ಉನ್ನತ ಶಿಕ್ಷಣದಲ್ಲಿ ಒಟ್ಟು ಪ್ರವೇಶ ಅನುಪಾತ ಶೇ.0.7 ಏರಿಕೆ

Update: 2018-01-05 16:18 GMT

ಹೊಸದಿಲ್ಲಿ,ಜ.5: 2015-16ರಲ್ಲಿ ಶೇ.24.5ರಷ್ಟಿದ್ದ ದೇಶದ ಉನ್ನತ ಶಿಕ್ಷಣದಲ್ಲಿ ಒಟ್ಟು ಪ್ರವೇಶ ಅನುಪಾತ(ಜಿಇಆರ್)ವು 2016-17ರಲ್ಲಿ ಶೇ.25.2ಕ್ಕೆ ಏರಿಕೆಯಾಗಿದೆ ಎಂದು ಇತ್ತೀಚಿನ ಅಖಿಲ ಭಾರತ ಉನ್ನತ ಶಿಕ್ಷಣ ಸಮೀಕ್ಷೆ(ಎಐಎಚ್‌ಇಎಸ್)ಯು ತಿಳಿಸಿದೆ. ಸಮೀಕ್ಷೆಯ ವರದಿಯನ್ನು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ ಜಾವಡೇಕರ್ ಅವರು ಶುಕ್ರವಾರ ಇಲ್ಲಿ ಬಿಡುಗಡೆಗೊಳಿಸಿದರು.

ದೇಶದೊಳಗೆ ಪದವಿ, ಸ್ನಾತಕೋತ್ತರ ಮತ್ತು ಸಂಶೋಧನೆ ಮಟ್ಟದಲ್ಲಿ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳ ಸಂಖ್ಯೆಯನ್ನು ನಿರ್ಧರಿಸಲು ಜಿಇಆರ್ ಸಾಂಖ್ಯಿಕ ಮಾನದಂಡವಾಗಿದ್ದು, ಅದನ್ನು 18ರಿಂದ 23 ವರ್ಷ ವಯೋಮಾನದ ಅರ್ಹ ಜನಸಂಖ್ಯೆ ಶೇಕಡಾವಾರು ಪ್ರಮಾಣದಲ್ಲಿ ವ್ಯಕ್ತಪಡಿಸಲಾಗುತ್ತದೆ.

2020ರೊಳಗೆ ಶೇ.30ರಷ್ಟು ಜಿಇಆರ್ ಸಾಧಿಸಲು ಭಾರತವು ಉದ್ದೇಶಿಸಿದೆಯಾದರೂ ಚೀನಾ(ಶೇ.43.39), ಅಮೆರಿಕ(ಶೇ.85.8)ದಂತಹ ರಾಷ್ಟ್ರಗಳಿಗಿಂತ ತುಂಬ ಹಿಂದಿದೆ. ಪಾಕಿಸ್ತಾನದ ಜಿಇಆರ್ ಶೇ.9.93ರಷ್ಟಿದೆ.

2015-16ರಲ್ಲಿ ದೇಶದಲ್ಲಿ 799 ವಿವಿಗಳು ಇದ್ದು, 2016-17ರಲ್ಲಿ ಈ ಸಂಖ್ಯೆ 864ಕ್ಕೇರಿದೆ. ದೇಶದಲ್ಲಿ ಅತ್ಯಂತ ಹೆಚ್ಚಿನ ಜಿಇಆರ್‌ನ್ನು ತಮಿಳುನಾಡು ಹೊಂದಿದ್ದು, ಇದು ರಾಷ್ಟ್ರೀಯ ಸರಾಸರಿಗಿಂತ ಅಧಿಕವಾಗಿದೆ. ಬಿಹಾರದಲ್ಲಿ ಇದು ಕೇವಲ ಶೇ.14.9ರಷ್ಟಿದೆ.

ಈ ಹಿಂದಿನಂತೆ ದಕ್ಷಿಣದ ರಾಜ್ಯಗಳಲ್ಲಿ ಹೆಚ್ಚಿನ ಕಾಲೇಜು ಸಾಂದ್ರತೆ ಮುಂದುವರಿದಿದೆ. ಪ್ರತಿ ಅರ್ಹ ಒಂದು ಲಕ್ಷ ಜನಸಂಖ್ಯೆಗೆ ಅಗ್ರ ಮೂರು ರಾಜ್ಯಗಳಾದ ತೆಲಂಗಾಣ 59, ಕರ್ನಾಟಕ 53 ಮತ್ತು ಪುದುಚೇರಿ 49 ಕಾಲೇಜುಗಳನ್ನು ಹೊಂದಿವೆ ಎಂದು ವರದಿಯು ತಿಳಿಸಿದೆ. ಬಿಹಾರ(7), ಜಾರ್ಖಂಡ್(8) ಮತ್ತು ಪ.ಬಂಗಾಳ(11) ಕೊನೆಯ ಮೂರು ಸ್ಥಾನಗಳಲ್ಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News