ಇತಿಹಾಸವನ್ನು ತಿರುಚುವ ಪ್ರಯತ್ನ ಬಹಳ ಪ್ರಾಮಾಣಿಕವಾಗಿ ನಡೆಯುತ್ತಿದೆ: ಜಿ.ವಿ.ಶ್ರೀರಾಮರೆಡ್ಡಿ

Update: 2018-01-08 18:32 GMT

ಬಾಗೇಪಲ್ಲಿ,ಜ.8: ಇಂದು ದೇಶದಲ್ಲಿ ಏಕ ನಾಗರಿಕತೆ, ಏಕ ಸಂಸ್ಕೃತಿ, ಏಕ ಭಾಷೆ, ಏಕ ಧರ್ಮದ ಮೂಲಕ ಕೇಂದ್ರ ಸರ್ಕಾರವು ಬಹುತ್ವ ವ್ಯವಸ್ಥೆಯ ಮೇಲೆ ದಾಳಿ ಮಾಡುತ್ತಿರುವುದರಿಂದ ಭಾರತದ ಏಕತೆಗೆ ದಕ್ಕೆಯಾಗುತ್ತಿದೆ ಎಂದು ಸಿಪಿಐಂ ಪಕ್ಷದ ರಾಜ್ಯ ಕಾರ್ಯದರ್ಶಿ ಹಾಗು ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ವಿಷಾದ ವ್ಯಕ್ತಪಡಿಸಿದರು.

ತಾಲೂಕಿನ ಗೂಳೂರು ಹೋಬಳಿ ನಲಪರೆಡ್ಡಿಪಲ್ಲಿ ಗ್ರಾಮದಲ್ಲಿ ನ್ಯಾಷನಲ್ ಕಾಲೇಜು ವತಿಯಿಂದ ಏರ್ಪಡಿಸಿದ್ದ 7 ದಿನಗಳ ವಿಶೇಷ ಶಿಬಿರದಲ್ಲಿ ನೋಟು ಅಮಾನ್ಯೀಕರಣ ಮತ್ತು ಜಿಎಸ್‍ಟಿ ಎಂಬ ವಿಚಾರದ ಬಗ್ಗೆ ಮಾತನಾಡಿದ ಅವರು ದೇಶದಲ್ಲಿ ಜಾತಿ, ಧರ್ಮ, ಮತ, ಉಡುಗೆ ತೊಡುಗೆ ಬಗ್ಗೆ ಚರ್ಚೆ ಆಗುತ್ತಿದೆ. ಇವರು ಹೇಳಿದ್ದನ್ನು ಕೇಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. 2014ರಲ್ಲಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿಅವರು ವಿದೇಶಗಳಲ್ಲಿರುವ ಕಪ್ಪು ಹಣವನ್ನು ತಂದು ದೇಶದ ಪ್ರತಿಯೊಬ್ಬ ನಾಗರೀಕನ ಖಾತೆಗೆ 15ಲಕ್ಷ ರೂಗಳು ಹಾಕುತ್ತೇನೆ ಎಂದು ಹೇಳಿದ್ದರು. ಆದರೆ ಯಾರ ಖಾತೆಗೂ ಒಂದು ನಯಾ ಪೈಸೆಯೂ ಸಹ ಬಂದಿಲ್ಲ. ಕಪ್ಪು ಹಣ ನಗದು ರೂಪದಲ್ಲಿ ಇಲ್ಲ ವಸ್ತುವಿನ ರೂಪಕ್ಕೆ ಯಾವಾಗಲೋ ಮಾರ್ಪಾಡಾಗಿದೆ. ಪ್ರಗತಿಪರ ವಿಚಾರವಾಧಿಗಳಿಗೆ ಅಪ್ಪ, ಅಮ್ಮ ಯಾರು ಗೊತ್ತಿಲ್ಲ, ಅವರಲ್ಲಿ ಯಾರ ರಕ್ತ ಹರಿಯುತ್ತಿದೆಯೋ ಗೊತ್ತಿಲ್ಲ ಸಂವಿಧಾನ ಬದಲಾವಣೆ ಮಾಡಬೇಕಾಗಿದೆ, ಅದಕ್ಕೆ ನಾವು ಬಂದಿರುವುದು, ಎಂದು ಕೇಂದ್ರ ಸಚಿವ ಏಳಿಕೆ ನೀಡಿರುವುದು ದೇಶವನ್ನು ಅತ್ಯಂತ ಅಪಾಯಕಾರಿ ಸ್ಥಿತಿಯತ್ತ ಕೊಂಡು ಹೋಗುತ್ತಿದೆ. 

ಇತಿಹಾಸವನ್ನು ತಿರುಚುವ ಪ್ರಯತ್ನ ಬಹಳ ಪ್ರಾಮಾಣಿಕವಾಗಿ ನಡೆಯುತ್ತಿದೆ. ಇತಿಹಾಸವನ್ನು ಪುರಾಣವನ್ನಾಗಿ, ವಿಜ್ಞಾನವನ್ನು ಮೌಢ್ಯವನ್ನಾಗಿ, ತತ್ವಶಾಸ್ತ್ರವನ್ನು ವೇದಾಂತವನ್ನಾಗಿ ಮಾರ್ಪಾಡು ಮಾಡಲಾಗುತ್ತಿದೆ. ದೇಶದಲ್ಲಿ ಒಂದೇ ಶಾಸನ ಇರಬೇಕು ಎಂಬುದು ಇವರ ದೃಢ ನಿಲುವಾಗಿದೆ. ಇತಿಹಾಸದ ಪರಿಜ್ಞಾನವಿಲ್ಲದ ನರೇಂದ್ರ ಮೋದಿ ರವರು ಬಿಹಾರ್ ಚುನಾವಣೆಯಲ್ಲಿ ಅಲೆಗ್ಸಾಂಡರ್‍ನ್ನು ಎದುರಿಸಿದ ವೀರ ಬಿಹಾರಿಗಳೇ ಎಂದು ಭಾಷಣದಲ್ಲಿ ಬಿಗಿಯುತ್ತಿರುವುದು ನೋಡಿದರೆ ದೇಶ ಇನ್ನು ಯಾವ ಮಟ್ಟಕೆ ಹೋಗಬಹುದು ಎಂಬುದನ್ನು ಗಮನಿಸಬೇಕಾಗಿದೆ ಎಂದರು.

ಜಿಎಸ್‍ಟಿ ಮತ್ತು ನೋಟು ಅಮಾನ್ಯೀಕರಣದಿಂದ  ದೇಶದ ಆರ್ಥಿಕ ಪರಿಸ್ಥಿತಿ ಸಂಪೂರ್ಣವಾಗಿ ಕುಸಿಯುತ್ತಿದೆ. ಇದರಿಂದ ಕಾರ್ಪೋರೇಟರ್ ಕಂಪೆನಿಗಳಿಗೆ ವರವಾಯಿತೇ ಹೊರತು ಸಣ್ಣ ಪ್ರಮಾಣದ ಕೈಗಾರಿಕೆಗಳು ಮುಚ್ಚುವ ಹಂತಕ್ಕೆ ತಲುಪಿವೆ. ನೋಟು ಅಮಾನ್ಯೀಕರಣದಿಂದ ಯಾವುದೇ ಶ್ರೀಮಂತರ ಬ್ಯಾಂಕ್‍ನ ಮುಂದೆ ಸರತಿಯ ಸಾಲಿನಲ್ಲಿ  ನಿಲ್ಲಲಿಲ್ಲ. ಆದರೆ ಜನಸಾಮಾನ್ಯರು ಸರತಿ ಸಾಲಿನಲ್ಲಿ ನಿಂತು ನೂರಾರು ಜನರು ಸಾವನ್ನಪ್ಪಿದ್ದಾರೆ. ಜಿಎಸ್‍ಟಿ ಯಿಂದ ರಾಜ್ಯಗಳ ಅಧಿಕಾರ ಮೊಟಕುಗೊಳಿಸುತ್ತಿರುವುದು ಅತ್ಯಂತ ಮೂರ್ಖತನದ ಪರಮಾವಧಿ ಎಂದರು.

ನ್ಯಾಷನಲ್ ಕಾಲೇಜಿನ ಉಪಪ್ರಾಂಶುಪಾಲರಾದ ಪ್ರೋ.ಡಾ.ರಾಮಯ್ಯರವರು ಅಧ್ಯಕ್ಷತೆ ವಹಿಸಿ ಮಾತನಾಡಿ, ನಾವು ತಿನ್ನುವಂತಹ ಆಹಾರದ ಮೇಲೆ ತೊಡುವಂತಹ ಬಟ್ಟೆಯ ಮೇಲೆ ನಿರ್ಬಂಧ ಹೇರಲಾಗುತ್ತಿದೆ. ಇದರಿಂದ ದೇಶದಲ್ಲಿ ಅಸಹಿಷ್ಣುತೆ ತಾಂಡವವಾಡುತ್ತಿರುವುದರಿಂದ ನಾವು ಭಯದ ವಾತಾವರಣದಲ್ಲಿ ಬದುಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ಜಾತ್ಯಾತೀತ ವಿಭಿನ್ನ ಜಾತಿ ಮತ ಧರ್ಮ ಹೊಂದಿರುವ ಈ ದೇಶದಲ್ಲಿ ಏಕ ಸಂಸ್ಕೃತಿ, ಏಕ ಧರ್ಮ, ಏಕ ಭಾಷೆಯಿಂದ ದೇಶದ ಪರಿಸ್ಥಿತಿ ಅಯೋಮಯ ಹಂತದಲ್ಲಿದೆ. ಪ್ರಗತಿಪರರು ವಾಸ್ತವಾಂಶ ಮಾತನಾಡುವುದು ತಪ್ಪೇ? ಎಂದು ಪ್ರಶ್ನಿಸಿದ ಅವರು  ವಾಸ್ತವಾಂಶ ಮಾತನಾಡುವವರನ್ನು ಗುಂಡಿಕ್ಕಿ ಕೊಲ್ಲುವುದು ಎಷ್ಟು ಸರಿ?  ಈ ರೀತಿಯಲ್ಲಿ ಮಾತನಾಡಿರುವ ಪ್ರಗತಿಪರರಾದ ಗೌರಿ ಲಂಕೇಶ್, ಎಂ.ಎಂ.ಕಲ್ಬುರ್ಗಿ, ಮಹರಾಷ್ಟ್ರದ ಗೋವಿಂದ್ ಪನ್ಸಾರೆ, ನರೇಂದ್ರ ದಾಬೋಲ್ಕರ್ ಇನ್ನೂ ಮುಂತಾದವರನ್ನು ದೇಶ ವಿದ್ರೋಹಿಗಳು ರಾಜಾರೋಷವಾಗಿ ಗುಂಡಿಕ್ಕಿ ಕೊಲೆ ಮಾಡಿದ್ದಾರೆ. ಆದರೆ ಇವರನ್ನು ಕೊಲೆ ಮಾಡಿರುವ ಅಪರಾಧಿಗಳು ಮಾತ್ರ ನಿರ್ಭಯವಾಗಿ ಓಡಾಡುತ್ತಿದ್ದರೂ ಇವರ ವಿರುದ್ದ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಶಿಭಿರಾಧಿಕಾರಿ ಡಾ.ಎನ್.ಸೋಮಶೇಖರ್, ಉಪನ್ಯಾಸಕರಾದ ವೆಂಕಟಶಿವಾರೆಡ್ಡಿ, ಕೇಶವ, ಸಿ.ಎಲ್.ನರೇಂದ್ರ, ಕೆ.ಎನ್.ಶಿವಕುಮಾರ್, ಸಿಪಿಐ(ಎಂ) ಪಕ್ಷದ ಹಿರಿಯ ಮುಖಂಡ ನಲಪ್ಪರೆಡ್ಡಿಪಲ್ಲಿ ಚಂದ್ರಶೇಖರರೆಡ್ಡಿ, ರಾಜ್ಯ ಯುವ ಪ್ರಶಸ್ತಿ ವಿಜೇತ ವಿ.ರವಿ ಮತ್ತಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News