ಪ್ರಯಾಣಿಕರಿಂದ ಅಧಿಕ ಟಿಕೆಟ್ ದರ ವಸೂಲಿಗೆ ವಿಮಾನಯಾನ ಸಂಸ್ಥೆಗಳು ಏನೆಲ್ಲಾ ಮಾಡುತ್ತವೆ ಗೊತ್ತಾ?

Update: 2018-01-05 16:35 GMT

ಹೊಸದಿಲ್ಲಿ, ಜ.5: ಕೆಲವು ಖಾಸಗಿ ವಿಮಾನಯಾನ ಸಂಸ್ಥೆಗಳು ‘ಚೆಕ್-ಇನ್’ ಕೌಂಟರ್‌ಗಳಲ್ಲಿ ಉದ್ದನೆಯ ಸರತಿ ಸಾಲು ಉಂಟಾಗುವಂತೆ ವ್ಯವಸ್ಥೆಗೊಳಿಸಿ ‘ಚೆಕ್‌ಇನ್ ’ ಪ್ರಕ್ರಿಯೆಯನ್ನು ವಿಳಂಬಗೊಳಿಸುವ ಮೂಲಕ ಪ್ರಯಾಣಿಕರು ತಮ್ಮ ನಿರ್ಧರಿತ ವಿಮಾನ ದಲ್ಲಿ ಪ್ರಯಾಣ ಬೆಳೆಸದಂತೆ ಕೃತಕ ವ್ಯವಸ್ಥೆ ಸೃಷ್ಟಿಸುತ್ತಿವೆ ಎಂದು ಸಂಸತ್‌ನ ಸ್ಥಾಯಿ ಸಮಿತಿಯ ವರದಿಯಲ್ಲಿ ತಿಳಿಸಲಾಗಿದೆ.

ಹೀಗೆ ಮಾಡುವುದರಿಂದ ಅಂತಹ ಪ್ರಯಾಣಿಕರು ಮುಂದಿನ ವಿಮಾನದಲ್ಲಿ ಸಾಮಾನ್ಯಕ್ಕಿಂತ ಅಧಿಕ ದರ ನೀಡಿ ಪ್ರಯಾಣಿಸುವ ಅನಿವಾರ್ಯತೆಗೆ ಸಿಲುಕುತ್ತಾರೆ ಎಂದು ವರದಿ ತಿಳಿಸಿದೆ.

     ಹಲವು ವಿಮಾನಯಾನ ಸಂಸ್ಥೆಗಳಲ್ಲಿ ‘ಚೆಕ್ ಇನ್ ಕೌಂಟರ್’ಗಳನ್ನು ಸೂಕ್ತವಾಗಿ ನಿರ್ವಹಿಸಲಾಗುತ್ತಿಲ್ಲ ಹಾಗೂ ದೃಢಪಡಿಸಲ್ಪಟ್ಟ ಟಿಕೆಟ್‌ಗಳನ್ನು ಹೊಂದಿರುವ ಪ್ರಯಾಣಿಕರಿಗೆ ವಿಮಾನ ಏರಲು ಅನುಮತಿ ನಿರಾಕರಿಸಲಾಗುತ್ತಿದೆ ಎಂದು ಸಾರಿಗೆ, ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಕುರಿತ ಸ್ಥಾಯಿ ಸಮಿತಿ ಜನವರಿ 4ರಂದು ಸಲ್ಲಿಸಿದ ‘ವಿಮಾನಯಾನ ಸಂಸ್ಥೆಗಳಲ್ಲಿ ಪ್ರಯಾಣಿಕರ ಸಂತೃಪ್ತಿಯನ್ನು ಸುಧಾರಿಸುವ’ ಕುರಿತಾದ 26 ಪುಟಗಳ ವರದಿಯಲ್ಲಿ ತಿಳಿಸಲಾಗಿದೆ.

 ಕೆಲವೊಮ್ಮೆ ನಿಗದಿತ ಮಿತಿ ಮೀರಿ ಟಿಕೆಟ್ ಕಾಯ್ದಿರಿಸಲಾಗುತ್ತದೆ. ಇದರಿಂದ ಟಿಕೆಟ್ ದೃಢೀಕರಿಸಲ್ಪಟ್ಟಿರುವ ಪ್ರಯಾಣಿಕರಿಗೂ ವಿಮಾನ ಏರಲು ಅನುಮತಿ ನಿರಾಕರಿಸುವ ಸನ್ನಿವೇಶ ಎದುರಾಗುತ್ತದೆ. ‘ಚೆಕ್-ಇನ್’ ಕೌಂಟರ್‌ಗಳಲ್ಲಿ ಅಗತ್ಯಕ್ಕೆ ತಕ್ಕಷ್ಟು ಸಿಬ್ಬಂದಿಯನ್ನು ನಿಯೋಜಿಸದಿರುವುದೂ ಕಂಡು ಬಂದಿದೆ ಎಂದು ವರದಿ ತಿಳಿಸಿದೆ.

ಪ್ರಯಾಣಿಕರು ಸರತಿ ಸಾಲಿನಲ್ಲಿ 10 ನಿಮಿಷಕ್ಕಿಂತ ಅಧಿಕ ಸಮಯ ವ್ಯಯ ಮಾಡದಂತೆ ಕ್ರಮ ಕೈಗೊಳ್ಳಬೇಕು. ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದರೆ, ‘ಚೆಕ್-ಇನ್’ ಕೌಂಟರ್‌ಗಳಲ್ಲಿ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲು ಕ್ರಮ ಕೈಗೊಳ್ಳಬೇಕು. ವಿಮಾನನಿಲ್ದಾಣಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ‘ಚೆಕ್- ಇನ್’ ಕೌಂಟರ್‌ಗಳನ್ನು ಹಾಗೂ ಸ್ವ-ಪರೀಕ್ಷಣೆಯ ಕೇಂದ್ರಗಳನ್ನು ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ವರದಿಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News