ಕೊಡಗಿನ ಅಭಿವೃದ್ಧಿಗೆ ಸರಕಾರದಿಂದ 2087 ಕೋಟಿ ರೂ. ಬಿಡುಗಡೆ: ಸಿಎಂ ಸಿದ್ದರಾಮಯ್ಯ

Update: 2018-01-09 12:27 GMT

ಮಡಿಕೇರಿ, ಜ.9: ಕಳೆದ ನಾಲ್ಕೂವರೆ ವರ್ಷಗಳಲ್ಲಿ ರಾಜ್ಯ ಸರ್ಕಾರ ಕೊಡಗಿನ ಅಭಿವೃದ್ಧಿಗಾಗಿ ಒಟ್ಟು 2087 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಿರುವುದಲ್ಲದೆ, ವಿಶೇಷ ಪ್ಯಾಕೇಜ್‍ನಡಿ 200 ಕೋಟಿ ರೂ. ನೀಡಲಾಗಿದೆ. ಅಭಿವೃದ್ಧಿ ಕಾರ್ಯದಲ್ಲಿ ತಾರತಮ್ಯ ಮಾಡದ ನಮ್ಮ ಸರ್ಕಾರ ಕೊಡಗಿನ ಅಭಿವೃದ್ಧಿಗೂ ಹೆಚ್ಚಿನ ಒತ್ತನ್ನು ನೀಡಿದೆಯೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ನಗರದಲ್ಲಿ ನಡೆದ ಸಾಧನಾ ಸಮಾವೇಶದಲ್ಲಿ 122 ಕೋಟಿ ರೂ.ಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಅಭಿವೃದ್ಧಿ ವಿಚಾರದಲ್ಲಿ ನಮ್ಮ ಸರ್ಕಾರ ಯಾವುದೇ ತಾರತಮ್ಯವನ್ನು ಮಾಡಿಲ್ಲ. 30 ಜಿಲ್ಲೆಗಳಿರುವ ಅಖಂಡ ಕರ್ನಾಟಕ ಸರ್ವತೋಮುಖ ಅಭಿವೃದ್ಧಿಯಾಗಬೇಕಾದರೆ ಕೊಡಗು ಜಿಲ್ಲೆ ಕೂಡ ಅಭಿವೃದ್ಧಿ ಪಥದಲ್ಲಿ ಸಾಗಬೇಕು. ಯಾವುದೇ ಪಕ್ಷದ ಶಾಸಕರಿದ್ದರೂ ಪ್ರತಿಯೊಂದು ಜಿಲ್ಲೆಗೂ ಸಮಾನ ರೀತಿಯಲ್ಲಿ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ ಎಂದರು.

ನುಡಿದಂತೆ ನಡೆದ ಮತ್ತು ನೀಡಿದ ಎಲ್ಲಾ ಭರವಸೆಗಳನ್ನು ಶೇ.100ರಷ್ಟು ಈಡೇರಿಸಿದ ಸರ್ಕಾರ ನಮ್ಮದಾಗಿದೆ. ಇದು ಕೇವಲ ಪ್ರಚಾರಕ್ಕಾಗಿ ಹೇಳುತ್ತಿಲ್ಲ. ಅಭಿವೃದ್ಧಿಯ ವಿಚಾರದಲ್ಲಿ ಸುಳ್ಳು ಹೇಳಬಾರದೆಂದು ನಮ್ಮ ಸಚಿವರಿಗೂ ಹೇಳಿದ್ದೇನೆ. ನಾವು ಏನು ಹೇಳಿದ್ದೇವೋ ಅದು ಅನುಷ್ಟಾನದಲ್ಲಿದೆಯೆಂದು ಮುಖ್ಯ ಮಂತ್ರಿಗಳು ಸಮರ್ಥಿಸಿಕೊಂಡರು. ಸರ್ಕಾರದ ಕೆಲಸ ದೇವರ ಕೆಲಸ ಎನ್ನುವ ನಂಬಿಕೆ ನನಗಿದೆ. ಜಾರಿಗೆ ತಂದ ಹಲವು ಭಾಗ್ಯಗಳ ಬಗ್ಗೆ ಪ್ರಸ್ತಾಪಿಸಿದ ಮುಖ್ಯ ಮಂತ್ರಿಗಳು ಅನ್ನಭಾಗ್ಯದ ಕುರಿತು ಹೆಮ್ಮೆ ವ್ಯಕ್ತಪಡಿಸಿದರು.

ಜಿಲ್ಲೆಯ 33, 967 ರೈತರು ಸಾಲ ಮನ್ನಾ ಯೋಜನೆಯ ಲಾಭ ಪಡೆದಿದ್ದು, 151 ಕೊಟಿ ರೂ.ಗಳು ಸಾಲ ಮನ್ನಾವಾಗಿದೆಯೆಂದು ಮುಖ್ಯ ಮಂತ್ರಿಗಳು ತಿಳಿಸಿದರು. ಭಾಗಮಂಡಲದಲ್ಲಿ ಮೇಲ್ಸೇತುವೆ ನಿರ್ಮಾಣ ಮಾಡುವುದಕ್ಕಾಗಿ 30 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಹಿಂದೆ ಇದ್ದವರು ಇದನ್ನು ಯಾಕೆ ಮಾಡಲಿಲ್ಲವೆಂದು ಪ್ರಶ್ನಿಸಿದ ಸಿದ್ದರಾಮಯ್ಯ, ನಮ್ಮದು ನುಡಿದಂತೆ ನಡೆಯುವ ಮತ್ತು ಜನರ ನಿರೀಕ್ಷೆಯಂತೆ ನಡೆಸಿಕೊಳ್ಳುವ ಸರ್ಕಾರವಾಗಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಆರ್. ಸೀತಾರಾಂ ಮಾತನಾಡಿ, ಜಾತಿ ಧರ್ಮ, ಭಾಷೆಗಳ ಭೇದವನ್ನು ಮೀರಿ ಬದ್ಧತೆಯಿಂದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಆಡಳಿತ ನಡೆಸಿದ್ದು, ಕೊಡಗಿನಲ್ಲು ಜನಪರ ಯೋಜನೆಗಳು ಯಶಸ್ವಿಯಾಗಿ ಜಾರಿಯಾಗಿವೆ ಎಂದರು. ಹಾರಂಗಿ ಹಿನ್ನೀರಿನ ಪ್ರದೇಶದಿಂದ ಸ್ಥಳಾಂತರಗೊಂಡ ಪುನರ್ವಸತಿಗರ ಅತ್ತೂರು ಮತ್ತು ಯಡವನಾಡು ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಲಾಗಿದೆ.
94 ಸಿಸಿಯಡಿ 682, 94ಸಿಯಡಿ 4392, 94ಎ ಯಡಿ 9817 ಹಕ್ಕುಪತ್ರಗಳನ್ನು ಫಲಾನುಭವಿಗಳಿಗೆ ಈಗಾಗಲೆ ವಿತರಿಸಲಾಗಿದೆ. ದಿಡ್ಡಳ್ಳಿ ನಿರಾಶ್ರಿತರ ಸಂಕಷ್ಟಕ್ಕೆ ಸ್ಪಂದಿಸಿದ ಸರ್ಕಾರ 528 ಕುಟುಂಬಗಳಿಗೆ ವಸತಿ ಭಾಗ್ಯವನ್ನು ಕಲ್ಪಿಸಿಕೊಟ್ಟಿದೆ.

ವೈದ್ಯಕೀಯ ಕಾಲೇಜು ಈಗಾಗಲೆ ಕಾರ್ಯಾರಂಭ ಮಾಡಿದ್ದು, ಅಲ್ಲಿಗೆ 150 ಕೊಟಿ ರೂ.ಗಳನ್ನು ವಿನಿಯೋಗಿಸಲಾಗಿದೆ. ಜೇನುಕುರುಬ, ಯರವ , ಸೋಲಿಗ ಕುಟುಂಬಗಳಿಗೆ ಪೌಷ್ಠಿಕ ಆಹಾರವನ್ನು ಒದಗಿಸಲಾಗುತ್ತಿದೆ.  ಜಿಲ್ಲಾ ಪಂಚಾಯತ್ ಭವನ ಸಧ್ಯದಲ್ಲೆ ಉದ್ಘಾಟನೆ ಗೊಳ್ಳಲಿದ್ದು, ನಗರದ ಖಾಸಗಿ ಬಸ್ ನಿಲ್ದಾಣ ಕಾಮಗಾರಿ ಅಂತಿಮ ಹಂತದಲ್ಲಿದೆ. ನಗರಸಭೆಯ ಅಭಿವೃದ್ಧಿಗಾಗಿ 36 ಕೊಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ ಸಚಿವ ಸೀತಾರಾಂ, ಜಿಲ್ಲೆಯಲ್ಲಿ ಕಾಂಗ್ರೆಸ್ ಶಾಸಕರುಗಳು ಇಲ್ಲದಿದ್ದರೂ ಸರ್ಕಾರ ಅತೀ ಹೆಚ್ಚು ಅನುದಾನ ನೀಡಿ ಕೊಡಗಿನ ಬಗ್ಗೆ ಕಾಳಜಿ ತೋರಿದೆಯೆಂದು ಹೆಮ್ಮೆ ವ್ಯಕ್ತಪಡಿಸಿದರು.

ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ, ಜಿಪಂ ಅಧ್ಯಕ್ಷರಾದ ಬಿ.ಎ. ಹರೀಶ್, ಉಪಾಧ್ಯಕ್ಷರಾದ ಲೋಕೆಶ್ವರಿ ಗೋಪಾಲ್, ರೇಷ್ಮೆ ಮಂಡಳಿ ಅಧ್ಯಕ್ಷರಾದ ಟಿ.ಪಿ. ರಮೇಶ್, ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷರಾದ ಪದ್ಮಿನಿ ಪೊನ್ನಪ್ಪ, ಜಿಲ್ಲಾಧಿಕಾರಿಗಳಾದ ಶ್ರೀವಿದ್ಯಾ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯರಾದ ಸಿಎಸ್. ಅರುಣ್ ಮಾಚಯ್ಯ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ವಿವಿಧ ಇಲಾಖೆಗಳ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ಮುಖ್ಯ ಮಂತ್ರಿಗಳು ವಿತರಿಸಿದರು.ಇದೇ ಸಂದರ್ಭ ಬ್ಯಾಡಗೊಟ್ಟ ಮತ್ತು ಬಸವನಹಳ್ಳಿಯಲ್ಲಿ ಸರ್ಕಾರದ ವಸತಿ ಭಾಗ್ಯ ಪಡೆದಿರುವ ದಿಡ್ಡಳ್ಳಿ ನಿರಾಶ್ರಿತರು ಮುಖ್ಯಮಂತ್ರಿಯವರ ಕಾರ್ಯವೈಖರಿ ಮೆಚ್ಚಿ ಪೇಟ, ಶಾಲು ತೊಡಿಸಿ ಬಿ ಬಾಣವನ್ನು ನೀಡಿ ವಿಶೇಷವಾಗಿ ಸನ್ಮಾನಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News