ದಾವಣಗೆರೆ: ಮಣ್ಣು ಕುಸಿದು ಓರ್ವ ಮೃತ್ಯು, ಇಬ್ಬರಿಗೆ ಗಾಯ

Update: 2018-01-09 17:00 GMT

ದಾವಣಗೆರೆ,ಜ.9: ಕೆರೆ ಬಳಿ ಪೈಪ್‍ಲೈನ್ ಅಳವಡಿಸಲು ಪೈಪ್ ಇಳಿಸುತ್ತಿದ್ದ ವೇಳೆ ಮಣ್ಣು ಕುಸಿದ ಪರಿಣಾಮ ಓರ್ವ ವ್ಯಕ್ತಿ ಸಾವನ್ನಪ್ಪಿ, ಇಬ್ಬರು ತೀವ್ರ ಅಸ್ವಸ್ಥಗೊಂಡ ಘಟನೆ ತಾಲೂಕಿನ ತುರ್ಚಘಟ್ಟ ಗ್ರಾಮದ ಬಳಿ ಮಂಗಳವಾರ ಸಂಭವಿಸಿದೆ.

ತಾಲೂಕಿನ ತುರ್ಚಘಟ್ಟ ಗ್ರಾಮದ ಆಟೋ ಚಾಲಕ ನಾಗರಾಜ (27) ಮೃತ ವ್ಯಕ್ತಿಯಾಗಿದ್ದು, ಅದೇ ಗ್ರಾಮದ ನಜೀಬ್(33) ಹಾಗೂ ಸಿದ್ದಪ್ಪನವರ ನಾಗರಾಜ(28) ಮಣ್ಣಿನಡಿ ಸಿಲುಕಿ ತೀವ್ರ ಅಸ್ವಸ್ಥಗೊಂಡಿದ್ದು, ಇಬ್ಬರನ್ನೂ ಎಸ್ಸೆಸ್ ಹೈಟೆಕ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. 

ನಜೀಬ್ ತಮ್ಮ ಹೊಲದಲ್ಲಿ ನೀರು ಸಂಗ್ರಹಿಸಿಕೊಳ್ಳಲು ದೊಡ್ಡ ಗುಂಡಿ ತೆಗೆಸಿದ್ದರು. ಅದಕ್ಕೆ ಪೈಪ್‍ಲೈನ್ ಅಳವಡಿಸಲು ನಾಗರಾಜರಲ್ಲಿ ನಜೀಬ್ ಮನವಿ ಮಾಡಿದ್ದರಿಂದ ಚಾಲಕ ನಾಗರಾಜ, ಸಿದ್ದಪ್ಪನವರ ನಾಗರಾಜ, ನಜೀಬ್ ಜೊತೆಗೆ ಕೈಜೋಡಿಸಿದ್ದರು. ಸುಮಾರು 15 ಅಡಿ ಆಳದ ಮಣ್ಣಿನ ಗುಂಡಿಯಲ್ಲಿ ಇಳಿದು ಪೈಪ್ ಇಡುತ್ತಿದ್ದಾಗ ಮೂವರ ಮೇಲೂ ಮಣ್ಣು ಕುಸಿದಿದೆ. ಆಟೋ ಚಾಲಕ ನಾಗರಾಜ, ಸಿದ್ದಪ್ಪನವರ ನಾಗರಾಜ ಮಣ್ಣಿನಲ್ಲಿ ಹೂತು ಹೋಗಿದ್ದರು. 

ಕೂಗಾಟ ಕೇಳುತ್ತಿದ್ದಂತೆ ಸಮೀಪದಲ್ಲೇ ಇದ್ದ ರೈತರು, ಗ್ರಾಮಸ್ಥರು ಸ್ಥಳಕ್ಕೆ ದೌಡಾಯಿಸಿ, ಮೂವರನ್ನೂ ಮೇಲಕ್ಕೆತ್ತಿದ್ದಾರೆ. ಕೆಲವೇ ಹೊತ್ತಿನಲ್ಲಿ ಅಂಬ್ಯುಲೆನ್ಸ್ ಸಹ ಬಂದಿದೆ. ಅಸ್ವಸ್ಥರನ್ನು ಅಂಬ್ಯುಲೆನ್ಸ್‍ಗೆ ಹತ್ತಿಸಿಕೊಂಡಾಗ, ನಜೀಬ್, ಸಿದ್ದಪ್ಪನವರ ನಾಗರಾಜ ಜೀವಂತವಿದ್ದು, ಆಟೋ ಚಾಲಕ ನಾಗರಾಜ ಸಾವನ್ನಪ್ಪಿದ್ದಾರೆಂದು ಅಂಬ್ಯುಲೆನ್ಸ್ ಸಿಬ್ಬಂದಿ ನಾಗರಾಜ ದೇಹ ಕೆಳಗಿಳಿಸಿ, ಉಳಿದಿಬ್ಬರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ತೀವ್ರ ಅಸ್ವಸ್ಥಗೊಂಡಿದ್ದ ಆಟೋ ಚಾಲಕ ನಾಗರಾಜ ದೇಹ ಮಿಸುಕಾಡಿಸಿದ್ದರಿಂದ ಸ್ಥಳದಲ್ಲಿದ್ದವರು ನಾಗರಾಜನನ್ನು ಜಿಲ್ಲಾಸ್ಪತ್ರೆಗೆ ಕರೆ ತಂದಿದ್ದಾರೆ. ಆದರೆ, ವೈದ್ಯರು ಮುಂಚೆಯೇ ಕರೆ ತಂದಿದ್ದರೆ ಆತ ಬದುಕುತ್ತಿದ್ದ. ಈಗಾಗಲೇ ಸಾವನ್ನಪ್ಪಿದ್ದಾನೆಂದು ಘೋಷಿಸಿದ್ದರಿಂದ ಗ್ರಾಮಸ್ಥರು, ಕುಟುಂಬ ವರ್ಗವು 108 ಅಂಬ್ಯುಲೆನ್ಸ್ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಜಿಲ್ಲಾಸ್ಪತ್ರೆ ಆವರಣದಲ್ಲಿ ಪ್ರತಿಭಟಿಸಲಾರಂಭಿಸಿದರು. 

ಜೀವನ್ಮರಣದ ಮಧ್ಯೆ ಹೋರಾಟ ನಡೆಸಿದ್ದ, ಜೀವಂತವಿದ್ದ ವ್ಯಕ್ತಿಯನ್ನು ಅಂಬ್ಯುಲೆನ್ಸ್ ನಲ್ಲಿ ಉಳಿದಿಬ್ಬರ ಜೊತೆಗೆ ಕರೆ ತಂದಿದ್ದರೆ ಆಟೋ ಚಾಲಕ ನಾಗರಾಜ ಬದುಕುತ್ತಿದ್ದ. ಆದರೆ, ಅಂಬ್ಯುಲೆನ್ಸ್ ಸಿಬ್ಬಂದಿ ಬೇಜವಾಬ್ಧಾರಿಯಿಂದ ಅಮಾಯಕ ಆಟೋ ಚಾಲಕ ಸಾವನ್ನಪ್ಪಿದ ಎಂಬುದಾಗಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News