ದಿ ಹೌಸ್ ನೆಕ್ಸ್ಕ್ ಡೋರ್: ಅದೇ ದೆವ್ವ...ಅದೇ ಚೀತ್ಕಾರ...

Update: 2017-11-12 11:28 GMT

 ರಾಮ್‌ಗೋಪಾಲ್ ವರ್ಮಾ ಅವರ ‘ರಾತ್’ ಚಿತ್ರದಿಂದ ಹಿಡಿದು ಇತ್ತೀಚಿನ ‘ರಾಝ್’ ಸರಣಿಯವರೆಗೂ ಬಾಲಿವುಡ್‌ಲ್ಲಿ ಹಾರರ್ ಚಿತ್ರಗಳು ಬೀರಿರುವ ಪರಿಣಾಮ ಭಿನ್ನವಾದುದು. ಮಹೇಶ್ ಭಟ್‌ರಂತಹ ಪ್ರಗತಿಪರ ಬಾಲಿವುಡ್ ಚಿಂತಕರೂ, ಮನರಂಜನೆಯ ವಿಷಯದಲ್ಲಿ ಯಾವ ಮುಜುಗರವೂ ಇಲ್ಲದೆ ಭೂತಪ್ರೇತಗಳನ್ನು ನೆಚ್ಚಿಕೊಂಡಿದ್ದಾರೆ. ಇತ್ತೀಚೆಗೆ ಬಾಲಿವುಡ್‌ನಲ್ಲಿ ಬಂದ ಅತ್ಯುತ್ತಮ ಹಾರರ್ ಚಿತ್ರಗಳೆಂದು, ವರ್ಮಾ ಅವರ ಭೂತ್, 1920, ಹಾಂಟಡ್, ರಾಗಿಣಿ ಎಂಎಂಎಸ್ ಮೊದಲಾದವುಗಳನ್ನು ಗುರುತಿಸಬಹುದು. ಹೆಚ್ಚಿನ ಹಾರರ್ ಚಿತ್ರಗಳ ವೈಫಲ್ಯಗಳಿಗೆ ಅದರ ಕಥಾವಸ್ತು ಮತ್ತು ನಿರೂಪಣೆಯೇ ಮುಖ್ಯಕಾರಣವಾಗಿದೆ. ಇತ್ತೀಚೆಗೆ ಬಂದಿರುವ ಎಲ್ಲ ಭೂತಪ್ರೇತಗಳು ಹಿಂದಿನ ಭೂತ ಪ್ರೇತಗಳಿಂದ ಪ್ರಭಾವಿತಗೊಂಡಿವೆ. ಅನೇಕ ಸಂದರ್ಭಗಳಲ್ಲಿ ಭೂತ ಪ್ರೇತಗಳ ಕತೆಗಳಿಗೆ ‘ಮನಶ್ಶಾಸ್ತ್ರ’ದ ಹಿನ್ನೆಲೆಯನ್ನು ನೀಡಿ ಪರಿಣಾಮಕಾರಿಯಾಗಿ ನಿರೂಪಿಸ ಬಹುದಾಗಿದೆ. ಈ ನಿಟ್ಟಿನಲ್ಲಿ ಮಲಯಾಳಂನಲ್ಲಿ ಬಂದ ‘ಮಣಿ ಚಿತ್ರತ್ತಾಳ್’ ಏಕಕಾಲದಲ್ಲಿ ಹಾರರ್ ಮತ್ತು ಮನಶ್ಶಾಸ್ತ್ರೀಯ ಚಿತ್ರವಾಗಿ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯಿತು. ಕನ್ನಡದಲ್ಲಿ ಈ ಚಿತ್ರ ಆಪ್ತ ಮಿತ್ರ ಹೆಸರಲ್ಲಿ ಯಶಸ್ವಿಯಾಯಿತು. ಬಾಲಿವುಡ್‌ನಲ್ಲೂ ರಿಮೇಕ್ ಆಗಿ ಗಮನಸೆಳೆಯಿತು. ಹಾರರ್ ಚಿತ್ರವಾಗಿದ್ದರೂ ಅದು ಬೇರೆ ಬೇರೆ ನೆಲೆಗಳಲ್ಲಿ ವೀಕ್ಷಕರನ್ನು ತಟ್ಟುತ್ತದೆ.

ಇದೀಗ ಬಿಡುಗಡೆಗೊಂಡಿರುವ ‘ದಿ ಹೌಸ್ ನೆಕ್ಸ್ಟ್ ಡೋರ್’ ಚಿತ್ರ ಹಾರರ್ ಚಿತ್ರವಾಗಿ ಗಮನ ಸೆಳೆಯುತ್ತದೆಯಾದರೂ, ತೆಳುವಾದ ಕತೆ ಚಿತ್ರದ ಕ್ಲೈಮಾಕ್ಸ್‌ಗೆ ಧಕ್ಕೆ ತಂದಿದೆ. ಎಂದಿನಂತೆ ಹೊಸ ಮನೆ, ಅದನ್ನು ಪ್ರವೇಶಿಸುವ ಹೊಸ ಕುಟುಂಬ. ಅಲ್ಲಿ ಸಂಭವಿಸುವ ಆತಂಕಕಾರಿ ಘಟನೆಗಳು. ಅಂತಿಮವಾಗಿ ಭೂತದ ನೆರಳು ಮತ್ತು ಅದಕ್ಕೆ ಕಾರಣವಾಗಿರುವ ಬರ್ಬರ ಹತ್ಯೆಗಳು. ಈ ಎಲ್ಲ ಹಂತಗಳೂ ದಿ ಹೌಸ್ ನೆಕ್ಸ್ಟ್ ಡೋರ್ ಚಿತ್ರದಲ್ಲಿ ಮರುಕಳಿಸುತ್ತವೆ. ಚಿತ್ರದ ಕಥಾನಾಯಕ ಖ್ಯಾತ ನರತಜ್ಞ ಕೃಷ್ಣಕಾಂತ್(ಸಿದ್ಧಾರ್ಥ್) ಕುಟುಂಬ ವಾಸಿಸುವ ನೆರೆ ಮನೆಗೆ ಒಂದು ಕುಟುಂಬದ ಪ್ರವೇಶವಾಗುತ್ತದೆ. ಆ ಕುಟುಂಬದಲ್ಲಿ ಓರ್ವ ಸದಸ್ಯೆ ಜೆನ್ನಿ ಅತಿಮಾನುಷ ಶಕ್ತಿಗೆ ಬಲಿಯಾಗುವುದರೊಂದಿಗೆ ನೆರೆಮನೆಯ ಸಮಸ್ಯೆ ಇವರ ಮನೆಬಾಗಿಲನ್ನು ತಟ್ಟುತ್ತದೆ. ಆರಂಭದಲ್ಲಿ ಮಾನಸಿಕ ಸಮಸ್ಯೆಯಾಗಿ ಕಾಣಿಸುವ ಘಟನೆಗಳು ಅಂತಿಮವಾಗಿ ದೆವ್ವಗಳ ಕಾಟವಾಗಿ ಪರಿವರ್ತನೆಯಾಗುತ್ತದೆ. ಘಟನೆಗಳಿಗೆ ಕಾರಣಗಳನ್ನು ಹುಡುಕುತ್ತಾ ಹೋದಂತೆ ಆ ನೆರೆಯ ಮನೆಯಲ್ಲಿ 80 ವರ್ಷಗಳ ಹಿಂದೆ ನಡೆದಿರುವ ಬರ್ಬರ ಕೊಲೆಯೊಂದು ತೆರೆದುಕೊಳ್ಳುತ್ತದೆ. ಸೂರ್ಯಗ್ರಹಣ, ನರಬಲಿ ಇತ್ಯಾದಿ ವೌಢ್ಯಗಳೆಲ್ಲವೂ ಆ ಕೊಲೆಯೊಂದಿಗೆ ಸುತ್ತಿಕೊಳ್ಳುತ್ತದೆ.

 ಕತೆ ತೆಳುವಾಗಿದ್ದರೂ ನಿರೂಪಣೆ, ತಂತ್ರಜ್ಞಾನದ ಪರಿಣಾಮಕಾರಿ ಬಳಕೆ ಹಾರರ್ ಪ್ರಿಯರಿಗೆ ಚಿತ್ರವನ್ನು ಹತ್ತಿರವಾಗಿಸಬಹುದು. ಕ್ರಿಶ್ಚಿಯನ್ ಪಾದ್ರಿಯಾಗಿ ಪ್ರಕಾಶ್ ಬೆಳವಾಡಿ, ನೆರೆಮನೆಯ ಮಾಲಕ ಪಾಲ್ ಪಾತ್ರದಲ್ಲಿ ಅತುಲ್ ಕುಲಕರ್ಣಿ ಎಲ್ಲರೂ ಪಾತ್ರಗಳಿಗೆ ನ್ಯಾಯ ನೀಡಿದ್ದಾರೆ. ಹಾರರ್ ಚಿತ್ರವನ್ನು ತಲುಪಿಸುವಲ್ಲಿ ಹಿನ್ನೆಲೆ ಸಂಗೀತ ಯಶಸ್ವಿಯಾಗಿದೆ. ಜೆನ್ನಿ ಪಾತ್ರದಲ್ಲಿ ಅನಿಶಾ ವಿಕ್ಟರ್ ಎದೆ ನಡುಗುವಂತೆ ಚೀತ್ಕರಿಸುತ್ತಾಳೆ. ಹಾಗೆಯೇ ಕ್ಲೈಮಾಕ್ಸ್‌ನಲ್ಲಿ ಸಿದ್ಧಾರ್ಥ್ ಕೂಡ, ತನ್ನನ್ನು ಸೇರಿಕೊಂಡ ದೆವ್ವಕ್ಕೆ ನ್ಯಾಯವನ್ನು ನೀಡುತ್ತಾನೆ ಅಂದರೆ ಪ್ರೇಕ್ಷಕರ ಎದೆ ಕಂಪಿಸುವಂತೆ ಮಾಡುವಲ್ಲಿ ಯಶಸ್ವಿಯಾಗುತ್ತಾರೆ. ಬಹಳ ಸಮಯದ ಬಳಿಕ ದೆವ್ವಗಳು ಬಾಲಿವುಡ್‌ನ ಪ್ರೇಕ್ಷಕರನ್ನು ಬೆದರಿಸಲು ಯಶಸ್ವಿಯಾಗಿವೆ. ಹಾರರ್ ಪ್ರಿಯರು ಒಮ್ಮೆ ನೋಡಬಹುದಾದ ಚಿತ್ರ.

Writer - ಮುಸಾಫಿರ್

contributor

Editor - ಮುಸಾಫಿರ್

contributor

Similar News