ಆಧಾರ್ ಮಾಹಿತಿ ಸೋರಿಕೆ ವರದಿ ಮಾಡಿದ್ದಕ್ಕೆ ಈ ಪತ್ರಕರ್ತೆಗೆ ಸಿಕ್ಕಿದ ಬಹುಮಾನವೇನು ಗೊತ್ತೇ ?

Update: 2018-01-08 04:04 GMT

ಹೊಸದಿಲ್ಲಿ, ಜ. 8: ದೇಶದಲ್ಲಿ ನೂರು ಕೋಟಿಗೂ ಅಧಿಕ ಮಂದಿಯ ಆಧಾರ್ ಮಾಹಿತಿ ಸೋರಿಕೆ ಬಗ್ಗೆ ವರದಿ ಮಾಡಿದ ’ದ ಟ್ರಿಬ್ಯೂನ್’ ಪತ್ರಕರ್ತೆ ರಚನಾ ಖೈರಾ ವಿರುದ್ಧ ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. "ಇದು ನನ್ನ ಬಲು ದೊಡ್ಡ ಗಳಿಕೆ" ಎಂದು ಪತ್ರಕರ್ತೆ ಬಣ್ಣಿಸಿದ್ದಾರೆ.

"ಈ ಎಫ್‌ಐಆರ್ ನನ್ನ ಗಳಿಕೆ ಎಂದು ನಾನು ನಂಬಿದ್ದೇನೆ. ನನ್ನ ವರದಿಯ ಮೇಲೆ ಯುಐಡಿಎಐ ಕ್ರಮ ಕೈಗೊಂಡ ಬಗ್ಗೆ ನನಗೆ ಸಂತಸವಿದೆ. ಎಫ್‌ಐಆರ್ ಜತೆಗೆ ಎಲ್ಲೆಲ್ಲಿ ಉಲ್ಲಂಘನೆಯಾಗಿದೆ ಎಂಬ ಬಗ್ಗೆ ಸರ್ಕಾರ ಪರಿಶೀಲನೆ ನಡೆಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು" ಎಂದು ಟಿವಿ ಚಾನಲ್ ಜತೆಗೆ ಮಾತನಾಡಿದ ಅವರು ಆಗ್ರಹಿಸಿದರು.

"ನಿಮ್ಮ ವರದಿಯನ್ನು ನೀವು ಸಮರ್ಥಿಸಿಕೊಳ್ಳುತ್ತೀರಾ" ಎಂಬ ಪ್ರಶ್ನೆಗೆ, "ಹೌದು; ಖಂಡಿತವಾಗಿಯೂ ಅದರ ಪ್ರತಿ ಶಬ್ದಗಳನ್ನು ನಾನು ಸಮರ್ಥಿಸಿ ಕೊಳ್ಳುತ್ತೇನೆ" ಎಂದು ಉತ್ತರಿಸಿದರು. "ಇದುವರೆಗೆ ಎಫ್‌ಐಆರ್ ಪ್ರತಿ ನನ್ನ ಕೈಸೇರಿಲ್ಲ. ಆದ್ದರಿಂದ ತಕ್ಷಣಕ್ಕೆ ಇದರ ವಿವರಗಳನ್ನು ನೀಡುವುದು ಕಷ್ಟಸಾಧ್ಯ" ಎಂದು ಮತ್ತೊಂದು ಪ್ರಶ್ನೆಗೆ ಉತ್ತರ ನೀಡಿದರು.

ಯುಐಡಿಎಐ ಉಪನಿರ್ದೇಶಕರ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಿರುವ ಬಗ್ಗೆ ಗಮನ ಸೆಳೆದಾಗ, "ಕೆಲ ಮಾಧ್ಯಮ ವರದಿಗಳು ಹೀಗೆ ಹೇಳಿವೆ. ಆದರೆ ಮತ್ತೆ ಕೆಲ ವರದಿಗಳಲ್ಲಿ ಯುಐಡಿಎಐನಿಂದ ದೂರು ನೀಡಿಲ್ಲ ಎಂಬ ಉಲ್ಲೇಖವಿದೆ. ಎಫ್‌ಐಆರ್ ಪ್ರತಿ ನೋಡಿದ ಬಳಿಕ ಇದು ಸ್ಪಷ್ಟವಾಗಿ ತಿಳಿಯಬೇಕಿದೆ. ಈ ಪ್ರಕರಣದಲ್ಲಿ ಚಂಡೀಗಢ ಮಾಧ್ಯಮ ವಲಯ ಮಾತ್ರವಲ್ಲದೇ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಾಧ್ಯಮಗಳು ಬೆಂಬಲಕ್ಕೆ ನಿಂತಿವೆ. ಈ ವರದಿಯನ್ನು ಮಾಧ್ಯಮ ಕ್ಷೇತ್ರದ ದಿಗ್ಗಜರು ಹೊಗಳಿದ್ದಾರೆ ಎಂದು ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು. ಪತ್ರಿಕೆ ಕೂಡಾ ನನಗೆ ಅಗತ್ಯವಾದ ಎಲ್ಲ ಕಾನೂನು ನೆರವು ನೀಡುವ ಭರವಸೆ ನೀಡಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಸರ್ಕಾರ ಈ ಎಲ್ಲ ಬೆಳವಣಿಗೆಗಳನ್ನು ನೋಡುತ್ತಿದ್ದು, ಪ್ರಕರಣದ ವಿಚಾರದಲ್ಲಿ ಶೀಘ್ರವೇ ಸರ್ಕಾರದ ಪ್ರತಿಕ್ರಿಯೆ ಬರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News