‘ದೇವಮಾನವ ’ದೀಕ್ಷಿತ್‌ನ ಇರುವಿಕೆಯ ಬಗ್ಗೆ ವರದಿ ಸಲ್ಲಿಸಿ: ಸಿಬಿಐಗೆ ಹೈಕೋರ್ಟ್ ನಿರ್ದೇಶ

Update: 2018-01-04 13:45 GMT

ಹೊಸದಿಲ್ಲಿ,ಜ.4: ಬಾಲಕಿಯರನ್ನು ಅಕ್ರಮ ಬಂಧನದಲ್ಲಿರಿಸಲಾಗಿದ್ದ ಉತ್ತರ ದಿಲ್ಲಿಯ ರೋಹಿಣಿಯಲ್ಲಿನ ಆಶ್ರಮದ ಸ್ಥಾಪಕ, ಸ್ವಘೋಷಿತ ದೇವಮಾನವ ವೀರೇಂದ್ರ ದೇವ್ ದೀಕ್ಷಿತ್‌ನ ನಡವಳಿಕೆಯು ‘ಅತ್ಯಂತ ಶಂಕಾಸ್ಪದ ’ವಾಗಿದೆ ಎಂದು ಬಣ್ಣಿಸಿರುವ ದಿಲ್ಲಿ ಉಚ್ಚ ನ್ಯಾಯಾಲಯವು, ಆತ ಎಲ್ಲಿದ್ದಾನೆ ಎಂಬ ಬಗ್ಗೆ ವರದಿಯೊಂದನ್ನು ಸಲ್ಲಿಸುವಂತೆ ಸಿಬಿಐಗೆ ನಿರ್ದೇಶ ನೀಡಿದೆ.

ಆಶ್ರಮ ಮತ್ತು ದೀಕ್ಷಿತ್ ಅಲ್ಲಿದ್ದ ಬಾಲಕಿಯರು ತಮ್ಮ ಕುಟುಂಬ ಸದಸ್ಯರ ವಿರುದ್ಧ ಸುಳ್ಳು ದೂರುಗಳನ್ನು ದಾಖಲಿಸುವಂತೆ ಮಾಡುತ್ತಿದ್ದರು ಎಂಬ ನ್ಯಾಯಾಲಯವು ನೇಮಿಸಿದ್ದ ಸಮಿತಿಯ ವಾದಗಳಲ್ಲಿ ಸತ್ಯವಿರುವಂತೆ ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಪ್ರಭಾರ ಮುಖ್ಯ ನ್ಯಾಯಮೂರ್ತಿ ಗೀತಾ ಮಿತ್ತಲ್ ಮತ್ತು ನ್ಯಾ.ಸಿ.ಹರಿಶಂಕರ್ ಅವರ ಪೀಠವು ಹೇಳಿತು. ಆಶ್ರಮ ಮತ್ತು ದೀಕ್ಷಿತ್ ವಿರುದ್ಧದ ಪ್ರಕರಣಗಳ ಹಿಂದೆ ಬೀಳುವುದರಿಂದ ಅವರನ್ನು ವಿಮುಖಗೊಳಿಸಲು ಕುಟುಂಬ ಸದಸ್ಯರ ವಿರುದ್ಧ ದೂರುಗಳನ್ನು ದಾಖಲಿಸಿರುವಂತಿದೆ ಎಂದೂ ಅದು ಹೇಳಿತು.

ಪ್ರಾಮಾಣಿಕವಾದ ಮತ್ತು ಶಾಸನಬದ್ಧವಾಗಿರುವ ಯಾವುದೇ ಆಧ್ಯಾತ್ಮಿಕ ಚಟುವಟಿಕೆ ಗಳಲ್ಲಿ ತಾನು ಹಸ್ತಕ್ಷೇಪ ಮಾಡುವುದಿಲ್ಲ, ಆದರೆ ಮೋಸದ ಅಥವಾ ಅಕ್ರಮ ಚಟುವಟಿಕೆ ಗಳನ್ನು ತಾನು ಪ್ರೋತ್ಸಾಹಿಸುವುದಿಲ್ಲ ಎಂದು ಎನ್‌ಜಿಒ ಫೌಂಡೇಷನ್ ಫಾರ್ ಸೋಷಿಯಲ್ ಎಂಪವರ್‌ಮೆಂಟ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ನಡೆಸುತ್ತಿದ್ದ ನ್ಯಾಯಾಲಯವು ಸ್ಪಷ್ಟಪಡಿಸಿತು.

ಹಲವಾರು ಅಪ್ರಾಪ್ತ ವಯಸ್ಕ ಬಾಲಕಿಯರು ಮತ್ತು ಮಹಿಳೆಯರನ್ನು ‘ಆಧ್ಯಾತ್ಮಿಕ ವಿವಿ ’ಯಲ್ಲಿ ದಿಗ್ಬಂಧನದಲ್ಲಿರಿಸಲಾಗಿದೆ ಮತ್ತು ತಮ್ಮ ಪೋಷಕರನ್ನು ಭೇಟಿಯಾಗಲು ಅವರಿಗೆ ಅವಕಾಶ ನೀಡಲಾಗುತ್ತಿಲ್ಲ ಎಂದು ಎನ್‌ಜಿಒ ತನ್ನ ದೂರಿನಲ್ಲಿ ತಿಳಿಸಿತ್ತು.

ಇದಕ್ಕೂ ಮುನ್ನ ನ್ಯಾಯಾಲಯವು ಆಶ್ರಮ ಮತ್ತು ದೀಕ್ಷಿತ್ ಕುರಿತು ಸಿಬಿಐ ತನಿಖೆಗೆ ಆದೇಶಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News