ಕವನಗಳು ಸರಳ, ಮೋಹಕವಾಗಿ ಒಳಗೊಂಡಿರಬೇಕು: ಡಾ.ಎಚ್‍.ಎಸ್‍.ವಿ

Update: 2017-09-10 18:13 GMT

ಮಂಡ್ಯ, ಸೆ.10: ನಗರದ ಗಾಂಧಿ ಭವನದಲ್ಲಿ ರವಿವಾರ ಡಾ.ಶುಭಶ್ರೀ ಪ್ರಸಾದ್ ಅವರ ಕವನ ಸಂಕಲನ, ಕಥಾ ಸಂಕಲನ ಮತ್ತು ಮಹಾಪ್ರಬಂಧ ಕೃತಿಗಳನ್ನು ಬಿಡುಗಡೆ ಮಾಡಲಾಯಿತು.

ಹಣತೆ ಬೆಳಕು ಕವನ ಸಂಕಲನ ಕುರಿತು ಮಾತನಾಡಿದ ಖ್ಯಾತ ಕವಿ ಡಾ.ಎಚ್.ಎಸ್.ವೆಂಕಟೇಶಮೂರ್ತಿ, ಕವನಗಳು ಓದುಗರಿಗೆ ಅರ್ಥವಾಗುವ ರೀತಿ ಸರಳವಾಗಿರಬೇಕು ಎಂದರು.

ಕವನಗಳು ಅನುಭವದಿಂದ ಮೂಡಿಬರಬೇಕು. ಸರಳವಾಗಿ, ಜತೆಗೆ ಮೋಹಕವಾಗಿ ಇರಬೇಕು. ಒಂದು ಸಾಲಿಗೂ ಮತ್ತೊಂದು ಸಾಲಿಗೂ ಸಂಬಂಧವಿರಬೇಕು. ಆಗ ಉತ್ತಮ ಕಾವ್ಯವಾಗುತ್ತದೆ ಎಂದು ಅವರು ವಿಶ್ಲೇಷಿಸಿದರು.

ಕೆಎಸ್‍ನ ಅವರ ಕವನಗಳು ತುಂಬಾ ಸರಳವಾಗಿದ್ದರಿಂದಲೇ ಹೆಚ್ಚು ಓದುಗರನ್ನು ಸೆಳೆದವು. ಆದರೆ, ಕೆಲವರು ಕೆಎಸ್‍ನ ಅವರ ಕವಿತೆಗಳನ್ನು ಸೆರಿಗಿನ ಕವಿಗೆಳೆಂದು ಲೇವಡಿ ಮಾಡಿದರು ಎಂದು ಅವರು ವಿಷಾದಿಸಿದರು.

ಕೆಎಸ್‍ನ ಅವರ ಬಹುತೇಕ ಕವನಗಳು ಹೆಂಡತಿಯನ್ನು ಕುರಿತಂತೆ ಇರುವ ಇರುವ ಹಿನ್ನೆಲೆಯಲ್ಲಿ ಈ ಟೀಕೆಗಳು ಬಂದಿವೆ. ಆದರೆ, ಸೆರಗು ಕಣ್ಣೀರು ಒರೆಸುವುದಲ್ಲದೆ, ಮಳೆಗೆ ಕೊಡೆಯಾಗುತ್ತದೆ ಎಂಬುದನ್ನು ಟೀಕಾಕಾರರು ತಿಳಿಯಬೇಕು ಎಂದರು.

ಒಡಲ ಕರೆಗೆ ಓಗೊಟ್ಟು ಕಥಾ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿದ ಕತೆಗಾರ ಅಬ್ದುಲ್ ರಶೀದ್, ಭಾಷೆ ಬಳಕೆ ತಿಳಿದಿರುವ ಕತೆಗಾರರ ಕತೆಗಳು ಜನರನ್ನು ತಲುಪುತ್ತವೆ. ಆ ನಿಟ್ಟಿನಲ್ಲಿ ಶುಭಶ್ರೀ ಅವರು ಗೆದ್ದಿದ್ದಾರೆ. ಬ್ಯಾಂಕ್ ಉದ್ಯೋಗಿಯಾಗಿ ಗ್ರಾಹಕರು, ಸಹದ್ಯೋಗಿಗಳ ಜತೆ ಉತ್ತಮ ಬಾಂಧವ್ಯ ಹೊಂದಿರುವ ಶುಭಶ್ರೀ, ಕೆಲಸದ ಒತ್ತಡದ ನಡುವೆಯೂ ಸಾಹಿತ್ಯ ಕೃಷಿ ನಡೆಸುತ್ತಿದ್ದಾರೆ ಎಂದು ಅವರು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯದಲ್ಲಿ ದೇಗುಲ ಪರಿಕಲ್ಪನೆ ಮಹಾಪ್ರಬಂಧವನ್ನು ಚಿಂತಕಿ ಡಾ.ಲೀಲಾ ಅಪ್ಪಾಜಿ ಬಿಡುಗಡೆ ಮಾಡಿದರು. ಮಾನಸ ಗಂಗೋತ್ರಿ ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕಿ ಡಾ.ಪ್ರೀತಿ ಶುಭಚಂದ್ರ ಕಾರ್ಯಕ್ರಮ ಉದ್ಘಾಟಿಸಿದರು. ಶುಭಶ್ರೀ ಪ್ರಸಾದ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News