ಪರಿಸ್ಥಿತಿಗಳನ್ನು ಸೂಕ್ಷ್ಮವಾಗಿ ಪರಿಗಣಿಸಿ ಜನರಿಗೆ ತಲುಪಿಸುವಂತಹ ಕಲೆ ಛಾಯಾಗ್ರಾಹಕರಿಗಿದೆ: ಸಚಿವ ಮಹದೇವಪ್ಪ

Update: 2018-01-05 13:17 GMT

ಮೈಸೂರು,ಜ.5: ಪ್ರತಿಯೊಂದು ಪರಿಸ್ಥಿತಿಗಳನ್ನು ಸೂಕ್ಷ್ಮವಾಗಿ ಪರಿಗಣಿಸಿ ಅದನ್ನು ಜನರಿಗೆ ತಲುಪಿಸುವಂತಹ ಕಲೆ ಛಾಯಾಗ್ರಾಹಕರಿಗಿದೆ  ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು.

ಮೈಸೂರಿನ ರಾಜೇಂದ್ರ ಭವನದಲ್ಲಿ  ಶುಕ್ರವಾರ ಮೈಸೂರು ಪತ್ರಿಕಾ ಛಾಯಾಗ್ರಾಹಕರ 2018ರ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿದರು. ಕಾಲ ಅರಿಯಲು ಕ್ಯಾಲೆಂಡರ್ ಸಹಾಯಕ. ಜನರು ಕಾಲಕ್ಕೆ ತಕ್ಕಂತೆ ಬದಲಾಗುತ್ತಿರುತ್ತಾರೆ. ಸಂವಿಧಾನದ ಆಶಯಕ್ಕೆ ಪ್ರಜಾಸತ್ತಾತ್ಮಕ ನಡವಳಿಕೆಗೆ ಪೂರಕವಾಗಿ ಬದಲಾವಣೆ ಆದರೆ ದೇಶದ ಸಮೃದ್ಧ ಬೆಳವಣಿಗೆಗೆ ಪೂರಕವಾಗಲಿದೆ. ಆದರೆ ಇತ್ತೀಚೆಗೆ ದೇಶದ ಜನರ ಭಾವನೆಗಳು ಬೇರೆ ಬೇರೆ ರೀತಿ ಆಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು. ಛಾಯಾಗ್ರಾಹಕರಾಗಿ ಉತ್ತಮ ಕ್ಯಾಲೆಂಡರ್ ನೀಡಿದ್ದೀರಿ. ಪರಿಸರ, ಪ್ರಾಣಿಪಕ್ಷಿಗಳನ್ನೊಳಗೊಂಡ ಕ್ಯಾಲೆಂಡರ್ ನಲ್ಲಿ ಉತ್ತಮ ಸಾಮಾಜಿಕ ಸಂದೇಶವಿದೆ. ರವಿ ಕಾಣದ್ದನ್ನು ಕವಿ ಕಂಡ ಎಂಬಂತೆ ಛಾಯಾಗ್ರಾಹಕರು ಸೂಕ್ಷವಾಗಿ ಸೆರೆ ಹಿಡಿದು ಅದ್ಭುತ ಸಂದೇಶ ನೀಡಿದ್ದಾರೆ. ರಾಜಕೀಯ, ವಿಜ್ಞಾನ, ಕ್ರೀಡೆ, ಧರ್ಮ ಎಲ್ಲವನ್ನು ಸೂಕ್ಷ್ಮವಾಗಿ ಪರಿಗಣಿಸಿ ಜನರಿಗೆ ತಲುಪಿಸು ಕಲೆ ಛಾಯಾಗ್ರಾಹಕರಿಗಿದೆ. ವಿಪರೀತ ಛಾಯಾಗ್ರಹಣದಲ್ಲಿ ಹೆಚ್ಚು ಐಕ್ಯೂ ಇರಬೇಕು. ಕಲ್ಪನೆಯ ಗ್ರಹಿಕೆ ಮುಖ್ಯವಾದದ್ದು. ಅವರ  ಈ ಕ್ಯಾಲೆಂಡರ್ ನಲ್ಲಿ ಪ್ರತಿಯೊಂದು ತಿಂಗಳು ತಿರುವಿದರೂ ಒಂದೊಂದು ವೈವಿಧ್ಯತೆಯನ್ನು ತಿಳಿಸುತ್ತದೆ. ದೇಶದ ಏಕತೆಯನ್ನು ಸಾರುತ್ತಿದೆ ಎಂದು ತಿಳಿಸಿದರು. ಪತ್ರಕರ್ತರ ಆರ್ಥಿಕ ಭದ್ರತೆಗೆ ಮುಖ್ಯಮಂತ್ರಿಗಳೊಡನೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಇದೇ ವೇಳೆ ಈ ಬಾರಿ ಅಗಲಿದ ಇಬ್ಬರು ನಿಷ್ಠಾವಂತ ಪತ್ರಕರ್ತರನ್ನು ಸ್ಮರಿಸಿದರು.

ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ಸೇಪ್ ವ್ಹೀಲ್  ಅಧ್ಯಕ್ಷ ಪ್ರಶಾಂತ್ ಅವರನ್ನು ಇದೇ ವೇಳೆ ಸನ್ಮಾನಿಸಲಾಯಿತು.

ಮುಡಾ ಪ್ರಾಧಿಕಾರ ಅಧ್ಯಕ್ಷ ಡಿ.ಧ್ರುವಕುಮಾರ್,ಶಾಸಕ ಕಳಲೇ ಕೇಶವ ಮೂರ್ತಿ, ಪತ್ರಕರ್ತ ಕೆ.ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News