ನನ್ನದು ತಣ್ಣನೆ ಪ್ರತಿಭಟನೆ - ಬಾದಲ್ ನಂಜುಂಡಸ್ವಾಮಿ

Update: 2017-11-04 05:51 GMT

ಕಲಾವಿದ ಅವನ ಪಾಡಿಗೆ ಅವನು ಪೈಂಟ್ ಮಾಡಿಕೊಂಡು ಇದ್ದುಬಿಡಬಹುದು. ಆದರೆ ನನ್ನೊಳಗಿನ ಕಲಾವಿದ ಸದಾ ದುಃಖಿ. ಅವನು ಸುಮ್ಮನಿರಲಿಕ್ಕೆ ಬಿಡುವುದಿಲ್ಲ. ಸಮಾಜದ ಆಗು-ಹೋಗುಗಳಿಗೆ ಮತ್ತು ಸಮಕಾಲೀನ ಸಮಸ್ಯೆಗಳಿಗೆ ಸ್ಪಂದಿಸಬೇಕಾದ್ದು ಕಲಾವಿದನ ಕರ್ತವ್ಯ. ನಾನು ನನ್ನದೇ ವಿಧಾನದಲ್ಲಿ, ಶಾಂತಿಯುತವಾಗಿ, ಪ್ರೀತಿಯಿಂದಲೇ ಎಲ್ಲರನ್ನೂ ಒಳಗೊಳ್ಳುವುದನ್ನು ಅಪೇಕ್ಷಿಸುತ್ತೇನೆ. ಒಬ್ಬ ಕಲಾವಿದನಾಗಿ ಈ ಸಮಾಜಕ್ಕೆ ತಿರುಗಿ ಏನನ್ನಾದರೂ ಕೊಡಬೇಕೆಂದು ಯೋಚಿಸಿದಾಗ ಈ ರಸ್ತೆ ಚಿತ್ರಗಳು ಜೀವ ತಳೆದವು. ಅವು ಉಂಟು ಮಾಡುವ ತಲ್ಲಣ, ಸಂಚಲನ, ಪ್ರಭಾವ ಮತ್ತು ಪರಿಹಾರದ ಕ್ರಮ ಇದೆಯಲ್ಲ, ಅದು ತಣ್ಣನೆಯ ಗಾಂಧಿ ಮಾರ್ಗ.

ರಸ್ತೆಯಲ್ಲಿ ಗುಂಡಿ ಬಿದ್ದು ಹೊಂಡವಾಗಿದೆ, ಸಂಚಾರಕ್ಕೆ ಅಡ್ಡಿಯಾಗಿದೆ, ಸಮಸ್ಯೆ ಸೃಷ್ಟಿಸುತ್ತಿದೆ -ಅದು ಎಲ್ಲರಿಗೂ ಅನಿಸುತ್ತದೆ. ಹೇಳಿಕೊಳ್ಳಲು ಯಾರೂ ಸಿದ್ಧರಿಲ್ಲ. ಹೇಳಿದರೂ ಯಾರು ಕೇಳುವವರಿಲ್ಲ. ಸಹಿಸಿಕೊಂಡು ಸುಮ್ಮನಾಗುವವರೇ ಎಲ್ಲ.

ಆದರೆ ಕಲಾವಿದನೊಬ್ಬ ಆ ಗುಂಡಿಗೆ ಬಣ್ಣ ತುಂಬಿ, ನೀರಿನ ಹೊಂಡ ಮಾಡಿ, ಅದರಲ್ಲೊಂದು ಮೊಸಳೆಯ ಚಿತ್ರ ಬಿಡಿಸುತ್ತಾನೆ. ರಸ್ತೆ ಮಧ್ಯೆ ಮೊಸಳೆ ನೋಡಿದವರು ಹೌಹಾರುತ್ತಾರೆ. ಅದು ಕಲೆ ಎಂದು ಗೊತ್ತಾದಾಗ, ಆ ಕಲಾಕೃತಿಯೇ ತಮ್ಮ ಮನದಾಳದ ಸಂಕಟವನ್ನು ಹೇಳುವಾಗ, ಜಡಗೊಂಡ ವ್ಯವಸ್ಥೆಗೆ ಚಿಕಿತ್ಸಕ ಗುಣದಿಂದ ಚುಚ್ಚುವಾಗ, ಕೆಲವೇ ಗಂಟೆಗಳಲ್ಲಿ ಆ ಸಮಸ್ಯೆ ಸರಿಹೋದಾಗ... ಕಲೆ ಮತ್ತು ಕಲಾವಿದನ ಬಗ್ಗೆ ಧನ್ಯತಾ ಭಾವ, ಕಲೆಗಾರನಿಗೂ.

ನೋಡು ನೋಡುತ್ತಿದ್ದಂತೆ ಆ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರಗೊಂಡು, ಕ್ಷಣಾರ್ಧದಲ್ಲಿ ಲಕ್ಷಾಂತರ ಹಿಟ್ ಪಡೆದು ವಿಶ್ವದಾದ್ಯಂತ ವೈರಲ್ ಆಗುತ್ತದೆ. ಸಮಸ್ಯೆಗೆ ಸ್ಪಂದಿಸಿದ ಕಲಾವಿದ ಕ್ಷಣಮಾತ್ರದಲ್ಲಿ ವಿಶ್ವಕ್ಕೆ ಪರಿಚಿತನಾಗುತ್ತಾನೆ.

ಇವತ್ತಿನ ಈ ನನ್ನ ಸ್ಥಿತಿಯನ್ನು ನೋಡಲು ನನ್ನಪ್ಪ ಅಮ್ಮ ಇಲ್ಲ ಎನ್ನುವುದೇ ನನ್ನ ಬಹುದೊಡ್ಡ ಕೊರಗು. ಆಗಾಗ ಮೈಸೂರಿಗೆ ಹೋಗಿ, ಅದೇ ನನ್ನ ಕೇರಿಯ, ನನ್ನವ್ವನ ವಾರಿಗೆಯ ಜನರೊಂದಿಗೆ ಕೂತು ಮಾತನಾಡಿ ಬರುತ್ತೇನೆ. ಆ ನನ್ನ ಜನ ಸುಖ, ಸಂತೋಷ, ಸಂತೃಪ್ತಿ, ಸಮೃದ್ಧಿ ಅಂದರೇನೆಂದೇ ತಿಳಿಯದವರು. ಕೊರತೆಗಳನ್ನು ಕೊರಳಿಗೆ ಸುತ್ತಿಕೊಂಡು ಕೊನೆಯುಸಿರೆಳೆವವರು. ಇವರನ್ನು ನಾನು ಚಿಕ್ಕಂದಿನಿಂದಲೂ ನೋಡಿಕೊಂಡೇ ಬೆಳೆದಿದ್ದೇನೆ. ಅದು ನನ್ನ ಬೇರು, ಸತ್ವ, ಸಾರ. ಮೆಚ್ಚಿದ ಹುಡುಗಿಯೊಂದಿಗೆ ಮದುವೆಯಾಗಿದೆ, ಮುದ್ದಾದ ಹೆಣ್ಣು ಮಗುವೊಂದಿದೆ. ಬಣ್ಣಗಳೊಂದಿಗೆ ಆಟವಾಡುತ್ತ, ನನ್ನದೇ ಲೋಕದಲ್ಲಿ ವಿಹರಿಸುತ್ತ ಕಾಲ ಕಳೆಯುವ ಭಾವಜೀವಿ ನಾನು.

ಆತ ಬಾದಲ್ ನಂಜುಂಡಸ್ವಾಮಿ. ಸಾಂಸ್ಕೃತಿಕ ನಗರಿ ಮೈಸೂರಿನ ಅಪ್ಪಟ ಕನ್ನಡಿಗ. 38 ವರ್ಷದ, ತೆಳ್ಳಗೆ, ಕಪ್ಪಗೆ, ಪುಟ್ಟ ಗಂಟಿನ ಗುಂಗುರು ಕೂದಲಿನ, ನೋಡಿದಾಕ್ಷಣ ಬಾಬ್ ಮಾರ್ಲೆ ನೆನಪಾಗುವ, ಸಹಜ ನಗು-ಬಿಗುಮಾನದ, ಅತೀ ಸಂಕೋಚದ ವ್ಯಕ್ತಿ. ಬಾದಲ್ ಹುಟ್ಟಿದ್ದು ಮೈಸೂರಿನ ಕುಕ್ಕರಹಳ್ಳಿಯ ಬಡ ಕುಟುಂಬದಲ್ಲಿ. ಉಣ್ಣಲು ಉಡಲು ಇಲ್ಲದಿದ್ದ ಪುಟ್ಟ ಮನೆಯಲ್ಲಿ. ಕಲಿತದ್ದು ಬೆಳೆದದ್ದು ಎಲ್ಲ ಕುಕ್ಕರಹಳ್ಳಿಯ ಓಣಿಯಲ್ಲಿ. ‘ಕಾವಾ’ ಕಲಾ ಕಾಲೇಜಿಗೆ ಸೇರುವವರೆಗೂ ಮೈಸೂರು ಅಂದರೆ ಕುಕ್ಕರಹಳ್ಳಿಯಷ್ಟೇ ಆಗಿದ್ದ, ಹೊರಜಗತ್ತಿಗೆ ತೆರೆದುಕೊಳ್ಳದ ಭಯಮಿಶ್ರಿತ ಬಾಲಕ. ಹೊರಗಡೆ ಹೋಗುವುದಕ್ಕೆ ಹೇಳುವವರೂ ಇಲ್ಲ, ಆತ್ಮವಿಶ್ವಾಸವೂ ಇರಲಿಲ್ಲ.

ಇಂತಹ ಹುಡುಗ ‘ಕಾವಾ’ಗೆ ಸೇರಿದಾಗ, ಕಾಲೇಜು ಫೀಸು, ಬಣ್ಣ, ಬ್ರಷ್, ಪೆನ್ಸಿಲ್, ಕಾಗದ, ಪುಸ್ತಕ ಕೊಳ್ಳಲು ಸಹ ಹಣವಿರಲಿಲ್ಲ. ಈ ಕಾಲೇಜು ನಿನಗಲ್ಲ ಎಂದವರೇ ಎಲ್ಲ. ಆದರೆ ಕರುಳು ಕಲೆಗಾಗಿ ಕಾತರಿಸುತ್ತಿತ್ತು. ಸ್ನೇಹಿತರ ಸಹಕಾರವೂ ಸಿಕ್ಕಿತು. ಕೆರೆ ಹತ್ತಿರದಲ್ಲಿದ್ದ, ವ್ಯಾಪಾರವಿಲ್ಲದೆ ಮುಚ್ಚಿದ್ದ ಬೀಡಿ ಅಂಗಡಿಯನ್ನು 2 ಸಾವಿರಕ್ಕೆ ಕೊಂಡು, ಅದನ್ನೇ ‘ಆರ್ಟ್ ಝೋನ್’ ಎಂಬ ಸ್ಟುಡಿಯೋ ಮಾಡಿ, ಅಲ್ಲಿಂದಲೇ ಸೈನ್ ಬೋರ್ಡ್ ಬರೆಯುವ ವೃತ್ತಿಯನ್ನು ಆರಂಭಿಸಿದರು. ಒಂದು ರೀತಿಯಲ್ಲಿ ‘ಕಾವಾ’ ಬಾದಲ್‌ರಿಗೆ ಜಗತ್ತನ್ನು ಪರಿಚಯಿಸಿತು, ಸಂಪೂರ್ಣವಾಗಿ ಬದಲಿಸಿತು. ಫೈನ್ ಆರ್ಟ್ಸ್ ಪದವಿ ಪೂರೈಸಿದ ಬಾದಲ್ ಕೈಗೆ 2 ಚಿನ್ನದ ಪದಕಗಳನ್ನಿಟ್ಟು ಪುರಸ್ಕರಿಸಿತು.

‘‘ರಸ್ತೆಗಳಲ್ಲಿ ಕಲಾಸೃಷ್ಟಿ ಇವತ್ತಿನದಲ್ಲ, ಮೈಸೂರಿನಲ್ಲಿದ್ದಾಗಲೇ ಶುರುವಾಗಿತ್ತು. ಸರಕಾರ ಚಾಮಲಪುರದ ಬಳಿ ಹಾರುಬೂದಿ ಅಣುಸ್ಥಾವರ ಮಾಡಲು ಮುಂದಾದಾಗ, ಅದಕ್ಕೆ ಚಿತ್ರದ ಮೂಲಕವೇ ಪ್ರತಿರೋಧ ಒಡ್ಡಿದ್ದೆ. ದಸರಾ ಲೂಟಿಯನ್ನು ಚಿತ್ರವಾಗಿಸಿದ್ದೆ. ಯಾರೋ ಮುದಿ ಕುದುರೆಯನ್ನು ಬೀದಿಗಟ್ಟಿದ್ದರು. ಅದಕ್ಕೆ ಝೀಬ್ರಾ ಥರ ಪೈಂಟ್ ಮಾಡಿ, ಅದರ ಮೇಲೆ ಕೂತು ಮೈಸೂರಿನ ರಸ್ತೆಗಳಲ್ಲಿ ಓಡಾಡಿದ್ದೆ. ಜನ ಇದು ಝೀಬ್ರಾನ, ಕುದುರೇನಾ ಎಂದು ತಲೆಕೆಡಿಸಿಕೊಂಡು ನೋಡಿದ್ದರು. ಅದನ್ನೆ ನನ್ನ ಪ್ರಾಜೆಕ್ಟ್ ಆಗಿ ಕಾಲೇಜಿಗೆ ಸಬ್‌ಮಿಟ್ ಮಾಡಿ ಸೈ ಎನಿಸಿಕೊಂಡಿದ್ದೆ.’’

‘‘ಕಲಾವಿದ ಅವನ ಪಾಡಿಗೆ ಅವನು ಪೈಂಟ್ ಮಾಡಿಕೊಂಡು ಇದ್ದುಬಿಡಬಹುದು. ಆದರೆ ನನ್ನೊಳಗಿನ ಕಲಾವಿದ ಸದಾ ದುಃಖಿ. ಅವನು ಸುಮ್ಮನಿರಲಿಕ್ಕೆ ಬಿಡುವುದಿಲ್ಲ. ಸಮಾಜದ ಆಗು-ಹೋಗುಗಳಿಗೆ ಮತ್ತು ಸಮಕಾಲೀನ ಸಮಸ್ಯೆಗಳಿಗೆ ಸ್ಪಂದಿಸಬೇಕಾದ್ದು ಕಲಾವಿದನ ಕರ್ತವ್ಯ. ನಾನು ನನ್ನದೇ ವಿಧಾನದಲ್ಲಿ, ಶಾಂತಿಯುತವಾಗಿ, ಪ್ರೀತಿಯಿಂದಲೇ ಎಲ್ಲರನ್ನೂ ಒಳಗೊಳ್ಳುವುದನ್ನು ಅಪೇಕ್ಷಿಸುತ್ತೇನೆ. ಒಬ್ಬ ಕಲಾವಿದನಾಗಿ ಈ ಸಮಾಜಕ್ಕೆ ತಿರುಗಿ ಏನನ್ನಾದರೂ ಕೊಡಬೇಕೆಂದು ಯೋಚಿಸಿದಾಗ ಈ ರಸ್ತೆ ಚಿತ್ರಗಳು ಜೀವ ತಳೆದವು. ಅವು ಉಂಟು ಮಾಡುವ ತಲ್ಲಣ, ಸಂಚಲನ, ಪ್ರಭಾವ ಮತ್ತು ಪರಿಹಾರದ ಕ್ರಮ ಇದೆಯಲ್ಲ, ಅದು ತಣ್ಣನೆಯ ಗಾಂಧಿ ಮಾರ್ಗ.

‘‘ಪದವಿ ಪಡೆದ ನಂತರ ಬೆಂಗಳೂರಿಗೆ ಬಂದೆ, ಓ ಆ್ಯಂಡ್ ಎಂ ಎಂಬ ಜಾಹೀರಾತು ಸಂಸ್ಥೆಗೆ ಸೇರಿದೆ. ಆದರೆ ನನ್ನೊಳಗಿನ ಕಲಾವಿದನಿಗೆ ನಾಲ್ಕು ಗೋಡೆಗಳ ನಡುವೆ ಕಟ್ಟಿಹಾಕಿಸಿಕೊಳ್ಳುವುದು ಇಷ್ಟವಾಗದೆ, ಕೆಲಸ ಬಿಟ್ಟೆ, ಫ್ರೀಲಾನ್ಸ್ ಮಾಡಲು ಬೀದಿಗಿಳಿದೆ. ಸುಲ್ತಾನ್ ಪಾಳ್ಯದಲ್ಲಿ ಮನೆ ಮಾಡಿದೆ. ಪ್ರತಿದಿನ ಓಡಾಡುವಾಗ ರಸ್ತೆಯಲ್ಲಿ ಗುಂಡಿ ಕಂಡೆ. ನನ್ನಂತೆಯೇ ಆ ಗುಂಡಿಯೊಂದಿಗೇ ಹೊಂದಾಣಿಕೆ ಮಾಡಿಕೊಂಡಿದ್ದ, ಹೇಳಲಾಗದ ಅಸಹಾಯಕ ಜನರನ್ನು ಕಂಡೆ. ಮನ ಕರಗಿತು. ನನ್ನೊಳಗಿನ ಕಲಾವಿದ ಜಾಗೃತನಾದ, ರಸ್ತೆಯಲ್ಲಿ ಮೊಸಳೆ ಚಿತ್ರ ಬಿಡಿಸಿದೆ. ಅದು ಬೀರಿದ ಪರಿಣಾಮ ಪದಗಳಲ್ಲಿ ವಿವರಿಸಲಿಕ್ಕಾಗುವುದಿಲ್ಲ. ದಿನ ಬೆಳಗಾಗುವುದರೊಳಗೆ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿ, ಇಡೀ ಜಗತ್ತಿಗೆ ನನ್ನನ್ನು ಪರಿಚಯಿಸಿತು. ಆ ಸೀರೀಸ್‌ನಲ್ಲಿ ಇಲ್ಲಿಯವರೆಗೆ 50ಕ್ಕೂ ಹೆಚ್ಚು ಚಿತ್ರಗಳನ್ನು ಮಾಡಿದ್ದೇನೆ.

ಸುದ್ದಿ ಮಾಧ್ಯಮಗಳು ಗುರುತಿಸಿ ಪ್ರಚಾರ ನೀಡಿವೆ. ಗಣ್ಯರು ಕೈ ಕುಲುಕಿ, ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಾರೆ. ಚಿತ್ರನಟಿ ಶ್ವೇತಾ ಶ್ರೀವಾಸ್ತವ್, ತುಂಬು ಗರ್ಭಿಣಿ, ತನ್ನ ಹೊಟ್ಟೆಯ ಮೇಲೆ ಮಗುವಿನ ಚಿತ್ರ ಬಿಡಿಸಿಕೊಂಡು ಸಂಭ್ರಮಿಸಿದರು. ಚಿತ್ರಗಳನ್ನು ಇನ್ಸ್‌ಟಾಗ್ರಾಮ್‌ಗೆ ಹಾಕಿ ಇನ್ನಷ್ಟು ಪ್ರಚಾರ ನೀಡಿದರು. ಈ ನಡುವೆ ಮೂರು ಕನ್ನಡ ಚಲನಚಿತ್ರಗಳಿಗೆ ಕಲಾನಿರ್ದೇಶನ ಮಾಡಿದೆ. ವಿಶ್ವವಿಖ್ಯಾತ ಪೂಮಾ ಶೂ ಕಂಪೆನಿಯವರು ಒಂದು ಜಾಹೀರಾತಿಗೆ ನನ್ನನ್ನು ಮಾಡೆಲ್ ಆಗಿ ಬಳಸಿಕೊಂಡಿದ್ದಾರೆ. ಬೇಡಿಕೆ ಇದೆ. ಬ್ಯುಸಿಯಾಗಿದ್ದೇನೆ.

‘‘ಇವತ್ತಿನ ಈ ನನ್ನ ಸ್ಥಿತಿಯನ್ನು ನೋಡಲು ನನ್ನಪ್ಪ ಅಮ್ಮ ಇಲ್ಲ ಎನ್ನುವುದೇ ನನ್ನ ಬಹುದೊಡ್ಡ ಕೊರಗು. ಆಗಾಗ ಮೈಸೂರಿಗೆ ಹೋಗಿ, ಅದೇ ನನ್ನ ಕೇರಿಯ, ನನ್ನವ್ವನ ವಾರಿಗೆಯ ಜನರೊಂದಿಗೆ ಕೂತು ಮಾತನಾಡಿ ಬರುತ್ತೇನೆ. ಆ ನನ್ನ ಜನ ಸುಖ, ಸಂತೋಷ, ಸಂತೃಪ್ತಿ, ಸಮೃದ್ಧಿ ಅಂದರೇನೆಂದೇ ತಿಳಿಯದವರು. ಕೊರತೆಗಳನ್ನು ಕೊರಳಿಗೆ ಸುತ್ತಿಕೊಂಡು ಕೊನೆಯುಸಿರೆಳೆವವರು. ಇವರನ್ನು ನಾನು ಚಿಕ್ಕಂದಿನಿಂದಲೂ ನೋಡಿಕೊಂಡೇ ಬೆಳೆದಿದ್ದೇನೆ. ಅದು ನನ್ನ ಬೇರು, ಸತ್ವ, ಸಾರ. ಮೆಚ್ಚಿದ ಹುಡುಗಿಯೊಂದಿಗೆ ಮದುವೆಯಾಗಿದೆ, ಮುದ್ದಾದ ಹೆಣ್ಣು ಮಗುವೊಂದಿದೆ. ಬಣ್ಣಗಳೊಂದಿಗೆ ಆಟವಾಡುತ್ತ, ನನ್ನದೇ ಲೋಕದಲ್ಲಿ ವಿಹರಿಸುತ್ತ ಕಾಲ ಕಳೆಯುವ ಭಾವಜೀವಿ ನಾನು.

ಗೌರಿ ಲಂಕೇಶ್ ಕೊಲೆ ನೋಡಿ ತುಂಬಾ ಡಿಸ್ಟರ್ಬ್ ಆದೆ. ದೇಶದ ಸದ್ಯದ ಸ್ಥಿತಿ ಅಷ್ಟು ಸರಿ ಇಲ್ಲ. ಇಲ್ಲಿ ಪ್ರಶ್ನೆ ಮಾಡೋದು, ಪ್ರತಿಕ್ರಿಯಿಸೋದು, ಕಳಕಳಿ ವ್ಯಕ್ತಪಡಿಸೋದು, ಅವುಗಳಿಗೆ ಬರುತ್ತಿರುವ ಪ್ರತಿಕ್ರಿಯೆ... ಇವೆಲ್ಲ ನನ್ನನ್ನು ಘಾಸಿಗೊಳಿಸಿದೆ. ಆದರೂ ಬಣ್ಣದ ಬದುಕನ್ನು ಬಿಡಲ್ಲ. ಕೆಟ್ಟ ಹಾದಿಗೆ ಕೈ ಹಾಕಲ್ಲ. ಇರುವಷ್ಟು ದಿನ ಬಣ್ಣದೊಂದಿಗೇ ಬದುಕುತ್ತೇನೆ. ಬದುಕುತ್ತಲೇ ಸಮಾಜಕ್ಕಾಗಿ, ಜನ ಮಾಡುತ್ತಾರೋ ಬಿಡುತ್ತಾರೋ, ಒಳ್ಳೆಯವರೋ ಕೆಟ್ಟವರೋ, ನನಗದು ಬೇಕಾಗಿಲ್ಲ. ನನ್ನದೇ ಆದ ತಣ್ಣನೆಯ ಪ್ರತಿಭಟನೆಯ ಮಾರ್ಗದಲ್ಲಿ ಮುನ್ನಡೆಯುತ್ತೇನೆ’’ ಎನ್ನುವ ಬಾದಲ್ ನಂಜುಂಡಸ್ವಾಮಿ, ನಮ್ಮ ನಡುವಿನ ಅಪರೂಪದ, ಅದ್ಭುತ ಕಲಾವಿದ.

Writer - ಬಸು ಮೇಗಲಕೇರಿ

contributor

Editor - ಬಸು ಮೇಗಲಕೇರಿ

contributor

Similar News