ಹರದಾಸ ಅಪ್ಪಚ್ಚ ಕವಿ 150 ನೇ ಜನ್ಮೋತ್ಸವ : ಸೆ.21 ರಂದು ನಾಪೋಕ್ಲು ಕೊಡವ ಸಮಾಜದಲ್ಲಿ ಸಮಾರಂಭ

Update: 2017-09-18 17:05 IST
ಹರದಾಸ ಅಪ್ಪಚ್ಚ ಕವಿ 150 ನೇ ಜನ್ಮೋತ್ಸವ : ಸೆ.21 ರಂದು ನಾಪೋಕ್ಲು ಕೊಡವ ಸಮಾಜದಲ್ಲಿ ಸಮಾರಂಭ
  • whatsapp icon

ಮಡಿಕೇರಿ, ಸೆ.18 :ಕೊಡಗಿನ ವರಕವಿ, ಶ್ರೇಷ್ಠ ನಾಟಕಕಾರ, ಹರಿಕಥಾ ವಿದ್ವಾನ್, ಆದಿಕವಿ ಹಾಗೂ ಕೀರ್ತನೆಕಾರರಾದ ಹರದಾಸ ಅಪ್ಪನೆರವಂಡ ಅಪ್ಪಚ್ಚಕವಿ ಅವರ 150ನೇ ಜನ್ಮೋತ್ಸವವನ್ನು ವರ್ಷ ಪೂರ್ತಿ ಆಚರಿಸಲು ಕೊಡವ ಸಮಾಜ ಹಾಗೂ ವಿವಿಧ ಸಂಘ, ಸಂಸ್ಥೆಗಳು ನಿರ್ಧರಿಸಿವೆ. ಸೆ.21 ರಂದು ನಾಪೋಕ್ಲು ಕೊಡವ ಸಮಾಜದಲ್ಲಿ ಮೊದಲ ಕಾರ್ಯಕ್ರಮ ನಡೆಯಲಿದೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷರಾದ ಬಿ.ಎ.ರಮೇಶ್ ಚಂಗಪ್ಪ, ಜನ್ಮೋತ್ಸವ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು.  

ಅಖಿಲ ಕೊಡವ ಸಮಾಜ, ನಾಪೋಕ್ಲು ಕೊಡವ ಸಮಾಜ, ನಾಪೋಕ್ಲು ಕೊಡವ ಸಮಾಜ ರಿಕ್ರಿಯೇಷನ್ ಕ್ಲಬ್, ನಾಲ್ನಾಡು ಪ್ಲಾಂಟರ್ಸ್ 
ಅಶೋಷಿಯೇಷನ್, ನಾಪೋಕ್ಲು ಮಾಜಿ ಸೈನಿಕರ ಸಂಘ, ನೆಲಜಿ ಫಾರ್ಮರ್ಸ್ ಕ್ಲಬ್, ಬಲ್ಲತ್‍ನಾಡ್ ರಿಕ್ರಿಯೇಷನ್ ಕ್ಲಬ್, ಹೈಲ್ಯಾಂಡರ್ಸ್ ಕಕ್ಕಬ್ಬೆ, ನಾಪೋಕ್ಲು ಪೊಮ್ಮಕ್ಕಡ ಪರಿಷತ್ ಹಾಗೂ ನಾಪೋಕ್ಲು ನಾಡಿನ ಇತರ ಎಲ್ಲಾ ಸಂಘ ಸಂಸ್ಥೆಗಳು ಅಪ್ಪನೆರವಂಡ ಕುಟುಂಬಸ್ಥರ ಸಹಯೋಗದೊಂದಿಗೆ ಅಪ್ಪಚ್ಚ ಕವಿಯವರ ಜನ್ಮೋತ್ಸವವನ್ನು ಆಚರಿಸಲಾಗುತ್ತಿದೆ. 

ಮುಂದಿನ ಪೀಳಿಗೆಗೆ ಶ್ರೇಷ್ಠ ಕವಿಯ ವಿಚಾರಧಾರೆಯನ್ನು ಪರಿಚಯಿಸುವ ಹಾಗೂ ಅಪ್ಪಚ್ಚಕವಿ ಅವರ ಹೆಸರನ್ನು ಅಜರಾಮರವಾಗಿಸಲು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ರಮೇಶ್ ಚಂಗಪ್ಪ ತಿಳಿಸಿದರು. 

ಅಖಿಲ ಕೊಡವ ಸಮಾಜದ ಮೂಲಕ ಒಂದು ವರ್ಷ ಕಾಲ ಜಿಲ್ಲೆಯ ವಿವಿಧೆಡೆ ಕಾರ್ಯಕ್ರಮ ನಡೆಯಲಿದೆ. ಪ್ರತಿ ತಿಂಗಳು ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಕೊಡವ ಸಮಾಜಗಳ ನೇತೃತ್ವದಲ್ಲಿ ಜನ್ಮೋತ್ಸವವನ್ನು ನಡೆಸಲು ನಿರ್ಧರಿಸಲಾಗಿದೆ. ವರ್ಷದ ಮೊದಲ ಕಾರ್ಯಕ್ರಮವನ್ನು ಗುರುವಾರ ನಾಪೋಕ್ಲುವಿನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು. 

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಾಷ್ಟ್ರೀಯ ಮಾಜಿ ಸೈನಿಕರು ಹಾಗೂ ಕರ್ನಾಟಕ ಮಾಜಿ ಸೈನಿಕ ಸಮಿತಿಯ ಮುಖ್ಯಸ್ಥರಾದ ಮೇ.ಜ. ಮೂವೆರ ಸಿ. ನಂಜಪ್ಪ, ಹೆಸರಾಂತ ಶಿಲ್ಪಿಗಳಾದ ಮೈಸೂರಿನ ಅಪ್ಪನೆರವಂಡ ಕಿರಣ್ ಸುಬ್ಬಯ್ಯ ಹಾಗೂ ಹಿರಿಯ ಚಿತ್ರ ಕಲಾವಿದರಾದ ನೆಲ್ಲಮಕ್ಕಡ ಕಾವೇರಪ್ಪ ಭಾಗವಹಿಸಲಿದ್ದಾರೆ.

ಹರದಾಸ ಅಪ್ಪಚ್ಚ ಕವಿ ಅವರ ಬಗ್ಗೆ ಅಖಿಲ ಕೊಡವ ಸಮಾಜದ ಕಾರ್ಯಾಧ್ಯಕ್ಷರಾದ ಪ್ರೊಫೆಸರ್ ಇಟ್ಟೀರ ಕೆ. ಬಿದ್ದಪ್ಪ ಹಾಗೂ ಹಿರಿಯ ರಂಗಭೂಮಿ ಕಲಾವಿದ ಅಡ್ಡಂಡ ಸಿ. ಕಾರ್ಯಪ್ಪ ಅವರು ಮಾತನಾಡಲಿದ್ದಾರೆ. 
 ಜನ್ಮೋತ್ಸವದ ಅಧ್ಯಕ್ಷತೆಯನ್ನು ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷರಾದ ಬಿದ್ದಾಟಂಡ ರಮೇಶ್ ವಹಿಸಲಿದ್ದಾರೆ. ಸಭೆಯಲ್ಲಿ ಅಖಿಲ ಕೊಡವ ಸಮಾಜದ ಅಧ್ಯಕ್ಷರಾದ ಮಾತಂಡ ಸಿ. ಮೊಣ್ಣಪ್ಪ ಹಾಗೂ ಅಪ್ಪನೆರವಂಡ ಕುಟುಂಬದ ಪಟ್ಟೇದಾರರಾದ ಅಪ್ಪನೆರವಂಡ ಅಪ್ಪಣ್ಣನವರು ಉಪಸ್ಥಿತರಿರುವರು. 

 ಕಾರ್ಯಕ್ರಮವನ್ನು ಕವಿಗಳ ಹುಟ್ಟಿದ ಮನೆಯಿಂದಲೇ ಪ್ರಾರಂಭಿಸುವ ಉದ್ದೇಶದಿಂದ ಅದೇ ದಿನ ಬೆಳಿಗ್ಗೆ ನಾಪೋಕ್ಲುವಿನ ಕಿರ್‍ಂದಾಡ್ ಗ್ರಾಮದ ಅಪ್ಪನೆರವಂಡ ಐನ್‍ಮನೆಯಲ್ಲಿ ಗುರುಕಾರೋಣರಿಗೆ ನಮಿಸಿ, ನಂತರ 9:30ಕ್ಕೆ ನಾಪೋಕ್ಲು ಪಟ್ಟಣದ ನಿರೀಕ್ಷಣಾ ಮಂದಿರದಿಂದ ಕೊಡವ ಸಮಾಜದವರೆಗೆ ಆಕರ್ಷಕ ಮೆರವಣಿಗೆ ನಡೆಯಲಿದೆ ಎಂದು ರಮೇಶ್ ಚಂಗಪ್ಪ ಹೇಳಿದರು.

ಮೆರವಣಿಗೆಯಲ್ಲಿ ಕವಿ ವರ್ಣನೆಯೊಂದಿಗೆ ಕೊಡವರ ಸಂಪ್ರದಾಯ ಬದ್ದವಾದ ಬಾಳೋ ಪಾಟ್ ಹಾಗೂ ದುಡಿ ವಾದ್ಯದೊಂದಿಗೆ ಕಾಪಳ ನೃತ್ಯ, ಅಜ್ಜಪ್ಪ ತೆರೆ ಸಾಗಲಿದೆ. ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಸಾವಿರಾರು ಮಂದಿ ಪಾಲ್ಗೊಳ್ಳಲಿದ್ದಾರೆ. ಕೊಡವ ಸಮಾಜದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ, ಅಲ್ಲದೆ ಲೋಗೋ ಬಿಡುಗಡೆ ಸಮಾರಂಭವೂ ನಡೆಯಲಿದೆ ಎಂದು ಅವರು ಹೇಳಿದರು. 
2018 ಸೆ.21 ರಂದು ಮೈಸೂರು ಅಥವಾ ಬೆಂಗಳೂರು ಕೊಡವ ಸಮಾಜದಲ್ಲಿ 150ನೇ ಜನ್ಮೋತ್ಸವದ ಸಮಾರೋಪ ಸಮಾರಂಭ ನಡೆಯಲಿದೆ ಎಂದು ರಮೇಶ್ ಚಂಗಪ್ಪ ಮಾಹಿತಿ ನೀಡಿದರು. 

ಜನ್ಮೋತ್ಸವ ಆಚರಣಾ ಸಮಿತಿಯ ಕಾರ್ಯದರ್ಶಿ ಬಿ.ಉತ್ತಪ್ಪ ಅವರು ಮಾತನಾಡಿ ಹರದಾಸ ಅಪ್ಪನೆರವಂಡ ಅಪ್ಪಚ್ಚಕವಿ ಅವರ ಸಾಹಿತ್ಯ ಸಾಧನೆಯ ಬಗ್ಗೆ ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಮೆರವಣಿಗೆ ಸಮಿತಿ ಅಧ್ಯಕ್ಷರಾದ ರಮೇಶ್ ಮುದ್ದಯ್ಯ, ಜಂಟಿ ಕಾರ್ಯದರ್ಶಿ ಕೆ.ಸುಜಿ ತಿಮ್ಮಯ್ಯ, ಖಜಾಂಚಿ ಎ.ಸುದೀರ್ ಅಯ್ಯಪ್ಪ ಹಾಗೂ ಬಲ್ಲತ್‍ನಾಡ್ ರಿಕ್ರಿಯೇಷನ್ ಕ್ಲಬ್‍ನ ಉಪಾಧ್ಯಕ್ಷರಾದ ಕೆ.ರಮೇಶ್ ಚಂಗಪ್ಪ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News