ಪಂಜಾಬ್: ಪದಾತಿ ದಳ ಕೇಂದ್ರ ಕಚೇರಿಯ ರಹಸ್ಯ ದಾಖಲೆಪತ್ರ ನಾಪತ್ತೆ

Update: 2018-01-04 14:23 GMT

ಚಂಡೀಗಢ, ಜ.4: ಜಲಂಧರ್‌ನಲ್ಲಿ ಪದಾತಿ ದಳದ ಕೇಂದ್ರ ಕಚೇರಿಯಲ್ಲಿ ರಹಸ್ಯ ದಾಖಲೆಪತ್ರಗಳು ನಾಪತ್ತೆಯಾಗಿದ್ದು ಪ್ರಕರಣದ ಕುರಿತು ಸೇನೆಯು ಉನ್ನತಮಟ್ಟದ ತನಿಖೆ ನಡೆಸುತ್ತಿದೆ ಎಂದು ವರದಿಯಾಗಿದೆ.

ಕಳವಾದ ದಾಖಲೆಪತ್ರಗಳನ್ನು ಲೆಫ್ಟಿನೆಂಟ್ ಕರ್ನಲ್ ಹುದ್ದೆಗೆ ಸಮಾನವಾದ ‘ಜನರಲ್ ಸ್ಟಾಫ್ ಆಫೀಸರ್ ಗ್ರೇಡ್ 1(ಜಿಎಸ್‌ಒ 1)’ ಅವರ ಕಚೇರಿಯಲ್ಲಿ ಇಡಲಾಗಿತ್ತು .ಸೇನೆಯ ಗುಪ್ತಮಾಹಿತಿ ವಿಭಾಗ ಈ ಪ್ರಕರಣದ ಕುರಿತು ತನಿಖೆ ನಡೆಸುತ್ತಿದೆ. ಅಲ್ಲದೆ ಕೇಂದ್ರ ಕಚೇರಿ ಇರುವ ಕಟ್ಟಡದಲ್ಲಿ ವಾಡಿಕೆಯಂತೆ ನಿರ್ವಹಣಾ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರನ್ನೂ ವಿಚಾರಣೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

 ಸೇನೆಯ ರಹಸ್ಯ ದಾಖಲೆ ನಾಪತ್ತೆಯಾಗಿರುವುದನ್ನು ಸೇನಾ ಕೇಂದ್ರ ಕಚೇರಿಯ ಮೂಲಗಳು ದೃಢಪಡಿಸಿವೆ. ಇವು ಹಳೆಯ ದಾಖಲೆ ಪತ್ರಗಳು. ಆದರೂ ಇವು ರಹಸ್ಯವರ್ಗಕ್ಕೆ ಸೇರಿದ್ದ ಕಾರಣ ಇವನ್ನು ಭದ್ರತೆಯಲ್ಲಿ ಇಡುವ ಅಗತ್ಯವಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

 ಜಲಂಧರ್‌ನ ಪದಾತಿ ದಳವು ಸೇನೆಯ ‘11 ಕಾರ್ಪ್ಸ್’ ವಿಭಾಗಕ್ಕೆ ಸೇರಿದ್ದು , ಚಂಡಿಮಂದಿರದಲ್ಲಿರುವ ಪಶ್ಚಿಮ ಕಮಾಂಡ್‌ನ ಅಧೀನದಲ್ಲಿದೆ. ಈ ದಳವು ಪಂಜಾಬ್‌ನ ಭಾರತ-ಪಾಕ್ ಗಡಿಯಲ್ಲಿ ರಕ್ಷಣೆಯ ಹೊಣೆ ವಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News