ಪ್ರಧಾನಮಂತ್ರಿ ಅವಾಸ್ ಯೋಜನೆ ಹೆಸರಿನಲ್ಲಿ ನಿವೇಶನ ಕಲ್ಪಿಸುವುದಾಗಿ ನಂಬಿಸಿ ವಂಚನೆ

Update: 2018-01-08 18:03 GMT

ಕೋಲಾರ,ಜ.8: ಪ್ರಧಾನಮಂತ್ರಿ ಅವಾಸ್ ಯೋಜನೆಯಡಿ ಬಡವರಿಗೆ ನಿವೇಶನ ಹಾಗೂ ವಸತಿ ಸೌಕರ್ಯ ಕಲ್ಪಿಸುವುದಾಗಿ ನಂಬಿಸಿ ವಂಚನೆ ಮಾಡಿರುವ ಪ್ರಕರಣ ನಗರದ ಗಾಂಧಿನಗರದಲ್ಲಿ ನಡೆದಿದೆ. ಇಲ್ಲಿನ ವಾರ್ಡ್ ನಂ.2 ಮತ್ತು 3 ನಿವಾಸಿಗಳಿಂದ ಹಣ ಪಡೆದುಕೊಂಡು ನಕಲಿ ಬಾಂಡ್ ನೀಡಿರುವುದು ಬೆಳಕಿಗೆ ಬಂದಿದೆ.

ಜಿಲ್ಲೆಯ ಮಾಲೂರಿನ ಕೆಲ ವ್ಯಕ್ತಿಗಳು ಗಾಂಧಿನಗರಕ್ಕೆ ಬಂದು ಬಡಾವಣೆಯಲ್ಲಿ ಸಮೀಕ್ಷೆ ನಡೆಸಿ ಆನಂತರ ನಾವು ಹತ್ತು ಹದಿನೈದು ದಿನಗಳ ನಂತರ ಬರುತ್ತೆವೆ, ಎಲ್ಲರೂ ಆಧಾರ್ ಕಾರ್ಡ್, ಒಂದು ಭಾವಚಿತ್ರ ನಮಗೆ ಕೊಟ್ಟರೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪ್ರಧಾನಮಂತ್ರಿ ಅವಾಸ್ ಯೋಜನೆಯಡಿ ನಿವೇಶನ ಹಾಗೂ ವಸತಿ ಸೌಕರ್ಯ ಕಲ್ಪಿಸಲಾಗುವುದು ಎಂದು ಹೇಳಿದ್ದಾರೆ.

ಸ್ಥಳೀಯರು ವಿಚಾರಿಸಿದಾಗ, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕದ ರಾಜಶೇಖರ್ ವಿಳಾಸವಿರುವ ವಿಸಿಟಿಂಗ್ ಕಾರ್ಡ್ ನೀಡಿದ್ದಾರೆ. ಹದಿನೈದು ದಿನಗಳ ನಂತರ ಬಂದು ಕೆಲ ನಿವಾಸಿಗಳಿಂದ ಆಧಾರ್ ಕಾರ್ಡ್ ಮತ್ತು ಭಾವಚಿತ್ರ ಸಂಗ್ರಹಿಸಿದ್ದಾರೆ. ಒಂದು ವಾರದ ನಂತರ ನಿಮಗೆ ಯೋಜನೆಯ ಬಾಂಡ್ ನೀಡುತ್ತೇವೆ. ಅದಕ್ಕೆ 2 ಸಾವಿರ ಪಾವತಿ ಮಾಡಬೇಕು ಎಂದು ತಿಳಿಸಿದ್ದಾರೆ.

2 ಸಾವಿರ ಪಾವತಿ ಮಾಡಲು ನಮಗೆ ಶಕ್ತಿಯಿಲ್ಲ ಎಂದಾಗ ಸದ್ಯ ನಿಮ್ಮ ಕೈಯಲ್ಲಿ ಅಗುವಷ್ಟು ಪಾವತಿ ಮಾಡಿ ಬಾಕಿ ಇರುವ ಹಣವನ್ನು ಮುಂದಿನ ದಿನಗಳಲ್ಲಿ ಪಾವತಿ ಮಾಡುವಂತೆ ಕಾಲವಾಕಾಶ ನೀಡಿದಾಗ, 20ಕ್ಕೂ ಹೆಚ್ಚು ಮಂದಿ 500ರಿಂದ  2 ಸಾವಿರ ತನಕ ಪಾವತಿ ಮಾಡಿ ಬಾಂಡ್ ಪಡೆದುಕೊಂಡಿದ್ದಾರೆ.

ಅವರು ನೀಡಿರುವ ಬಾಂಡನ್ನು ಗಮನಿಸಿದಾಗ ವಿಳಾಸದಲ್ಲಿ ಸಂಶಯ ಬಂದಿದೆ. ಈ ಕುರಿತು ಸ್ಥಳೀಯ ಮುಖಂಡರನ್ನು ಕೇಳಲಾಗಿದ್ದು, ಇದು ನಿವಾಸಿಗಳನ್ನು ಯಾಮಾರಿಸಲು ಮಾಡಿರುವ ಕೆಲಸವಾಗಿದೆ ಎಂಬುದು ತಿಳಿದು ಬಂದಿದೆ.

ಮನೆಯಲ್ಲಿ ಪುರುಷರು ಯಾರು ಇಲ್ಲದ ಸಂದರ್ಭದಲ್ಲಿ 20ಕ್ಕೂ ಹೆಚ್ಚು ಮಂದಿ ಬಂದು ವಸತಿ ಸೌಕರ್ಯ ಕಲ್ಪಿಸುವದಾಗಿ ಹೇಳಿ ಹಣ ಪಾವತಿ ಮಾಡುವಂತೆ ತಿಳಿಸಿದರು. ನಮಗೆ ಮನೆ ಸಿಗುತ್ತದೆ ಎಂಬ ಆಸೆಯಿಂದ ಹಣ ಪಾವತಿ ಮಾಡಿದ್ದೇವೆ. ಅವರು ಸ್ಥಳೀಯ ಓರ್ವ ಮುಖಂಡನ ಸಹಾಯದಿಂದ ನಮ್ಮನ್ನು ಯಾಮಾರಿಸಿದ್ದಾರೆ' ಎಂದು ಗಾಂಧಿನಗರ ನಿವಾಸಿ ಗೋವಿಂದಮ್ಮ ಅಳಲನ್ನು ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News