ಕೆರೆಯಲ್ಲಿ ತೇಲುತ್ತಿದ್ದ ಬ್ಯಾರಲ್‌ನಲ್ಲಿ ಇದ್ದದ್ದೇನು ಗೊತ್ತೇ ?

Update: 2018-01-09 04:41 GMT

ತಿರುವನಂತಪುರ, ಜ. 9: ಕೊಚ್ಚಿನ್ ಕೆರೆಯಲ್ಲಿ ಕಾಂಕ್ರಿಟ್ ತುಂಬಿದ್ದ ತೇಲುವ ಬ್ಯಾರಲ್ ಒಂದರಲ್ಲಿ ಮಹಿಳೆಯ ಅಸ್ಥಿಪಂಜರ ಪತ್ತೆಯಾಗಿದೆ.

ಬ್ಯಾರಲ್‌ನಲ್ಲಿ ಇರುವೆಗಳು ಮುತ್ತಿಕೊಂಡಿದ್ದುದನ್ನು ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. ಬಳಿಕ ಪೊಲೀಸರು ಬ್ಯಾರಲ್ ಒಡೆದು ನೋಡಿದಾಗ, ಬ್ಯಾರಲ್‌ನ ಎರಡೂ ಬದಿಗಳನ್ನು ಕಾಂಕ್ರೀಟ್‌ನಿಂದ ಮುಚ್ಚಿ ಒಳಗೆ ಅಸ್ಥಿಪಂಜರ ಇರಿಸಿದ್ದು ಪತ್ತೆಯಾಗಿದೆ.

ಇದು ಸುಮಾರು 30 ವರ್ಷ ವಯಸ್ಸಿನ ಮಹಿಳೆಯ ಅಸ್ಥಿಪಂಜರವಾಗಿದ್ದು, ಕನಿಷ್ಠ ಒಂದು ವರ್ಷದ ಹಿಂದಿನದು ಎಂದು ವಿಧಿವಿಜ್ಞಾನ ಪ್ರಯೋಗಾಲಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ದೇಹದಲ್ಲಿ ಕೂದಲು ಮತ್ತು ಅಸ್ಥಿಪಂಜರ ಬಿಟ್ಟರೆ ಬೇರೇನೂ ಉಳಿದಿಲ್ಲ. ಮಹಿಳೆಯನ್ನು ಹತ್ಯೆ ಮಾಡಿ ಶವವನ್ನು ಬ್ಯಾರೆಲ್‌ನಲ್ಲಿ ತುಂಬಿ, ಯಾರಿಗೂ ಸಂದೇಹ ಬಾರದಂತೆ ಎರಡೂ ಬದಿಯಲ್ಲಿ ಕಾಂಕ್ರೀಟ್‌ನಿಂದ ಮುಚ್ಚಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಈ ಕೆರೆಯಲ್ಲಿ ಬ್ಯಾರಲ್ ಒಂದು ವರ್ಷದ ಹಿಂದಿನಿಂದ ತೇಲುತ್ತಿತ್ತು. ಆದರೆ ಹಡಗುಗಳು ಬಿಸಾಕಿದ ತೈಲ ಬ್ಯಾರಲ್ ಇದಾಗಿರಬೇಕು ಎಂದು ಊಹಿಸಿಕೊಂಡಿದ್ದೆವು ಎಂದು ಸ್ಥಳೀಯರು ವಿವರಿಸಿದ್ದಾರೆ. ಎರಡು ತಿಂಗಳ ಹಿಂದೆ ಕೆರೆಯನ್ನು ಸ್ವಚ್ಛಗೊಳಿಸುವ ವೇಳೆ ಬ್ಯಾರೆಲ್ ದಡಕ್ಕೆ ತರಲಾಗಿತ್ತು.

ಮಹಿಳೆಯ ಕೈ- ಕಾಲು ಕಟ್ಟಿ ಬ್ಯಾರೆಲ್‌ನಲ್ಲಿ ತುಂಬಲಾಗಿದೆ. ತೀರಾ ವೃತ್ತಿಪರ ಹಂತಕರು ಇದನ್ನು ಮಾಡಿರುವ ಸಾಧ್ಯತೆ ಇದೆ. ನಾಪತ್ತೆಯಾದವರ ಪಟ್ಟಿಯನ್ನು ಪರಿಶೀಲಿಸಿದ ಬಳಿಕ ದೇಹ ಗುರುತಿಸುವ ಪ್ರಯತ್ನ ಮಾಡಲಾಗುವುದು ಎಂದು ಬಂದರು ನಗರ ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News