ದಿಲ್ಲಿ ದರ್ಬಾರ್

Update: 2017-11-04 18:42 GMT

ಸುಮಿತ್ರಾ ಬಿಗಿಪಟ್ಟು
ಗುಜರಾತ್‌ನಲ್ಲಿ ತಾನು ಎದುರಿಸಲಿರುವ ದೊಡ್ಡ ಪರೀಕ್ಷೆಯ ಬಗ್ಗೆ ಬಿಜೆಪಿಯ ಆತಂಕ ದಿನದಿಂದ ದಿನಕ್ಕೆ ಹೆಚ್ಜತೊಡಗಿದೆ. ಚುನಾವಣೆಗಳು ಮುಗಿಯುವ ತನಕ ಸಂಸತ್‌ನ ಚಳಿಗಾಲದ ಅಧಿವೇಶನವನ್ನು ಮುಂದೂ ಡುವಂತೆ ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಹಾಗೂ ರಾಜ್ಯಸಭೆಯ ಉಪಾಧ್ಯಕ್ಷರ ಮೇಲೆ ಎನ್‌ಡಿಎ ಸರಕಾರ ಬಲವಾದ ಒತ್ತಡ ಹೇರುತ್ತಿದೆ. ಗುಜರಾತ್‌ನ್ನು ಮುಖ್ಯ ವಿಷಯವಾಗಿರಿಸಿಕೊಂಡು ಕಾಂಗ್ರೆಸ್ ಸಂಸತ್‌ನಲ್ಲಿ ಗದ್ದಲವೆಬ್ಬಿಸಬಹುದು ಹಾಗೂ ಪ್ರತಿದಿನವೂ ಗುಜರಾತ್ ಸುದ್ದಿಯಲ್ಲಿರಬಹುದೆಂಬ ಭಯ ಮೋದಿ ಹಾಗೂ ಶಾರನ್ನು ಕಾಡುತ್ತಿದೆ. ಆದರೆ ಅಚ್ಚರಿಯ ವಿಷಯವೆಂದರೆ ಸುಮಿತ್ರಾ ಮಹಾಜನ್ ಅವರು ಸಂಸತ್ ಕಲಾಪಗಳು ಪೂರ್ವನಿಗದಿಯಾದಂತೆ ನಡೆಯಬೇಕೆಂಬ ದೃಢವಾದ ಅಭಿಪ್ರಾಯ ಹೊಂದಿದ್ದಾರೆ. ಏನೇ ಮಾಡಿದರೂ ಕಾಂಗ್ರೆಸ್ ಸಂಸತ್‌ನ ಹೊರಗಾದರೂ ಗುಜರಾತ್ ವಿಷಯವನ್ನು ಕೆದಕುವುದೆಂದು ಅವರ ಅನಿಸಿಕೆಯಾಗಿದೆ. ರಾಜ್ಯಸಭೆಯ ಅಧ್ಯಕ್ಷರಾದ ವೆಂಕಯ್ಯ ನಾಯ್ಡು ಕೂಡಾ ಅದೇ ರೀತಿಯ ಅಭಿಪ್ರಾಯವನ್ನು ಹೊಂದಿದ್ದಾರೆ. ಚಳಿಗಾಲದ ಅಧಿವೇಶನ ಪೂರ್ವನಿಗದಿಯಂತೆ ನಡೆಯಲಿದೆಯೇ ಅಥವಾ ಇಲ್ಲವೇ ಎಂಬುದು ಖಚಿತವಾದ ಬಳಿಕವಷ್ಟೇ ಈ ಸುತ್ತಿನಲ್ಲಿ ಯಾರು ಗೆದ್ದರು ಎಂದು ನಮಗೆ ಗೊತ್ತಾಗಲಿದೆ.


ಮೋದಿ ಕಟ್ಟಪ್ಪಣೆ
 ತನ್ನ ಸಂಪುಟದ ಸಚಿವರು ಅಂತರ್ಜಾಲದಲ್ಲಿ ಕನಿಷ್ಠ ಪಕ್ಷ ಟ್ವಿಟರ್‌ನಲ್ಲಾದರೂ ಏನೇನು ಮಾಡುತ್ತಿದ್ದಾರೆ ಎಂಬ ಬಗ್ಗೆ ನರೇಂದ್ರ ಮೋದಿಗೆ ತೀವ್ರವಾದ ಆಸಕ್ತಿಯೇನೂ ಇರುವಂತೆ ಕಾಣುತ್ತಿಲ್ಲ. ತೀರಾ ಇತ್ತೀಚೆಗೆ ಅವರು ತನ್ನ ಸಚಿವರೊಂದಿಗೆ, ಇತರ ಸಚಿವರು ಮಾಡಿರುವ ಟ್ವೀಟ್‌ಗಳನ್ನು ಮರುಟ್ವೀಟ್ ಮಾಡುವಂತೆ ಕೇಳಿಕೊಂಡಿದ್ದರು. ಹಾಗೆ ಮಾಡಿದಲ್ಲಿ ಸರಕಾರದ ಕಾರ್ಯಕ್ರಮಗಳು ವಿಸ್ತೃತಮಟ್ಟದಲ್ಲಿ ಜನರನ್ನು ತಲುಪಬಹುದೆಂದು ಅವರ ಭಾವನೆಯಾಗಿದೆ. ಆನಂತರವಷ್ಟೇ ಹಲವಾರು ಸಚಿವರು ಇತರ ಸಚಿವರ ಟ್ವೀಟ್‌ಗಳನ್ನು ಮರುಟ್ವೀಟ್ ಮಾಡಲಾರಂಭಿಸಿದರು ಹಾಗೂ ತಮ್ಮ ಫೇಸ್‌ಬುಕ್ ಪುಟಗಳನ್ನು ಅಪ್‌ಡೇಟ್ ಮಾಡತೊಡಗಿದರು. ಆ ಬಗ್ಗೆ ನಿರ್ದೇಶನವನ್ನು ಪ್ರಧಾನಿ ಕಾರ್ಯಾಲಯದ ಅಧಿಕಾರಿಯೊಬ್ಬ ಸಚಿವರುಗಳಿಗೆ ಕಳುಹಿಸುವ ಬದಲು ಪ್ರಧಾನಿ ಮೋದಿಯೇ ಖುದ್ದಾಗಿ ಹೇಳಿಕೊಳ್ಳಬೇಕಾಗಿ ಬಂದಿರುವುದನ್ನು ಕಂಡು ಕನಿಷ್ಠ ಪಕ್ಷ ಒಬ್ಬ ಸಚಿವರಾದರೂ ಅಚ್ಚರಿಗೊಂಡಿರುತ್ತಾರೆ. ಕಾಂಗ್ರೆಸ್‌ನ ಚಟುವಟಿಕೆಗಳು ಹಾಗೂ ಟ್ವಿಟರ್‌ನಲ್ಲಿ ಕಾಂಗ್ರೆಸ್ ಹೆಚ್ಚು ಸಕ್ರಿಯವಾಗಿರುವುದು, ಪ್ರಧಾನಿಗೆ ಆತಂಕವನ್ನುಂಟುಮಾಡಿದೆಯೆಂಬುದರ ಸೂಚನೆ ಕೂಡಾ ಇದಾಗಿದೆ.


ದಿಗ್ವಿಜಯ್ ಸಿಂಗ್ ಎಲ್ಲಿ ?
 ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್, ರಾಜಕೀಯ ದೃಶ್ಯದಿಂದ ಈ ಮಾಯವಾಗಿ ಹೋಗಿದ್ದಾರೆ. ರಾಜಕೀಯೇತರ ಕಾರ್ಯಕ್ರಮ ವಾದ ‘ನರ್ಮದಾ ಪರಿಕ್ರಮ’ದಲ್ಲಿ ಅವರು ಸಂಪೂರ್ಣವಾಗಿ ತನ್ನನ್ನು ತೊಡಗಿಸಿ ಕೊಂಡಿದ್ದಾರೆ. ಅಷ್ಟೇ ಅಲ್ಲ ತನ್ನ ಸಾಮಾಜಿಕ ಜಾಲತಾಣಗಳ ಚಟುವಟಿಕೆಗಳನ್ನು ಕೂಡಾ ಅಮಾನತಿನಲ್ಲಿಟ್ಟಿದ್ದಾರೆ. ವಾರಕ್ಕೆ ನೂರಾರು ಬಾರಿ ಟ್ವೀಟ್ ಮಾಡುತ್ತಿದ್ದ ದಿಗ್ವಿಜಯ್‌ಸಿಂಗ್, ಟ್ವಿಟರ್‌ನಲ್ಲಿ ಅತ್ಯಂತ ಸಕ್ರಿಯವಾಗಿದ್ದ ಕಾಂಗ್ರೆಸ್ ನಾಯಕರಲ್ಲೊಬ್ಬ ರಾಗಿದ್ದರು. ಆದರೆ ಕಳೆದ ತಿಂಗಳಿನಿಂದ ಅವರು ತನ್ನ ಟ್ವಿಟರ್ ಚಟುವಟಿಕೆಗಳನ್ನು ಸ್ಥಗಿತಗೊಳಿಸಿದ್ದಾರೆ. ಅಷ್ಟೇ ಅಲ್ಲ ಅವರ ತಥಾಕಥಿತ ಆಧ್ಯಾತ್ಮಿಕ ಯಾತ್ರೆಯು ಈಗಾಗಲೇ ಮಧ್ಯಪ್ರದೇಶದ ರಾಜಕೀಯ ವಲಯದಲ್ಲಿ ನಡುಕವನ್ನು ಸೃಷ್ಟಿಸಲಾರಂಭಿಸಿದೆ. ಆ ರಾಜ್ಯದ ಮಾಜಿ ಮುಖ್ಯಮಂತ್ರಿಯೂ ಆಗಿರುವ ದಿಗ್ವಿಜಯ್‌ಸಿಂಗ್, ತನ್ನ ಸಭೆಗಳಿಗೆ ಜನರನ್ನು ಸೆಳೆಯುತ್ತಿರುವುದನ್ನು ಕಂಡಾಗ ಅವರು ಇತರ ಕಾಂಗ್ರೆಸ್ ನಾಯಕರ ನಡುವೆ ಕಳೆದುಹೋಗಿಲ್ಲವೆಂಬುದು ಖಾತರಿಯಾಗುತ್ತದೆ. ತನ್ನ ಯಾತ್ರೆಯ ವೇಳೆ ಅವರು ಹಳ್ಳಿಗಳು ಹಾಗೂ ಪಟ್ಟಣಗಳ ಪ್ರಮುಖ ವ್ಯಕ್ತಿಗಳನ್ನು ಕೂಡಾ ಭೇಟಿಯಾಗುತ್ತಿದ್ದಾರೆ. ಸಿಂಗ್ ಅವರ ಹೆಚ್ಚುತ್ತಿರುವ ಜನಪ್ರಿಯತೆಯು ಮಧ್ಯಪ್ರದೇಶದಲ್ಲಿ ಮುಖ್ಯಮಂತ್ರಿ ಕುರ್ಚಿಯ ಆಕಾಂಕ್ಷೆ ಹೊಂದಿರುವ ಕಾಂಗ್ರೆಸ್ ನಾಯಕರಿಗೆ ಗಾಬರಿ ಮೂಡಿಸಿದೆ. ಮುಖ್ಯಮಂತ್ರಿ ಪಟ್ಟಕ್ಕೆ ದಿಗ್ವಿಜಯ್ ಸಿಂಗ್ ಅವರ ಪ್ರಧಾನ ಪ್ರತಿಸ್ಪರ್ಧಿಗಳಾದ ಕಮಲ್‌ನಾಥ್ ಹಾಗೂ ಜ್ಯೋತಿರಾದಿತ್ಯ ಸಿಂಗ್ ಕೂಡಾ ಅವರ ಜೊತೆ ಕನಿಷ್ಠ ಪಕ್ಷ ಒಂದು ದಿನದ ಮಟ್ಟಿಗಾದರೂ ಯಾತ್ರೆಯಲ್ಲಿ ಪಾಲ್ಗೊಳ್ಳುವ ಬಗ್ಗೆ ಯೋಚಿಸುತ್ತಿದ್ದಾರೆ. ನಿಮಗೆ ಒಬ್ಬನನ್ನು ಸೋಲಿಸಲು ಸಾಧ್ಯವಾಗದಿದ್ದರೆ, ಅವನ ಜೊತೆ ಸೇರಿಕೊಳ್ಳುವುದು ಉತ್ತಮ ಎಂಬ ನಾಣ್ಣುಡಿ ಇಲ್ಲಿ ಚೆನ್ನಾಗಿ ಅನ್ವಯಿಸುತ್ತದೆ.


ಮುಕುಲ್ ರಾಯ್ ಗೋಳು!
ಟಿಎಂಸಿಯ ಮಾಜಿ ನಾಯಕ ಮುಕುಲ್ ರಾಯ್ ಪಕ್ಷ ತ್ಯಜಿಸಿದ ಕೂಡಲೇ ಅವರು ಬಿಜೆಪಿ ಸೇರುವರೆಂದು ನಿರೀಕ್ಷಿಸಲಾಗಿತ್ತು. ಆದರೆ ಹಾಗಾಗಲಿಲ್ಲ. ರಾಜಕೀಯದಲ್ಲಿ ಒಂದು ವಾರವೆಂಬುದು ಸುದೀರ್ಘ ಅವಧಿಯೇ ಸರಿ. ಯಾಕೆಂದರೆ ರಾಜಕೀಯದಲ್ಲಿ ಕೆಲವೇ ತಾಸುಗಳು ಕೂಡಾ ಮಹತ್ವದ ಪಾತ್ರವನ್ನು ವಹಿಸಲು ಸಾಧ್ಯವಿದೆ. ಇದಕ್ಕೆ ಮುಕುಲ್ ರಾಯ್ ಸರಿಯಾದ ಉದಾಹರಣೆ. ಮುಕುಲ್ ರಾಯ್ ಪಕ್ಷ ತೊರೆದ ದಿನದಂದೇ ಪಶ್ಚಿಮ ಬಂಗಾಳದಿಂದ ಹಲವಾರು ರಾಜಕೀಯ ಕಾರ್ಯಕರ್ತರು ಹೊಸದಿಲ್ಲಿಗೆ ದೌಡಾಯಿಸಿ ಬಂದಿದ್ದರು.ಆದರೆ ಮುಕುಲ್‌ರಾಯ್ ಬಿಜೆಪಿ ಸೇರ್ಪಡೆಗೆ ಅವರು ನಿನ್ನೆ ಮೊನ್ನೆಯವರೆಗೂ ಕಾಯಬೇಕಾಯಿತು. ಬಿಜೆಪಿ ಸೇರುವ ನಿರ್ಧಾರವನ್ನು ರಾಯ್ ಅವಸರದಿಂದ ಪ್ರಕಟಿಸಿರುವ ಹಾಗೆ ಕಾಣುತ್ತಿದೆ. ಆದರೆ ಮುಕುಲ್ ಬಿಜೆಪಿ ಸೇರ್ಪಡೆಯಾಗುವ ವಿಚಾರವು ಪಶ್ಚಿಮಬಂಗಾಳದ ಬಿಜೆಪಿ ನಾಯಕರನ್ನು ಚಿಂತೆಗೀಡು ಮಾಡಿತ್ತು ಹಾಗೂ ಅವರು ಪಕ್ಷದ ದಿಲ್ಲಿಯ ಮುಖ್ಯ ಕಾರ್ಯಾಲಯಕ್ಕೆ ಕರೆ ಮಾಡಿ, ಮುಕುಲ್ ಸೇರ್ಪಡೆಯಿಂದ ಪಕ್ಷಕ್ಕೆ ರಾಜ್ಯದಲ್ಲಿ ಹಾನಿಯಾಗಲಿದೆಯೆಂದು ದೂರಿದ್ದರು. ಅಮಿತ್ ಶಾ, ರಾಜನಾಥ್‌ಸಿಂಗ್ ಮತ್ತಿತರ ಬಿಜೆಪಿ ನಾಯಕರು ಪಕ್ಷಕ್ಕೆ ರಾಯ್ ಅವರ ಸೇರ್ಪಡೆಗೆ ಒಪ್ಪಿಗೆ ನೀಡಿದರೂ, ಅವರು ಮೊದಲು ಪಶ್ಚಿಮಬಂಗಾಳದ ಬಿಜೆಪಿ ನಾಯಕರೊಂದಿಗೆ ಈ ಬಗ್ಗೆ ಸಮಾಲೋಚನೆ ನಡೆಸಲು ಬಯಸಿದ್ದರು. ಹೀಗಾಗಿ ರಾಯ್ ಒಂದು ವಾರಕ್ಕೂ ಅಧಿಕ ಸಮಯ ಕಾಯಬೇಕಾಗಿ ಬಂದಿತ್ತು. ಇನ್ನೊಂದೆಡೆ ತನ್ನ ಬಿಜೆಪಿ ಸೇರ್ಪಡೆಗೆ ಸಾಕ್ಷಿಯಾಗಲು ಬಂದಿದ್ದ ಬೆಂಬಲಿಗರಿಗೆ ಉತ್ತರಿಸಬೇಕಾಗಿ ಬಂದಿದ್ದು ಕೂಡಾ ಮುಕುಲ್‌ರಾಯ್‌ಗೆ ತಲೆನೋವಾಗಿ ಕಾಡಿತ್ತು. ಕೊನೆಗೂ ಅವರ ಈ ಸಮಸ್ಯೆ ಬಗಹರಿದಿದೆ. ಶುಕ್ರವಾರದಂದು ಮುಕುಲ್‌ರಾಯ್ ವಿಧ್ಯುಕ್ತವಾಗಿ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಪಶ್ಚಿಮಬಂಗಾಳ ಬಿಜೆಪಿಯಲ್ಲಿ ಮುಕುಲ್‌ಗೆ ಯಾವ ಪಾತ್ರ ದೊರೆಯಲಿದೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದುನೋಡಬೇಕಾಗಿದೆ.


ಉಡುಗೊರೆಯಿಲ್ಲದ ದೀಪಾವಳಿ
 ಈ ಸಲದ ದೀಪಾವಳಿಗೆ ಹೊಸದಿಲ್ಲಿಯ ರೈಲ್ವೆಭವನಕ್ಕೆ ಗರಬಡಿದಿರುವಂತೆ ಭಾಸವಾಗುತ್ತಿತ್ತು. ರ್ವೆಲ್ವೆ ಮಂಡಳಿಯ ಅಧ್ಯಕ್ಷ ಅಶ್ವನಿ ಲೋಹಾನಿ, ಯಾವುದೇ ಉಡುಗೊರೆಗಳನ್ನು ಸ್ವೀಕರಿಸದಂತೆ ಇಲಾಖೆಯ ಅಧಿಕಾರಿಗಳಿಗೆ ಸ್ಪಷ್ಟವಾದ ಸೂಚನೆಗಳನ್ನು ನೀಡಿದ್ದರು. ಹೀಗಾಗಿ, ಸಾಮಾನ್ಯವಾಗಿ ದೀಪಾವಳಿಯ ಸಮಯದಲ್ಲಿ ಅಧಿಕಾರಿಗಳ ಮೇಜುಗಳ ಸುತ್ತ ಇರುತ್ತಿದ್ದ ಸಡಗರ ಈ ಸಲ ಮಾಯವಾಗಿತ್ತು. ಸಿಹಿತಿಂಡಿ, ಹಣ್ಣ್ಣುಹಂಪಲುಗಳೊಂದಿಗೆ ಉಡುಗೊರೆಯ ಪೊಟ್ಟಣಗಳನ್ನು ತಂದಿದ್ದ ಹಲವಾರು ಮಂದಿಗೆ ಕಚೇರಿಯ ಆವರಣದೊಳಗೆ ಪ್ರವೇಶ ನಿರಾಕರಿಸಲಾಗಿತ್ತು. ಈ ಕ್ರಮವು ನೂತನ ರೈಲ್ವೆ ಸಚಿವ ಪಿಯೂಷ್ ಗೋಯಲ್‌ಗೆ ಸಂತೃಪ್ತಿಯುಂಟು ಮಾಡಿದೆಯಾದರೂ, ಇಲಾಖೆಯ ಹಲವಾರು ಅಧಿಕಾರಿಗಳ ಮುಖವನ್ನು ಸಪ್ಪೆಯಾಗಿಸಿದೆ. ಆದರೆ ದೀಪಾವಳಿ ಹಬ್ಬದ ಉಡುಗೊರೆಗಳು ರೈಲ್ವೆ ಭವನದ ಆವರಣವನ್ನು ಪ್ರವೇಶಿಸಲು ವಿಫಲವಾದರೂ, ರೈಲ್ವೆ ನಿಗಮದ ಸದಸ್ಯರು ಹಾಗೂ ಇತರ ಉನ್ನತ ಅಧಿಕಾರಿಗಳ ಮನೆಗಳಿಗೆ ದಾರಿ ಕಂಡುಕೊಂಡಿರುವುದಾಗಿ ಕೆಲವರು ಆಪಾದಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News