ಅರುಣಾಚಲ ಪ್ರದೇಶದಲ್ಲಿ ಚೀನೀಯರಿಂದ ರಸ್ತೆ ನಿರ್ಮಾಣ ವಿವಾದ ಬಗೆಹರಿದಿದೆ: ಬಿಪಿನ್ ರಾವತ್

Update: 2018-01-08 13:41 GMT

 ಹೊಸದಿಲ್ಲಿ, ಜ.8: ಅರುಣಾಚಲಪ್ರದೇಶದ ಟ್ಯುಟಿಂಗ್‌ನಲ್ಲಿ ಚೀನೀಯರು ರಸ್ತೆ ನಿರ್ಮಿಸಲು ಪ್ರಯತ್ನಿಸಿದ ಕುರಿತಾದ ವಿವಾದವನ್ನು ಭಾರತ ಮತ್ತು ಚೀನಾ ಬಗೆಹರಿಸಿಕೊಂಡಿವೆ ಎಂದು ಸೇನಾಪಡೆಯ ಮುಖ್ಯಸ್ಥ ಜ ಬಿಪಿನ್ ರಾವತ್ ಹೇಳಿದ್ದಾರೆ.

   ಟ್ಯುಟಿನ್‌ನಲ್ಲಿ ಭಾರತೀಯ ಭೂಪ್ರದೇಶದೊಳಗೆ ಚೀನಾದ ನಾಗರಿಕರು ದಾರಿಯೊಂದನ್ನು ನಿರ್ಮಿಸುತ್ತಿರುವುದನ್ನು ಕಳೆದ ಡಿಸೆಂಬರ್ 28ರಂದು ಭಾರತೀಯ ಗಡಿರಕ್ಷಕ ಪಡೆಯ ಯೋಧರು ಪತ್ತೆಹಚ್ಚಿದ್ದರು. ಚೀನಾದ ಸೇನೆ ನಾಗರಿಕರ ಜೊತೆ ಇರಲಿಲ್ಲ. ಬಳಿಕ ಇದನ್ನು ತಡೆದಿದ್ದ ಭಾರತೀಯ ಪಡೆಗಳು ರಸ್ತೆ ನಿರ್ಮಾಣಕ್ಕೆ ಬಳಸಲಾಗುತ್ತಿದ್ದ ಎರಡು ಉಪಕರಣಗಳನ್ನು ಜಪ್ತಿ ಮಾಡಿದ್ದವು ಎಂದು ಸೇನೆಯ ಮೂಲಗಳು ತಿಳಿಸಿವೆ.

ಈ ಪ್ರಕರಣದ ಕುರಿತು ಉಭಯ ರಾಷ್ಟ್ರಗಳ ಗಡಿಭದ್ರತಾ ಪಡೆಗಳ ಅಧಿಕಾರಿಗಳ ಮಧ್ಯೆ ನಡೆದ ಸಭೆಯಲ್ಲಿ ವಿವಾದವನ್ನು ಬಗೆಹರಿಸಲಾಗಿದೆ ಎಂದು ಜ ರಾವತ್ ತಿಳಿಸಿದ್ದಾರೆ.

 ಆದರೆ ರಸ್ತೆ ನಿರ್ಮಾಣ ಕಾರ್ಯದಲ್ಲಿ ಚೀನಾದ ಸೈನಿಕರೂ ಪಾಲ್ಗೊಂಡಿದ್ದರು ಎಂದು ಅರುಣಾಚಲ ಪ್ರದೇಶದ ಸುದ್ದಿ ಮಾಧ್ಯಮಗಳು ವರದಿ ಮಾಡಿವೆ. ಸೈನಿಕರ ನೆರವಿನೊಂದಿಗೆ ಚೀನಾದ ನಾಗರಿಕರು ಭಾರತೀಯ ಭೂಭಾಗದೊಳಗೆ ರಸ್ತೆ ನಿರ್ಮಿಸುವುದನ್ನು ಕಂಡ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಭಾರತ-ಟಿಬೆಟ್ ಗಡಿ ಪೊಲೀಸರನ್ನು ಎಚ್ಚರಿಸಲಾಗಿದ್ದು ಅವರು ರಸ್ತೆ ನಿರ್ಮಾಣ ಕಾರ್ಯವನ್ನು ತಡೆದಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News