ದಾವಣಗೆರೆ: ದೀಪಕ್ ರಾವ್ ಕೊಲೆ ಖಂಡಿಸಿ ಪ್ರತಿಭಟನೆ

Update: 2018-01-05 17:47 GMT

ದಾವಣಗೆರೆ,ಜ.5: ಹಿಂದು ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ದೀಪಕರಾವ್ ಕೊಲೆಯನ್ನು ಖಂಡಿಸಿ ನಗರದ ಜಯದೇವ ವೃತ್ತದಲ್ಲಿ ಹಿಂದು ಜಾಗರಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಅಲ್ಲದೆ, ದೀಪಕ್‍ರಾವ್‍ಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.

ಪಿಎಫ್‍ಐ, ಎಸ್‍ಡಿಪಿಐ, ಕೆಎಫ್‍ಡಿ ಮತಾಂಧ ಜಿಹಾದಿ ಉಗ್ರ ಸಂಘಟನೆಗಳಿನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪೋಷಿಸುತ್ತಿದ್ದಾರೆ ಎಂದು ಪ್ರತಿಭನಾಕಾರರು ಆಕ್ರೋಶ ವ್ಯಕ್ತಪಡಿಸಿ, ಸಂಘಟನೆಗಳ ನಿಷೇಧಕ್ಕೆ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಹಿಂದು ಜಾಗರಣಾ ವೇದಿಕೆಯ ಮುಖಂಡ ಎಸ್.ಟಿ.ವೀರೇಶ್, ಮಂಗಳೂರಿನ ಹಿಂದು ಕಾರ್ಯಕರ್ತ ದೀಪಕ್‍ರಾವ್ ಸೇರಿದಂತೆ ರಾಜ್ಯದಲ್ಲಿ 21ಕ್ಕೂ ಹೆಚ್ಚು ಹಿಂದು ಕಾರ್ಯಕರ್ತರನ್ನು ಉಗ್ರ ಸಂಘಟನೆಗಳು ಹತ್ಯೆಗೈದಿವೆ. ಇಂತಹ ಸಂಘಟನೆಗಳಿಗೆ ರಾಜ್ಯ ಸರಕಾರ ಕುಮ್ಮಕ್ಕು ನೀಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಹಾದಿ ಭಯೋತ್ಪಾದಕರು ದೇಶದ ಮೂಲೆ ಮೂಲೆಯಲ್ಲಿ ನೆಲೆಸಿದ್ದಾರೆ. ದೇಶವನ್ನು ಇಸ್ಲಾಮಿಕರಣ ಮಾಡುವ ದುರುದ್ದೇಶವನ್ನು ಹೊಂದಿದ್ದಾರೆ. ದೀಪಕ್‍ರಾವ್ ದೇಶಾಭಿಮಾನಿ, ಧರ್ಮಾಭಿಮಾನಿ ಎಂಬ ಕಾರಣದಿಂದ ಹತ್ಯೆಗೈಯಲಾಗಿದೆ ಎಂದು ಆರೋಪಿಸಿದರು.

ಪೊಲೀಸ್ ಇಲಾಖೆಯಲ್ಲಿ ದೇಶಪ್ರೇಮವುಳ್ಳ ಪೊಲೀಸ್ ಅಧಿಕಾರಿಗಳ ಶ್ರಮದಿಂದ ಭಯೋತ್ಪಾದಕರನ್ನು ಶಸ್ತ್ರಾಸ್ರ್ರ ಸಮೇತ ಸೆರೆ ಹಿಡಿಯಲಾಗಿತ್ತು. ಜೀವಂತ ಸಾಕ್ಷಿಗಳು ಇದ್ದರೂ, ರಾಜ್ಯ ಸರಕಾರ ಭಯೋತ್ಪಾದಕರ ವಿರುದ್ಧ ಕ್ರಮಕೈಗೊಳ್ಳಲಿಲ್ಲ ಎಂದರು.

ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಇಂತಹ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಿವೆ. ನಾಗರೀಕರು ಭಯದ ವಾತಾವರಣದಲ್ಲಿ ಜೀವಿಸುವಂತಾಗಿದೆ. ಉಗ್ರ ಸಂಘಟನೆಗಳ ಎಡೆಮುರಿ ಕಟ್ಟುವ ಮೂಲಕ ಮಟ್ಟಹಾಕಬೇಕೆಂದರು.

ಈ ಸಂದರ್ಭದಲ್ಲಿ ರಾಜನಹಳ್ಳಿ ಶಿವಕುಮಾರ್, ಸತೀಶ್ ಪೂಜಾರಿ, ಎಸ್.ಆರ್.ಮಂಜುನಾಥ್, ವಿಶ್ವನಾಥ್, ಕೆ.ಆರ್.ಮಲ್ಲಿಕಾರ್ಜುನ, ರಾಖೇಸ್ ಜಾಧವ್, ಗೌತಮ್ ಜೈನ್, ದೀಪಕ್ ಕಾನಡೆ, ಜಯಕುಮಾರ್, ಧನಂಜಯ್, ವಿನಾಯಕ, ನಿರಂಜನ್ ಸೇರಿದಂತೆ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News