ಹೊಸ ಪ್ರಬಲ ವಿಪಕ್ಷ ವ್ಯಂಗ್ಯ

Update: 2017-11-04 12:09 GMT

ಹಲವು ಘೋರ ವೈಫಲ್ಯಗಳ ಹೊರತಾಗಿಯೂ ಸರಕಾರ ತಾನು ಅಭೂತಪೂರ್ವ ಸಾಧನೆ ಮಾಡಿದ್ದೇನೆ ಎಂಬಂತೆ ಪೋಸು ಕೊಡುತ್ತಿದೆ. ಅದನ್ನು ಅದರ ಹಿಂಬಾಲಕರು ವ್ಯಾಪಕವಾಗಿ ಪ್ರಚಾರ ಮಾಡುತ್ತಿದ್ದಾರೆ. ಬೆರಳೆಣಿಕೆಯ ಕೆಲವರನ್ನು ಬಿಟ್ಟರೆ ಬಹುತೇಕ ಮಾಧ್ಯಮ ಸರಕಾರದ ವಕ್ತಾರವಾಗಿಬಿಟ್ಟಿದೆ. ಹೀಗಿರುವಾಗ ಹಾಸ್ಯದ ಈ ಪ್ರಕಾರವೇ ಹೊಸ ವಿಪಕ್ಷವಾಗಿ ಜನರಿಗೆ ಕಂಡಿದೆ.

ವರ್ಲ್ಡ್ ಹ್ಯಾಪಿನೆಸ್ ರಿಪೋರ್ಟ್ 2017ನಲ್ಲಿರುವ ಒಟ್ಟು 155 ದೇಶಗಳ ಪಟ್ಟಿಯಲ್ಲಿ ಭಾರತಕ್ಕೆ 122 ನೆ ಸ್ಥಾನ ! ಆಂತರಿಕ ಸಂಕಟಗಳಿಂದ ನರಳುತ್ತಿರುವ ಪಾಕಿಸ್ತಾನ, ಬಾಂಗ್ಲಾದೇಶ, ಸೋಮಾಲಿಯಾ ಸಹಿತ ಆಫ್ರಿಕಾದ ಹಲವು ದೇಶಗಳ ಹೆಸರು ಈ ಪಟ್ಟಿಯಲ್ಲಿ ಭಾರತಕ್ಕಿಂತ ಮೇಲಿದೆ ! ಹಾಗಾಗಿ ನಮಗೆ, ಭಾರತೀಯರಿಗೆ ಅಷ್ಟು ಸುಲಭದಲ್ಲಿ ನಗು ಬರುವುದಿಲ್ಲ . ನಮ್ಮನ್ನು ನಗಿಸುವುದೆಂದರೆ ತಮಾಷೆಯ ಮಾತಲ್ಲ. ಏಕೆಂದರೆ ಅಲ್ಪಸ್ವಲ್ಪ ನಗುವುದರಲ್ಲೇ ನಮಗೆ ತೃಪ್ತಿ ಎಂದು ದೂರಬಹುದು. ಇನ್ನೊಂದು ವಾದ ಏನೆಂದರೆ, ಪರಿಸ್ಥಿತಿ ಇಷ್ಟು ಕೆಟ್ಟದಾಗಿರುವಾಗ ಜನರು ಹೇಗಾದರೂ ನಗಲು ಕಾರಣ ಹುಡುಕುತ್ತಿರುತ್ತಾರೆ. ಹಾಗಾಗಿ ನಮ್ಮ ಜನರನ್ನು ನಗಿಸುವುದು ಬಹಳ ಸುಲಭ. ಆದ್ದರಿಂದ ಇಂದು ಭಾರತದಲ್ಲಿ ಕಾಮಿಡಿ ಬಹಳ ದೊಡ್ಡ ಉದ್ಯಮ. ಟಿವಿಯಲ್ಲಿ ಕುಟುಂಬ ಧಾರಾವಾಹಿಗಳನ್ನು ಬಿಟ್ಟರೆ ಅತೀಹೆಚ್ಚು ಹಿಟ್ ಆಗುತ್ತಿರುವುದು ಕಾಮಿಡಿ ಶೋಗಳು. ಕಪಿಲ್ ಶರ್ಮಾ ಯಾವ ಬಾಲಿವುಡ್ ಸ್ಟಾರ್‌ಗೆ ಕಡಿಮೆಯಿದ್ದಾನೆ ಹೇಳಿ. ಇತ್ತೀಚೆಗೆ ವಿವಾದಕ್ಕೊಳಗಾಗಿ ಸ್ವಲ್ಪ ಮಂಕಾಗಿದ್ದರೂ ಈಗಲೂ ಆತನ ಷೋ ತಪ್ಪದೆ ನೋಡುವವರ ಸಂಖ್ಯೆ ದೊಡ್ಡದಿದೆ. ಇನ್ನು ಆನ್‌ಲೈನ್ ನಲ್ಲಂತೂ ಹಾಸ್ಯದ ಪ್ರವಾಹವೇ ಹರಿದು ಬರುತ್ತಿದೆ. ಸುಮ್ಮನೆ ಗೂಗಲ್ ನಲ್ಲಿ “Comedy in India”  ಎಂದು ಟೈಪಿಸಿ ನೋಡಿ. ಕ್ಷಣದೊಳಗೆ ಲಕ್ಷ ಅಲ್ಲ, ಕೋಟಿ ಕೋಟಿ ಸಂಖ್ಯೆಯಲ್ಲಿ ವೀಡಿಯೊಗಳು, ಆಡಿಯೊಗಳು, ಫೋಟೊಗಳು ... ಅಬ್ಬಬ್ಬಾ. ಇದರ ಜೊತೆ ಈಗ ಸ್ಟ್ಯಾಂಡ್ ಅಪ್ ಕಾಮಿಡಿ ಷೋಗಳು ಭಾರೀ ಜನಪ್ರಿಯತೆ ಪಡೆಯುತ್ತಿವೆ. ದೊಡ್ಡ ದೊಡ್ಡ ನಗರಗಳಲ್ಲಿ ಮಾತ್ರವಲ್ಲ, ಮಧ್ಯಮ, ಸಣ್ಣ ಊರುಗಳಲ್ಲೂ ವಾರಾಂತ್ಯಗಳಲ್ಲಿ, ಯಾವುದಾದರೂ ಕಾರ್ಯಕ್ರಮಗಳಲ್ಲಿ ಕಾಮಿಡಿ ಷೋ ನಡೆಯುತ್ತಲೇ ಇವೆ. ಈ ಷೋ ಗಳಿಗೆ ಈಗಾಗಲೇ ಕಾಮಿಡಿ ಸ್ಟಾರ್ ಗಳೆಂದು ಖ್ಯಾತಿ ಪಡೆದವರಿಂದ ಹಿಡಿದು ಹೊಸ ಹೊಸ ಮುಖಗಳೂ ನಮ್ಮನ್ನು ನಗಿಸಲು ಮೈಕಿನ ಮುಂದೆ ಬಂದು ನಿಲ್ಲುತ್ತಾರೆ.

ಸೃಜನಶೀಲ, ಹೊಸ ಜೋಕುಗಳಿಗೆ ನಮ್ಮಲ್ಲಿ ಯಾವತ್ತೂ ಮಾರ್ಕೆಟ್ ಇದೆ. ಈಗ ಆ ಮಾರುಕಟ್ಟೆ ವೇಗವಾಗಿ ಬೆಳೆಯುತ್ತಿದೆ. ಹಿಟ್ ಆದ ಕಾಮಿಡಿ ಕಲಾವಿದರು ಈಗ ಸಿನೆಮಾ ನಟರನ್ನು ಮೀರಿಸುವ ಸೂಪರ್ ಸ್ಟಾರ್‌ಗಳಾಗಿದ್ದಾರೆ. ಭಾರತದಲ್ಲಿ ಮಾತ್ರವಲ್ಲ ವಿಶ್ವದಾದ್ಯಂತ ಷೋ ನೀಡುತ್ತಾರೆ. ಭಾರೀ ಶುಲ್ಕ ಜೇಬಿಗಿಳಿಸುತ್ತಾರೆ. ವಿಲಾಸಿ ಜೀವನ ನಡೆಸುತ್ತಾರೆ. ಅಮೆಝಾನ್, ನೆಟ್ ಫ್ಲಿಕ್ಸ್ ಮತ್ತಿತರ ಸ್ಟ್ರೀಮಿಂಗ್ ಸೇವೆಗಳ ಕಂಪೆನಿಗಳು ಈಗ ಹಾಸ್ಯದ ಮೇಲೆ ಭಾರೀ ಬಂಡವಾಳ ಹೂಡಿ ಅದರಿಂದ ಲಾಭ ಗಳಿಸುತ್ತಿವೆ. ಹಾಗಾಗಿ ಈಗ ದೇಶದಲ್ಲಿ ಒರಿಜಿನಲ್ ಹಾಸ್ಯ ಸೃಷ್ಟಿಸುವವರಿಗೆ ಸುಗ್ಗಿ ಕಾಲ. ಇದರ ಇನ್ನೊಂದು ಗುಣಾತ್ಮಕ ವಿಷಯವೇನೆಂದರೆ, ಈ ಬಂಡವಾಳ ಹೊಸ ಪ್ರತಿಭೆಗಳಿಗೆ ಉಜ್ವಲ ಅವಕಾಶ ಒದಗಿಸುತ್ತಿದೆ. ದಿನಕ್ಕೊಬ್ಬ ಹೊಸ ಹಾಸ್ಯ ಕಲಾವಿದ ನಮ್ಮ ಮುಂದೆ ಬರುತ್ತಾನೆ. ನಿಜವಾದ ಪ್ರತಿಭೆಯಿದ್ದ ಕಲಾವಿದ ಬೆಳೆಯುತ್ತಾನೆ. ಅಂತೂ ವೇದಿಕೆ, ಅವಕಾಶಕ್ಕೆ ಈಗ ಕೊರತೆ ಇಲ್ಲವೇ ಇಲ್ಲ.

ಕಿರುತೆರೆಯಲ್ಲಿ ಈಗ ದೊಡ್ಡ ಕ್ರೇಜ್ ಆಗಿರುವ ಕಪಿಲ್ ಶರ್ಮಾ, ಸುನಿಲ್ ಗ್ರೋವರ್, ರಾಜು ಶ್ರೀವಾಸ್ತವ್‌ಗಳ ಕಾಮಿಡಿ ಶೋಗಳ ಜನಪ್ರಿಯತೆ ನಿಧಾನವಾಗಿ ಕಡಿಮೆಯಾ ಗುತ್ತಿರುವ ಲಕ್ಷಣಗಳಿವೆ. ಆದರೆ ಇದಕ್ಕಿಂತ ಭಿನ್ನವಾದ ಹಾಸ್ಯದ ಬಗೆಯೊಂದು ಜನಮನ ದಲ್ಲಿ ಬಹಳ ವೇಗವಾಗಿ, ಅಷ್ಟೇ ಆಳವಾಗಿ ಇಳಿಯುತ್ತಿದೆ. ಜನಜೀವನದ ನಾಡಿಮಿಡಿತ ಬಲ್ಲ, ಜನಸಾಮಾನ್ಯರ ಸಂಕಟವನ್ನು ಅನುಭವಿಸುವ, ಅದಕ್ಕೆ ಹಾಸ್ಯದ ಮೂಲಕ ಸ್ಪಂದಿಸುವ ಯುವ ಪ್ರತಿಭಾವಂತ ಕಲಾವಿದರ ದೊಡ್ಡ ಪಡೆಯೇ ಇವತ್ತು ದೇಶದ ಗಮನ ಸೆಳೆಯುತ್ತಿದೆ. ಆಳುವವರಿಗೆ ಪ್ರಶ್ನೆ ಕೇಳಲು ಹಿಂಜರಿಯದೆ ಇರುವುದು ಹಾಗೂ ಅಳುವವರನ್ನು ಚುಚ್ಚುವುದು - ಇವೆರಡು ಈ ಯುವ ಹಾಸ್ಯ ಕಲಾವಿದರ ಹೆಗ್ಗಳಿಕೆ.

 ಅಭಿವ್ಯಕ್ತಿ ಸ್ವಾತಂತ್ರವನ್ನು ಯಾವುದೇ ಮಿತಿ, ನಿರ್ಬಂಧ, ಶರತ್ತುಗಳಿಲ್ಲದೆ ಬಳಸಿಕೊಳ್ಳುವುದು ಇವರ ವಿಶೇಷತೆ. ಅಧಿಕಾರದಲ್ಲಿದ್ದವರ ಕಾಲೆಳೆದರೆ ಎಲ್ಲಿ ನಮಗೆ ಅದು ದುಬಾರಿಯಾಗಿ ಬಿಡುವುದೋ ಎಂಬ ದೂರದ ಯೋಚನೆಯೂ ಈ ಪೀಳಿಗೆಯಲ್ಲಿಲ್ಲ. ಅವರಿಗೆ ಅನಿಸಿದ್ದನ್ನು ನೇರವಾಗಿ, ಮುಲಾಜಿಲ್ಲದೆ ಹೇಳಿಬಿಡುವುದು ಅವರ ಸ್ವಭಾವ. ಅದು ಯಾರ ವಿರುದ್ಧ ಇದೆ, ಅದರಲ್ಲಿ ಯಾರ ಪರ ಧ್ವನಿಸುತ್ತದೆ ಎಂಬುದರ ಬಗ್ಗೆ ಅವರು ತಲೆಕೆಡಿಸಿಕೊಳ್ಳುವುದಿಲ್ಲ. ಆ ಸಂದರ್ಭಕ್ಕೆ ಅದು ‘ಕ್ಲಿಕ್’, ಜನರ ಮನಸ್ಸಿಗೆ ನಾಟಬೇಕು, ಅವರು ಹೊಟ್ಟೆತುಂಬಾ ನಗಬೇಕು - ಇವಿಷ್ಟು ಅವರ ಗುರಿ.

ಕಾಮಿಡಿಯ ಈ ಪ್ರಕಾರ ತೀರಾ ಹೊಸತೇನಲ್ಲ. ಆದರೆ ಇತ್ತೀಚಿನ ವರ್ಷಗಳಲ್ಲಿ ದೇಶದಲ್ಲಿ ನಿರ್ಮಾಣವಾಗಿರುವ ಸನ್ನಿವೇಶದಲ್ಲಿ ಇದು ಅಪರಿಚಿತ. ಹಾಗಾಗಿ ಇದು ಹೊಸತು. ಅಚ್ಛೇ ದಿನ್ ಕೊಡುತ್ತೇವೆ ಎಂದು ಭರವಸೆ ನೀಡಿ ಬಂದಿರುವ ಸರಕಾರ ತಮ್ಮ ಬದುಕನ್ನೇ ದುರ್ಭರ ಮಾಡುತ್ತಿದೆ ಎಂಬ ಅಸಮಾಧಾನ, ಆಕ್ರೋಶ ಜನಮಾನಸದಲ್ಲಿದೆ. ಆದರೆ ಆ ಆಕ್ರೋಶಕ್ಕೆ ಧ್ವನಿ ನೀಡುವ ಪರ್ಯಾಯ ರಾಜಕೀಯ ಶಕ್ತಿಗಳೇ ಜನರಿಗೆ ಎಲ್ಲೂ ಕಾಣುತ್ತಿಲ್ಲ. ವಿಪಕ್ಷಗಳು ಇವೋ, ಇಲ್ಲವೋ ಎಂಬಷ್ಟು ಸವಕಲಾಗಿವೆ. ಜನರ ಪರವಾಗಿ ಮಾತನಾಡುವ ರಾಜಕೀಯೇತರ ಧ್ವನಿಗಳನ್ನು ಕೇಳುವವರೇ ಇಲ್ಲವಾಗುತ್ತಿದೆ. ಪ್ರಗತಿಪರರು ಹೇಳಿದ್ದು ಪ್ರಗತಿಪರರನ್ನು ದಾಟಿ ಜನರನ್ನು ತಲುಪುತ್ತಿಲ್ಲ ಎಂಬ ಸಂಶಯ ಬಲವಾಗಿದೆ.

ಹಲವು ಘೋರ ವೈಫಲ್ಯಗಳ ಹೊರತಾಗಿಯೂ ಸರಕಾರ ತಾನು ಅಭೂತಪೂರ್ವ ಸಾಧನೆ ಮಾಡಿದ್ದೇನೆ ಎಂಬಂತೆ ಪೋಸು ಕೊಡುತ್ತಿದೆ. ಅದನ್ನು ಅದರ ಹಿಂಬಾಲಕರು ವ್ಯಪಕವಾಗಿ ಪ್ರಚಾರ ಮಾಡುತ್ತಿದ್ದಾರೆ. ಬೆರಳೆಣಿಕೆಯ ಕೆಲವರನ್ನು ಬಿಟ್ಟರೆ ಬಹುತೇಕ ಮಾಧ್ಯಮ ಸರಕಾರದ ವಕ್ತಾರವಾಗಿಬಿಟ್ಟಿದೆ. ಹೀಗಿರುವಾಗ ಹಾಸ್ಯದ ಈ ಪ್ರಕಾರವೇ ಹೊಸ ವಿಪಕ್ಷವಾಗಿ ಜನರಿಗೆ ಕಂಡಿದೆ.

ಅದರಲ್ಲೂ ಯುವಜನತೆಯಂತೂ ಈ ಸ್ಟಾಂಡ್‌ಆಪ್ ಕಾಮಿಡಿಯನ್‌ಗಳ ಹಾಸ್ಯಕ್ಕೆ ಮಾರುಹೋಗಿವೆೆ. ಆಳುವವರ ಭಕ್ತರಿಗೆ ಇದರ ಬಿಸಿ ಎಲ್ಲಿಗೆ ತಾಗಬೇಕೋ ಅಲ್ಲಿಗೆ ಸರಿಯಾಗಿಯೇ ತಾಗಿದೆ. ಹಾಗಾಗಿ ಈಗ ದೇಶದಲ್ಲಿ ಈ ಹಾಸ್ಯವೇ ಪ್ರತಿಪಕ್ಷವಾಗಿ, ಅದರ ಕಲಾವಿದರೇ ಪ್ರತಿಪಕ್ಷ ನಾಯಕರಂತೆ ಜನರಿಗೆ ಕಾಣುತ್ತಿದ್ದಾರೆ. ಜನರು ಅವರ ಧ್ವನಿಗೆ ಧ್ವನಿ ಸೇರಿಸುತ್ತಿದ್ದಾರೆ. ಒಟ್ಟಾರೆ ಈ ಕಾಮಿಡಿ ಸೂಪರ್ ಹಿಟ್ ಆಗಿದೆ.

ವೀರ್ ದಾಸ್, ಸೌರಭ್ ಪಂತ್, ಅದಿತಿ ಮಿತ್ತಲ್, ಕೆನ್ನಿ ಸೆಬಾಸ್ಟಿಯನ್, ವರುಣ್ ಗ್ರೋವರ್, ವಿಪುಲ್ ಗೋಯಲ್, ಝಾಕಿರ್ ಖಾನ್, ಅಬಿಶ್ ಮ್ಯಾಥ್ಯು, ವಸು ಪ್ರಿಮ್ಲನಿ, ಅಮಿತ್ ಟಂಡನ್, ಕುನಾಲ್ ಕಾಮ್ರಾ, ಅಭಿಜಿತ್ ಗಂಗೂಲಿ ... ಹೀಗೆ ಈ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಇವರದ್ದು ನವಿರು ಹಾಸ್ಯವಲ್ಲ. ಇದು ಮುಲಾಜಿಲ್ಲದ, ಸಭ್ಯತೆಯ ಹಂಗಿಲ್ಲದ, ರಾಜಕೀಯವಾಗಿ ಸರಿ ಇರಬೇಕಾದ ನಾಜೂಕಿಲ್ಲದ, ಅಂಜಿಕೆ - ಅಳುಕಿಲ್ಲದ ಸೀದಾ ಸಾದಾ ಜೋಕುಗಳ ಪ್ರವಾಹ. ಇಲ್ಲಿ ಪ್ರಧಾನಿಯೂ , ವಿಪಕ್ಷ ನಾಯಕರೂ ಜೋಕಿಗೆ ವಸ್ತುವಾಗುತ್ತಾರೆ. ಅತ್ತೆ ಮಾತ್ರವಲ್ಲ ತಂದೆ ತಾಯಿಯೂ ಇವರಿಂದ ತಮಾಷೆಗೆ ಗುರಿಯಾಗುತ್ತಾರೆ. ಸಂಪ್ರದಾಯ, ಧಾರ್ಮಿಕ ನಂಬಿಕೆಗಳು ಎಲ್ಲವನ್ನೂ ಕಾಮಿಡಿಯ ಸೂಜಿಯಿಂದ ಚುಚ್ಚುತ್ತಲೇ ಹೋಗುವುದು ಇಲ್ಲಿ ಸಾಮಾನ್ಯ. ಇವರು ಸ್ತ್ರೀ ಸ್ವಾತಂತ್ರ , ಮುಕ್ತ ಲೈಂಗಿಕತೆಯನ್ನು ಬಲವಾಗಿ ಪ್ರತಿಪಾದಿಸುತ್ತಾರೆ. ದೇಶಭಕ್ತಿಯ , ಸೇನೆಯ ಹೆಸರು ಹೇಳಿಕೊಂಡು ಅಧಿಕಾರದಲ್ಲಿರುವವರು ಜನರ ಬದುಕಿನೊಂದಿಗೆ ಚೆಲ್ಲಾಟ ಆಡುವುದನ್ನು ಇವರು ಸಹಿಸುವುದಿಲ್ಲ. ಇವರ ಭಾಷೆಯಲ್ಲಿ ‘ಅವಾಚ್ಯ’ ಎಂದು ಪರಿಗಣಿಸುವ ಪದಗಳೇ ಇಲ್ಲ. ಸಾಮಾನ್ಯವಾಗಿ ಪತ್ರಿಕೆಗಳು....... ಹಾಕಿ ಮುಂದೆ ಸಾಗುವ, ಟಿವಿ ಚಾನಲ್‌ಗಳು ಮ್ಯೂಟ್ ಮಾಡುವ ಪದಗಳು ಇವರ ಕಾರ್ಯಕ್ರಮದಲ್ಲಿ ಓತಪ್ರೋತವಾಗಿ ಹರಿಯುತ್ತವೆ. ಒಟ್ಟಾರೆ ಸೆನ್ಸಾರ್ ಇಲ್ಲದ ಮನರಂಜನೆ ಇವರದ್ದು. ಹಾಗಾಗಿ ಒಮ್ಮೆ ಇವರ ಕಾಮಿಡಿ ಕೇಳಿ ಚಪ್ಪಾಳೆ ಹೊಡೆದು ಸಂಭ್ರಮಿಸಿದವರು ಇನ್ನೊಮ್ಮೆ ಭುಸುಗುಡುತ್ತಾ ಎದ್ದುಹೋಗುವ ನಿದರ್ಶನಗಳು ಬೇಕಾದಷ್ಟಿವೆ. ಸರಕಾರವನ್ನು ಪ್ರಶ್ನಿಸುವುದೇ ದೇಶದ್ರೋಹ ಎಂಬಂತಹ ವಾತಾವರಣದಲ್ಲಿ ಈ ಕಲಾವಿದರು ನೇರವಾಗಿ ಸರಕಾರದ ನೀತಿಗಳನ್ನು ಟೀಕಿಸುತ್ತಾರೆ. ಸರಕಾರ ಎಲ್ಲಿ ಎಡವಿದೆ ಎಂದು ಎತ್ತಿ ತೋರಿಸುತ್ತಾರೆ. ಪ್ರತಿಪಕ್ಷಗಳೂ ಹೇಳಲು ಹಿಂಜರಿಯುವಲ್ಲಿ ಇವರು ಎದುರಿದ್ದವರು ಯಾರು ಎಂದು ನೋಡದೆ ಹಿಗ್ಗಾಮುಗ್ಗಾ ಸರಕಾರದ ವಿರುದ್ಧ ವಾಗ್ಬಾಣಗಳನ್ನು ಬಿಡುತ್ತಲೇ ಹೋಗುತ್ತಾರೆ. ಹಾಗಾಗಿ ಯಾರಿಗೂ ಹೆದರದೆ ಇದ್ದ ಪ್ರಭುತ್ವ ಬೆಚ್ಚಿ ಬಿದ್ದಿದೆ. ಪ್ರಭುತ್ವದ ಹಿಂಬಾಲಕರು, ಭಕ್ತರು, ಟ್ರೋಲ್ ಪಡೆಗಳು ಇವರ ವಿರುದ್ಧ ಸಮರ ಸಾರಿದ್ದಾರೆ. ಇದರರ್ಥ ಇವರು ಬಿಟ್ಟ ಬಾಣ ನೇರವಾಗಿ ಎದೆಗೆ ನಾಟಿದೆ. ಬುಡ ಅಲುಗಾಡಿದೆ. ಹಾಗೆ ನೋಡಿದರೆ , ಇಷ್ಟರವರೆಗೆ ಮಂಕು ಕವಿದಂತೆ ಇದ್ದ ರಾಹುಲ್ ಗಾಂಧಿ ಈಗ ಸ್ವಲ್ಪ ಚೇತರಿಸಿಕೊಂಡಿರುವುದು ಹಾಸ್ಯ, ಲೇವಡಿ, ಕುಟುಕುಗಳ ಮೂಲಕವೇ.

ದೇಶಭಕ್ತಿ ಹಾಗೂ ಸರಕಾರ ಎಂಬ ವಿಷಯದಲ್ಲಿ ಕುನಾಲ್ ಕಾಮ್ರಾನ ವೀಡಿಯೊವನ್ನು ಕೇವಲ ಯೂಟ್ಯೂಬ್ ನಲ್ಲಿ ಈವರೆಗೆ 222 ಲಕ್ಷಕ್ಕೂ ಹೆಚ್ಚು ಮಂದಿ ನೋಡಿದ್ದಾರೆ. ಇನ್ನು ಫೇಸ್ ಬುಕ್ ನಲ್ಲಿ, ವಾಟ್ಸ್‌ಆ್ಯಪ್‌ನಲ್ಲಿ ನೇರವಾಗಿ ಡೌನ್‌ಲೋಡ್ ಮಾಡಿಕೊಂಡು ನೋಡಿದವರ ಸಂಖ್ಯೆ ಇನ್ನೂ ದೊಡ್ಡದಿದೆ. ಸೇನೆ, ದೇಶಭಕ್ತಿ, ನೋಟು ರದ್ಧ್ದತಿ, ತೆರಿಗೆ, ಸರಕಾರದ ಜವಾಬ್ದಾರಿ ಇತ್ಯಾದಿಗಳ ಬಗ್ಗೆ ಈ ವೀಡಿಯೊದಲ್ಲಿ ಕುನಾಲ್ ಚರ್ಚಿಸಿದ್ದಾರೆ. ಕಾಮಿಡಿಯಾಗಿ!

ಆದರೆ ಈ ಕಾಮಿಡಿ ವೀಡಿಯೊ ಎಲ್ಲ ಪ್ರತಿಪಕ್ಷಗಳು ಒಟ್ಟು ಸೇರಿ ಮಾಡಬಹುದಾದಕ್ಕಿಂತ ಹೆಚ್ಚು ಜಾಗೃತಿಯನ್ನು, ಎಚ್ಚರಿಕೆಯನ್ನು ಜನರಲ್ಲಿ ತಂದಿದೆ. ಇದರ ಯಶಸ್ಸು ಟ್ರೋಲ್ ಪಡೆಗಳ ನಿದ್ದೆಗೆಡಿಸಿದೆ. ಅದಕ್ಕಾಗಿ ಕುನಾಲ್ ಹಿಂದೆ ಬಿದ್ದವು ಈ ಪಡೆಗಳು. ಮೊದಲು ಆತನನ್ನು ಸಾಮಾಜಿಕ ಜಾಲತಾಣಗಳಲ್ಲಿ ತಮಾಷೆ ಮಾಡಲಾಯಿತು. ವಾಟ್ಸ್ ಆ್ಯಪ್ ಗ್ರೂಪ್‌ಗಳಿಗೆ ಆತನನ್ನು ಬಲವಂತವಾಗಿ ಸೇರಿಸಿ ಕಿರಿಕಿರಿ ಸೃಷ್ಟಿಸಲಾಯಿತು. ಮತ್ತೆ ಆತನ ವಿರುದ್ಧ ಅವಾಚ್ಯ ಪದ ಬಳಸಿ ಅವಹೇಳನ ಮಾಡಲಾಯಿತು. ಕೊನೆಗೆ ಎಲ್ಲಿಗೆ ತಲುಪಿತೆಂದರೆ, ಆತನ ಮನೆಯ ವಿಳಾಸ, ಮೊಬೈಲ್ ನಂಬರ್ ಬಹಿರಂಗಪಡಿಸಿ, ಕೊಲೆ ಬೆದರಿಕೆ ಹಾಕಲಾಯಿತು.

ಆದರೆ ಇದ್ಯಾವುದಕ್ಕೂ ಕುನಾಲ್ ಬೆದರಲಿಲ್ಲ. ‘ನೀವು ಎಷ್ಟು ಕೆಟ್ಟದಾಗಿ ಬೇಕಾದರೂ ನನ್ನನ್ನು ಬಯ್ಯಿರಿ. ಆ ಸ್ವಾತಂತ್ರ ನಿಮಗಿದೆ. ಆದರೆ ಕೊಲೆ ಬೆದರಿಕೆ ಹಾಕುವುದನ್ನು ಒಪ್ಪಲಾರೆ. ಈ ಬಗ್ಗೆ ಪೊಲೀಸ್ ದೂರು ನೀಡುತ್ತೇನೆ. ಕೇಜ್ರಿವಾಲ್ ಹಾಗೂ ರಾಹುಲ್ ಗಾಂಧಿ ಬಗ್ಗೆ ಜೋಕ್ ಮಾಡಿದರೆ ಮಾತ್ರ ಓಕೆ. ಸರಕಾರದ ವಿರುದ್ಧ ಮಾಡಿದರೆ ಅದು ದೇಶದ್ರೋಹ. ಇದೆಂತಹ ದ್ವಂದ್ವ. ನಾನು ಇದನ್ನು ಒಪ್ಪುವುದಿಲ್ಲ. ನಾನು ಸರಕಾರದ ಬಗ್ಗೆ ಇನ್ನಷ್ಟು ಸ್ಪಷ್ಟವಾಗಿ ಮಾತನಾಡುತ್ತೇನೆ. ನನ್ನ ಧ್ವನಿ ಅಡಗಿಸಲು ಅಸಾಧ್ಯ’ ಎಂದರು ಕುನಾಲ್. ಮಾಧ್ಯಮದ ಹೆಸರಲ್ಲಿ ಸರಕಾರದ ವಕಾಲತ್ತು ಮಾಡುವ ರಿಪಬ್ಲಿಕ್ ಟಿವಿಯ ಅರ್ನಬ್ ಗೋಸ್ವಾಮಿಯನ್ನು ಸರಿಯಾಗಿ ತಿವಿಯುತ್ತಾರೆ ಈ ಕುನಾಲ್.

‘‘ಬಿಜೆಪಿಯವರು ಅಮಿತ್ ಶಾ ಅವರ ಪುತ್ರನ ಟೆಂಪಲ್ (ಕಂಪೆನಿಯ ಹೆಸರು) ಕಟ್ಟುವ ಬದಲು ಚುನಾವಣೆಗೆ ಮೊದಲು ತಾವು ಭರವಸೆ ನೀಡಿದ್ದ ಟೆಂಪಲ್ ( ರಾಮ ಮಂದಿರ) ಕಟ್ಟಬೇಕು’’.

---------------------------------

‘‘ದೇಶದ ಸಮಸ್ಯೆಗಳ ಬಗ್ಗೆ ಬಾಲಿವುಡ್ ಭಾರೀ ತಲೆ ಕೆಡಿಸಿಕೊಳ್ಳುತ್ತದೆ. ಆದರೆ ಅದರ ಚಿತ್ರಗಳ ಮೇಲೆ ದಾಳಿ ಆದಾಗ ಮಾತ್ರ’’.

---------------------------------

‘‘ಈ ದೇಶದ ಮೇಲೆ ಆಕ್ರಮಣ ಮಾಡಿದವರು ತಾಜ್ ಮಹಲ್ ಕಟ್ಟಿದರು. ಆದರೆ ಪ್ರವಾಸಿಗಳನ್ನು ಸೆಳೆಯುವ ಒಂದೇ ಒಂದು ಕಟ್ಟಡವನ್ನು ಆರೆಸ್ಸೆಸ್ ಕಟ್ಟಿದ್ದರೆ ನನಗೆ ಹೇಳಿ’’.

ಪ್ರಗತಿಪರರು ರೈಲಿನಲ್ಲಿ ಪ್ರಯಾಣಿಸಿ ಭಾರತದಲ್ಲಿರುವ ಸಹಬಾಳ್ವೆಯನ್ನು ತಿಳಿದುಕೊಳ್ಳಬೇಕು ಎಂದು ಬಿಜೆಪಿ ಬೆಂಬಲಿಗ ವಿವೇಕ್ ಅಗ್ನಿಹೋತ್ರಿ ಹೇಳಿಕೆಗೆ ಕುನಾಲ್ ಪ್ರತಿಕ್ರಿಯೆ ‘‘ಜುನೈದ್ ಕೂಡ ಅದೇ ರೈಲಿನಲ್ಲಿ ಹೋಗುತ್ತಿರುವಾಗ (ಗೋಮಾಂಸ ಇಟ್ಟುಕೊಂಡ ಆರೋಪದಲ್ಲಿ) ದಾರುಣವಾಗಿ ಕೊಲೆಯಾಗಿದ್ದು’’.

---------------------------------

‘‘ಬಾಬಾ ರಾಮ್ ದೇವ್ ತಮ್ಮ ಅಜೆಂಡಾ ಬದಲಾಯಿಸಿದ್ದು ಯಾವಾಗ ಎಂದು ಯಾರೂ ಅವರನ್ನು ಪ್ರಶ್ನಿಸಲೇ ಇಲ್ಲ .ಅವರು ಬಂದಿದ್ದು ಬೇರೆಯೇ ಅಜೆಂಡಾದೊಂದಿಗೆ.. ಬಂದವರೇ ನಿಮ್ಮ ಬಲಗಾಲು ಮೇಲೆ ಮಾಡಿ ಎಂದರು, ಮತ್ತೆ ಎಡಗಾಲು ಮೇಲೆ ಮಾಡಿ ಎಂದರು. ಅವರ ಕೇಸರಿ ಬಟ್ಟೆ ನೋಡಿ ಎಲ್ಲರೂ ಹಾಗೇ ಮಾಡಿದರು. ಅಷ್ಟಾದ ಮೇಲೆ ನನ್ನ ಕಂಪೆನಿಯ ನೂಡಲ್ಸ್ ತಿನ್ನಿರಿ ಎಂದು ಬಿಟ್ಟರು. ಎಲ್ಲರೂ ಏನೂ ಪ್ರಶ್ನಿಸದೆ ತಿನ್ನಲು ಶುರು ಮಾಡಿದರು’’.

ಆಧಾರ್ ಮಾಡಿಸಿ , ನೋಟು ಬದಲಾಯಿಸಿ, ಆಧಾರ್ - ಬ್ಯಾಂಕ್ ಖಾತೆ ಲಿಂಕ್ ಮಾಡಿಸಿ , ಅದು ಮಾಡಿ.. ಇದು ಮಾಡಿ.. ಅರೆ .. ಎಲ್ಲವನ್ನೂ ನಾವೇ ಮಾಡುವುದಾದರೆ ನೀವು ಏನು ಮಾಡುತ್ತೀರಿ.. ಅದನ್ನೆಲ್ಲಾ ನೀವು ಮಾಡಿ’’

---------------------------------

‘‘ಅಪ್ಪನ ಕೆಲಸ , ಬಾಸ್‌ನ ಕೆಲಸ, ಈಗ ಮೋದೀಜಿಯ ಕೆಲಸ.. ನನ್ನ ಕೆಲಸಕ್ಕೆ ಈಗ ನನಗೆ ಪುರುಸೊತ್ತೇ ಇಲ್ಲ.. ಮೋದೀಜಿ ಹಗಲು ರಾತ್ರಿ ಮಲಗದೆ ಕೆಲಸ ಮಾಡುತ್ತಾರಂತೆ.. ದಯವಿಟ್ಟು ಸ್ವಲ್ಪ ಮಲಗಿ ಮೋದೀಜಿ.. ಮತ್ತೆ ನನ್ನನ್ನೂ ಸ್ವಲ್ಪ ಮಲಗಲು ಬಿಡಿ’’.

---------------------------------

‘‘ಈಗ ನನಗೆ ಮನಮೋಹನ್ ಸಿಂಗ್ ಭಾರೀ ಕ್ಯೂಟ್ ಆಗಿ ಕಾಣುತ್ತಿದ್ದಾರೆ. ಈಗಷ್ಟೇ ಅವರ ಬಗ್ಗೆ ಮಾತಾಡುವಾಗ ಸುಖಾಸುಮ್ಮನೆ ಕೆಟ್ಟ ಪದವೊಂದನ್ನು ಬಳಸಿಬಿಟ್ಟೆ. ಆದರೆ ನನಗೇನೂ ಹೆದರಿಕೆ ಆಗುತ್ತಿಲ್ಲ. ಆದರೆ ಅವಾಗಿಂದ ಮೋದೀಜಿ, ಮೋದೀಜಿ ಎಂದು ಪದೇ ಪದೇ ಹೇಳುತ್ತಿದ್ದೇನೆ. ಆದರೂ ನನ್ನೊಳಗೆ ಒಂಥರಾ ಭಯ. ಎಲ್ಲಿ ಪೆಟ್ಟು ಬೀಳುತ್ತೋ ಅಂತ...’’

 ‘‘ಮೋದೀಜಿ ಬಾಲಕರಿದ್ದಾಗ ನಾಲ್ಕು ಮೊಸಳೆಗಳ ನಡುವೆ ಬಿದ್ದಿದ್ದ ಚೆಂಡನ್ನು ತೆಗೆದುಕೊಂಡು ಬಂದರಂತೆ. ಹಾಗೆ ಬರುವಾಗ ಒಂದು ಪುಟ್ಟ ಮೊಸಳೆಯನ್ನೂ ಎತ್ತಿಕೊಂಡು ಬಂದು ಬಿಟ್ಟರಂತೆ. ಹೀಗೆ ಅವರ ಭಕ್ತರು ಹೇಳುತ್ತಿದ್ದಾರೆ. ಅಲ್ಲ, ಅವು ಯಾವ ರೀತಿಯ ಮೊಸಳೆಗಳು? ಅವು ಮೊಸಳೆಗಳೇ ಅಥವಾ ಕಾಂಗ್ರೆಸ್ಸೇ?’’

---------------------------------

‘‘ಬಾಲಕ ಮೋದೀಜಿ ಹೀಗೆ ಮೊಸಳೆ ಹಿಡಿದು ತರುವಾಗ ಅವರ ಜೊತೆ ಅವರ ಕಟ್ಟರ್ ಅಭಿಮಾನಿ ಮಿತ್ರನಿದ್ದ. ಆತನೇ ಬೆಳೆದು ದೊಡ್ಡವನಾಗಿ ಅರುಣ್ ಜೇಟ್ಲಿಯಾದರು’’.

---------------------------------

‘‘ನಾನು, ನನ್ನ ಪತ್ನಿ ನಮಗೆ ಮಕ್ಕಳು ಬೇಡ ಎಂದು ನಿರ್ಧರಿಸಿದ್ದೇವೆ. ಆದರೆ 2011 ರ ಜನಗಣತಿಗೆ 2012ರಲ್ಲಿ ನಮ್ಮ ಮನೆಗೆ ಬಂದ ಸಿಬ್ಬಂದಿ ತಮ್ಮ ಕೆಲಸ ಮಾಡಿ ಹೊರಡುವ ಬದಲು ಮಕ್ಕಳಿರಬೇಕು, ವಂಶ ಬೆಳೆಯಬೇಕು ಎಂದು ಪಾಠ ಪ್ರಾರಂಭಿಸಿದರು. ಅರೇ .. ನಾನೇನು ಚಂದ್ರಗುಪ್ತ ಮೌರ್ಯನೇ .. ವಂಶ ಬೆಳೆಸಲು .. ರಾಜೀವ್ ಗಾಂಧಿ ಕೂಡ ವಂಶ ಬೆಳೆಸಿದರು. ಏನು ಸಿಕ್ಕಿತು ಅವರಿಗೆ?’’

‘‘ಮೋದೀಜಿ ಬಹಳ ಪವರ್ ಫುಲ್ ಸ್ಪೀಕರ್ . ಅವರು ಮಾತಾಡಿ ಮಾತಾಡಿ ಯಾವಾಗ ತೆರಿಗೆ ಹೆಚ್ಚಿಸಿಬಿಟ್ಟರು ಎಂದೇ ಜನರಿಗೆ ಗೊತ್ತಾಗುವುದಿಲ್ಲ. ಅವರು ಟ್ಯಾಕ್ಸ್ ಕೀ ಬಾತ್ ಹೇಳಿ ಮುಗಿಸಿರುತ್ತಾರೆ. ಜನರು ಮಾತ್ರ ಅವರು ಮನ್ ಕೀ ಬಾತ್ ಆಡುತ್ತಿದ್ದಾರೆ ಎಂದೇ ಭಾವಿಸಿರುತ್ತಾರೆ’’.

---------------------------------

‘‘ಮೋದೀಜಿ ನೈಸಾಗಿ ಮಾತಾಡಿ ಸ್ವಚ್ಛ ಭಾರತ್ ತೆರಿಗೆಯನ್ನು ಹಾಕಿದಾಗ ನಮಗೆ ಯಾರಿಗೂ ಅದನ್ನು ವಿರೋಧಿಸಲು ಆಗಲೇ ಇಲ್ಲ. ಏಕೆಂದರೆ ನಾವೆಲ್ಲರೂ ಅವರ ಮಾತಿಗೆ ಮರುಳಾಗಿ ಪೊರಕೆ ಹಿಡಿದು ಸೆಲ್ಫಿ ತೆಗೆದು ಫೇಸ್‌ಬುಕ್ ಗೆ ಹಾಕಿದ್ದೇವೆ . ಅದರ ಸ್ಕ್ರೀನ್ ಶಾಟ್ ಮೋದೀಜಿ ಬಳಿ ಇದೆ. ಆ ಸಾಕ್ಷ್ಯವನ್ನು ನಾಶ ಮಾಡಲು ನಮ್ಮಿಂದ ಸಾಧ್ಯವೇ ? ನಾವೇನೂ ಅಮಿತ್ ಶಾ ಅಲ್ಲವಲ್ಲ’’.

---------------------------------

‘‘ಈಗ ಮೋದೀಜಿ ಮಾತನಾಡಲು ಪ್ರಾರಂಭಿಸಿದರೆ ನನಗೆ ಹೆದರಿಕೆ. ಎಲ್ಲಿ ಮತ್ತೆ ನನ್ನನ್ನು ಮೂರ್ಖನಾಗಿಸುತ್ತಾರೋ ಅಂತ. ಮೋದೀಜಿ.. ಪ್ಲೀಸ್.. , ನಾನು ಮತ್ತೆ ಮತ್ತೆ ಗುಂಡಿಗೆ ಬೀಳುವುದಿಲ್ಲ. ಹಾಗೆ ಬೀಳಲು ನಾನು ಕೇಜ್ರಿವಾಲ್ ಅಲ್ಲ’’.

---------------------------------

‘‘ರಾಹುಲ್ ಗಾಂಧಿ ಮೇಲೆ ನೀವು ಹೆಚ್ಚು ಭರವಸೆ ಇಡುವುದು ಅಸಾಧ್ಯ. ಅವರು ಯಾರದ್ದಾದರೂ ಬಲಗೈ ಬಂಟ ಎಂದಾದರೆ ಆ ವ್ಯಕ್ತಿ ಎಡಚನೇ (ಲೆಫ್ಟಿ) ಆಗಿರಬೇಕು’’.

Writer - ಹುಸ್ನ ಖದೀಜ

contributor

Editor - ಹುಸ್ನ ಖದೀಜ

contributor

Similar News