ಎಸ್‍ಎಸ್‍ಎಲ್‍ಸಿ ಪರೀಕ್ಷಾ ಕೇಂದ್ರದಲ್ಲಿ ಸಿಸಿ ಕ್ಯಾಮರಾ ಕಡ್ಡಾಯ: ಸಚಿವ ತನ್ವೀರ್ ಸೇಠ್

Update: 2018-01-08 11:34 GMT

ಮೈಸೂರು,ಜ.8: ಈ ಬಾರಿ ಮಾರ್ಚ್ 23 ರಿಂದ ಏಪ್ರೀಲ್ 6ರ ವರೆಗೆ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಯಲಿದ್ದು, ರಾಜ್ಯದ 788 ಎಸ್ ಎಸ್ ಎಲ್ ಸಿ  ಪರೀಕ್ಷಾ ಕೇಂದ್ರಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮರಾ ಅಳವಡಿಸಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್ ತಿಳಿಸಿದರು.

ಮೈಸೂರಿನಲ್ಲಿ ಸೋಮವಾರ  ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಾರ್ಚ್ 23 ರಿಂದ ಏಪ್ರೀಲ್ 6 ರವರೆಗೆ  ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಯಲಿದ್ದು, ಯಾವುದೇ ಗೊಂದಲವಿಲ್ಲದೇ ಪರೀಕ್ಷೆ ನಡೆಯಲಿದೆ. ಹಲವು ವರ್ಷಗಳಿಂದ ಪರೀಕ್ಷೆಗಳಲ್ಲಿ ಗೊಂದಲವಾಗುತ್ತಿದ್ದು, ಸಾಕಷ್ಟು ಕ್ರಮಗಳನ್ನು ಈ ಬಾರಿ ಕೈಗೊಳ್ಳಲಾಗಿದೆ. ಕಡ್ಡಾಯವಾಗಿ ರಾಜ್ಯದ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗುವುದು ಎಂದರು.

ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತಾಡಿದ ಅವರು, ಮಾರ್ಚ್ 1 ರಿಂದ 17 ರವರೆಗೆ ಪಿಯುಸಿ ಪರೀಕ್ಷೆ ನಡೆಯಲಿದ್ದು, ಬಿಗಿ ಪೋಲಿಸ್ ಬಂದೋಬಸ್ತ್ ವ್ಯವ್ಯಸ್ಥೆಯಡಿ ಪ್ರಶ್ನೆ ಪತ್ರಿಕೆಗಳನ್ನು ಸರಬರಾಜು ಮಾಡಲಾಗುವುದು. ಜೊತೆಗೆ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶವನ್ನು ಎಪ್ರಿಲ್ ಕೊನೆಯ ವಾರದಲ್ಲಿ ಮತ್ತು ಪಿಯುಸಿ ಫಲಿತಾಂಶವನ್ನ ಎಪ್ರಿಲ್ ಮೂರನೇ ವಾರದಲ್ಲಿ ನೀಡಲಾಗುವುದು. ಇದಕ್ಕಾಗಿ ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದು,  ಮೌಲ್ಯಮಾಪಕರು ಸಹಕರಿಸಿದ್ದಾರೆ ಎಂದು ತಿಳಿಸಿದರು. 

ಖಾಸಗಿ ಶಾಲೆಗಳ ಮಸೂದೆ ಜಾರಿಗೆ ಸಂಬಂಧಿಸಿದಂತೆ ಮಾತನಾಡಿದ ತನ್ವೀರ್ ಸೇಠ್, ಈಗಾಗಲೇ ಖಾಸಗಿ ಶಾಲೆಗಳ ನಿಯಂತ್ರಣ ಮತ್ತು ಶುಲ್ಕ ಸಂಬಂಧ ಹೊಸ ಮಸೂದೆಯನ್ನು ನಾನು ಪ್ರಕಟಿಸಿದ್ದೇನೆ. ಅಂತಿಮವಾಗಿ ಮಸೂದೆಯನ್ನು ಜಾರಿಗೊಳಿಸಲಾಗುವುದು ಎಂದು ಇದೇ ವೇಳೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News