ಈ 25 ವರ್ಷದ ದಿನಸಿ ಅಂಗಡಿ ಮಾಲಕ 300 ಕ್ರಿಮಿನಲ್ ಪ್ರಕರಣಗಳ ಸಾಕ್ಷಿ!

Update: 2018-01-08 08:40 GMT

ರಾಯಪುರ್, ಜ.8 : ಛತ್ತೀಸ್‍ಗಢದಲ್ಲಿ ದಿನಸಿ ಅಂಗಡಿಯೊಂದನ್ನು ನಡೆಸುವ ಸೋಮೇಶ್ ಪಾಣಿಗ್ರಹಿ ಎಂಬ ಯುವಕನ ವಯಸ್ಸು ಕೇವಲ 25. ಆದರೆ ಅದಾಗಲೇ ಆತ 250ರಿಂದ 300 ಕ್ರಿಮಿನಲ್ ಪ್ರಕರಣಗಳಲ್ಲಿ ಸಾಕ್ಷಿಯಾಗಿದ್ದಾನೆ. ಆದರೆ ಈ ಕೆಲಸ ತನಗೆ ಕಂಟಕಪ್ರಾಯವಾಗಬಹುದೇನೋ ಎಂಬ ಭಯ ಆತನನ್ನು ಕಾಡಲಾರಂಭಿಸಿದೆ.

ಪೊಲೀಸರು ತನಗೊಂದು ಸರಕಾರಿ ಹುದ್ದೆ ಗಿಟ್ಟಿಸಲು ಸಹಾಯ ಮಾಡಬಹುದೆನ್ನುವ ಆಶಾಭಾವದೊಂದಿಗೆ  ಸೋಮೇಶ್ ಮೊತ್ತ ಮೊದಲ ಬಾರಿಗೆ 2013ರಲ್ಲಿ  ಜೂಜು ಪ್ರಕರಣವೊಂದರ ಸಂಬಂಧ ಸಾಕ್ಷಿ ಹೇಳಲು  ಕೊತ್ವಾಲಿ ಠಾಣೆಯ ಪೊಲೀಸರ ಸಲಹೆಯಂತೆ ಮುಂದೆ ಬಂದಿದ್ದೆ. ಆಗಷ್ಟೇ 12ನೇ ತರಗತಿ  ಫೂರ್ತಿಗೊಳಿಸಿ ಆತ ಸ್ಥಳೀಯ ಸುದ್ದಿವಾಹಿನಿಯೊಂದರಲ್ಲಿ ಕ್ಯಾಮರಾಮ್ಯಾನ್ ಆಗಿ ಕೆಲಸಕ್ಕೆ ಸೇರಿದ್ದ ಆತ  ಒಮ್ಮೆ ಕೊತ್ವಾಲಿ ಠಾಣೆಗೆ ಹೋಗಿದ್ದಾಗ ಈ ಘಟನೆ ನಡೆದಿತ್ತು. ಮುಂದೆ ತನ್ನನ್ನು ಹಲವು ಪ್ರಕರಣಗಳಲ್ಲಿ  ಪೊಲೀಸರು ಸಾಕ್ಷಿಯನಾಗಿಸಿದ್ದರು ಎಂದು ಆತ ಹೇಳುತ್ತಾನೆ. ಇದೀಗ ಪದವೀಧರನಾಗಿರುವ ಸೋಮೇಶ್ ಈಗಲೂ ತನಗೊಂದು ಸರಕಾರಿ ಉದ್ಯೋಗ ದೊರೆಯಬಹುದೆಂಬ ಆಶಾವಾದದಲ್ಲಿದ್ದಾನೆ. “ಎಷ್ಟು ಸಾರಿ ನಾನು ಬೋಗಸ್ ಸಾಕ್ಷಿಯಾಗಿ ಕೆಲಸ ಮಾಡಿದ್ದೇನೆಂದು ಗೊತ್ತಿಲ್ಲ. ಆದರೆ ನನಗೆ ಬರುತ್ತಿರುವ ಕೋರ್ಟ್ ನೋಟಿಸುಗಳನ್ನು ಗಮನಿಸಿದಾಗ ಕನಿಷ್ಠ 250ರಿಂದ 300 ಪ್ರಕರಣಗಳಿರಬಹುದು,'' ಎಂದು ಆತ ಹೇಳುತ್ತಾನೆ.

ಪ್ರಕರಣವೊಂದರಲ್ಲಿ ನಿಜವಾದ ಸಾಕ್ಷಿಯಲ್ಲದೇ ಇದ್ದರೂ ನ್ಯಾಯಾಲಯದಲ್ಲಿ ಸುಳ್ಳು ಸಾಕ್ಷಿ ಹೇಳುತ್ತಿರುವುದರಿಂದ ಕೆಲವೊಮ್ಮೆ ತನ್ನ ಆತ್ಮಸಾಕ್ಷಿ ತನ್ನನ್ನು  ಚುಚ್ಚುತ್ತದೆ ಎಂದು ಆತ ಹೇಳುತ್ತಾನಲ್ಲದೆ ತನಗೆ ಹಲವಾರು ಬೆದರಿಕೆಗಳೂ ಬರುತ್ತಿವೆ ಎಂಬುದನ್ನೂ ಒಪ್ಪಿಕೊಳ್ಳುತ್ತಾನೆ.

ಐದು ಮಂದಿ ಸದಸ್ಯರ ಕುಟುಂಬದ ಏಕೈಕ ಆಧಾರವಾಗಿರುವ ಸೋಮೇಶ್ ಒಮ್ಮೆ ಪೊಲೀಸರಲ್ಲಿ ತನ್ನನ್ನು ಅನಗತ್ಯ ಸಾಕ್ಷಿಯನ್ನಾಗಿ ಮಾಡದಂತೆ ಕೇಳಿಕೊಂಡಿದ್ದರೂ ಅವರು ಆತನ ಮನವಿಯನ್ನು ನಿರ್ಲಕ್ಷ್ಯಿಸಿದ್ದರು ಎಂದು ಆತನೇ ಹೇಳುತ್ತಾನೆ. ಮಾವೋವಾದಿ ಪ್ರಕರಣಗಳಲ್ಲೂ ಆತ ಸಾಕ್ಷ್ಯ ನುಡಿದಿರುವುದರಿಂದ ಆತನಿಗೆ ಬೆದರಿಕೆಗಳು ಬಂದಿವೆ ಎಂದು ಆತ ಹೇಳುತ್ತಾನೆ.

ವಾರವೊಂದರಲ್ಲಿ ಹಲವಾರು ಕೋರ್ಟ್ ನೋಟಿಸುಗಳು ಬರುತ್ತವೆ. ಪ್ರತಿ ಬಾರಿಯೂ ಅಂಗಡಿ ಮುಚ್ಚಿ ನ್ಯಾಯಾಲಯಕ್ಕೆ ಹಾಜರಾಗಬೇಕಾಗುತ್ತದೆ  ಎಂದು ಆತ ಅಲವತ್ತುಕೊಳ್ಳುತ್ತಾನೆ. ತನಗೆ ಪೊಲೀಸ್ ರಕ್ಷಣೆಯೊದಗಿಸಬೇಕೆಂಬುದೂ ಆತನ ಆಗ್ರಹವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಜಗದಲ್ಪುರ ಎಸ್‍ಪಿ ಆರಿಫ್ ಶೇಖ್, “ಇಲಾಖೆ ಆತನಿಗೆ ರಕ್ಷಣೆ ನೀಡಲು ಸಿದ್ಧವಿದೆ. ಆದರೆ ಆತನನ್ನು ಬಲವಂತವಾಗಿ ಸಾಕ್ಷಿಯನ್ನಾಗಿಸಲಾಗುತ್ತಿದೆಯೇ ಎಂದು ಪರಿಶೀಲಿಸಬೇಕಿದೆ. ಇದು ನಿಜವಾಗಿದ್ದರೆ ಸಂಬಂಧಿತ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು,'' ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News