ತೀರ್ಪು ಮರು ಪರಿಶೀಲನೆ ಅರ್ಜಿಯನ್ನು ಉನ್ನತ ಪೀಠಕ್ಕೆ ಒಪ್ಪಿಸಿದ ಸುಪ್ರೀಂ

Update: 2018-01-08 15:38 GMT

ಹೊಸದಿಲ್ಲಿ, ಜ.8: ಸಲಿಂಗಿಗಳು ಪರಸ್ಪರ ಒಪ್ಪಿಗೆಯಿಂದ ಹೊಂದುವ ಲೈಂಗಿಕ ಸಂಬಂಧವನ್ನು ನಿರಪರಾಧೀಕರಿಸಬೇಕು ಎಂಬ ಅರ್ಜಿಯ ವಿಚಾರಣೆಯನ್ನು ಸವೋಚ್ಛ ನ್ಯಾಯಾಲಯವು ಸೋಮವಾರದಂದು ಉನ್ನತ ಪೀಠಕ್ಕೆ ಒಪ್ಪಿಸಿದೆ. ಭಾರತೀಯ ದಂಡಸಂಹಿತೆಯ ಸೆಕ್ಷನ್ 377ರಿಂದಾಗಿ ಉದ್ಭವವಾಗುವ ಸಮಸ್ಯೆಯ ಕುರಿತು ಉನ್ನತ ಪೀಠದಲ್ಲಿ ಚರ್ಚೆ ನಡೆಸಬೇಕಿದೆ ಎಂದು ಮುಖ್ಯ ನ್ಯಾಯಾಧೀಶರಾದ ದೀಪಕ್ ಮಿಶ್ರ, ನ್ಯಾಯಾಧೀಶರಾದ ಎ.ಎಂ. ಖಾನ್‌ವಿಲ್ಕರ್ ಮತ್ತು ಡಿ.ವೈ. ಚಂದ್ರಚೂಡ್ ಅವರನ್ನೊಳಗೊಂಡ ಪೀಠವು ತಿಳಿಸಿದೆ.

ಸೆಕ್ಷನ್ 377 ಅನೈಸರ್ಗಿಕ ಅಪರಾಧಗಳಿಗೆ ಸಂಬಂಧಪಟ್ಟಿದ್ದು ಅದರ ಪ್ರಕಾರ ನೈಸರ್ಗಿಕ ವ್ಯವಸ್ಥೆಗೆ ವಿರುದ್ಧವಾಗಿ ಯಾವುದೇ ಪುರುಷ, ಮಹಿಳೆ ಅಥವಾ ಪ್ರಾಣಿಯ ಜೊತೆ ಹೊಂದುವ ಲೈಂಗಿಕ ಸಂಬಂಧವು ಕಾನೂನಿನಡಿಯಲ್ಲಿ ಶಿಕ್ಷಾರ್ಹವಾಗಿದೆ. ಅಪರಾಧಿಗೆ ಜೀವಾವಧಿ ಶಿಕ್ಷೆಯಾಗುವ ಸಾಧ್ಯತೆಗಳೂ ಇದೆ ಅಥವಾ ಗರಿಷ್ಟ ಹತ್ತು ವರ್ಷಗಳ ಕಾಲ ಕಾರಾಗೃಹ ಶಿಕ್ಷೆ ಮತ್ತು ದಂಡ ವಿಧಿಸುವ ಅವಕಾಶವೂ ಇದೆ.

ಸಲಿಂಗಿಗಳು ಪರಸ್ಪರ ಒಪ್ಪಿಗೆಯಿಂದ ಹೊಂದುವ ಲೈಂಗಿಕ ಸಂಬಂಧವನ್ನು ಅಪರಾಧ ಎಂದು ತಿಳಿಸುವ ಸೆಕ್ಷನ್ 377ನ್ನು ಅಸಂವಿಧಾನಿಕ ಎಂದು ಘೋಷಿಸಬೇಕು ಎಂದು ನವಜೋತ್ ಸಿಂಗ್ ಜೊಹರ್ ನ್ಯಾಯಾಲಯದಲ್ಲಿ ಸಲ್ಲಿಸಿದ್ದರು. ಲೈಂಗಿಕ ಜೊತೆಗಾರರನ್ನು ಆಯ್ಕೆ ಮಾಡುವುದು ಮೂಲಭೂತ ಹಕ್ಕಿನ ಭಾಗವೇ ಆಗಿದೆ ಎಂದು ಇತ್ತೀಚೆಗೆ ಒಂಬತ್ತು ನ್ಯಾಯಾಧೀಶರನ್ನೊಳಗೊಂಡ ಪೀಠವು ನೀಡಿರುವ ತೀರ್ಪನ್ನು ಉಲ್ಲೇಖಿಸಿದ ಜೊಹರ್ ಪರ ವಕೀಲರು, ಇಬ್ಬರು ವಯಸ್ಕರು ಒಪ್ಪಿಗೆಯಿಂದ ಅನೈಸರ್ಗಿಕ ಲೈಂಗಿಕ ಸಂಬಂಧ ಹೊಂದಿದವರನ್ನು ಜೈಲಿನಲ್ಲಿ ಕೂಡಿ ಹಾಕಲು ಸಾಧ್ಯವಿಲ್ಲ ಎಂದು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News