ತ್ರಿಪುರಾದಲ್ಲಿ ಬಿಜೆಪಿ ಕಾರ್ಯಕರ್ತನ ಹತ್ಯೆ

Update: 2018-01-03 14:21 GMT

ಗುವಹಾಟಿ, ಜ.3: ಚುನಾವಣೆಯನ್ನು ಎದುರು ನೋಡುತ್ತಿರುವ ತ್ರಿಪುರಾದಲ್ಲಿ ಬಿಜೆಪಿಯ ಕಾರ್ಯಕರ್ತರೊಬ್ಬರನ್ನು ಹತ್ಯೆಗೈದ ಘಟನೆ ಮಂಗಳವಾರ ರಾತ್ರಿ ಸಂಭವಿಸಿದೆ. 55ರ ಹರೆಯದ ಅಮೂಲ್ಯ ಮಲಕರ್ ಅವರನ್ನು ರಾಜನಗರ್ ಕ್ಷೇತ್ರದಲ್ಲಿರುವ ಅವರ ನಿವಾಸದಲ್ಲಿಯೇ ಭೀಕರವಾಗಿ ಹತ್ಯೆ ಮಾಡಲಾಗಿದೆ. ಈ ಕೃತ್ಯವನ್ನು ಸಿಪಿಎಂ ಬೆಂಬಲಿಗರು ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಅಮೂಲ್ಯ ಅವರ ಸಹೋದರ ಆಸ್ಪತ್ರೆಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿದ್ದಾರೆ ಎಂದು ಸ್ಥಳೀಯ ಪತ್ರಿಕೆಗಳು ವರದಿ ಮಾಡಿವೆ.

ಆರೋಪಿ ಗೋಪಾಲ್ ಕರ್ಮಕರ್ ಮೃತರ ಪಕ್ಕದ ಮನೆ ನಿವಾಸಿಯಾಗಿದ್ದು, ಆತನನ್ನು ಸ್ಥಳೀಯರು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ. ಎಡ ಸರಕಾರದ ಆಡಳಿತ ಹೊಂದಿರುವ ತ್ರಿಪುರಾದಲ್ಲಿ ಕಳೆದ ಹದಿಮೂರು ತಿಂಗಳಲ್ಲಿ ಏಳು ಬಿಜೆಪಿ ಕಾರ್ಯಕರ್ತರನ್ನು ಹತ್ಯೆ ಮಾಡಲಾಗಿದೆ. ಈ ರಾಜ್ಯದಲ್ಲಿ ಬಿಜೆಪಿಯು ಎಡಪಂಥೀಯ ತತ್ವಗಳ ವಿರುದ್ಧ ವೇಗವಾಗಿ ಜನಪ್ರಿಯತೆ ಪಡೆಯುತ್ತಿದ್ದು, ಸಿಪಿಎಂ ಬೆಂಬಲಿಗರು ಈ ಹತ್ಯೆ ನಡೆಸಿದ್ದಾರೆ ಎಂದು ಕೇಸರಿ ಪಕ್ಷ ದೂರಿದೆ. ಮಂಗಳವಾರ ರಾತ್ರಿ ಅಮೂಲ್ಯ ಅವರ ಮನೆಗೆ ಕುಡಿದ ಅಮಲಿನಲ್ಲಿ ತೆರಳಿದ ಆರೋಪಿ ಕರ್ಮಕರ್ ತಾನು ತೆಗೆದುಕೊಂಡು ಹೋಗಿದ್ದ ತಲವಾರಿನಿಂದ ಅಮೂಲ್ಯ ಅವರ ಕುತ್ತಿಗೆಗೆ ಕಡಿದಿದ್ದಾನೆ. ಇದರಿಂದ ಅಮೂಲ್ಯ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನಂತರ ಆರೋಪಿ ಅಮೂಲ್ಯರ ಸಹೋದರನ ಮೇಲೂ ಗಂಭೀರ ಹಲ್ಲೆ ನಡೆಸಿದ್ದಾರೆ ಎಂದು ತ್ರಿಪುರಾ ಬಿಜೆಪಿ ವಕ್ತಾ ಮೃನಲ್ ಕಾಂತಿ ದೇಬ್ ತಿಳಿಸಿದ್ದಾರೆ.

ಈ ಆರೋಪವನ್ನು ಸಿಪಿಎಂ ತಳ್ಳಿಹಾಕಿದೆ. ತ್ರಿಪುರಾದಲ್ಲಿ ವೈಯಕ್ತಿಕ ವೈಷಮ್ಯದಿಂದ ಯಾರು ಹತ್ಯೆಗೀಡಾದರೂ ಅವರು ಬಿಜೆಪಿಯ ಕಾರ್ಯಕರ್ತರಾಗುತ್ತಾರೆ ಮತ್ತು ಅವರನ್ನು ಕೊಲೆಗೈದವರು ಸಿಪಿಎಂ ಬೆಂಬಲಿಗರಾಗುತ್ತಾರೆ. ಇದು ಇಲ್ಲಿ ನಡೆಯುವ ಸಾಮಾನ್ಯ ವಿದ್ಯಾಮಾನ ಎಂದು ಸಿಪಿಐ-ಎಂ ರಾಜ್ಯ ಕಾರ್ಯದರ್ಶಿ ಬಿಜನ್ ಧರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News