ಕಮಿಟಿಗಳಲ್ಲಿ ಚರ್ಚಿಸಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ : ಸಿಎಂ

Update: 2018-01-07 13:19 GMT

ಶಿವಮೊಗ್ಗ, ಜ. 7:ಪಕ್ಷದ ವಿವಿಧ ಹಂತದ ಸಮಿತಿಗಳಲ್ಲಿ ಚರ್ಚೆ ನಡೆಸಿದ ನಂತರವಷ್ಟೆ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ನಡೆಸಲಾಗುವುದು. ಇಲ್ಲಿಯವರೆಗೂ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.ರವಿವಾರ ಶಿವಮೊಗ್ಗ ನಗರದ ಪ್ರವಾಸಿ ಮಂದಿರದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಮುಂಬರುವ ವಿಧಾನಸಭೆ ಚುನಾವಣೆಗೆ  ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಸಲಾಗಿದೆಯೇ? ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಇನ್ನಷ್ಟೆ ಆರಂಭವಾಗಬೇಕಾಗಿದೆ. ಪಕ್ಷದ ಕೋರ್ ಕಮಿಟಿ, ಸ್ಟ್ಯಾಂಡಿಂಗ್ ಕಮಿಟಿ ಹಾಗೂ ಸ್ಕ್ರೀನಿಂಗ್ ಕಮಿಟಿಯಲ್ಲಿ ಚರ್ಚೆ ನಡೆಸಲಾಗುವುದು. ಇದಾದ ನಂತರ ಒಮ್ಮತದ ಅಭ್ಯರ್ಥಿಗಳನ್ನು ಚುನಾವಣಾ ಕಣಕ್ಕಿಳಿಸಲಾಗುವುದು ಎಂದು ತಿಳಿಸಿದ್ದಾರೆ.

ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಬರುತ್ತಿರುವ ಸಮೀಕ್ಷೆಗಳ ಬಗ್ಗೆ ಉತ್ತರಿಸಿದ ಅವರು, ಅತಂತ್ರ ವಿಧಾನಸಭೆ ರಚನೆಯಾಗಲಿದೆ ಎಂದು ಹೇಳಲಾಗುತ್ತಿದೆ.ಆದರೆ ರಾಜ್ಯದ ಜನರ ನಾಡ ಮಿಡಿತ, ಪ್ರವಾಸದ ವೇಳೆ ಕಂಡುಬರುತ್ತಿರುವ ಪರಿಸ್ಥಿತಿ ಗಮನಿಸಿದರೆ ಈ ಬಾರಿ ನಿರಾಯಾಸವಾಗಿ ಕಾಂಗ್ರೆಸ್ ಪಕ್ಷ ಮತ್ತೆ ರಾಜ್ಯದ ಅಧಿಕಾರದ ಗದ್ದುಗೆಯೇರಲಿದೆ. ಸ್ಪಷ್ಟ ಬಹುಮತ ಗಳಿಸಲಿದೆ. ಇದರಲ್ಲಿ ಯಾವುದೇ ಅನುಮಾನವಿಲ್ಲವಾಗಿದೆ ಎಂದು ಮುಖ್ಯಮಂತ್ರಿಗಳು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News