ದೇಶದಲ್ಲಿ ಚಲಾವಣೆಯಲ್ಲಿದ್ದ ಎರಡೂವರೆ ರೂಪಾಯಿ ನೋಟಿನ ಬಗ್ಗೆ ನಿಮಗೆ ತಿಳಿದಿದೆಯೇ?

Update: 2018-01-02 09:19 GMT

ಹೊಸದಿಲ್ಲಿ, ಜ.2: ಇದು ದೇಶದ ಇತಿಹಾಸದಲ್ಲೇ ಅಪರೂಪದ ನೋಟಿನ ಕಥೆ. 1918ರ ಜನವರಿ 2ರಂದು ಅಂದರೆ ಸರಿಯಾಗಿ 100 ವರ್ಷಗಳ ಹಿಂದೆ ಭಾರತದ ಆಡಳಿತ ನಡೆಸುತ್ತಿದ್ದ ಬ್ರಿಟಿಷ್ ಸರ್ಕಾರ ವಿಶಿಷ್ಟ ಹಾಗೂ ವಿಚಿತ್ರ ನೋಟು ಬಿಡುಗಡೆ ಮಾಡಿತ್ತು. ಅದರ ಮೌಲ್ಯ ಎರಡೂವರೆ ರೂಪಾಯಿ ಅಥವಾ ಎರಡು ರೂಪಾಯಿ ಎಂಟು ಆಣೆ!.

ಬ್ರಿಟಿಷ್ ಭಾರತದ ಒಂದು ರೂಪಾಯಿಯನ್ನು ಹದಿನಾರು ಆಣೆ ಎಂದು ವಿಂಗಡಿಸಲಾಗಿತ್ತು. ಈ ವಿಂಗಡಣೆಯು ಬ್ರಿಟಿಷ್ ಆಡಳಿತ ಪೂರ್ವದ ಮುಸ್ಲಿಂ ಹಣಕಾಸು ವ್ಯವಸ್ಥೆಯಿಂದ ಬಂದದ್ದು. ಈ ವಿಶಿಷ್ಟ ಹಾಗೂ ಅರ್ಧ ರೂಪಾಯಿಯನ್ನು ಒಳಗೊಂಡ ನೋಟಿಗೆ ಇದೀಗ ಶತಮಾನ ಸಂಭ್ರಮ.

ಬ್ಯಾಂಕ್ ನೋಟುಗಳ ಸಂಗ್ರಹದಲ್ಲಿ ವಿಶೇಷ ಆಸಕ್ತಿ ಹೊಂದಿರುವ ಡಾ.ಸೂರಜ್ ಕರಣ್ ರಾಠಿ ಅವರ ಪ್ರಕಾರ, "ಈ ನೋಟನ್ನು ಇಂಗ್ಲೆಂಡ್‍ನಲ್ಲಿ ಕೈಯಿಂದ ತಯಾರಿಸಿದ ಬಿಳಿಯ ಬಣ್ಣದ ಕಾಗದದಲ್ಲಿ ಮುದ್ರಿಸಲಾಗಿತ್ತು. ಇದು ಚಕ್ರವರ್ತಿ ಜಾಜ್ 5 ಅವರ ಮುದ್ರೆಯನ್ನು ಹೊಂದಿತ್ತು. ಅಂದಿನ ಬ್ರಿಟಿಷ್ ಹಣಕಾಸು ಕಾರ್ಯದರ್ಶಿ ಎಂ.ಎಂ.ಎಸ್.ಗುಬ್ಬೆ ಅವರ ಸಹಿಯನ್ನು ಹೊಂದಿದೆ. ಈ ಕರೆನ್ಸಿಯಲ್ಲಿ ಏಳು ಸಂಕ್ಷಿಪ್ತ ರೂಪದ ಸಂಕೇತಗಳು ಇದ್ದು, ಇದು ಆಯಾ ವೃತ್ತವನ್ನು ಸಂಕೇತಿಸುತ್ತಿತ್ತು. ಎ (ಕಾನ್ಪುರ), ಬಿ (ಮುಂಬೈ), ಕೆ (ಕರಾಚಿ), ಎಲ್ (ಲಾಹೋರ್), ಎಂ (ಮದ್ರಾಸ್) ಹಾಗೂ ಆರ್ (ರಂಗೂನ್).
ಈ ನೋಟುಗಳನ್ನು ಆಯಾ ವೃತ್ತಗಳಲ್ಲಿ ಮಾತ್ರ ಚಲಾವಣೆ ಮಾಡಲು ಅವಕಾಶವಿತ್ತು. ರೂಪಾಯಿಯ ಮೌಲ್ಯವನ್ನು ಎಂಟು ಭಾರತೀಯ ಭಾಷೆಗಳಲ್ಲಿ ಮುದ್ರಿಸಲಾಗಿತ್ತು. 2.5 ರೂಪಾಯಿ ಅಂದರೆ ಒಂದು ಡಾಲರ್ ಮೌಲ್ಯಕ್ಕೆ ಸಮನಾಗಿತ್ತು".

ಮೊದಲನೇ ಜಾಗತಿಕ ಯುದ್ಧ ಸಂದರ್ಭದಲ್ಲಿ (1914-1918) ಬೆಳ್ಳಿಯ ಬೆಲೆ ಗಗನಮುಖಿಯಾಯಿತು ಹಾಗೂ ಬೇಡಿಕೆ ಹೆಚ್ಚಿತು. ಎಷ್ಟರಮಟ್ಟಿಗೆ ಹೆಚ್ಚಿತು ಎಂದರೆ ಬೆಳ್ಳಿನಾಣ್ಯಗಳನ್ನು ತೂಕಹಾಕಿದಾಗ ಅದರ ಮೌಲ್ಯ, ಆ ನಾಣ್ಯದ ಮುಖಬೆಲೆಗಿಂತ ಅಧಿಕವಾಗಿತ್ತು. ಆದ್ದರಿಂದ ಜನ ಅದನ್ನು ಸಂಗ್ರಹಿಸಿ ಇಡಲು ಆರಂಭಿಸಿದರು. ಇದರಿಂದಾಗಿ ಬೆಳ್ಳಿಯ ನಾಣ್ಯಗಳ ಕೊರತೆ ಉಂಟಾಯಿತು. ಈ ಹಿನ್ನೆಲೆಯಲ್ಲಿ ಈ ನೋಟುಗಳು ಚಲಾವಣೆಗೆ ಬಂದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News