ಸಿಎಟಿ: 20 ಅಭ್ಯರ್ಥಿಗಳ ವಿಶಿಷ್ಟ ಶತಕದ ಸಾಧನೆ

Update: 2018-01-09 04:30 GMT
ಅರವಿಂದ್ ಮೆನನ್, ಮಾಯಾಂಕ್‌ ರಾಜ್

ಮುಂಬೈ, ಜ. 9: ದೇಶದ ಪ್ರತಿಷ್ಠಿತ ಐಐಎಂ ಪ್ರವೇಶ ಪರೀಕ್ಷೆಯಾದ ಸಿಎಟಿಯಲ್ಲಿ ಈ ಬಾರಿ ಪರೀಕ್ಷೆ ತೆಗೆದುಕೊಂಡ 19 ಲಕ್ಷ ಅಭ್ಯರ್ಥಿಗಳ ಪೈಕಿ 20 ಮಂದಿ ಶೇಕಡ 100ರಷ್ಟು ಅಂಕ ಗಳಿಸಿದ ವಿಶೇಷ ಸಾಧನೆ ಮಾಡಿದ್ದಾರೆ.

ಪುರುಷ ಎಂಜಿನಿಯರ್‌ಗಳ ಪ್ರಾಬಲ್ಯ ಇದ್ದ ಕಳೆದ ವರ್ಷಕ್ಕಿಂತ ಭಿನ್ನವಾಗಿ ಈ ಬಾರಿ ಇಬ್ಬರು ಮಹಿಳಾ ಅಭ್ಯರ್ಥಿಗಳು ಮತ್ತು ಮೂವರು ಎಂಜಿನಿಯರಿಂಗ್ ಪದವಿ ಪಡೆಯದ ವಿದ್ಯಾರ್ಥಿಗಳು ಶೇಕಡ 100 ಅಂಕ ಗಳಿಸಿದ ಸಾಧನೆ ಮಾಡಿದ್ದಾರೆ. ಎಂಜಿನಿಯರಿಂಗ್ ಪದವಿ ಪಡೆಯದ ವಿದ್ಯಾರ್ಥಿಗಳು ಶೇಕಡ 100ರಷ್ಟು ಅಂಕ ಪಡೆದಿರುವುದು ಇದೆ ಮೊದಲು.

ಮುಂಬೈನ ಪ್ರತೀಕ್ ಡಿಸೋಜಾ (41), ನಾಲ್ಕನೇ ಪ್ರಯತ್ನದಲ್ಲಿ ಶೇಕಡ 100 ಅಂಕ ಪಡೆದಿದ್ದಾರೆ. 1996ರಲ್ಲಿ ಮೊದಲ ಬಾರಿಗೆ ಸಿಎಟಿ ಪರೀಕ್ಷೆ ಬರೆದಿದ್ದ ಇವರು, ಅನುತ್ತೀರ್ಣರಾಗಿದ್ದರು. ಬಳಿಕ ಜಮನ್‌ಲಾಲ್ ಬಜಾಜ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್ ಸಂಸ್ಥೆಯಿಂದ ಎಂಬಿಎ ಪದವಿ ಪಡೆದು ಕಾರ್ಪೊರೇಟ್ ಕಂಪನಿ ಸೇರಿದ್ದರು. ನಾಲ್ಕು ವರ್ಷಗಳ ಬಳಿಕ ಅದನ್ನು ಬಿಟ್ಟು, ಅಧ್ಯಾಪನ ವೃತ್ತಿ ಆರಂಭಿಸಿದ್ದರು. ಆ ಬಳಿಕ ಸಿಎಟಿ ವಿದ್ಯಾರ್ಥಿಗಳಿಗೆ ಕೋಚಿಂಗ್ ಆರಂಭಿಸಿದ್ದರು. "ನನ್ನ ವಿದ್ಯಾರ್ಥಿಗಳು ಶೇಕಡ 99ರಷ್ಟು ಅಂಕ ಪಡೆದಿದ್ದರು" ಎಂದು ಅವರು ಹೇಳುತ್ತಾರೆ.

ದೆಹಲಿ ಐಐಟಿ ಪದವೀಧರೆ ಛಾವಿ ಗುಪ್ತಾ, 2014ರಲ್ಲಿ ಶೇಕಡ 100 ಅಂಕ ಸಾಧನೆ ಮಾಡಿದ್ದ ಪಿಲಾನಿ ಬಿಐಟಿಎಸ್ ನೇಹಾ ಮಂಗಲಿಕ್ ಅವರ ದಾಖಲೆ ಸರಿಗಟ್ಟಿದ್ದಾರೆ. ಥಾಣೆಯ ಅರವಿಂದ್ ಮೆನನ್ ಹಾಗೂ ಬಿಹಾರ ಮೂಲದ ಮಾಯಾಂಕ್‌ ರಾಜ್ ಕೂಡಾ ಅಗ್ರರ ಪಟ್ಟಿಯಲ್ಲಿದ್ದಾರೆ.

ಅಹ್ಮದಾಬಾದ್‌ನ ಮೀತ್ ಅಗರ್‌ವಾಲ್, ಕೊಲ್ಕತ್ತಾದ ವಿಶಾಲ್ ವೋರಾ, ಐಐಡಿ ಮದ್ರಾಸ್‌ನ ಸಾಯಿ ಪ್ರಣೀತ್ ಹಾಗೂ ಮಧುರ್ ಗುಪ್ತಾ, ಚೆನ್ನೈನ ರಾಜೇಶ್ ಬಾಲಸುಬ್ರಮಣಿಯನ್ ಕೂಡಾ ಪ್ರತಿಶತ ನೂರರ ಸಾಧನೆ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News