದ ವ್ಯಾಪ್ತಿಗಳಿಲ್ಲವೆಂದು ವಿಶ್ಲೇಷಿಸಿದರು. 1980ರ ದಶಕದ ಗ್ಯಾಟ್ ಒಪ್ಪಂದದ ಬಳಿಕದ ಆರ್ಥಿಕ ಉದಾರೀಕರಣ ನೀತಿಗಳಿಂದ ಇಂಗ್ಲಿಷ್ ಭಾಷೆ ಇಡೀ ವಿಶ್ವವನ್ನು ವ್ಯಾಪಿಸಿಕೊಳ್ಳುವುದರೊಂದಿಗೆ ದೇಶ ಭಾಷೆಗಳ ಪ್ರಾಧಾನ್ಯತೆ ಕಡಿಮೆಯಾಗುತ್ತಾ ಸಾಗಿತೆಂದು ತಿಳಿಸಿದರು.
ಹಿಂದಿಯ ಹೇರಿಕೆ ಸರಿಯಲ್ಲ
ಹಿಂದಿಯನ್ನು ಇತರೆ ಪ್ರಾದೇಶಿಕ ಭಾಷೆಗಳ ಮೇಲೆ ಹೇರಲಾಗುತ್ತಿದ್ದು, ಇದು ಕೇಂದ್ರ ಸರ್ಕಾರದ ಅಜೆಂಡವೆ ಆಗಿದೆ. ಮುಂದಿನ 13ನೇ ಪಂಚವಾರ್ಷಿಕ ಯೋಜನೆಯಲ್ಲಿ ಹಿಂದಿಯ ಪ್ರಚಾರಕ್ಕೆ ಸಾಕಷ್ಟು ಹಣವನ್ನು ಮೀಸಲಿಡಲಾಗುತ್ತಿದೆ ಎಂದು ಅಭಿಪ್ರಾಯಪಟ್ಟ ಡಾ. ಪುರುಷೋತ್ತಮ ಬಿಳಿಮಲೆ, 12ನೇ ಪಂಚವಾರ್ಷಿಕ ಯೋಜನೆಯಲ್ಲಿ ಮುಂದಿನ 2020ರ ಹೊತ್ತಿಗೆ ಭಾರತದಿಂದ 4 ಕೋಟಿ ಮಂದಿಯನ್ನು ವಿದೇಶಿ ಕೆಲಸಗಳಿಗೆ ಕಳುಹಿಸುವುದಕ್ಕೆ ಪೂರ್ವ ತಯಾರಿಯಾಗಿ ಕೌಶಲ್ಯಾಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವ ಪ್ರಯತ್ನ ನಡೆಯುತ್ತಿದೆ ಎಂದರು.
ಇದರಲ್ಲಿ ಹೊರ ದೇಶಗಳ ಭಾಷೆಯ ಕಲಿಕೆಯೂ ಸೇರಿರುತ್ತದೆ. ಹೀಗಿರುವಾಗ ಅರೆಭಾಷೆ, ತುಳು, ಕೊಡವ ಭಾಷೆಯಂತಹ ಸಣ್ಣ ಭಾಷೆಗಳು ಮತ್ತು ಕನ್ನಡವನ್ನೊಳಗೊಂಡ ದೇಶದ ಪ್ರಾದೇಶಿಕ ಭಾಷೆಗಳ ಬೆಳವಣಿಗೆಯ ಪ್ರಶ್ನೆಯೆ ಉದ್ಭವವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಭಾಷಾ ಸಂಸ್ಕೃತಿಯ ಬೆಳವಣಿಗೆಯನ್ನು ಸರಕಾರ ಅನುತ್ಪಾದಕವಿಚಾರವಾಗಿ ಪರಿಗಣಿಸಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಜಿಲ್ಲಾ ಪತ್ರಕರ್ತರ ಸಂಘ ಮತ್ತು ಪ್ರೆಸ್ ಕ್ಲಬ್ ಅಧ್ಯಕ್ಷರಾದ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ಪ್ರತಿಯೊಬ್ಬರು ಅವರವರ ಮಾತೃಭಾಷೆಯ ಬಳಕೆಯತ್ತ ಆಸಕ್ತಿ ತೋರದಿದ್ದಲ್ಲಿ ಅವುಗಳ ಬೆಳವಣಿಗೆ ಕುಂಟಿತವಾಗುತ್ತದೆ ಎಂದರು.
ಪತ್ರಕರ್ತ ಐತಿಚಂಡ ರಮೇಶ್ ಉತ್ತಪ್ಪ ಮಾತನಾಡಿ, ಮನೆಗಳಲ್ಲಿ ಮಾತೃಭಾಷೆಯ ಬಳಕೆ ಕಡಿಮೆಯಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಮಾತೃಭಾಷೆಯನ್ನು ಬಳಸುವುದರೊಂದಿಗೆ, ಇತರರಲ್ಲು ಭಾಷೆಯ ಬಗ್ಗೆ ಆಸಕ್ತಿ ಮೂಡಿಸುವ ಪ್ರಯತ್ನ ಮಾಡಿದರೆ ಭಾಷಾ ಬೆಳವಣಿಗೆ ಸಾಧ್ಯವೆಂದರು.
'ಅರೆ ಭಾಷೆ ಬೆಳವಣಿಗೆಯಲ್ಲಿ ಮಾಧ್ಯಮಗಳ ಪಾತ್ರ' ವಿಷಯದ ಕುರಿತು ಪತ್ರಕರ್ತ ಕೆ.ಬಿ. ಮಂಜುನಾಥ್ ಮತ್ತು 'ಆಡು ಭಾಷೆಯಲ್ಲಿ ಅರೆಭಾಷಾ ಸೊಗಡು' ವಿಷಯದ ಕುರಿತು ಪಟ್ಟಡ ಶಿವ ಕುಮಾರ್ ಮಾತನಾಡಿದರು. ಇದೇ ಸಂದರ್ಭ ಬಹುಭಾಷಾ ಕವಿಗೋಷ್ಠಿ ಕೂಡ ನಡೆಯಿತು.
ಅರೆಭಾಷಾ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಕೊಲ್ಯದ ಗಿರೀಶ್ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಸಿಂಚನ ವಿ.ಡಿ. ಪ್ರಾರ್ಥಿಸಿ, ರಿಜಿಸ್ಟ್ರಾರ್ ಉಮರಬ್ಬ ಸರ್ವರನ್ನು ಸ್ವಾಗತಿಸಿದರು. ಅಕಾಡೆಮಿ ಸದಸ್ಯ ಕುಡೆಕಲ್ ಸಂತೋಷ್ ಕಾರ್ಯಕ್ರಮ ನಿರೂಪಿಸಿದರು.