ಕೋರೆಗಾಂವ್ ಹಿಂಸಾಚಾರ: ನ್ಯಾಯಾಂಗ ತನಿಖೆಗೆ ಒಪ್ಪಿಸಲು ಫಡ್ನವಿಸ್ ನಿರ್ಧಾರ

Update: 2018-01-02 09:21 GMT

ಹೊಸದಿಲ್ಲಿ, ಜ.2: ಮಹಾರಾಷ್ಟ್ರದ ಕೋರೆಗಾಂವ್‌ನಲ್ಲಿ ಸೋಮವಾರ ನಡೆಯುತ್ತಿದ್ದ ಭೀಮ ಕೋರೆಗಾಂವ್ ಸಂಗ್ರಾಮದ 200ನೇ ವಿಜಯೋತ್ಸವ ಮೆರವಣಿಗೆ ವೇಳೆ ಸಂಘಪರಿವಾರದ ಕಾರ್ಯಕರ್ತರು ನಡೆಸಿದ ಕಲ್ಲು ತೂರಾಟ ಹಾಗೂ ಆನಂತರ ನಡೆದ ಹಿಂಸಾಚಾರ ಘಟನೆಯನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಲು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ನಿರ್ಧರಿಸಿದ್ದಾರೆ.

‘‘ಜ.1 ರಂದು ಪುಣೆಯ ಕೋರೆಗಾಂವ್‌ನಲ್ಲಿ ನಡೆದ ಹಿಂಸಾಚಾರದ ಬಗ್ಗೆ ನ್ಯಾಯಾಂಗ ತನಿಖೆ ನಡೆಸುವಂತೆ ಸುಪ್ರೀಂಕೋರ್ಟ್‌ಗೆ ವಿನಂತಿಸಿಕೊಂಡಿದ್ದೇನೆ. ದಲಿತ ಯುವಕನ ಸಾವು ಪ್ರಕರಣಕ್ಕೆ ಸಂಬಂಧಿಸಿ ಸಿಐಡಿ ತನಿಖೆಗೂ ಆದೇಶಿಸಲಾಗಿದೆ. ಹಿಂಸಾಚಾರದಲ್ಲಿ ಪ್ರಾಣ ಕಳೆದುಕೊಂಡ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ನೀಡಲಾಗುವುದು’’ ಎಂದು ಫಡ್ನವಿಸ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

 ಕೋರೆಗಾಂವ್‌ನಲ್ಲಿ ದಲಿತರ ರ್ಯಾಲಿ ವೇಳೆ ನಡೆದ ಹಿಂಸಾಚಾರವನ್ನು ಖಂಡಿಸಿ ದಲಿತ ಸಂಘಟನೆಗಳು ಮಂಗಳವಾರ ಮುಂಬೈ ಬಂದ್‌ಗೆ ಕರೆ ನೀಡಿವೆ. ದಲಿತ ಸಂಘಟನೆಗಳು ಚೆಂಬೂರಿನಲ್ಲಿರುವ ಅಂಬೇಡ್ಕರ್ ಗಾರ್ಡನ್‌ನತ್ತ ಬೃಹತ್ ರ್ಯಾಲಿ ನಡೆಸುತ್ತದ್ದಾಗ ಪೊಲೀಸರು ಪ್ರತಿಭಟನಾಕಾರರನ್ನು ಚೆಂಬೂರು ನಾಕಾದಲ್ಲಿ ತಡೆ ಹಿಡಿದಿದ್ದಾರೆ. ಪ್ರತಿಭಟನಾಕಾರರಿಗೆ ಗಾರ್ಡನ್‌ನತ್ತ ತೆರಳಲು ಅವಕಾಶ ನೀಡಿಲ್ಲ. ರ್ಯಾಲಿ ವೇಳೆ ಆರ್‌ಎಸ್‌ಎಸ್ ವಿರುದ್ಧ ಘೋಷಣೆಗಳು ಮೊಳಗಿದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News