ಲೋಕಸಭೆಯ ಚಳಿಗಾಲದ ಅಧಿವೇಶನಕ್ಕೆ ತೆರೆ: 12 ವಿಧೇಯಕಗಳಿಗೆ ಅಂಗೀಕಾರ

Update: 2018-01-05 15:16 GMT

ಹೊಸದಿಲ್ಲಿ, ಜ.5: ಲೋಕಸಭೆಯ ಚಳಿಗಾಲದ ಅಧಿವೇಶನಕ್ಕೆ ಶುಕ್ರವಾರದಂದು ತೆರೆಯೆಳೆಯಲಾಯಿತು. ತ್ರಿವಳಿ ತಲಾಕ್ ಕಾಯ್ದೆ ಸೇರಿದಂತೆ 12 ಮಸೂದೆಗಳನ್ನು ಅಂಗೀಕರಿಸಲಾದ ಈ ಅಧಿವೇಶನದ ಮುಕ್ತಾಯವನ್ನು ಸಭಾಪತಿ ಸುಮಿತ್ರಾ ಮಹಾಜನ್ ಘೋಷಿಸಿದರು. ಡಿಸೆಂಬರ್ 15ರಂದು ಆರಂಭವಾದ ಅಧಿವೇಶನದಲ್ಲಿ 61 ಗಂಟೆಗಳು ಮತ್ತು 48 ನಿಮಿಷಗಳ ಕಾಲ ಕಲಾಪ ನಡೆಯಿತು. ಮುಂದೂಡಿಕೆ ಮತ್ತು ಅಡ್ಡಿಪಡಿಸುವಿಕೆಯ ಕಾರಣದಿಂದ 15 ಗಂಟೆಗಳನ್ನು ಈ ಅಧಿವೇಶನವು ಕಳೆದುಕೊಂಡಿತು ಎಂದು ಮಹಾಜನ್ ತಿಳಿಸಿದರು.

ಈ ಅಧಿವೇಶನದಲ್ಲಿ ಅಂಗೀಕಾರಗೊಂಡ ಮಸೂದೆಗಳಲ್ಲಿ, ಕೇಂದ್ರ ರಸ್ತೆ ನಿಧಿ (ತಿದ್ದುಪಡಿ) ಕಾಯ್ದೆ, ಸ್ಥಿರಾಸ್ತಿ ಸ್ವಾಧೀನ ಕಾಯ್ದೆ, ದಿಲ್ಲಿ ರಾಷ್ಟ್ರೀಯ ರಾಜಧಾನಿ ದಿಲ್ಲಿ ಪ್ರದೇಶ ಕಾನೂನು (ವಿಶೇಷ ನಿಬಂಧನೆ) ಎರಡನೇ (ತಿದ್ದುಪಡಿ) ಕಾಯ್ದೆ ಹಾಗೂ ಸರಕು ಮತ್ತು ಸೇವಾ ತೆರಿಗೆ (ರಾಜ್ಯಗಳಿಗೆ ಪರಿಹಾರ) ತಿದ್ದುಪಡಿ ಮಸೂದೆ ಮುಂತಾದವು ಪ್ರಮುಖವಾಗಿವೆ. ಸರ್ವೋಚ್ಛ ಮತ್ತು ಉಚ್ಛ ನ್ಯಾಯಾಲಯದ ನ್ಯಾಯಾಧೀಶರ ವೇತನವನ್ನು ಹೆಚ್ಚುಗೊಳಿಸುವ ಕಾಯ್ದೆಗೂ ಕೂಡಾ ಅಂಗೀಕಾರ ದೊರೆಯಿತು.

ಒಟ್ಟಾರೆಯಾಗಿ ಸರಕಾರ 16 ವಿಧೇಯಕಗಳನ್ನು ಚಳಿಗಾಲದ ಅಧಿವೇಶನದಲ್ಲಿ ಪರಿಚಯಿಸಿತ್ತು ಎಂದು ಸಭಾಪತಿ ತಿಳಿಸಿದರು. ಚಳಿಗಾಲದ ಅಧಿವೇಶನದಲ್ಲಿ ನಡೆದ ಪ್ರಕ್ರಿಯೆಗಳ ಬಗ್ಗೆ ಸದಸ್ಯರಿಗೆ ವಿವರಣೆ ನೀಡಿದ ನಂತರ ಸುಮಿತ್ರಾ ಮಹಾಜನ್ ಅಧಿವೇಶನದ ಮುಂದೂಡಿಕೆಯನ್ನು ಘೋಷಿಸುವ ವೇಳೆ ಸದನದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕೂಡಾ ಉಪಸ್ಥಿತರಿದ್ದರು.

ತುರ್ತು ಸಾರ್ವಜನಿಕ ಪ್ರಾಮುಖ್ಯತೆಯ 198 ವಿಷಯಗಳನ್ನು ಸದಸ್ಯರು ಪ್ರಸ್ತಾಪಿಸಿದ್ದು 226 ವಿಷಯಗಳನ್ನು ನಿಯಮ 377ರ ಅಡಿಯಲ್ಲಿ ಪ್ರಸ್ತಾಪಿಸಿದ್ದಾರೆ ಎಂದು ಮಹಾಜನ್ ತಿಳಿಸಿದ್ದಾರೆ. ಸ್ಥಾಯಿ ಸಮಿತಿಯು 41 ವರದಿಗಳನ್ನು ಸದನಕ್ಕೆ ಒಪ್ಪಿಸಿದೆ ಎಂದವರು ಹೇಳಿದ್ದಾರೆ.

 ದೇಶದ ವಿವಿಧ ಭಾಗಗಳಲ್ಲಿ ಸಂಭವಿಸಿದ ನೈಸರ್ಗಿಕ ದುರಂತಗಳ, ಮುಖ್ಯವಾಗಿ ದಕ್ಷಿಣ ಭಾರತದಲ್ಲಿ ಒಖಿ ಚಂಡಮಾರುತದಿಂದಾಗಿ ಹಬ್ಬಿದ ಕೋಲಾಹಲದ ಹಿನ್ನೆಲೆಯಲ್ಲಿ ನಿಯಮ 193ರಂತೆ ಲೋಕಸಭೆಯಲ್ಲಿ ಕಡಿಮೆ ಅವಧಿಯ ಚರ್ಚೆಯನ್ನು ನಡೆಸಲಾಯಿತು ಎಂದು ಮಹಾಜನ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News