ಭಾಗ್ಯಗಳನ್ನು ನೀಡುವ ಸಿದ್ದರಾಮಯ್ಯ ಮೊದಲು ಭೂಭಾಗ್ಯ ನೀಡಲಿ: ಬಿ.ರುದ್ರಯ್ಯ

Update: 2018-01-09 11:19 GMT

ಮೂಡಿಗೆರೆ, ಜ.9: ಹಲವು ಭಾಗ್ಯಗಳ ಸರದಾರನೆನಿಸಿಕೊಂಡಿರುವ ಸಿದ್ದರಾಮಯ್ಯ ಬಡವರ ಪ್ರಮುಖ ಬೇಡಿಕೆಯಾಗಿರುವ ಭೂಮಿಯನ್ನು ಮೊದಲು  ನೀಡಲಿ ಎಂದು ಸಿಪಿಐಎಂಎಲ್ ರಾಜ್ಯ ಕಾರ್ಯದರ್ಶಿ ಬಿ.ರುದ್ರಯ್ಯ ಒತ್ತಾಯಿಸಿದರು. 

ಅವರು ಮಂಗಳವಾರ ಸುದಿಗೋಷ್ಠಿಯಲ್ಲಿ ಮಾತನಾಡಿ ಮಲೆನಾಡಿನಲ್ಲಿ ದಲಿತರು ಆದಿವಾಸಿಗಳು ಸಮಸ್ಯೆ, ಸಂಕಷ್ಟದಲ್ಲೇ ಬದುಕುತ್ತಿದ್ದಾರೆ. ಬಡವರ ಭೂಮಿಯನ್ನು ಸಕ್ರಮ ಮಾಡಲಿ ಮಲೆನಾಡಿನಲ್ಲಿ ಭೂಮಿತಿ ಕಾಯ್ದೆ ಜಾರಿ ಮಾಡಿ ಹೆಚ್ಚುವರಿ ಭೂಮಿಯನ್ನು ಸರ್ಕಾರ ಸ್ವಾಧೀನಕ್ಕೆ ಪಡೆದು ವಸತಿಗಾಗಿ ಮೀಸಲಿಡಲಿ. ಜಿಲ್ಲೆಯಲ್ಲಿನ ಪ್ರಮುಖ ಸಮಸ್ಯೆಗಳನ್ನು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡುವಲ್ಲಿ ಜನಪ್ರತಿನಿಧಿಗಳಾದವರು ವಿಫಲರಾಗಿದ್ದಾರೆ ಎಂದರು.

ಮೂಡಿಗೆರೆಯ ಮೂವರು ಶಾಸಕರು ಚರ್ಚೆ ಮಾಡಬೇಕಿತ್ತು. ಇದು ಮೀಸಲು ಕ್ಷೇತ್ರ. ದಲಿತರ ಸಮಸ್ಯೆ. ದಲಿತರ ಭೂಮಿ ಒತ್ತುವರಿಯಾಗಿದೆ. 53ರಲ್ಲಿ ಅರ್ಜಿ ಹಾಕಿರುವ ಅರ್ಜಿ ಯಾವುದೂ ಸಕ್ರಮಗೊಂಡಿಲ್ಲ. ದಲಿತರ, ಆದಿವಾಸಿಗಳ ಸಮಸ್ಯೆಗಳನ್ನು ಕಡೆಗಣಿಸಲಾಗಿದೆ. ಬಡವರ ಸಮಸ್ಯೆಗಳನ್ನು ಮುಚ್ಚಿಹಾಕಿ ಭೂಮಾಲೀಕರ ಸಮಸ್ಯೆಗಳನ್ನೇ ಎತ್ತಿಹಿಡಿಯುವ ಕೆಲಸವಾಗುತ್ತಿದೆ. ಭೂಮಾಲಿಕರು ಕಾರ್ಮಿಕರಿಗೆ ಕೂಲಿ ನೀಡಲು ಸಾಧ್ಯವಾಗುವುದಿಲ್ಲ ಎನ್ನುವಷ್ಟರಮಟ್ಟಿಗೆ ಶ್ರೀಮಂತರು ಕಷ್ಟದಲ್ಲಿದ್ದಾರೆ ಎಂದು ಬಿಂಬಿಸುತ್ತಿರುವುದು ಜನವಿರೋಧಿ ನೀತಿಯಲ್ಲದೆ ಮತ್ತೇನು ಎಂದು ಪ್ರಶ್ನಿಸಿದ್ದಾರೆ.  

ಜಿಲ್ಲೆಯ ಜನರಿಗೆ ಸೂರಿನ ಆಸರೆ ಸಿಕ್ಕಿಲ್ಲ. ಆದರೆ ತಾಲೂಕಿನಲ್ಲಿ ಅಂದಾಜು ಪ್ರಕಾರ 48 ಸಾವಿರ ಎಕರೆ ಭೂಮಿ ಒತ್ತುವರಿಯಾಗಿರುವ ಮಾಹಿತಿಯಿದೆ. ಪಂಚಾಯತ್‍ನಿಂದ ಪಟ್ಟಣದವರೆಗೆ ಬಾಡಿಗೆ ಮನೆಗಳಲ್ಲಿ ಜನ ವಾಸಿಸುತ್ತಿದ್ದಾರೆ. ಹತ್ತಾರು ವರ್ಷಗಳಿಂದ ಅರ್ಜಿ ಸಲ್ಲಿಸಿದ್ದರೂ ಸಮಸ್ಯೆಗಳನ್ನು ಬಗೆಹರಿಸುತ್ತಿಲ್ಲ. ಚಿಕ್ಕಮಗಳೂರು ಜಿಲ್ಲೆಯಲ್ಲಿ ದಾಖಲಾತಿಗಳೇ ನಾಶವಾಗಿವೆ. ಭೂಮಿಯ ಕಡತಗಳನ್ನೇ ನಾಶಮಾಡಿ ಸುಟ್ಟುಹಾಕಿದ್ದಾರೆ. ಹೀಗಾಗಿ ಭೂಮಿ ಎಲ್ಲಿದೆ ಎಷ್ಟು ಮಂಜೂರು ಆಗಿದೆ ಯಾರು ಒತ್ತುವರಿ ಮಾಡಿದ್ದಾರೆ ಎಂಬುದನ್ನು ಪತ್ತೆಮಾಡಲು ಸಾಧ್ಯವಾಗಿಲ್ಲ. ಮಂಜೂರಾದ ಭೂಮಿಯನ್ನು 53ರಲ್ಲಿ ಭೂಮಾಲಿಕರೇ ಮತ್ತೊಮ್ಮೆ ಮಂಜೂರು ಮಾಡಿಸಿಕೊಳ್ಳುತ್ತಿರುವುದು ಅಪಾಯಕಾರಿ ಬೆಳವಣಿಗೆ ಎಂದರು.

ಧನ್ಯಾ ಆತ್ಮಹತ್ಯೆ ಪ್ರಕರಣ ಸತ್ಯಾಸತ್ಯತೆ ಹೊರಬರಲಿ:
ಪಟ್ಟಣದ ಛತ್ತಮೈದಾನದ ವಿದ್ಯಾರ್ಥಿನಿ ಧನ್ಯಾ ಆತ್ಮಹತ್ಯೆ ಪ್ರಕರಣ ದಿನಕ್ಕೊಂದು ಹೊಸ ತಿರುವನ್ನು ಪಡೆಯುತ್ತಿದ್ದು, ಆತ್ಮಹತ್ಯೆಗೆ ಪ್ರಚೋದಿಸಿದ ಎಲ್ಲ ಆರೋಪಿಗಳನ್ನೂ ಬಂಧಿಸಬೇಕು ಎಂದು ಸಿಪಿಐಎಂಎಲ್ ರಾಜ್ಯ ಕಾರ್ಯದರ್ಶಿ ಬಿ.ರುದ್ರಯ್ಯ ಆಗ್ರಹಿಸಿದ್ದಾರೆ. 

ಪ್ರಕರಣದಲ್ಲಿ ಬಿಜೆಪಿ ಸದಸ್ಯನ ಬಂಧನವಾಗಿದೆ. ಆತನ ಬೆದರಿಕೆಯಿಂದ ಧನ್ಯಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಆದರೆ ಈಗ ನ್ಯಾಯಮಾಡಲು, ಸಮಸ್ಯೆ ಬಗೆಹರಿಸಲು ಸಂಘಪರಿವಾರದವರು ಹೋಗಿದ್ದರು ಎಂದು ಹೇಳಿಕೆ ನೀಡುವ ಮೂಲಕ ಪ್ರಕರಣವನ್ನು ತಿರುಚಲಾಗುತ್ತಿದೆ. ರಾಜಕೀಯ ಪಿತೂರಿಯಿಂದ ಆತ್ಮಹತ್ಯೆ ನಡೆದಿದೆ. ರಾಜಕೀಯ ಲಾಭಕ್ಕಾಗಿಯೇ ಪ್ರಕರಣ ತಿರುಚುತ್ತಿದ್ದಾರೆ. ಇದರ ಸತ್ಯಾಸತ್ಯತೆ ಹೊರಬರಬೇಕಾಗಿದೆ. ರಾಜ್ಯದಲ್ಲಿ ಕೋಮುವಾದಕ್ಕೆ ಸಾಮಾನ್ಯ ಜನ ಬಲಿಯಾಗುತ್ತಿರುವುದು ದುರಂತ. ಸಾಮಾಜಿಕ ವ್ಯವಸ್ಥೆ, ಸಹಿಷ್ಣುತೆ ಕದಡುತ್ತಿದೆ. ಜನ ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ವಿಷಾಧ ವ್ಯಕ್ತಪಡಿಸಿದರು.    

ಜೆಡಿಎಸ್-ಕಾಂಗ್ರೆಸ್-ಬಿಜೆಪಿ ಪಾರ್ಟಿಗಳಲ್ಲಿರುವ ನಾಯಕರೆಲ್ಲರೂ ಭೂಮಾಲೀಕರಾಗಿದ್ದಾರೆ. ಭೂಮಿ ಪ್ರಶ್ನೆ ಬಂದಾಗ ಶ್ರೀಮಂತರ ಸಮಸ್ಯೆಗಳನ್ನು ಮುಂದಿಟ್ಟುಕೊಳ್ಳುತ್ತಾರೆ. ತಾಲೂಕಿನಲ್ಲಿ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು ತಮ್ಮ ಭೂಮಿಯನ್ನು ಘೋಷಣೆ ಮಾಡಲಿ. ಎಷ್ಟು ಭೂಮಿ ಹೊಂದಿದ್ದೀರಿ? ಎಷ್ಟು ಮಂಜೂರು ಮಾಡಿಸಿದ್ದೀರಿ, ಖರೀದಿ ಮಾಡಿದ್ದೀರಿ? ಎಷ್ಟು ಒತ್ತುವರಿ ಮಾಡಿದ್ದೀರಿ ಎಂಬುದನ್ನು ಬಹಿರಂಗಪಡಿಸಲಿ ಎಂದು ಬಿ.ರುದ್ರಯ್ಯ ಸವಾಲು ಹಾಕಿದ್ದಾರೆ.  
ಆಸ್ತಿಘೋಷಣೆಗಾಗಿ ದೊಡ್ಡ ಆಂದೋಲನ ಫೆಬ್ರವರಿಯಲ್ಲಿ ಆರಂಭವಾಗಲಿದೆ. ರಾಜ್ಯದಲ್ಲಿ ಜನವಿರೋಧಿ ಪಕ್ಷಗಳಿಂದ ಮುಕ್ತಿ ಹೊಂದಲು ಪರ್ಯಾಯ ಶಕ್ತಿಯನ್ನು ಬಲವರ್ಧಿಸಲಾಗುತ್ತಿದೆ ಎಂದು ತಿಳಿಸಿದರು. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News