ಜೆಡಿಎಸ್ ಬೆಂಬಲಿಗರನ್ನು ರೌಡಿ ಶೀಟರ್ ಪಟ್ಟಿಗೆ ಸೇರ್ಪಡೆಗೊಳಿಸುತ್ತಿರುವ ಚೆಲುವರಾಯಸ್ವಾಮಿ: ಕೆ.ಸುರೇಶ್‍ಗೌಡ ಆರೋಪ

Update: 2018-01-05 15:34 GMT

ಮಂಡ್ಯ, ಜ.5: ಚುನಾವಣೆಯನ್ನು ಗೆಲ್ಲುವ ದೃಷ್ಟಿಯಿಂದ ಶಾಸಕ ಎನ್.ಚೆಲುವರಾಯಸ್ವಾಮಿ ಜೆಡಿಎಸ್ ಬೆಂಬಲಿತರನ್ನು ರೌಡಿ ಶೀಟರ್ ಪಟ್ಟಿಗೆ ಸೇರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ಕೆ.ಸುರೇಶ್‍ಗೌಡ ಆರೋಪಿಸಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕರು ಅಧಿಕಾರ ದುರ್ಬಳಕೆ ಮಾಡಿಕೊಂಡು ಹಲವು ಜೆಡಿಎಸ್ ಕಾರ್ಯಕರ್ತರು, ವಿದ್ಯಾರ್ಥಿಗಳು, ಮುಖಂಡರನ್ನು ರೌಡಿ ಶೀಟರ್ ಪಟ್ಟಿಗೆ ಸೇರಿಸಿದ್ದಾರೆ ಎಂದರು.

2013ರ ನಂತರ ರೌಡಿ ಶೀಟರ್‍ಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ. 110 ಜನರನ್ನು ಪಟ್ಟಿಗೆ ಸೇರಿಸಲಾಗಿದೆ. ಇದರಲ್ಲಿ ಚೆಲುವರಾಯಸ್ವಾಮಿ ಅವರ ಕೈವಾಡವಿದೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು.

ಕಳೆದ ಮೂರು ದಿನದಲ್ಲೆ 18 ಜನರನ್ನು ರೌಡಿ ಶೀಟರ್‍ಗೆ ಸೇರಿಸಲಾಗಿದ್ದು, ಬಿಂಡಿಗೆನವಿಲೆ ಹೋಬಳಿಯ 80, ಬಿಳಿದೇಗಲಿನ 90 ಮಂದಿಯನ್ನು ಪೊಲೀಸರು ಪಟ್ಟಿಗೆ ಸೇರಿಸಿದ್ದಾರೆ. ಶಾಸಕರಿಗೆ ಇಂತಹ ನಡವಳಿಕೆ ಸರಿಯಲ್ಲ ಎಂದು ಅವರು ಕಿಡಿಕಾರಿದರು.

ಪಟ್ಟಣ ಪಂಚಾಯತ್ ಅಧ್ಯಕ್ಷ ವಿಜಯ್‍ಕುಮಾರ್ ರಾಜೀನಾಮೆ ನೀಡದಿದ್ದರೆ ಅವರನ್ನೂ ರೌಡಿ ಶೀಟರ್‍ಗೆ ಸೇರಿಸುವುದಾಗಿ ಶಾಸಕರು ಬೆದರಿಕೆ ಹಾಕಿರುವುದಲ್ಲದೆ, ರೌಡಿ ಶೀಟರ್‍ಗಳನ್ನು ಸಂಪರ್ಕಿಸಿ ಚುನಾವಣೆಯಲ್ಲಿ ತಮ್ಮ ಪರ ಪ್ರಚಾರ ನಡೆಸಿದರೆ ಗೃಹ ಸಚಿವರ ಜತೆ ಮಾತನಾಡಿ ಪಟ್ಟಿಯಿಂದ ಕೈಬಿಡಿಸುವುದಾಗಿ ಆಮಿಷ ತೋರುತ್ತಿದ್ದಾರೆಂದು ನೇರವಾಗಿ ಆರೋಪಿಸಿದರು.

ಸುರೇಶ್‍ಗೌಡರ ಆರೋಪಕ್ಕೆ ದನಿಗೂಡಿಸಿದ ವಿಧಾನಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಮರಳಿಗ ಗ್ರಾಮದಲ್ಲಿ ಎಂಎಸ್‍ಐಎಲ್ ಮದ್ಯ ಮಾರಾಟ ಮಳಿಗೆ ವಿರೋಧಿಸಿದ 18 ಮಹಿಳೆಯರು ಸೇರಿದಂತೆ ಸುಮಾರು 50 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಪೈಕಿ 5 ಜನರನ್ನು ರೌಡಿ ಶೀಟರ್‍ಗೆ ಸೇರಿಸಲಾಗಿದೆ ಎಂದು ದೂರಿದರು.

ತಾಪಂ ಮಾಜಿ ಸದಸ್ಯ ರಮೇಶ್ ಹಾಗು ಮುಖಂಡ ಹೊಣಕೆರೆ ರಮೇಶ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News