ಕರ್ನಾಟಕಕ್ಕೆ ಬೇಕು ಪ್ರತ್ಯೇಕ ಕ್ರೀಡಾ ಪಾಲಿಸಿ

Update: 2017-11-05 06:41 GMT

ಅನ್ಯ ದೇಶಗಳಲ್ಲಿನ ಸರಕಾರಗಳು ಕ್ರೀಡೆಗಳಿಗೆ ನೀಡುತ್ತಿರುವ ಪ್ರೋತ್ಸಾಹ, ಖರ್ಚು ಮಾಡುವ ಹಣ, ಆಸಕ್ತರಿಗೆ ಒದಗಿಸುತ್ತಿರುವ ಸೌಲಭ್ಯಗಳನ್ನು ನೋಡಿದರೆ ನಾವಿನ್ನು ಅಂಬೆಗಾಲಿಡುತ್ತಿರುವ ಶಿಶುಗಳಂತೆ ಭಾಸವಾಗುತ್ತದೆ. ಈಗಿನ ಜಡ ಸ್ಥಿತಿಯನ್ನು ಮುರಿದು ಮುನ್ನಡೆಯಬೇಕೆಂದರೆ ಕ್ರೀಡೋನ್ನತಿಗಾಗಿಯೇ ನಾವೊಂದು ಪ್ರತ್ಯೇಕ ಪಾಲಿಸಿ ರೂಪಿಸಿ ಜಾರಿಗೊಳಿಸಲು ಯೋಚಿಸಬೇಕು. ಕ್ರೀಡಾ ಕ್ಷೇತ್ರ ದಲ್ಲಿರುವ, ಅವುಗಳ ಗವರ್ನಿಂಗ್ ಬಾಡಿಗಳಿಗೂ ಚುರುಕು ಮುಟ್ಟಿಸಿ, ಅಗತ್ಯವಿದ್ದೆಡೆ ರಿಪೇರಿ ಮಾಡಿ ಒಟ್ಟಾರೆಯಾಗಿ ಅವು ಜನರ ಬಳಿಗೆ ತಲುಪುವಂತೆ ನೋಡಿಕೊಳ್ಳಬೇಕಿದೆ.

ಇಂಡಿಯಾದ ಗರಿಮೆಯನ್ನು ಸ್ಥಾಪಿಸುವ ಉಮೇದಿನಲ್ಲಿ ಕರ್ನಾಟಕದ ಹಿರಿಮೆಯನ್ನು ಬಿಟ್ಟು ಕೊಡುವ ಪ್ರವೃತ್ತಿಯೊಂದು ನಮ್ಮ ನಾಡಿನ ಎಲ್ಲಾ ಕ್ಷೇತ್ರಗಳಲ್ಲೂ ಎದ್ದು ಕಾಣುತ್ತಿದೆ.

ಹಿಂದಿ ಭಾಷೆಯನ್ನು ಇಂಡಿಯಾದ ರಾಷ್ಟ್ರಭಾಷೆ ಎಂದು ಹೇರುವ ಭರದಲ್ಲಿ ನಮ್ಮ ನಾಡಿನ ಕನ್ನಡ ಭಾಷೆಯನ್ನು ತುಳಿದು ಮೂಲೆಗುಂಪು ಮಾಡಲಾಗುತ್ತಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವನ್ನು ದೇಶದ ಏಕೈಕ ಅತಿ ದೊಡ್ಡ ಬ್ಯಾಂಕ್ ಆಗಿಸುವ ಆತುರದಿಂದ ನಮ್ಮ ಪರಂಪರೆಯ ಹೆಗ್ಗುರುತುಗಳಲ್ಲಿ ಒಂದಾಗಿದ್ದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್ ಅನ್ನೇ ಈಗ ಆಪೋಷನ ತೆಗೆದುಕೊಳ್ಳಲಾಗಿದೆ. ಕೇಂದ್ರ ಸರಕಾರವು ನಡೆಸುತ್ತಿರುವ ಸ್ಪರ್ಧಾತ್ಮಕ ನೇಮಕಾತಿ ಪರೀಕ್ಷೆಗಳಲ್ಲಿ ಬ್ಯಾಂಕು, ಪೋಸ್ಟ್ ಆಫೀಸ್‌ಗಳಲ್ಲೂ ಈಗ ಹಿಂದಿ-ಇಂಗ್ಲಿಷ್‌ಗಳದ್ದೇ ಕಾರುಬಾರು. ಆರೂವರೆ ಕೋಟಿ ಜನರು ಬಳಸುತ್ತಿರುವ ಕನ್ನಡ ಭಾಷೆಗೆ ಭಾರತ ಗಣರಾಜ್ಯಗಳ ಒಕ್ಕೂಟದಲ್ಲಿ ಈಗ ಕಿಮ್ಮತ್ತಿಲ್ಲದಂತಾಗಿದೆ. ಹಿಂದುತ್ವವಾದಿ ಕೋಮುವಾದಿಗಳು ಫೆಡರಲ್ ಸರಕಾರದ ಅಧಿಕಾರ ಹಿಡಿದುಕೊಂಡ ನಂತರ ಕನ್ನಡ ಸೇರಿದಂತೆ ಆಯಾ ಸದಸ್ಯ ರಾಜ್ಯಗಳ ಅಧಿಕೃತ ಭಾಷೆಗಳನ್ನು ದಮನಿಸುವ ಕಾರ್ಯಾಚರಣೆಯು ಮೊದಲಿಗಿಂತಲೂ ತೀವ್ರವಾಗಿ ನಡೆದಿದೆ.

ನಮ್ಮ ಭಾಷೆ, ನೀರು, ಅರಣ್ಯ, ನಿಸರ್ಗ ಸಂಪನ್ಮೂಲಗಳ ಮೇಲಿನ ಹಕ್ಕು-ಅಧಿಕಾರ ಗಳಿಂದ ನಮ್ಮನ್ನು ಪರಕೀಯ ಗೊಳಿಸುತ್ತಿರುವ ಫೆಡರಲ್ ಸರಕಾರದ ದಮನಕಾರಿ ನೀತಿಗಳು ಕರ್ನಾಟಕದ ಕ್ರೀಡಾ ಕ್ಷೇತ್ರವನ್ನೂ ಬಾಧಿಸುತ್ತಿದೆ. ಭಾರತದ ಕ್ರೀಡಾ ನೀತಿಗಳು ಹಾಗೂ ಅವುಗಳ ಸಾಂಸ್ಥಿಕ ಅಂಗರಚನೆಗಳು ಸಾಮಾನ್ಯ ಜನರಿಗಿರಲಿ ಕೊಂಚ ಲೋಕ ಜ್ಞಾನ ವಿರುವವರಿಗೂ ಅರ್ಥವಾಗದಷ್ಟು ಗೋಜಲಾಗಿವೆ.

ನಮ್ಮಲ್ಲಿ ಪ್ರತಿ ಕ್ರೀಡೆಗೂ ಒಂದು ಸಂಸ್ಥೆಯಿದ್ದು ಅವೆಲ್ಲವೂ ಅಖಿಲ ಭಾರತ ಮಟ್ಟದ ಸಾಂಸ್ಥಿಕ ರೂಪ ಹೊಂದಿವೆ. ಆಯಾ ರಾಜ್ಯಗಳಲ್ಲಿ ಅವುಗಳ ಶಾಖೆಯಿದ್ದು ಅವುಗಳ ಪದಾಧಿಕಾರಿಗಳು ಯಾರು, ಅವರನ್ನು ಯಾರು ಆರಿಸುತ್ತಾರೆ, ಅವುಗಳ ಕಚೇರಿ ಎಲ್ಲಿರುತ್ತದೆ, ಅಲ್ಲಿ ಮತದಾನ ಮಾಡುವವರು ಯಾರು, ಅವುಗಳ ಕಾರ್ಯಚಟುವಟಿಕೆಗಳೇನು, ಅನುದಾನದ ಹಣ ಎಲ್ಲಿಂದ ಬರುತ್ತದೆ ಮತ್ತದು ಹೇಗೆ, ಯಾರಿಗಾಗಿ ಖರ್ಚಾಗುತ್ತದೆ ಎಂಬ ಸರಳ ವಿವರಗಳೂ ಜನರಿಗೆ ತಿಳಿಯುತ್ತಿಲ್ಲ.

ಇನ್ನು ಅಖಿಲ ಭಾರತ ಮಟ್ಟದ ಈ ಕ್ರೀಡಾಸಂಸ್ಥೆಗಳು ಯಾವಾಗ ಈವೆಂಟ್‌ಗಳನ್ನು ನಡೆಸುತ್ತಾರೆ. ಅವುಗಳಲ್ಲಿ ಭಾಗವಹಿಸುವ ಸ್ಪರ್ಧಿಗಳನ್ನು ಯಾವ ಮಾನದಂಡಗಳಲ್ಲಿ, ಯಾರು ಹೇಗೆ ಆಯ್ಕೆ ಮಾಡುತ್ತಾರೆಂಬ ವಿವರಗಳಂತೂ ಭಗವಂತನಾಣೆಗೂ ಜನರಿಗೆ ತಿಳಿಯುವುದಿಲ್ಲ. ಈ ಕ್ರೀಡಾ ಸಂಸ್ಥೆಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿವೆ ಎಂದುಕೊಂಡರೂ ಸಹ ಅವೆಂದಿಗೂ ಬೆಂಗಳೂರು ನಗರದಿಂದಾಚೆಗೆ ಕಾಲಿಡುವುದಿಲ್ಲ. ಕರ್ನಾಟಕದಲ್ಲಾಗಲಿ, ಇಲ್ಲಾ ಇಂಡಿಯಾ ಆಗಲಿ ನಾವು ಚಾಂಪಿಯನ್ ಕ್ರೀಡಾಪಟುಗಳನ್ನು ರೂಪಿಸಬೇಕೆಂದರೆ ಅದಕ್ಕೆ ಸೂಕ್ತವಾದ ಕ್ರೀಡಾ ಪರಿಸರವನ್ನು ಮೊದಲು ಸೃಷ್ಟಿಸಬೇಕು.

ಕರ್ನಾಟಕದ ಈಗಿನ ಕ್ರೀಡಾ ಚಿತ್ರಣವನ್ನೇ ಗಮನಿಸಿ ನೋಡಿ.

ನಮ್ಮಲ್ಲಿ ಕರ್ನಾಟಕದ ಬ್ಯಾಡ್ಮಿಂಟನ್ ಚಾಂಪಿಯನ್ ಯಾರೆಂಬುದೇ ಗೊತ್ತಿಲ್ಲ. ಅದೇ ರೀತಿ ರಾಜ್ಯಮಟ್ಟದ ಚಾಂಪಿಯನ್ ಅಥ್ಲೀಟ್‌ಗಳು ಯಾರು, ಉತ್ತಮ ಲಾಂಗ್ ಜಂಪ್-ಹೈ ಜಂಪ್ ಕ್ರೀಡಾಪಟು ಯಾರು, ಅವರ ಸಾಧನೆಗಳೇನೆಂಬುದೇ ತಿಳಿದಿಲ್ಲ. ರಾಜ್ಯಮಟ್ಟದ ಅತ್ಯುತ್ತಮ ಕಬಡ್ಡಿ ತಂಡ, ಹಾಕಿ ತಂಡ, ಖೋ ಖೋ ತಂಡ ಯಾವುದೆಂತಲೂ ಗೊತ್ತಿಲ್ಲ. ಕರ್ನಾಟಕ ಮಟ್ಟದ ಸೈಕ್ಲಿಂಗ್ ಚಾಂಪಿಯನ್, ಈಜು, ಚೆಸ್ ಚಾಂಪಿಯನ್, ಕೇರಂ ಪ್ರವೀಣ ಯಾರೆಂಬುದನ್ನು ನಿರ್ಧರಿಸುವ ಕ್ರೀಡಾ ಪದ್ಧತಿಯೇ ಇಲ್ಲಿಲ್ಲ. ಇವೆಲ್ಲವೂ ಆಲ್ ಇಂಡಿಯಾ ಲೆವೆಲ್‌ನಲ್ಲೇ ನಿರ್ಧರಿತವಾಗುತ್ತವೆ. ಅಲ್ಲದೆ ಆಸಕ್ತ ಯುವ ಜನರಿಗೆ ಅರಿವೇ ಆಗದಂತೆ ಈ ಈವೆಂಟ್‌ಗಳನ್ನು ನಡೆಸಿ ಮುಗಿಸುತ್ತಿರುತ್ತಾರೆ.

ಇದಕ್ಕೊಂದು ವಿಕೇಂದ್ರೀಕೃತ ಪದ್ಧತಿ ಜಾರಿಯಾಗದೆ ಹೋದಲ್ಲಿ ಈ ಎಲ್ಲಾ ಕ್ರೀಡಾ ಈವೆಂಟ್‌ಗಳು ನಗರ ಕೇಂದ್ರಗಳಲ್ಲಿರುವ, ಉಳ್ಳವರ ನಡುವಿನ ವ್ಯವಹಾರ ಗಳಾಗಿಯೇ ಮುಂದುವರಿಯುತ್ತಿರುತ್ತವೆ.

ಕರ್ನಾಟಕ ಸರಕಾರದಲ್ಲಿ ಕ್ರೀಡೆ ಹಾಗೂ ಯುವ ಜನರಿಗಾಗಿಯೇ ಒಂದು ಸಚಿವ ಖಾತೆ ಇದೆ. ಅದಕ್ಕಾಗಿ ಪ್ರತ್ಯೇಕ ಬಜೆಟ್ ಕೂಡ ಇದೆ. ಆದರೆ ಅದು ಯಾವ ಕನಸುಗಳೂ ಇರ ದಂತಹ ನಿಷ್ಕ್ರೀಯ ಇಲಾಖೆಗಳಂತೆ ಕಾರ್ಯ ನಿರ್ವಹಿಸುತ್ತಿದೆ. ಹಾಲಿ ನಮ್ಮಲ್ಲಿರುವ ವಿವಿಧ ಕ್ರೀಡಾ ವಿಭಾಗಗಳ ಸಂಸ್ಥೆಗಳು ಅಖಿಲ ಭಾರತ ಮಟ್ಟದ ಸಂಸ್ಥೆಗಳೊಂದಿಗೆ ಅಫಿಲಿಯೇಷನ್ ಹೊಂದಿರಲಿ ಪರವಾಗಿಲ್ಲ. ಆದರೆ ನಮ್ಮ ಸರಕಾರ ಕೇವಲ ಕರ್ನಾಟಕಕ್ಕೇ ಅನ್ವಯಿಸುವಂತಹ ಪ್ರತ್ಯೇಕ ಕ್ರೀಡಾ ನೀತಿಗಳನ್ನೇಕೆ ಪರಿಚಯಿಸಬಾರದು?

ಸರಕಾರದ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಪ್ರತಿ ವರ್ಷ ರಾಜ್ಯ ಮಟ್ಟದ ಅಧಿಕೃತ ಕ್ರೀಡಾಕೂಟಗಳನ್ನು ಆಯೋಜಿಸಬಾರದೇಕೆ? ಇವು ದಸರಾ ಕ್ರೀಡಾಕೂಟ, 10ನೆ ನ್ಯಾಷನಲ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಎಂತಲೋ, 20ನೆ ಕಬಡ್ಡಿ ಟೂರ್ನಿ ಎಂಥಲೋ ರಾಷ್ಟ್ರೀಯ ಕೂಟಗಳ ಗದ್ದಲಗಳಲ್ಲಿ ಕಳೆದು ಹೋಗದಂತೆ, ಅದರ ಬದಲಾಗಿ ಕರ್ನಾಟಕದ ಅನನ್ಯತೆಯನ್ನು ನಿರೂಪಿಸುವ ಒಂದು ಪ್ರತ್ಯೇಕ ಛಾಪು ಮೂಡಿಸುವಂತಹ ಈವೆಂಟ್ ಆಗಿ ಯಾಕೆ ಏರ್ಪಡಿಸಬಾರದು?

ಫ್ರಾನ್ಸ್ ದೇಶದಲ್ಲಿ ಪ್ರತಿ ವರ್ಷ ನಡೆಯುವ ‘ಟೂರ್ ಡಿ ಫ್ರಾನ್ಸ್’ ಎಂಬ ಸೈಕ್ಲಿಂಗ್ ಚಾಂಪಿಯನ್‌ಶಿಪ್ ಈವೆಂಟ್ ಇಡೀ ವಿಶ್ವದ ಗಮನ ಸೆಳೆಯುತ್ತದೆ. ಅದರಲ್ಲಿ ಗೆದ್ದವರು ಆ ದೇಶದ ಸೂಪರ್ ಸ್ಟಾರ್ ಎನಿಸಿಕೊಳ್ಳುತ್ತಾರೆ. ಲಕ್ಷಾಂತರ ರೂಪಾಯಿ ಹಣ ಬಹುಮಾನವಾಗಿ ಪಡೆಯುತ್ತಾರೆ.

ಇಡೀ ಇಂಡಿಯಾದಲ್ಲಿ ಹುಡುಕಿದರೂ ಅಂತಹದ್ದೊಂದು ಕಾಣುವುದಿಲ್ಲ. ಇಂತಹದಕ್ಕೆ ನಾನೇನು ಫೆಡರಲ್ ಸರಕಾರದ ಅಪ್ಪಣೆಗೆ ಕಾಯಬೇಕಿಲ್ಲ. ಕರ್ನಾಟಕ ಸರಕಾರವೇ ಏಕೆ ಬೆಳಗಾಂನಿಂದ ಬೆಂಗಳೂರುವರೆಗಿನ ಒಂದು ‘ಕರ್ನಾಟಕ ಟೂರ್‌ನ ಸೈಕ್ಲಿಂಗ್ ಚಾಂಪಿಯನ್‌ಶಿಪ್’ ನಡೆಸಬಾರದು. ಅದೇ ಮಾದರಿಯಲ್ಲಿ ಕಬಡ್ಡಿ, ಈಜು, ಅಥ್ಲೆಟಿಕ್ಸ್, ಹಾಕಿ, ಚೆಸ್...ಹೀಗೆ ಹತ್ತಾರು ಈವೆಂಟ್‌ಗಳ ಕೂಟಗಳನ್ನು ಪ್ರತಿವರ್ಷ ಏಕೆ ನಡೆಸಬಾರದು?

ತಾಲೂಕು ಮಟ್ಟದಿಂದ ಆರಂಭಿಸಿ ನಂತರ ಜಿಲ್ಲಾ ಮಟ್ಟ ಹಾಗೂ ಅಂತಿಮವಾಗಿ ರಾಜ್ಯ ಮಟ್ಟದಲ್ಲಿ ಉನ್ನತ ಸಾಧನೆ ತೋರುವವರನ್ನೇ ರಾಷ್ಟ್ರ ಮಟ್ಟಕ್ಕೆ ಕಳುಹಿಸುವ ಪದ್ಧತಿ ಏಕೆ ಪರಿಚಯಿಸಲು ಸಾಧ್ಯವಿಲ್ಲ?

ಒಮ್ಮೆ ಈ ರೀತಿಯ ವಿಕೇಂದ್ರೀಕೃತ ಹಾಗೂ ವ್ಯವಸ್ಥಿತ ಕ್ರೀಡಾಕೂಟಗಳು ನಡೆಯಲು ಶುರುವಾದರೆ ಈಗಿನ ನಿರಾಶಾದಾಯಕ ಪರಿಸ್ಥಿತಿಯು ಖಂಡಿತಾ ಬದಲಾಗುತ್ತದೆ.

ಈಗಿರುವ ಅನೇಕ ಕ್ರೀಡಾ ಸಂಸ್ಥೆಗಳು ಸ್ವಾಯತ್ತವಾಗಿದ್ದು ಅವುಗಳ ಆಡಳಿತ ವ್ಯವಹಾರ ಗಳಲ್ಲಿ ಸರಕಾರ ಮಧ್ಯ ಪ್ರವೇಶಿಸಲು ಅವಕಾಶವಿರುವುದಿಲ್ಲ ಎಂಬುದು ನಿಜ. ಆದರೆ ಈ ಯಾವ ಸಂಸ್ಥೆಗಳು ಜನಸಾಮಾನ್ಯರ ಮಟ್ಟಕ್ಕಿಳಿದು ತಮ್ಮ ಚಟುವಟಿಕೆಗಳನ್ನು ನಡೆಸುತ್ತಿಲ್ಲ. ಇವೆಲ್ಲ ಲಾಬಿ, ಲಂಚ, ಜಾತಿ, ಸ್ವಜನ ಪಕ್ಷಪಾತ, ಸಿನಿಕತನಗಳೇ ತುಂಬಿ ಕೊಳೆತು ನಾರುತ್ತಿವೆ. ಇವುಗಳ ವ್ಯಾಪ್ತಿಯಿಂದಾಚೆಗೂ ಸರಕಾರವು ತಾನೇ ಸ್ವಯಂ ಪ್ರೇರಣೆಯ ಕ್ರೀಡಾ ಉನ್ನತಿಯ ಪೂರಕ ಕ್ರಮಗಳನ್ನು ಕೈಗೊಂಡರೆ ಅದಕ್ಕೆ ಯಾರ ಅಡೆತಡೆಯೂ ಬರುವುದಿಲ್ಲ.

ಇದಾಗಬೇಕೆಂದರೆ ಕರ್ನಾಟಕ ಸರಕಾರಕ್ಕೆ ಕನಿಷ್ಠ ಐದು-ಹತ್ತು ವರ್ಷಗಳ ಮುಂಗನಸು ಕಾಣುವ ಕ್ರಿಯಾ ಯೋಜನೆಯೊಂದು ಇರಬೇಕಾಗುತ್ತದೆ.

ಕನಿಷ್ಠ ಪಕ್ಷ ಪ್ರತೀ ಜಿಲ್ಲಾ ಕೇಂದ್ರಗಳಲ್ಲೂ, ಹೆಚ್ಚಿನ ಕ್ರೀಡಾ ಈವೆಂಟ್‌ಗಳಿಗೆ ತರಬೇತಿ ನೀಡುವ, ಆಸಕ್ತರು ಬಂದು ಕಲಿಯುವ, ಭಾಗಿಯಾಗುವಂತಹ ಆಧುನಿಕ ಸ್ಟೇಡಿಯಂಗಳನ್ನು ನಿರ್ಮಿಸಲು ಮುಂದಾಗಬೇಕು. ಪ್ರತೀ ಜಿಲ್ಲೆಗೆ ಪ್ರತೀ ವರ್ಷ ಕನಿಷ್ಠ ಮೂರು ಕೋಟಿ ರೂ.ಗಳಂತೆ ಬಜೆಟ್‌ನಲ್ಲಿ ಹಣ ನಿಗದಿ ಮಾಡಿ ಇನ್‌ಡೋರ್-ಔಟ್‌ಡೋರ್ ಸ್ಟೇಡಿಯಂಗಳ ನಿರ್ಮಾಣಕ್ಕೆ ಚಾಲನೆ ನೀಡಿ ದರೂ ಮುಂದಿನ ಐದು ವರ್ಷಗಳಲ್ಲಿ ಕರ್ನಾಟಕದ ಪ್ರತಿ ಜಿಲ್ಲೆಗಳಲ್ಲೂ ಸುಸಂಸ್ಕೃತ ಸರಕಾರಿ ಸ್ಟೇಡಿಯಂಗಳನ್ನು ನಿರ್ಮಿಸಲು ಸಾಧ್ಯವಿದೆ.

ಈ ಉದ್ದೇಶಕ್ಕಾಗಿ ಕನಿಷ್ಠ 10-20 ಎಕರೆಗಳಷ್ಟು ಜಾಗವನ್ನು ತೆಗೆದಿರಿಸಿದರೂ ಉತ್ತಮ.

ಅನ್ಯ ದೇಶಗಳಲ್ಲಿನ ಸರಕಾರಗಳು ಕ್ರೀಡೆಗಳಿಗೆ ನೀಡುತ್ತಿರುವ ಪ್ರೋತ್ಸಾಹ, ಖರ್ಚು ಮಾಡುವ ಹಣ, ಆಸಕ್ತರಿಗೆ ಒದಗಿಸುತ್ತಿರುವ ಸೌಲಭ್ಯಗಳನ್ನು ನೋಡಿದರೆ ನಾವಿನ್ನು ಅಂಬೆಗಾಲಿಡುತ್ತಿರುವ ಶಿಶುಗಳಂತೆ ಭಾಸವಾಗುತ್ತದೆ.

ಈಗಿನ ಜಡ ಸ್ಥಿತಿಯನ್ನು ಮುರಿದು ಮುನ್ನಡೆಯಬೇಕೆಂದರೆ ಕ್ರೀಡೋನ್ನತಿಗಾಗಿಯೇ ನಾವೊಂದು ಪ್ರತ್ಯೇಕ ಪಾಲಿಸಿ ರೂಪಿಸಿ ಜಾರಿಗೊಳಿಸಲು ಯೋಚಿಸಬೇಕು. ಕ್ರೀಡಾ ಕ್ಷೇತ್ರ ದಲ್ಲಿರುವ, ಅವುಗಳ ಗವರ್ನಿಂಗ್ ಬಾಡಿಗಳಿಗೂ ಚುರುಕು ಮುಟ್ಟಿಸಿ, ಅಗತ್ಯವಿದ್ದೆಡೆ ರಿಪೇರಿ ಮಾಡಿ ಒಟ್ಟಾರೆಯಾಗಿ ಅವು ಜನರ ಬಳಿಗೆ ತಲುಪುವಂತೆ ನೋಡಿಕೊಳ್ಳಬೇಕಿದೆ.

ಹೊಸ ಚಾಂಪಿಯನ್ನರು ಹುಟ್ಟಬೇಕೆಂದರೆ ಅವರು ಸಾಗುವ ಹಾದಿಯಲ್ಲಿ ಕಲ್ಲು-ಮುಳ್ಳು ಗಳಿರಬಾರದಲ್ಲವೇ?.

Writer - ಪಾರ್ವತೀಶ ಬಿಳಿದಾಳೆ

contributor

Editor - ಪಾರ್ವತೀಶ ಬಿಳಿದಾಳೆ

contributor

Similar News