ಡಾ.ರೂತ್ ಮನೋರಮಾ ಕಂಡ ಕೊಳೆಗೇರಿ
ಹಳ್ಳಿಗಳಲ್ಲಿ ಜೀವನ ನಡೆಸುವುದೇ ದುಸ್ತರವಾಗಿ ಕೃಷಿ ಸಂಬಂಧದ ಕೂಲಿಯೂ ಇಲ್ಲದೇ, ಪಶುಸಂಗೋಪನೆ ಇಲ್ಲದೇ ಕೂಲಿಕೆಲಸವನ್ನು ಅರಸಿ ಬೆಂಗಳೂರಿಗೆ ವಲಸೆ ಬಂದವರಿಗೆ ಇರಲು ಎಲ್ಲಿಯೂ ನೆಲೆ ಸಿಗದಿದ್ದಾಗ ಕೊಳೆಗೇರಿಯೇ ಒಂದು ಆಶ್ರಯತಾಣವಾಗುತ್ತದೆ. ಅತೀ ಕಡಿಮೆ ಖರ್ಚಿನಲ್ಲಿ ವಾಸಿಸುವ ತಾಣವಾಗುತ್ತಿದೆ. ಇಲ್ಲಿ ನೆಲೆಸಿದವರಲ್ಲಿ ಹೆಚ್ಚಿನವರು ಉತ್ತರ ಕರ್ನಾಟಕದ ಕಟ್ಟಡ ಕಾರ್ಮಿಕರು, ತಮಿಳುನಾಡಿನಿಂದ ಬಂದ ಬಡ ಕೂಲಿಗಳು, ಹಾಗೇನೆ ತೆಲುಗು ಗಡಿಯಿಂದ ಕೆಲಸ ಹುಡುಕಿ ಬಂದವರು.
ಸ್ವೀಡನ್ ಪಾರ್ಲಿಮೆಂಟಿನಲ್ಲಿ ಸಮಾಜ ಸೇವೆಗಾಗಿ ಪ್ರತೀ ವರ್ಷ ನೊಬೆಲ್ ಪ್ರಶಸ್ತಿಗೆ ಸಮನಾದ ‘‘ರೈಟ್ಸ್ ಲಿವಲಿಹುಡ್’’ ಪ್ರಶಸ್ತಿ ನೀಡಲಾಗುತ್ತದೆ. 2006ನೆ ವರ್ಷದ ಪ್ರಶಸ್ತಿಗೆ ಜಗತ್ತಿನ 40 ದೇಶಗಳಿಂದ 73 ಸಮಾಜಸೇವಕರನ್ನು ಶಿಫಾರಸು ಮಾಡಿ ಅವರಲ್ಲಿ 3 ಜನರನ್ನು ಆಯ್ಕೆಮಾಡಿ ಡಿಸೆಂಬರ್ 8ರಂದು ಸ್ವೀಡನ್ ಪಾರ್ಲಿಮೆಂಟಿನಲ್ಲಿ ಈ ಪ್ರಶಸ್ತಿ ನೀಡಲಾಯಿತು. ಈ ಮೂವರಲ್ಲಿ ಭಾರತದಲ್ಲಿನ ಕರ್ನಾಟಕ ರಾಜ್ಯದ ಬೆಂಗಳೂರಿನಲ್ಲಿ ಇರುವ ‘‘ವಿಮೆನ್ಸ್‌ವಾಯ್ಸ್’’ ಚಳವಳಿಯ ಸ್ಥಾಪಕಳೂ ಹಾಗೂ ‘ನ್ಯಾಶನಲ್ ಅಲೆಯೆನ್ಸ್ ಆಫ್ ವಿಮೆನ್ಸ್’ ಸಂಸ್ಥೆಯ ಅಧ್ಯಕ್ಷಳೂ, ‘ನ್ಯಾಶನಲ್ ಸೆಂಟರ್ ಫಾರ್ ಲೇಬರ್’ ಕಾರ್ಯದರ್ಶಿಯೂ ಆದ ಶ್ರಿಮತಿ ಡಾ.ರೂತ್ ಮನೋರಮಾ ಒಬ್ಬರಾಗಿರುವುದು ಕರ್ನಾಟಕ ರಾಜ್ಯದವರೆಲ್ಲರೂ ಹೆಮ್ಮೆ ಪಡುವ ವಿಷಯ.
‘ಬಡವರ ಹಾಗೂ ಕೆಳವರ್ಗದವರ ಬದುಕಿನ ಸಂಘರ್ಷ ಹಾಗೂ ಅವರ ಹಕ್ಕುಗಳಿಗಾಗಿ ಹೋರಾಟ ನಡೆಸಿದ ಯಶೋಗಾಥೆಯನ್ನು ಗುರುತಿಸಿ ಈ ಪ್ರತಿಷ್ಠಿತ ಪ್ರಶಸ್ತಿ ನೀಡಲಾಗಿದೆ’ ಎಂದು ಹೇಳಲಾಗಿದೆ. ಈ ಪ್ರಶಸ್ತಿ ಸ್ವೀಕರಿಸಿದ ಸಂದರ್ಭದಲ್ಲಿ ‘‘ನಿರ್ಭಾಗ್ಯ ಹೆಣ್ಣುಗಳ ಹಾಗೂ ಬಡ ಶೋಷಿತ ಮಹಿಳೆಯರ ಬದುಕಿನ ಹಕ್ಕಿಗಾಗಿ ಹೋರಾಡುವ ಛಲವೇ ನನಗೆ ಸ್ಫೂರ್ತಿಯ ಸೆಲೆ. ಈ ಜನರ ಪರವಾಗಿ ಈ ಪ್ರಶಸ್ತಿಯನ್ನು ನಾನು ಸ್ವೀಕರಿಸುತ್ತೇನೆ. ಮಹಿಳೆಯರ ಪಾತ್ರ ಕೇವಲ ಅಡುಗೆ ಮನೆಗೆ ಮಾತ್ರವಲ್ಲ ಅವರು ಅವಕಾಶ ಸಿಕ್ಕಿದರೆ ದೇಶವನ್ನೇ ಮುನ್ನಡೆಸಬಲ್ಲರು ಎನ್ನುವುದಕ್ಕೆ ಈ ಪ್ರಶಸ್ತಿಯೇ ಸಾಕ್ಷಿ. ನನ್ನ ಹೋರಾಟ ಕೇವಲ ಮಹಿಳೆಯರ ಪರ ಮಾತ್ರವಲ್ಲ ಅದು ಇಡೀ ಮಾನವ ಕುಲಕ್ಕೆ ಎಂದು ಹೇಳುವುದರ ಮೂಲಕ ಮಹಿಳಾ ಚಳವಳಿ ಇನ್ನೂ ವಿಸ್ತೃತ ರೂಪ ತೆಗೆದುಕೊಳ್ಳಬೇಕಾದ ಗುರುತರ ಜವಾಬ್ದಾರಿಯೆಡೆಗೆ ಅವರು ನಮ್ಮ ಗಮನ ಸೆಳೆಯುತ್ತಾರೆ. ಎಲ್ಲಾ ಬಡ ದಲಿತರ ಹಾಗೂ ವಂಚಿತ, ಶೋಷಿತ ಮಹಿಳೆಯರ ಪರವಾಗಿ ಹೋರಾಡುವ ಪ್ರೇರಣೆ ಹೇಗೆ ಬಂತು? ಎಂದು ಕೇಳಿದಾಗ ಅದು ತನ್ನ ಮನೆತನದಿಂದಲೇ ಬಂದಿದೆ ಎಂದು ಅವರು ತಮ್ಮ ಕುಟುಂಬದ ಬಗ್ಗೆ ಹೇಳುತ್ತಾರೆ.
‘‘ನನ್ನ ತಂದೆ ಸಾಂಪ್ರದಾಯಿಕತೆಯಲ್ಲಿ ನಂಬಿಕೆ ಇಟ್ಟವರಾಗಿದ್ದರೂ ತಮ್ಮದೇ ನೆಲೆಯಲ್ಲಿ ಸಮಾಜ ಸೇವೆ ಮಾಡುವವರಾಗಿದ್ದರು. ಆ ಕಾಲದಲ್ಲಿ ಚೆನ್ನೈನಲ್ಲಿ ಬಡವರು ವಾಸಿಸುವ ಭೂಮಿಯ ಸುಂಕ ಕಟ್ಟಬೇಕೆಂದು ಬಡವರನ್ನು ಸುಲಿಯುತ್ತಿರುವುದನ್ನು ಪ್ರತಿಭಟಿಸಿ ಕಲೆಕ್ಟರ್ ಅವರ ಮೂಲಕ ಮನವಿ ಸಲ್ಲಿಸಿ ಭೂಹೀನ ಬಡವರಿಗೆ ನ್ಯಾಯ ದೂರಕಿಸುವಲ್ಲಿ ಹೋರಾಡಿದವರು ನನ್ನ ತಂದೆ. ಇನ್ನು ತಾಯಿಯೂ ಒಬ್ಬ ಹೋರಾಟಗಾರ್ತಿ ಅನ್ನಬೇಕು. ಮಹಿಳೆಯರಿಗೆ ಶಿಕ್ಷಣ ವಿರೋಧವಿದ್ದ ಕಾಲದಲ್ಲಿ ಯಾವುದೇ ವಿರೋಧ ಲೆಕ್ಕಿಸದೇ ಶಾಲೆಗೆ ಸೇರಿ ಎಂಟನೆ ತರಗತಿ ತೇರ್ಗಡೆ ಹೊಂದಿ ನಂತರ ಟೀಚರ್ಸ್ ಟ್ರೈನಿಂಗ್ ಸರ್ಟಿಫಿಕೇಟ್ ಪಡೆದು ಅಧ್ಯಾಪಕಿ ಆದವಳು. ಅದೂ ಅಲ್ಲದೇ ಹಿಂದೂ ಮತ ತ್ಯಜಿಸಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡವಳು. ಪಂಡಿತ ರಮಾಬಾಯಿಯ ವ್ಯಕ್ತಿತ್ವದಿಂದ ತುಂಬಾ ಪ್ರಭಾವಿತಳಾಗಿ ನನಗೆ ಅವಳಂತೆ ಆಗಬೇಕೆಂದು ಮನೋರಮಾ ಎಂದು ಹೆಸರು ಇಟ್ಟವಳು. ತನ್ನ ಹೆಣ್ಣು ಮಕ್ಕಳಿಗೆ ಉಚ್ಚ ಶಿಕ್ಷಣ ನೀಡಲು ಕಾರಣ ಆದಳು.’’ ಎಂದು ಅವರು ತಾನು ಹುಟ್ಟಿದ್ದು ಹೋರಾಟಕ್ಕೆ ಅನ್ನುವಂತೆ ತನ್ನ ಬದುಕನ್ನು ಹೋರಾಟಕ್ಕೆ ಮುಡುಪಾಗಿರಿಸಿಕೊಂಡಿದ್ದಾರೆ.
ಡಾ.ರೂತ್ ಮನೋರಮಾ 1952ರಲ್ಲಿ ಚೆನ್ನೈನಲ್ಲಿ ಜನಿಸಿದರು. ಆಗ ಜಾತಿ ವ್ಯವಸ್ಥೆ ಪ್ರಬಲವಾಗಿದ್ದ ಹಿಂದೂ ಧರ್ಮದಿಂದ ಅವರ ಕುಟುಂಬ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಹೊಂದಿತ್ತು ಇದರಿಂದ ಹೆಣ್ಣು ಮಕ್ಕಳಿಗೆ ಹೆಚ್ಚಿನ ಶಿಕ್ಷಣ ಪಡೆಯುವುದು ಸಾಧ್ಯವಾಯಿತು. 1975ರಲ್ಲಿ ಮದ್ರಾಸ್ ವಿಶ್ವವಿದ್ಯಾನಿಲಯದಿಂದ ಸಮಾಜಸೇವೆಯಲ್ಲಿ ಮಾಸ್ಟರ್‌ಡಿಗ್ರಿ (MSW) ಪಡೆದ ನಂತರ ‘ಸಾವುಲ್ ಡಿ ಆಲಿನ್‌ಸ್ಕಿ (saul D Alinsky) ಸಿದ್ಧಾಂತದ ಪ್ರಕಾರ ಸಮುದಾಯ ಸಂಘಟನೆಯ ರೀತಿ ನೀತಿಗಳ ಬಗ್ಗೆ ಹಾಗೂ ಫೌಲೋ ಫ್ರಿಲ್ರ್ (paulo Frilr)ರವರ ಸಾಮಾಜಿಕ ತಿಳುವಳಿಕೆ ಬಗ್ಗೆ ತರಬೇತಿ ಪಡೆದು ಬೆಂಗಳೂರಿನ ಎನ್.ಜಿ.ಓ ಒಂದರಲ್ಲಿ ತಮ್ಮ ವೃತ್ತಿಜೀವನ ಆರಂಭಿಸಿದರು. ಆಗಲೇ ಅವರಿಗೆ ಪ್ರಗತಿಪರ ಚಿಂತನೆಯಲ್ಲಿ ನಂಬಿಕೆ ಉಳ್ಳ ಶ್ರೀಯುತ ಎನ್.ಪಿ.ಸಾಮಿಯವರ ಪರಿಚಯವಾಗಿ ಅವರ ಸಮರ್ಥ ಮಾರ್ಗದರ್ಶಿತನದಿಂದ ಹೆಚ್ಚು ಸಾಮಾಜಿಕ ಸೇವೆಗೆ ತನ್ನನ್ನು ಒಡ್ಡಿಕೊಳ್ಳುತ್ತಾ ಹೋದರು.
ಆಗಲೇ ಬಡ ಮಹಿಳೆಯರಿಗಾಗಿ ಮಹಿಳಾಪರ ಹೋರಾಟಗಳಿಗಾಗಿಯೇ ಒಂದು ವೇದಿಕೆಯನ್ನು ಕಂಡುಕೊಳ್ಳಬೇಕೆಂದು 1980ರಲ್ಲಿ ಸ್ಥಾಪಿತವಾದ ಸಂಸ್ಥೆಯೇ ‘‘ವಿಮೆನ್ಸ್ ವಾಯ್ಸ್’’. ಮುಖ್ಯವಾಗಿ ಕೊಳೆಗೇರಿ ಗುಡಿಸಲು ನಿವಾಸಿ ಬಡ ಮಹಿಳೆಯರ ಸಮಸ್ಯೆ ಪರಿಹಾರಕ್ಕಾಗಿ, ಅವರ ಹಕ್ಕು ಬಾಧ್ಯತೆಗಳ ಬಗ್ಗೆ ಅರಿವು ಮೂಡಿಸಲು ಹಾಗೂ ಮನೆಕೆಲಸ (ಗೃಹಕಾರ್ಮಿಕರು) ಮಾಡುವ ಮಹಿಳೆಯರಿಗೆ, ಸ್ತ್ರೀ ಶೋಷಣೆಯ ಬೇರೆ ಬೇರೆ ಮುಖಗಳನ್ನು ಗುರುತಿಸಿ ಪರಿಹರಿಸುವಲ್ಲಿ ಹೋರಾಡುವುದೇ ‘‘ವಿಮೆನ್ಸ್ ವಾಯ್ಸ್’’ ಸಂಘಟನೆಯ ಉದ್ದೇಶ. ಅವರ ಈ ಸಮಾಜ ಸೇವೆ ಗುರುತಿಸಿ ‘ಅಕಾಡಮಿ ಆಫ್‌ಎಕ್ಯುಮಿನಿಕಲ್ ಇಂಡಿಯನ್ ಥಿಯಾಲಜಿ’ ಮತ್ತು ‘ಚರ್ಚ್ ಅಡ್ಮಿನಿಸ್ಟ್ರೇಶನ್’ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಡಾ.ರೂತ್ ಮನೋರಮಾ ಹಮ್ಮಿಕೊಂಡಿರುವ ಚಟುವಟಿಕೆಗಳೂ ಹಲವಾರು. 1980ರಲ್ಲಿ ಪ್ರಾರಂಭವಾದ ಕ್ರಿಶ್ಚಿಯನ್ ದಲಿತ ಲಿಬರೇಶನ್ ಮೂವ್‌ಮೆಂಟ್ (CDLM) ಜಂಟಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿ ಅನೇಕ ದಲಿತ ವಿದ್ಯಾರ್ಥಿಗಳು ಮೀಸಲಾತಿಯ ಪ್ರಯೋಜನ ಪಡೆಯುವಂತೆ ಮಾಡಿದ್ದಾರೆ.
ಅನೇಕ ಮಹಿಳಾಪರ ಚಳವಳಿಯ ಕಾರ್ಯಾಗಾರದಲ್ಲಿ ಮಹಿಳಾ ಹಕ್ಕುಗಳ ವಕ್ತಾರೆಯಾಗಿ ಪಾಲ್ಗೊಳ್ಳುವ ಡಾ.ರೂತ್, ಪ್ರಸುತ್ತ ರಾಜಕಾರಣ ಮಹಿಳೆಯರನ್ನು ಕೇವಲ ಅಭಿವೃದ್ಧಿ ಯೋಜನೆಗೆ ಬಳಸಿಕೊಂಡು ನಿರ್ಣಾಯಕ ಪ್ರಕ್ರಿಯೆಯಲ್ಲಿ ಹೇಗೆ ಅವಳನ್ನು ಅಲಕ್ಷಿಸಲಾಗುತ್ತದೆ ಎಂಬ ಬಗ್ಗೆ ಸರಕಾರದ ಗಮನಹರಿಸುವಂತೆ ಮಾಡುತ್ತಾರೆ.
1998ರಲ್ಲಿ ಸ್ಥಾಪನೆಗೊಂಡ ‘ನ್ಯಾಶನಲ್ ಕ್ಯಾಂಪೆನ್ ಫಾರ್ ದಲಿತ ಹ್ಯೂಮನ್ ರೈಟ್ಸ್’ (NCDHR) ಸಹ ಸಂಚಾಲಕರಾಗಿ ದಲಿತರ ಮಾನವ ಹಕ್ಕುಗಳ ಬಗ್ಗೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ವಾದ ಮಂಡಿಸಿ ಪರಿಣಾಮಕಾರಿಯಾದ ರೀತಿಯಲ್ಲಿ ಪರಿಹರಿಸುವಲ್ಲಿ ಇವರ ಕೊಡುಗೆ ಅನನ್ಯವಾದುದು. ಮುಖ್ಯವಾಗಿ ಮಹಿಳೆಯರ ಮೇಲೆ ನಡೆಯುವ ಎಲ್ಲಾ ರೀತಿಯ ದೌರ್ಜನ್ಯಗಳನ್ನು ತಡೆಗಟ್ಟುವ ಒಪ್ಪಂದ (NCDHR) ಕನವೆನ್ಸ್ ನ್ (on the elimination of direrimination against women) ಎಲ್ಲಾ ರೀತಿಯ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳನ್ನು ತಡೆಗಟ್ಟುವ ಒಪ್ಪಂದದ ಈ ಒಕ್ಕೂಟದ ನೇತೃತ್ವ ವಹಿಸಿ ವಿಶ್ವ ಸಂಸ್ಥೆಯ ಸಮ್ಮೇಳನದಲ್ಲಿ ವಾದ ಮಂಡಿಸಿ ದಲಿತ ಮಹಿಳೆಯರ ಮೇಲೆ ನಡೆಯುವ ತಾರತಮ್ಯ ವಿರೋಧಿಸಿ ವಾದ ಮಾಡಿದ ಪರಿಣಾಮವಾಗಿ ವಿಶ್ವಸಂಸ್ಥೆಯ ಸಮಿತಿಗಳು ಭಾರತ ಸರಕಾರಕ್ಕೆ ಮಹಿಳೆಯರ ಮೇಲೆ ನಡೆಯುವ ತಾರತಮ್ಯ ನಿಲ್ಲಿಸಬೇಕೆಂದು ಎಚ್ಚರಿಸಿದೆ.
1945ರಲ್ಲಿ ಚೀನಾದ ಬೀಜಿಂಗ್‌ನಲ್ಲಿ ನಡೆದ 4ನೆ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ರಚಿಸಲಾದ ಮಹಿಳಾ ಒಕ್ಕೂಟವೇ ‘ನ್ಯಾಶನಲ್‌ಅಲಾಯನ್ ಆಫ್ ವಿಮೆನ್’(NAWO) ಇದರ ಕಾರ್ಯಕಾರಿ ಸಮಿತಿಯೊಂದಿಗೆ ಸೇರಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಬಡವರಿಗೆ ಅನುಕೂಲವಾಗುವ ಹಾಗೆ ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ಬದಲಾವಣೆ ತರಲು ಒತ್ತಡ ತಂದಿದ್ದಾರೆ. ಇವರ ಮುಂದಾಳು ತನದಲ್ಲಿ ಸತತ ಹೋರಾಟದ ಪರಿಣಾಮವಾಗಿ ಗೃಹಕಾರ್ಮಿಕ ಮಹಿಳೆಯರಿಗಾಗಿ(ಮನೆಕೆಲಸ ಮಾಡುವ ಮಹಿಳೆಯರು)ಅವರನ್ನೆಲ್ಲಾ ಒಗ್ಗೂಡಿಸಿ ಹೋರಾಟಮಾಡಿ ಕನಿಷ್ಠ ವೇತನವನ್ನು ಕರ್ನಾಟಕ ಸರಕಾರ ಘೋಷಣೆ ಮಾಡುವಂತೆ ಅವರನ್ನು ಸರಕಾರದ ಶೆಡ್ಯೂಲಿನಲ್ಲಿ ಸೇರುವಂತೆ ಮಾಡಿದುದು ಇವರ ದೊಡ್ಡ ಕೊಡುಗೆಯಾಗಿದೆ.
ಇದಲ್ಲದೇ ದಲಿತ ಮಹಿಳೆಯರೇ ಚಳವಳಿಯ ಮುಂದಾಳುತನ ವಹಿಸುವಂತೆ ಅವರಿಗೆ ತರಬೇತಿಕೊಟ್ಟು ‘ಬೀಜಿಂಗ್’ನಲ್ಲಿ ನಡೆದ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ 14 ಇಂತಹ ಕೊಳೆಗೇರಿ ಮಹಿಳೆಯರನ್ನು ಕರೆದುಕೊಂಡು ಹೋಗಿ ಅವರೇ ತಮ್ಮ ಸಮಸ್ಯೆಗಳು, ಸಂಕಷ್ಟಗಳನ್ನು ಸಭೆಯಲ್ಲಿ ಪ್ರಸ್ತಾಪಿಸುವಂತೆ ಮಾಡಿದ್ದಾರೆ. ಮತ್ತು ರಾಷ್ಟ್ರೀಯ ಯೋಜನೆಗಳಲ್ಲಿ ದಲಿತ ಮಹಿಳೆಯರಿಗಾಗಿ 1/3 ಮೀಸಲಾತಿ ನೀಡುವಂತೆ ಸರಕಾರವನ್ನು ಒತ್ತಾಯಿಸಿದ್ದಾರೆ. ಶ್ರಮಿಕವರ್ಗಗಳ ಚಳವಳಿ ಅಸಂಘಟಿತ ವರ್ಗಗಳಿಗೆ ವಿಸ್ತರಿಸದಿದ್ದರೆ ಸಾಮಾಜಿಕ ಬದಲಾವಣೆಯಾಗಲಾರದು. ಈ ವಾಸ್ತವಿಕತೆ ಸ್ಪಷ್ಟವಾಗಬೇಕಾದುದು ಅತ್ಯಗತ್ಯ ಎಂದು ಅವರು ಅಭಿಪ್ರಾಯ ಪಡುತ್ತಾರೆ. ಹೀಗೆ ಮಿಲಿಯನ್ ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ, ಅವರಿಗೆ ಸಾಮಾಜಿಕ ಭದ್ರತೆ ಒದಗಿಸಿಕೊಡಲು ಕಾನೂನು ರಚಿಸಬೇಕೆಂದು ಕೇಂದ್ರ ಹಾಗೂ ರಾಜ್ಯ ಸರಕಾರವನ್ನು ಅವರು ಒತ್ತಾಯಿಸುತ್ತಾ ಬಂದಿದ್ದಾರೆ.
ಬೆಂಗಳೂರು ನಗರ ನಿವೃತ್ತ ಜನರ ಸ್ವರ್ಗವೆನ್ನುವ ಕಾಲವೊಂದಿತ್ತು. ಈಗ ಉನ್ನತ ತಂತ್ರಜ್ಞಾನವನ್ನೊಳಗೊಂಡ ಐಟಿಬಿಟಿ, ತಂತ್ರಜ್ಞಾನದಂತಹ ಜಾಗತಿಕ ವಹಿವಾಟಿನ ಉದ್ದಿಮೆಗಳಿಗೆ ಹೆಸರುಗಳಿಸಿದ ನಗರವಾಗಿ ಭಾರತದ ಸಿಲಿಕಾನ್ ಸಿಟಿ ಅನಿಸಿದೆ. ಈ ಕಾರಣದಿಂದ ಉದ್ಯೋಗವನ್ನರಸಿ ಎಲ್ಲಾ ಕಡೆಯಿಂದಲೂ ಜನರು ಬೆಂಗಳೂರಿನತ್ತ ಮುಖಮಾಡಿದ್ದಾರೆ. ಹಾಗೆಯೇ ಹಳ್ಳಿಗಳಲ್ಲಿ ಜೀವನ ನಡೆಸುವುದೇ ದುಸ್ತರವಾಗಿ ಕೃಷಿ ಸಂಬಂಧದ ಕೂಲಿಯೂ ಇಲ್ಲದೇ, ಪಶುಸಂಗೋಪನೆ ಇಲ್ಲದೇ ಕೂಲಿಕೆಲಸವನ್ನು ಅರಸಿ ಬೆಂಗಳೂರಿಗೆ ವಲಸೆ ಬಂದವರಿಗೆ ಇರಲು ಎಲ್ಲಿಯೂ ನೆಲೆ ಸಿಗದಿದ್ದಾಗ ಕೊಳೆಗೇರಿಯೇ ಒಂದು ಆಶ್ರಯತಾಣವಾಗುತ್ತದೆ. ಅತೀ ಕಡಿಮೆ ಖರ್ಚಿನಲ್ಲಿ ವಾಸಿಸುವ ತಾಣವಾಗುತ್ತಿದೆ. ಇಲ್ಲಿ ನೆಲೆಸಿದವರಲ್ಲಿ ಹೆಚ್ಚಿನವರು ಉತ್ತರ ಕರ್ನಾಟಕದ ಕಟ್ಟಡ ಕಾರ್ಮಿಕರು, ತಮಿಳುನಾಡಿನಿಂದ ಬಂದ ಬಡ ಕೂಲಿಗಳು, ಹಾಗೇನೆ ತೆಲುಗು ಗಡಿಯಿಂದ ಕೆಲಸ ಹುಡುಕಿ ಬಂದವರು.
ಒಟ್ಟಿನಲ್ಲಿ ಒಂದು ದಲಿತ ಲೋಕವೇ ಭಾರತದ ಎಲ್ಲಾ ಕಡೆಯಿಂದ ಇಲ್ಲಿ ಸೇರುತ್ತಾರೆ. ಬೇರೆ ಬೇರೆ ಭಾಷೆಯ, ಬೇರೆ ಬೇರೆ ಮತೀಯ, ಬೇರೆ ಬೇರೆ ಜಾತೀಯ ಗುಂಪುಗಳು ವಿಭಿನ್ನ ಸಮುದಾಯಗಳನ್ನು, ವಿಭಿನ್ನ ಸಂಸ್ಕೃತಿ ಈ ಗುಂಪು ತಮ್ಮ ತಮ್ಮ ಅನನ್ಯತೆಗಳನ್ನು ಉಳಿಸಿಕೊಂಡು ಬದುಕುವುದೇ, ಸಹಬಾಳ್ವೆಯಲ್ಲಿ ಹೊಂದಿಕೊಂಡು ಹೋಗುವುದು ಒಂದು ಅಚ್ಚರಿ. ಯಾವುದೇ ಮೂಲಭೂತ ಸೌಕರ್ಯ ದೊರಕುವುದು ಅಸಾಧ್ಯವಾದ ಸನ್ನಿವೇಶದಲ್ಲಿ ಕೆಲವೊಮ್ಮೆ ಗಲಭೆ ಉಂಟಾದರೂ ಇನ್ನೊಮ್ಮೆ ಎಲ್ಲವನ್ನೂ ಮರೆತು ಪರಿಸ್ಥ್ಥಿತಿ ಹದಗೆಡದಂತೆ ಒಗ್ಗಟ್ಟಾಗುತ್ತಾರೆ. ಅವರಿಗೆ ಅವರದೇ ಆದ ಸಹಿಷ್ಣು ಪರಂಪರೆ ಇದೆ, ಗಣೇಶ ಹಬ್ಬದಲ್ಲಿ ಎಲ್ಲರೂ ಒಗ್ಗಟ್ಟಾಗಿ ಹಬ್ಬ ಆಚರಿಸಿ ಸಂಭ್ರಮಿಸುತ್ತಾರೆ. ಚುನಾವಣೆ ಸಮಯದಲ್ಲಿ ಮಾತ್ರ ಇಲ್ಲಿ ರಾಜಕೀಯ ಪಕ್ಷ ಗಮನಹರಿಸಿ ಇವರನ್ನು ಬಳಸಿಕೊಳ್ಳುವುದು ಸಾಮಾನ್ಯ, ಆದರೆ ಶಿಷ್ಟ ಸಮಾಜದವರಲ್ಲಿ ಇವರ ಬಗ್ಗೆ ಮೂಡುವ ಚಿತ್ರಣವೇ ಬೇರೆ ತರದ್ದು. ಅವರನ್ನು ಇಲ್ಲಿಂದ ಎತ್ತಂಗಡಿ ಮಾಡಬೇಕೆಂದು ಅವರು ಲಾಬಿ ಮಾಡುತ್ತಿರುತ್ತಾರೆ. ಇದರಿಂದಾಗಿ ಇಡೀ ನಗರದ ನೈರ್ಮಲ್ಯ, ಅಂದ ಹಾಳುಗೆಡುತ್ತದೆ. ಅನಾರೋಗ್ಯ ಹಬ್ಬುತ್ತದೆ. ಎಲ್ಲಿ ಅಂದರೆ ಅಲ್ಲಿ ಅವರು ಶೌಚ ಮಾಡುತ್ತಾರೆ ಎಂದು ಅವರ ಬಗ್ಗೆ ಅಘೋಷಿತ ಬಹಿಷ್ಕಾರ ಇದ್ದೇ ಇದೆ.
ಇವರ ರಕ್ಷಣೆಗಾಗಿಯೇ ಕಟ್ಟಿದ ಸಂಘಟನೆ ‘‘ಕರ್ನಾಟಕ ಕೊಳೆಗೇರಿ ನಿವಾಸಿಗಳ ಸಂಯುಕ್ತ ಸಂಘಟನೆ’’ ಇದರ ಗೌರವ ಅಧ್ಯಕ್ಷರು ಶ್ರೀ.ಎನ್.ಪಿ.ಸಾಮಿ ಮತ್ತು ಇದರ ಕಾರ್ಯದರ್ಶಿ ಡಾ.ರೂತ್ ಮನೋರಮಾ ಕೊಳೆಗೇರಿಗಳಲ್ಲಿರುವ ಮಹಿಳೆಯರನ್ನು ಒಗ್ಗೂಡಿಸಿ ಅವರ ಸಮಸ್ಯೆಗಳನ್ನು ಬಗೆ ಹರಿಸುವುದಕ್ಕಾಗಿ ಅವರಿಗೆ ಕಾರ್ಯತಂತ್ರಗಳ ಬಗ್ಗೆ ತರಬೇತಿ ನೀಡಿ ನಾಯಕಿಯರನ್ನಾಗಿ ಮಾಡಿ ತಮ್ಮ ಹಕ್ಕುಗಳನ್ನು ರಕ್ಷಿಸುವುದರಲ್ಲಿ ತರಬೇತಿ ನೀಡಿದ್ದಾರೆ. ಇಲ್ಲಿನ ಹೆಂಗಸರು ಯಾವುದೇ ಸಾಮಾಜಿಕ ವರ್ಚಸ್ಸಿನ ಬಲವಿಲ್ಲದೇ ಸೊನ್ನೆಯಿಂದಲೇ ಪ್ರಾರಂಭಿಸಿ ಮೇಲೆ ಬಂದವರು. ಮನೆಯಲ್ಲೇ ದೋಸೆ-ಇಡ್ಲಿ ವ್ಯಾಪಾರ ಮಾಡಿ ಸಂಸಾರ ತೂಗಿಸಲು ಬಲ್ಲರು ಎಂದು ಡಾ.ರೂತ್ ಮನೋರಮಾ ಕೊಳೆಗೇರಿ ಮಹಿಳೆಯರ ಚಿತ್ರಣ ನೀಡುತ್ತಾರೆ.
ಪ್ರಶ್ನೆ:- ಕರ್ನಾಟಕ ಕೊಳೆಗೇರಿ ನಿವಾಸಿಗಳ ಸಂಯುಕ್ತ ಸಂಘಟನೆಯ ಕಾರ್ಯದರ್ಶಿಯಾಗಿ ಕರ್ನಾಟಕದಾದ್ಯಂತ ಅವರ ಹಕ್ಕಿಗಾಗಿ ಹಾಗೇನೇ ಕೊಳೆಗೇರಿ ಡಿಮೊಲಿಶನ್ ವಿರುದ್ಧ ಹೋರಾಡುತ್ತಾ ಬಂದಿದ್ದೀರಿ ಈ ಕುರಿತು ನಿಮ್ಮ ಗಾಢವಾದ ಅನುಭವ ?
ಡಾ.ರೂತ್ ಮನೋರಮಾ :- ಸುಮಾರು ನಲವತ್ತು ಸಾವಿರದಷ್ಟು ಕೊಳೆಗೇರಿ ನಿವಾಸಿಗಳ ಗುಡಿಸಲುಗಳನ್ನು ಬುಲ್‌ಡೋಜರ್ ಮೂಲಕ ಒಡೆದು ಕೆಡವಿದಾಗ ಅವರ ಗೋಳು ಎಂತಹ ಕಲ್ಲೆದೆಯವರನ್ನೂ ಕಂಗೆಡಿಸುತ್ತದೆ. ಅವರನ್ನು ನಗರದ ಹೊರಗಡೆ ಎತ್ತಂಗಡಿ ಮಾಡುವುದು ನಿಷ್ಕರುಣಿಯ ಹಿಂಸೆಯ ಕ್ರಮ. ಬುಲ್‌ಡೋಜರ್‌ತಂದು ಅವರ ಬದುಕನ್ನೇ ನಾಶಪಡಿಸುವ ಕ್ರಮ, ಪ್ರೆಂಚ್ ಕ್ರಾಂತಿಕಾರಿ ಪುರುಷ ರೂಸೋ ಜನ ಒಪ್ಪಿಕೊಳ್ಳದ ಯಾವ ಕಾನೂನು ತನಗೆ ಮಾನ್ಯವಲ್ಲ ಎಂದು ಘೋಷಿಸಿದ. ಸ್ವಾತಂತ್ರ, ಸಮಾನತೆ ಮತ್ತು ಭ್ರಾತೃತ್ವಗಳ ಘೋಷಣೆ ಜಗತ್ತಿನಾದ್ಯಂತ ಪ್ರತಿಧ್ವನಿಸುತ್ತ್ತಿದೆ. ಆದರೆ ನಾವಿಂದು ಬಡವರನ್ನು ಬದುಕಲು ಬಿಡದೇ ಎತ್ತ ಸಾಗುತ್ತಿದ್ದೇವೆ? ಇವರ ಸಮಸ್ಯೆಗಳೇನು ಎಂದು ನೋಡುವಲ್ಲಿ ನಮ್ಮ ಸರಕಾರ ವಿಫಲವಾಗಿದೆ. ಕೊಳೆಗೇರಿ ನಿವಾಸಿಗಳ ಪ್ರತಿನಿಧಿಗಳೊಡನೆ ಚರ್ಚೆ ನಡೆಸಿ ಎಲ್ಲರೂ ಒಪ್ಪಿಕೊಳ್ಳುವ, ಸಮಾಧಾನ ಹುಡುಕುವ ಜನ ತಾಂತ್ರಿಕ ಸಂಸ್ಕೃತಿಯನ್ನು ಗಣನೆಗೆ ತೆಗೆದುಕೊಳ್ಳದೆ ಗುಡಿಸಲನ್ನೇ ಕೆಡಹುವ ಕ್ರಮ ಜವಾಬ್ಧಾರಿಯುತ ಸರಕಾರದ ಕ್ರಮವಲ್ಲ. ಅದು ‘ಪಾಳೆಗಾರಿಕೆ ಕ್ರಮ’ ಇದು ಸಂವೇದನೆಯುಳ್ಳ ಎಲ್ಲರೂ ಖಂಡಿಸಬೇಕು ಅನ್ನುತ್ತಾರೆ ಅವರು. ಯಾವುದೇ ಸಂಘಟನೆ ಕಟ್ಟಿದ ಮೇಲೆ ಆ ಸಮುದಾಯ ನಮ್ಮ ಕುಟುಂಬವೇ ಆಗಿಬಿಡುತ್ತದೆ.
ಸಮುದಾಯದಲ್ಲಿ ಕಷ್ಟ ಬಂದಾಗ ಪರಿಹಾರಕ್ಕಾಗಿ ನಾವು ಏನೂ ಮಾಡದೇ ಇರುವುದಾದರೂ ಹೇಗೆ? ಅದು ನಮ್ಮ ಸ್ವಂತದ್ದು ಎನ್ನುವ ತುಡಿತ ಇದ್ದರೆ ಮಾತ್ರ ನಮ್ಮ ಹೋರಾಟಕ್ಕೆ ಮಾನ್ಯತೆ ಸಾಧ್ಯ. ಕೊಳೆಗೇರಿ ಒಡೆದು ಹಾಕಿದ ಸರಕಾರದ ಕ್ರಮವನ್ನು ಪ್ರಶ್ನಿಸಿ ರಾಜ್ಯಮಟ್ಟದ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದಾಗ ಅಲ್ಲಿ ನ್ಯಾಯಸಿಗದೇ ಇದ್ದಾಗ ಸರ್ವೋಚ್ಚ ನ್ಯಾಯಾಲಯದ ಮೊರೆ ಹೊಕ್ಕಿ ಕೊಳೆಗೇರಿಗಳ ಎತ್ತಂಗಡಿ ಮತ್ತು ಒಡೆದು ಹಾಕುವಿಕೆಯನ್ನು ನಿಲ್ಲಿಸುವಂತೆ ಒತ್ತಾಯಿಸಿದಾಗ ಸವೋಚ್ಚ ನ್ಯಾಯಾಲಯ ತಡೆಯಾಜ್ಞೆ ನೀಡಿತು. ಇದರಿಂದ ನಗರದಲ್ಲಿನ ಬಡವರ ಹಕ್ಕುಗಳನ್ನು ರಕ್ಷಿಸಿದ್ದು ಒಂದು ಮಹಾಸಾಧನೆ. ಇದು ಎಲ್ಲರಿಗೂ ಧೈರ್ಯ ನೀಡಿದ ಸಂಗತಿ. ಎನ್ನುವ ಅವರ ಮಾತಿನಲ್ಲಿ ಬಡವರ ಬಗ್ಗೆ ಇದ್ದ ಅವರ ಕಾಳಜಿಗಳ ಬಗ್ಗೆ ಬೆಳಕು ಚೆಲ್ಲುತ್ತದೆ.
ಇವರು ಪ್ರಾರಂಭಿಸಿದ ‘ವಿಮೆನ್ಸ್ ವಾಯ್ಸ್’ ಸಂಘಟನೆಯ ಮೂಲಕ ಬಡಮಹಿಳೆಯರನ್ನು ಒಗ್ಗೂಡಿಸಿ 1980ರಿಂದ ಸರಕಾರ ಬಡವರಿಗಾಗಿ ಜಾರಿ ಪಡಿಸಿದ ಯೋಜನೆಗಳನ್ನು ಮುಖ್ಯವಾಗಿ ಕೊಳೆಗೇರಿಗಳಲ್ಲಿ ವಾಸಿಸುವ ಮಹಿಳೆಯರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪ್ಪಿಸಬೇಕೆಂದು ಒತ್ತಾಯಿಸಿ ಜಾರಿಗೆ ತಂದಿದ್ದಾರೆ. ಅನೇಕ ಅಧಿವೇಶನಗಳಲ್ಲಿ ಆಮಂತ್ರಿತಳಾಗಿ ಮಹಿಳೆಯರ ಹಕ್ಕುಗಳನ್ನು ಹತ್ತಿಕ್ಕಲಾದುದರಿಂದ ರಾಷ್ಟ್ರಕ್ಕೆ ಯಾವರೀತಿ ಹಾನಿಯಾಗಿದೆ ಎಂಬುದನ್ನು ಚರ್ಚಿಸಿದ್ದಾರೆ.
ಅನೇಕ ಮಹಿಳಾಪರ ಚಳವಳಿಯ ಕಾರ್ಯಾಗಾರಗಳಲ್ಲಿ ಆಮಂತ್ರಿತ ಅತಿಥಿಯಾಗಿ ಮಹಿಳಾಹಕ್ಕುಗಳ ವಕ್ತಾರೆಯಾಗಿ ಬೆಂಬಲಿಸಿದ್ದಾರೆ. ಹಾಗೇನೆ ಪ್ರಸ್ತುತ ರಾಜಕಾರಣ ಮಹಿಳೆಯರನ್ನು ಕೇವಲ ಅಭಿವೃದ್ಧಿ ಯೋಜನೆಗೆ ಬಳಸಿಕೊಂಡು ನಿರ್ಣಾಯಕ ಪ್ರಕ್ರಿಯೆಯಲ್ಲಿ ಹೇಗೆ ಅವಳನ್ನು ಅಲಕ್ಷಿಸಲಾಗುತ್ತದೆ ಎಂದು ಈ ಬಗ್ಗೆ ಸರಕಾರದ ಗಮನಹರಿಸುವಂತೆ ಮಾಡುತ್ತಾರೆ.
ಸಂಪತ್ತು ಗಳಿಸುವುದೇ ಯಶಸ್ಸಿನ ಮಾನದಂಡವಾಗಿರುವ ಇಂದಿನ ಪರಿಸ್ಥಿತಿಯಲ್ಲಿ ಸಮುದಾಯ ಕಟ್ಟುವವರು ಹೇಗೆ ಅಪ್ರಸ್ತುತರಾಗುತ್ತಾ ಹೋಗುತ್ತಾರೆ. ಅವರ ಮಾತುಗಳು ಬದಿಗೊತ್ತಲ್ಪಡುತ್ತದೆ, ಹಾಗೆಯೇ ಹೋರಾಟಗಳಲ್ಲಿ ನಂಬಿಕೆ ಇಲ್ಲವಾಗುತ್ತದೆ ಎಂಬ ಬಗ್ಗೆ ಅವರ ಗಮನ ಸೆಳೆದಾಗ ಇದು ಕೇವಲ ಮೇಲ್ವರ್ಗದವರ ಘೋಷಣೆಯಾಗಿ ಆಧುನಿಕ ವೈಚಾರಿಕತೆಯ ಉತ್ಪನ್ನವಾಗಿ ಮಾತ್ರ ಕಾಣಿಸಿಕೊಳ್ಳುತ್ತದೆ. ಹೋರಾಟಗಳು ಎಂದೂ ನಿಷ್ಪ್ರಯೋಜಕವಾದುದಲ್ಲ. ಹೋರಾಟದ ಸ್ವರೂಪಗಳೇ ಸಾಧ್ಯತೆಗಳನ್ನು ತೋರಿಸುತ್ತಾ ನಾನಾ ರೂಪದಲ್ಲಿ ಕುಡಿಯೊಡೆಯುತ್ತಲೇ ಇರುತ್ತದೆ ಎಂದು ಅಭಿಪ್ರಾಯ ಪಡುವ ಅವರು ತಮ್ಮ ಅವಿಶ್ರಾಂತ ಹೋರಾಟ ಮತ್ತು ಸಾಧನೆಯ ಹಾದಿಯಲ್ಲಿ ಮಹಿಳಾಪರ ಕಾಳಜಿಯ ಆಶಾಕಿರಣವಾಗಿದ್ದಾರೆ.