ಮುಂಬೈ: ಕಾಮಾಟಿಪುರ ಪ್ರದೇಶದ ನವೀಕರಣಕ್ಕೆ ಸರಕಾರದ ಒತ್ತು

Update: 2018-01-06 15:42 GMT

ಮುಂಬೈ,ಜ.6: ಮುಂಬೈನ ಕಾಮಾಟಿಪುರ ಪ್ರದೇಶದ ನವೀಕರಣಕ್ಕೆ ಮಹಾರಾಷ್ಟ್ರ ಸರಕಾರವು ಒತ್ತು ನೀಡುತ್ತಿದೆ. 39 ಎಕರೆ ವಿಸ್ತೀರ್ಣದ ಸ್ಥಳದಲ್ಲಿ ಹರಡಿಕೊಂಡಿರುವ ಈ ಕುಖ್ಯಾತ ಕೆಂಪುದೀಪದ ಪ್ರದೇಶದಲ್ಲಿನ ಹೆಚ್ಚಿನ ಕಟ್ಟಡಗಳು ನೂರು ವರ್ಷಗಳಿಗೂ ಹೆಚ್ಚು ಹಳೆಯದಾಗಿವೆ. ಸುಮಾರು 5,000 ಜನರು ವಾಸವಾಗಿರುವ 700 ಕಟ್ಟಡಗಳು ಮತ್ತು ಚಾಳ್‌ಗಳು ತೀರ ಶಿಥಿಲಾವಸ್ಥೆಯಲ್ಲಿದ್ದು, ಯಾವುದೇ ಕ್ಷಣದಲ್ಲಿಯೂ ಅವು ಕುಸಿದು ಬೀಳುವ ಅಪಾಯವನ್ನು ನಿವಾಸಿಗಳು ಎದುರಿಸುತ್ತಿದ್ದಾರೆ.

 ಕಟ್ಟಡಗಳು ಅತ್ಯಂತ ಹಳೆಯದಾಗಿದ್ದು, ಶಿಥಿಲಗೊಂಡಿವೆ. ಜನರು ಸಾಯಲು ಅವಕಾಶ ನೀಡಲು ಸಾಧ್ಯವಿಲ್ಲ. ಹೀಗಾಗಿ ಅವುಗಳ ಪುನರ್‌ನಿರ್ಮಾಣಕ್ಕೆ ಬಿಲ್ಡರ್‌ಗಳನ್ನು ನೇಮಕಗೊಳಿಸುವ ಮೊದಲ ಹಕ್ಕನ್ನು ನಾವು ಅಲ್ಲಿಯ ನಿವಾಸಿಗಳಿಗೆ ಮತ್ತು ಕಟ್ಟಡ ಮಾಲಿಕರಿಗೆ ನೀಡುತ್ತಿದ್ದೇವೆ. ಇದಕ್ಕೆ ಅವರು ಮುಂದಾಗದಿದ್ದರೆ ಮಹಾರಾಷ್ಟ್ರ ವಸತಿ ಮತ್ತು ಪ್ರದೇಶಾಭಿವೃದ್ಧಿ ಪ್ರಾಧಿಕಾರ(ಎಂಎಚ್‌ಎಡಿಎ)ಕ್ಕೆ ಈ ಹೊಣೆಯನ್ನು ವಹಿಸುತ್ತೇವೆ ಎಂದು ರಾಜ್ಯದ ವಸತಿ ಸಚಿವ ರವೀಂದ್ರ ವಾಯಿಕರ್ ತಿಳಿಸಿದರು. ಕಾಮಾಟಿಪುರದ ಹೆಚ್ಚಿನ ನಿವಾಸಿಗಳು 50ರಿಂದ 180 ಚದರ ಅಡಿ ವಿಸ್ತೀರ್ಣದ ಮನೆಗಳಲ್ಲಿ ಬದುಕು ಸಾಗಿಸುತ್ತಿದ್ದಾರೆ. ದಶಕಗಳಿಂದಲೂ ವೇಶ್ಯಾವಾಟಿಕೆ ಚಟುವಟಿಕೆ ಗಳಿಂದ ತುಂಬಿದ್ದ ಈ ಪ್ರದೇಶದಲ್ಲಿ ಇತ್ತೀಚಿನ ವರ್ಷಗಳಲ್ಲಿ ಕೊಂಚ ಬದಲಾಗಿದೆ.

 ಆದರೆ ಸರಕಾರವು ಎಂಎಚ್‌ಎಡಿಎಯನ್ನು ಮಧ್ಯೆ ತರುವ ಬದಲು ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕೆಂದು ಸ್ಥಳೀಯ ಕಾಂಗ್ರೆಸ್ ಶಾಸಕ ಅಮಿನ್ ಪಟೇಲ್ ಹೇಳಿದ್ದಾರೆ. ಇಷ್ಟೊಂದು ದೊಡ್ಡ ಪ್ರಮಾಣದ ಕಾಮಗಾರಿಯನ್ನು ನಿರ್ವಹಿಸಲು ಎಂಎಚ್‌ಎಡಿಎಗೆ ಸಾಧ್ಯವಿಲ್ಲ. ಇದರಿಂದ ಪುನರ್‌ನಿರ್ಮಾಣ ಕಾರ್ಯವು ವಿಳಂಬಗೊಂಡು ಜನರು ತಮ್ಮ ಹಳೆಯ ಕಟ್ಟಡಗಳಲ್ಲಿಯೇ ಉಳಿಯುವಂತಾಗುತ್ತದೆ ಎಂದಿದ್ದಾರೆ.

 ಪುನರ್‌ನಿರ್ಮಾಣ ಕಾಮಗಾರಿಯನ್ನು ನಡೆಸಲು ಬಿಲ್ಡರ್‌ಗಳನ್ನು ನೇಮಿಸಲು ನಾವು ಎಲ್ಲ ಪ್ರಯತ್ನಗಳನ್ನೂ ಮಾಡಿದ್ದೇವೆ. ಆದರೆ ರಿಯಾಲ್ಟಿ ಕ್ಷೇತ್ರದಲ್ಲಿಯ ಮಂದಗತಿ ಯಿಂದಾಗಿ ಕಾರ್ಯವನ್ನು ವಹಿಸಿಕೊಳ್ಳಲು ಅವರು ಹಿಂಜರಿಯುತ್ತಿದ್ದಾರೆ ಎಂದು ಕಾಮಾಟಿಪುರ ಕಟ್ಟಡ ಮಾಲಕರ ಸಂಘದ ಖಜಾಂಚಿ ಸಚಿನ್ ಕರ್ಪೆ ತಿಳಿಸಿದರು.

ಇಂತಹ ಅಪಾಯಕಾರಿ ಕಟ್ಟಡಗಳಲ್ಲಿ ಉಳಿದುಕೊಂಡು ಪುನರ್ ನಿರ್ಮಾಣಕ್ಕೆ ಕಾಯುತ್ತ ನಾವು ಬಸವಳಿದಿದ್ದೇವೆ. ಪುನರ್ ನಿರ್ಮಾಣವನ್ನು ಯಾರೇ ಮಾಡಲಿ,ಆ ಕಾರ್ಯವಾಗುವುದು ನಮಗೆ ಮುಖ್ಯವಾಗಿದೆ ಎಂದು ನಿವಾಸಿಗಳ ಸಂಘವೊಂದರ ಅಧ್ಯಕ್ಷ ಸುರೇಶ ಕಾಳೆ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News